ಮೈಸೂರು: ಬಿಜೆಪಿ ಹಾಗೂ ಆರ್ ಎಸ್ ಎಸ್ ನ ಬೆದರಿಕೆಗೆ ಹೆದರುವ ಪ್ರಶ್ನೆಯೇ ಇಲ್ಲ. ಅಲ್ಲಿನ ಕೋಮುವಾದಿಗಳಿಗೆ ಉತ್ತರಿಸಲು ಆಗಸ್ಟ್ 26ಕ್ಕೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಯೇ ಕೊಡಗು ಚಲೋ ನಡೆಸಲಾಗುವುದು ಎಂದು ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಹೇಳಿದ್ದಾರೆ.
ಮೈಸೂರಿನ ಗಾಂಧಿ ವೃತ್ತದಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಕುಮ್ಮಕ್ಕಿನಿಂದ ಆರ್ ಎಸ್ ಎಸ್ ನವರ ಷಡ್ಯಂತ್ರದಿಂದ ಓರ್ವ ವಿರೋಧ ಪಕ್ಷದ ನಾಯಕರಿಗೆ ಅಗೌರವ ತರುವ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಮಾಡದೇ ಜನಪ್ರತಿನಿಧಿಗಳ ಸಂವಿಧಾನದ ಹಕ್ಕಿಗೆ ಚ್ಯುತಿ ತರುವ ಮೂಲಕ ಬಿಜೆಪಿ ಹೆದರಿಸಲು ಮುಂದಾಗುತ್ತಿದೆ. ಸಿದ್ದರಾಮೋತ್ಸವ ದ ಯಶಸ್ಸು ಸಹಿಸಲಾಗದೇ ಇಂತ ಹೀನ ಕೃತ್ಯಕ್ಕೆ ಮುಂದಾಗಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಇದಕ್ಕೆಲ್ಲ ಹೆದರಲ್ಲ. ಈಗಾಗಲೇ ಪಕ್ಷದಿಂದ ಆ.26 ಕ್ಕೆ ಅದೇ ಕೊಡಗಿನಲ್ಲಿ ಮತ್ತೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಮಾವೇಶ ನಡೆಸಿ ಉತ್ತರ ಕೊಡುವ ಕೆಲಸ ಮಾಡುವ ಎಚ್ಚರಿಕೆ ನೀಡಿದರು.
ಈ ಕೂಡಲೇ ಗೃಹಸಚಿವರು ಹಾಗೂ ಕೊಡಗು ಜಿಲ್ಲಾ ಮಂತ್ರಿ ಕ್ಷಮೆಯಾಚಿಸಿ ದುಷ್ಕೃತ್ಯ ನಡೆಸಿದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಬೃಹತ್ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ, ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.