ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ವಿಧಾನಸಭೆ ಕಲಾಪದ ವೇಳೆ ಗದ್ದಲ ಉಂಟಾಯಿತು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಭಾರೀ ಗದ್ದಲ ಎದ್ದಿತು.
ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್, ರಾಜ್ಯದಲ್ಲಿ ಇತ್ತೀಚಿನ ದ್ವೇಷಭಾಷಣ ಕುರಿತಂತೆ ಸಚಿವರು ಹಾಗೂ ಜನಪ್ರತಿನಿಗಳು ನೀಡುತ್ತಿರುವ ಹೇಳಿಕೆಗಳನ್ನು ಪ್ರಸ್ತಾಪಿಸಿದರು. ಸಚಿವ ಅಶ್ವತ್ಥನಾರಾಯಣ ತಾನು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡು ನಾನು ಯಾರನ್ನು ವೈಯಕ್ತಿಕವಾಗಿ ಅಗೌರವಿಸುವ, ಟೀಕೆ ಮಾಡಿಲ್ಲ. ಕೇವಲ ರಾಜಕೀಯ ಭಾಷಣ ಮಾಡಿದ್ದೇನೆಂದು ಹೇಳಿದರು.
ಇದನ್ನು ಓದಿ: ಸದನದ ಕಲಾಪ ನುಂಗಿದ ಅಮಿತ್ ಶಾ, ಮತ್ತೆ ಉ.ಕ ನಿರ್ಲಕ್ಷ್ಯ , ಅದೇ ಭಾಷಣ! ಅದೇ ಭರವಸೆ!! ಮತ್ತದೆ ನಿರಾಸೆ!!!
ಸಚಿವರ ಉತ್ತರಕ್ಕೆ ಸಮಾಧಾನಗೊಳ್ಳದ ಕಾಂಗ್ರೆಸ್ ಸದಸ್ಯರಾದ ಕೃಷ್ಣಬೈರೇಗೌಡ, ತನ್ವೀರ್ ಸೇಠ್, ಪ್ರಿಯಾಂಕ ಖರ್ಗೆ, ಈಶ್ವರಖಂಡ್ರೆ ಮತ್ತಿತರರು, ಸಚಿವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಆರೋಪಿ ಸ್ಥಾನದಲ್ಲಿ ಇರುವವರಿಂದ ಇನ್ನೇನು ಉತ್ತರ ನಿರೀಕ್ಷಿಸಲು ಸಾಧ್ಯ ಎಂದು ಜೋರು ದನಿಯಲ್ಲಿ ಮುಗಿ ಬಿದ್ದರು.
ಸದನದಲ್ಲಿ ಗದ್ದಲದ ವಾತಾವರಣ ಉಂಟಾಗಿ, ಅಶ್ವತ್ಥನಾರಾಯಣ ಉತ್ತರಿಸಲು ಬಿಡದ ಶಾಸಕ ಈಶ್ವರ ಖಂಡ್ರೆ ಏರಿದ ದ್ವನಿಯಲ್ಲಿ ಮಾತಾಡಿದರು. ಸಭಾಧ್ಯಕ್ಷರು ಈ ವೇಳೆ ಪದೇ ಪದೇ ಕುಳಿತುಕೊಳ್ಳಿ ಎಂದು ಸೂಚನೆ ನೀಡಿದರೂ ಈಶ್ವರ್ ಖಂಡ್ರೆ ಮಾತನಾಡುವುದನ್ನು ನಿಲ್ಲಿಸಲಿಲ್ಲ.
ಕಾಂಗ್ರೆಸ್ ಪಕ್ಷದ ಉಪನಾಯಕ, ಯು.ಟಿ. ಖಾದರ್ ಮಾತನಾಡಿ, ಸಚಿವರ ವಿರುದ್ದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕೆಂದೆಂದು ಆಗ್ರಹಿಸಿದರು. ಮೀರ್ ಸಾದಿಕ್ ವಂಶಸ್ಥರು ತುಂಬಾ ಜನ ಇದ್ದಾರೆ. ಚುನಾವಣೆಯಲ್ಲಿ ನೇರ ನೇರ ಎದುರಿಸದೆ, ಹಿಂದಿನಿಂದ ಜನರನ್ನು ಪ್ರಚೋದನೆ ಮಾಡಲು ಮುಂದಾಗಿದ್ದಾರೆ. ಕಳೆದ ಒಂದು ತಿಂಗಳಿಂದ ದ್ವೇಷ ಭಾಷಣ ಮಾಡಲಾಗುತ್ತಿದೆ. ಉಳ್ಳಾಲ, ತುಮಕೂರಿನಲ್ಲಿ ಮಾತನಾಡಿದ್ದಾರೆ, ಇದು ಅಂತ್ಯ ಕಾಣಬೇಕು ಎಂದು ಆಗ್ರಹಿಸಿದರು.
ಅಶ್ವತ್ಥ್ ನಾರಾಯಣ್ ಮಾತಿಗೆ ಅಡ್ಡ ಹಾಕಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದ ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ನಾಯಕರ ಪ್ರತಿಭಟನೆಯಿಂದ ಕೋಪಗೊಂಡ ಸಭಾಧ್ಯಕ್ಷ ವಿಶ್ವೇಶ್ವರ ಕಾಗೇರಿ ಕಾಂಗ್ರೆಸ್ ಸದಸ್ಯರ ವಿರುದ್ದ ಅಸಮಾಧಾನ ಹೊರಹಾಕಿದರು.
ಪ್ರತಿಭಟಿಸುತ್ತಿದ್ದ ಈಶ್ವರ್ ಖಂಡ್ರೆ ನಡವಳಿಕೆ ಬಗ್ಗೆ ಅಸಮಾಧಾನಗೊಂಡ ಸಭಾಧ್ಯಕ್ಷ ವಿಶ್ವೇಶ್ವರ ಕಾಗೇರಿ ಮನವಿಗೂ ಸ್ಪಂದಿಸದೆ ಸದನದಿಂದ ಹೊರ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹಿರಿಯರಾದ ನೀವು ಈ ರೀತಿ ನಡೆದುಕೊಳ್ಳುವುದು ನಿಮಗೆ ಶೋಭೆ ತರುವುದಿಲ್ಲ. ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಇಷ್ಟೇಲ್ಲಾ ಹೇಳಿದ ಮೇಲೂ ನೀವು ಪೀಠಕ್ಕೆ ಗೌರವ ಕೊಡದೆ ಮಾತನಾಡುತ್ತಿದ್ದೀರಿ. ಇದೇನಾ ನೀವು ಸಭಾಧ್ಯಕ್ಷರಿಗೆ ಕೊಡುವ ಗೌರವ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸದಸ್ಯರ ಗದ್ದಲದಿಂದ ಸದನವನ್ನು 15 ನಿಮಿಷ ಮುಂದೂಡಬೇಕಾಯಿತು. ಸಭಾಧ್ಯಕ್ಷರ ಕೊಠಡಿಯಲ್ಲಿ ಸಂಧಾನ ಸಭೆ ನಡೆದಿದ್ದು, ಸಭೆಯಲ್ಲಿ ಚಿವ ಜೆ.ಸಿ. ಮಾಧುಸ್ವಾಮಿ, ಕೃಷ್ಣಬೈರೇಗೌಡ, ಯು ಟಿ ಖಾದರ್ ಸೇರಿದಂತೆ ಮತ್ತಿತರರು ಸಭಾಧ್ಯಕ್ಷರ ಮನವಿಯಂತೆ ಕಾಂಗ್ರೆಸ್ ಧರಣಿ ವಾಪಸ್ಸು ಪಡೆದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ