ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಚಿನ್ನದ ಪದಕ ನೀಡಲು ನಿರ್ಧರಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ, ಹಾಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೆಸರಲ್ಲಿ ನೀಡಲು ನಿರ್ಧರಿಸಲಾಗಿದೆ. ಸಿದ್ದರಾಮಯ್ಯ ಅಮೃತ ಮಹೋತ್ಸವ ದತ್ತಿ ಚಿನ್ನದ ಪದಕ ಇದಾಗಿದ್ದು, 2022-23ನೇ ಸಾಲಿನ ಕಾನೂನು ವಿಭಾಗದಲ್ಲಿ ರ‍್ಯಾಂಕ್ ಪಡೆದವರಿಗೆ ನೀಡಲಾಗುವುದು.
ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಪದಕ ನೀಡುವುದರ ಜೊತೆಗೆ, ಇನ್ನೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶತಮಾನದಷ್ಟು ಹಳೆಯದಾದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಿದ್ದರಾಮಯ್ಯ ಹೆಸರಿನಲ್ಲಿ ಚಿನ್ನದ ಪದಕ ಸ್ಥಾಪಿಸುವಂತೆ ಬೆಂಬಲಿಗರರು ಒತ್ತಾಯಿಸುತ್ತಿದ್ದಾರೆ. ಸ್ವತಃ ಕಾನೂನು ಪದವೀಧರರಾಗಿರುವ ಸಿದ್ದರಾಮಯ್ಯ ಅವರು ಮೈಸೂರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದಾರೆ.
ಮೈಸೂರು ಗ್ರಾಮಾಂತರ ಅಧ್ಯಕ್ಷರ ಹೆಸರಿನಲ್ಲಿ ವಿಶ್ವವಿದ್ಯಾಲಯಕ್ಕೆ 1 ಲಕ್ಷ 5 ಸಾವಿರ ರೂಪಾಯಿ ದತ್ತಿ ನಿಧಿ ನೀಡಲಾಗಿದೆ. ಹಾಗಾಗಿ ರ‍್ಯಾಂಕ್ ಪಡೆದವರಿಗೆ ಚಿನ್ನದ ಪದಕ ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್ ಮಾಹಿತಿ ನೀಡಿದ್ದಾರೆ.
ಸಿದ್ದರಾಮಯ್ಯನವರ ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪದಕ ಸ್ಥಾಪಿಸಲು ಮನವಿ ಬಂದಿದೆ. ಪ್ರಸ್ತಾವನೆಯನ್ನು ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಮುಂದೆ ಮಂಡನೆಯಾಗಲಿದ್ದು, ಮುಂದಿನ ಘಟಿಕೋತ್ಸವದಲ್ಲಿ ಪದಕವನ್ನು ನೀಡಲಾಗುವುದು ಎಂದು ವಿವಿ ಉಪಕುಲಪತಿ ಪ್ರೊ.ಸಿ.ಹೇಮಂತಕುಮಾರ್ ಹೇಳಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ವಾರ್ಷಿಕ ಘಟಿಕೋತ್ಸವದಲ್ಲಿ ಕಾನೂನು ಕಾಲೇಜಿನಿಂದ ಬಿಎ.ಎಲ್‌ಎಲ್‌ಬಿನಲ್ಲಿ ಅತ್ಯಧಿಕ ರ‍್ಯಾಂಕ್ ಪಡೆದವರಿಗೆ ಪದಕ / ಬಹುಮಾನ / ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ವಿಶ್ವವಿದ್ಯಾಲಯದ ಅಧಿಕಾರಿಗಳು ಅರ್ಜಿಯನ್ನು ಸ್ವೀಕರಿಸಿದ್ದರೂ, ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ತಮ್ಮ ಅಂತಿಮ ಅನುಮೋದನೆಯನ್ನು ನೀಡಬೇಕು.