ಕುಷ್ಟಗಿ: 2023ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಚರ್ಚೆಯಾಗುತ್ತಿದ್ದು, ಈ ನಡುವೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡುವ ಕಡೆಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದ್ದು, ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಅವರು ಹೋದಲೆಲ್ಲ ಪಕ್ಷದ ಅಭ್ಯರ್ಥಿಗಳ ಘೋಷಣೆ ಮಾಡುವ ನಡೆ ಸರಿಯಲ್ಲ. ಇದರಿಂದ ಅರ್ಜಿ ಸಲ್ಲಿಸಿದ ಬೇರೆ ಆಕಾಂಕ್ಷಿಗಳಿಗೆ ಅಸಮಾಧಾನವಾಗಲಿದೆ ಎಂದು ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಅರ್ಜಿ ಹಾಕಿದವರಿಗೆ ನಮಗೂ ಟಿಕೆಟ್ ಸಿಗುತ್ತದೆ ಎಂಬ ಆಸೆಯಲ್ಲಿರುತ್ತಾರೆ. ಆದರೆ, ಏಕಾಏಕಿ ಟಿಕೆಟ್ ಘೋಷಣೆ ಮಾಡುವುದರಿಂದ ಅರ್ಜಿ ಹಾಕಿದವರಿಗೆ ತೊಂದರೆಯಾಗುತ್ತದೆ. ಒಂದು ಕಡೆ ಅರ್ಜಿಗಳ ಇತ್ಯರ್ಥವಾಗಿಲ್ಲ. ಮತ್ತೊಂದು ಕಡೆ ಇವರಿಗೆ ಮತ ಹಾಕಿ ಎನ್ನುವುದು ಸರಿಯಲ್ಲ ಎಂದರು.
ಬೆಳಗಾವಿ ಗಡಿ ವಿವಾದ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ ಈ ವಿಷಯ ವರ್ಷಕ್ಕೆ ಒಮ್ಮೆ ಮಳೆ ಬಂದ ಹಾಗೆ. ಚುನಾವಣೆ ಬಂದಾಗೆಲೆಲ್ಲ ಗಡಿ ವಿವಾದ ಹುಟ್ಟಿಕೊಳ್ಳುತ್ತದೆ ಎಂದರು.
ಇತ್ತೀಚಿಗೆ ಕೊಪ್ಪಳ ಜಿಲ್ಲೆಯ ವನಬಳ್ಳಾರಿಯಲ್ಲಿ ನಡೆದಿದ್ದ ಕಾಂಗ್ರೆಸ್ ಮುಖಂಡರ ಮದುವೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಇಕ್ಬಾಲ್ ಅನ್ಸಾರಿ (ಗಂಗಾವತಿ), ಅಮರೇಗೌಡ ಬಯ್ಯಾಪುರ (ಕುಷ್ಟಗಿ), ಶಿವರಾಜ ತಂಗಡಗಿ (ಕನಕಗಿರಿ), ಬಸವರಾಜ ರಾಯರಡ್ಡಿ (ಯಲಬುರ್ಗಾ) ಮತ್ತು ಕೆ. ರಾಘವೇಂದ್ರ ಹಿಟ್ನಾಳ (ಕೊಪ್ಪಳ) ಅವರನ್ನು ಮುಂದಿನ ಚುನಾವಣೆಯಲ್ಲಿ ಆಯ್ಕೆ ಮಾಡಿ ಕಳುಹಿಸಬೇಕು ಎಂದು ಮದುವೆ ವೇದಿಕೆಯಲ್ಲಿಯೇ ಹೇಳಿದ್ದರು.