ಮೇಕೆದಾಟು ಕುರಿತು ಪ್ರಧಾನಿಗೆ ಪತ್ರ ಬರೆದ ಸಿದ್ದರಾಮಯ್ಯ
ಬೆಂಗಳೂರು: ಮೇಕೆದಾಟು ಅಣೆಕಟ್ಟು ಯೋಜನೆ ಕುರಿತು ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ನೀಡಿರುವ ಹೇಳಿಕೆ ಕನ್ನಡಿಗರ ಭಾವನೆಗಳನ್ನು ಘಾಸಿಗೊಳಿಸಿದೆ. ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡದೆ ಸತಾಯಿಸುತ್ತಿರುವ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಡಬ್ಬಲ್ ಎಂಜಿನ್ ಸರ್ಕಾರಗಳು ಕನ್ನಡಿಗರಿಗೆ ದ್ರೋಹ ಎಸಗಿವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಧಾನಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಧಾನ ಮಂತ್ರಿಗೆ ಬರೆದಿರುವ ಪತ್ರದಲ್ಲಿ, 2022 ರ ಫೆಬ್ರವರಿ 5 ರಂದು ಸಚಿವ ಶೇಖಾವತ್ ಅವರು ನೀಡಿದ ಹೇಳಿಕೆಯಲ್ಲಿ, “ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಒಟ್ಟಿಗೇ ಕುಳಿತು ವಿವಾದವನ್ನು ಬಗೆಹರಿಸಿಕೊಳ್ಳಬೇಕು. ಎರಡೂ ರಾಜ್ಯಗಳೂ ಒಟ್ಟಿಗೆ ಕುಳಿತುಕೊಳ್ಳಲು ಅಗತ್ಯವಾದ ವ್ಯವಸ್ಥೆಯನ್ನು ಮಾತ್ರ ನಾವು ಒದಗಿಸಿಕೊಡುತ್ತೇವೆ” ಎಂದು ಹೇಳಿದ್ದಾರೆ. ಎರಡು ರಾಜ್ಯಗಳೆ ಕುಳಿತು ಮಾತುಕತೆ ಆಡಿ ಬಗೆಹರಿಸಿಕೊಳ್ಳುವುದಾದರೆ, ಕೇಂದ್ರದ ಜಲ ಪ್ರಾಧಿಕಾರಗಳು ಮತ್ತಿತರ ಕೇಂದ್ರ ಮಟ್ಟದ ವ್ಯವಸ್ಥೆಗಳ ಅಗತ್ಯವಾದರೂ ಏನು? ಹೀಗಾಗಿ ಸಚಿವರ ಮಾತುಗಳು ಅತ್ಯಂತ ಬೇಜವಾಬ್ದಾರಿತನದ್ದಾಗಿವೆ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.
Here is my letter to @PMOIndia @narendramodi condemning the statement made by @MoJSDoWRRDGR @gssjodhpur about Mekedatu reservoir issue.
I also urge Prime Minister to take necessary steps to ensure clearance for Mekedatu project. pic.twitter.com/BnA63GkamL
— Siddaramaiah (@siddaramaiah) March 9, 2022
ಕೇಂದ್ರ ಸಚಿವರ ಈ ಮಾತುಗಳು ತಮಿಳುನಾಡನ್ನು ಓಲೈಸುವ ಮತ್ತು ಕನ್ನಡಿಗರ ಹಾದಿ ತಪ್ಪಿಸುವ ರಾಜಕೀಯ ಹೇಳಿಕೆಯಾಗಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ತಮಿಳುನಾಡಿಗೆ ಬಿಡಬೇಕಾದಷ್ಟು ನೀರನ್ನು ಹರಿಸಿದ ಬಳಿಕ ಉಳಿದ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದು ಕರ್ನಾಟಕದ ಕಾನೂನಾತ್ಮಕ, ನೈತಿಕ ಮತ್ತು ತಾಂತ್ರಿಕ ಹಕ್ಕು ಆಗಿದೆ.
ಬೆಂಗಳೂರು ನಗರದ ಜನಸಂಖ್ಯೆ 1.5 ಕೋಟಿ ದಾಟಿದೆ. ಉಳಿದ 12 ಜಿಲ್ಲೆಗಳ 3.5 ಕೋಟಿ ಜನರ ವ್ಯಾಪ್ತಿಯಲ್ಲಿ ಕಾವೇರಿ ನೀರು ವಿತರಣೆಯಾಗುತ್ತಿದೆ. ದೇಶದ ಒಟ್ಟು ಆರ್ಥಿಕತೆ ಮತ್ತು ದೇಶದ ಒಟ್ಟು ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವ ಬೆಂಗಳೂರು ನಗರದ ಶೇಕಡ 30 ರಷ್ಟು ಮಂದಿಗೆ ಮಾತ್ರ ಕಾವೇರಿ ಕುಡಿಯುವ ನೀರಿನ ಲಭ್ಯತೆ ಇದೆ. ಬೇಸಿಗೆ ಮತ್ತು ಬರಗಾಲದ ಸಂದರ್ಭದಲ್ಲಿ ಬೆಂಗಳೂರು ನಗರದ ಜನರಿಗೆ ಕುಡಿಯುವ ನೀರಿನ ಅಭಾವ ಬಹಳ ಸಂಕಷ್ಟ ಸೃಷ್ಟಿಸಿದೆ. ಈ ಸಂಕಷ್ಟವನ್ನು ಪರಿಹರಿಸಲು ಮೇಕೆದಾಟು ಯೋಜನೆ ಜಾರಿ ಆಗುವುದು ಅತ್ಯಗತ್ಯ ಮತ್ತು ಮುಂದಿನ 50 ವರ್ಷಗಳ ನೀರಿನ ಅಗತ್ಯವನ್ನು ಈ ಯೋಜನೆ ಪೂರೈಸುತ್ತದೆ.
ಇಷ್ಟು ಮಹತ್ವದ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ಕೊಡದೆ ಸತಾಯಿಸುತ್ತಿರುವುದಲ್ಲದೆ, ಕೇಂದ್ರ ಸಚಿವ ಶೇಖಾವತ್ ನಮ್ಮ ಕುಡಿಯುವ ನೀರಿನ ಮಹತ್ವವನ್ನು ಅರಿಯದೆ ಅತ್ಯಂತ ನಿರ್ಲಕ್ಷತನದಿಂದ ಮಾತನಾಡಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
ಈ ಕೂಡಲೇ ಕೇಂದ್ರ ಸರ್ಕಾರ ಕಾಲಹರಣ ಮಾಡದೆ ತಕ್ಷಣ ಪರಿಸರ ಅನುಮತಿ ಕೊಡಬೇಕು. ಇಲ್ಲದ ನೆಪಗಳನ್ನು ಹೇಳಿಕೊಂಡು ರಾಜಕಾರಣ ಮಾಡದೆ ಮೇಕೆದಾಟು ಯೋಜನೆ ಜಾರಿ ಆಗಿ ಕೆಲಸ ಆರಂಭಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.