- ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧವೂ ಸಿದ್ದರಾಮಯ್ಯ ವಾಗ್ದಾಳಿ
- ರಾಜ್ಯದಲ್ಲಿ, ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದ ಸಿದ್ದರಾಮಯ್ಯ
- ಬೆಲೆ ಏರಿಕೆ ವಿಚಾರವಾಗಿ ಕೆಂದ್ರ ಸರ್ಕಾರದ ವಿರುದ್ಧ ಕಿಡಿ
ದಾವಣಗೆರೆ: ಡಿ. ಕೆ. ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ದಾವಣಗೆರೆಯ ಎಸ್. ಎಸ್. ಮೈದಾನದಲ್ಲಿ ನಡೆದ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಒಗ್ಗಟ್ಟಿನ ಮಂತ್ರ ಜಪಿಸಿದರು.
ನನ್ನ ಹಾಗೂ ಡಿಕೆ ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯವಿದೆ. ಅವರಿಗೆ ಸಿದ್ಧರಾಮೋತ್ಸವಕ್ಕೆ ವಿರೋಧವಿದೆ ಎಂಬುದಾಗಿ ಹಲವರು ಹೇಳುತ್ತಿದ್ದರು. ಆದ್ರೇ ಇದೆಲ್ಲಾ ಸುಳ್ಳು. ನಾನು ಮತ್ತು ಡಿಕೆ ಶಿವಕುಮಾರ್ ಜೊತೆಯಾಗೇ ಇದ್ದೇವೆ. ಅವರು ನಾವು ಒಟ್ಟಾಗಿಯೇ ಮುಂದಿನ ಚುನಾವಣೆ ಎದುರಿಸಲಿದ್ದೇವೆ. ನಮ್ಮ ಉದ್ದೇಶ ಕೋಮುವಾದಿ ಬಿಜೆಪಿ ಈ ರಾಜ್ಯದಿಂದ ಓಡಿಸಿ, ಕಾಂಗ್ರೆಸ್ ಸರ್ಕಾರವನ್ನು ಅಸ್ಥಿತ್ವಕ್ಕೆ ತರೋದೆ ಆಗಿದೆ ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪಷ್ಟ ಪಡಿಸಿದರು.
ಕೋಮುವಾದಿ ಬಿಜೆಪಿಯನ್ನು ಕಿತ್ತೊಗೆಯಬೇಕು. ಮತ್ತೆ ಕಾಂಗ್ರೆಸ್ ಅನ್ನು ಈ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು. ಇವತ್ತು ರೈತರು, ಬಡವರು, ದಲಿತರು, ಹಿಂದುಳಿದವರ್ಗದವರು, ಅಲ್ಪಸಂಖ್ಯಾತರು, ಮಹಿಳೆಯರು ಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಈ ದೇಶದ ಜನರು ಅತ್ಯಂತ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಜಾಪ್ರಭುತ್ವ ಇವತ್ತು ಸಂಕಷ್ಟದಲ್ಲಿದೆ. ಸಂವಿಧಾನಕ್ಕೆ ಇವತ್ತು ರಕ್ಷಣೆ ಇಲ್ಲ ಎಂದರು.
ಭಾರತೀಯ ಜನತಾ ಪಕ್ಷದವಿಗೆ ನಮಗೆಲ್ಲಾ ಸಿಕ್ಕಿರುವಂತ ಸ್ವಾತಂತ್ರ್ಯದ ಹೋರಾಟದಲ್ಲಿ ಯಾವುದೇ ಪಾತ್ರವಿಲ್ಲ. ಅವರ ಉದ್ದೇಶವೊಂದೆ ಹಿಂದೂ ರಾಷ್ಟ್ರ ನಿರ್ಮಾಣ ಮಾಡಬೇಕು. ಲೂಟಿ ಹೊಡೆಯಬೇಕು. ಈ ದೇಶದ ಸಂವಿಧಾನವನ್ನು ಬದಲಾವಣೆ ಮಾಡಬೇಕು ಎಂಬುದಷ್ಟೇ ಆಗಿದೆ. ಬಿಜೆಪಿಯವರೇ, ಮೋದಿಯವರೇ ನೀವು ಎಂದೆಂದಿಗೂ ಕೂಡ ಕಾಂಗ್ರೆಸ್ ಅನ್ನು ಮುಗಿಸೋದಕ್ಕೆ ಸಾಧ್ಯವಿಲ್ಲ. ಸಂವಿಧಾನ ಬದಲಾವಣೆ ಮಾಡೋದಕ್ಕೆ ಈ ದೇಶದ ಜನರು ಬಿಡೋದಿಲ್ಲ. ನಿಮ್ಮ ಕನಸು ನನಸಾಗೋದಿಲ್ಲ ಎಂದು ಹೇಳಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಶಕ್ತಿಯೇ ದೊಡ್ಡದು. ಯಾರೂ ಕೂಡಾ ದೀರ್ಘಕಾಲ ಜನಸೇವೆ ಹಾಗೂ ರಾಜಕೀಯ ಮಾಡಲು ಸಾಧ್ಯವಿಲ್ಲ. ಆದ್ರೆ, ಜನರ ಪ್ರೀತಿ, ವಿಶ್ವಾಸ, ಆಶೀರ್ವಾದ ಇದ್ದ ಕಾರಣ ನಾನು ಶಾಸಕನಾಗಿ, ಸಚಿವನಾಗಿ, ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಯ್ತು. ಇದಕ್ಕಾಗಿ ನಾನು ರಾಜ್ಯದ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿ ಇರುವವರೆಗೂ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.