ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇದೇ ವೇಳೆ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವ ಸಂಬಂಧ ಇವರಿಬ್ಬರ ನಡುವೆ ಚರ್ಚೆ ನಡೆಯಿತು.
ಕೇಂದ್ರ ಸರ್ಕಾರದ ನೀತಿಯಿಂದ ಬಡವರಿಗೆ ಆಹಾರ ನೀಡುವ ಯೋಜನೆಗೆ ತೊಂದರೆಯಾಗುತ್ತಿದೆ ಎನ್ನುವುದನ್ನು ಮುಖ್ಯಮಂತ್ರಿಗಳು ಅಮಿತ್ ಶಾ ಅವರ ಗಮನಕ್ಕೆ ತಂದಿದ್ಧಾರೆ ಎಂದು ಮುಖ್ಯಮಂತ್ರಿಗಳ ಕಛೇರಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:10 ಕೆಜಿ ಅಕ್ಕಿ ಖಚಿತ, ಸಿಎಂ ಜೊತೆ ಚರ್ಚಿಸಿ ನಿರ್ಧಾರ – ಕೆ.ಎಚ್ ಮುನಿಯಪ್ಪ
ಕೇಂದ್ರ ಸರ್ಕಾರದ ಹೊಸ ನೀತಿ ಆಹಾರ ಭದ್ರತಾ ಕಾಯ್ದೆಗೆ ವಿರುದ್ಧವಾಗಿದೆ. ಇದು ಬಡವರ ಎರಡು ಹೊತ್ತಿನ ಊಟಕ್ಕೆ ತೊಂದರೆಯಿಂಟು ಮಾಡುತ್ತಿದೆ. ರಾಜ್ಯ ಸರ್ಕಾರಗಳಿಗೆ ಆಹಾರಧಾನ್ಯ ಪೂರೈಕೆ ಮಾಡದಿರುವ ನೀತಿಯನ್ನುಬದಲಾಯಿಸುವುದು ಒಳಿತು ಎಂದು ಸಿದ್ಧರಾಮಯ್ಯ ಹೇಳಿದ್ದಾಗಿ ಮುಖ್ಯಮಂತ್ರಿಗಳ ಕಛೇರಿ ತಿಳಿಸಿದೆ. ಈ ಬಗ್ಗೆ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರ ಜತೆ ಗುರುವಾರ ಮಾತುಕತೆ ನಡೆಸುವುದಾಗಿ ಅಮಿತ್ ಶಾ ಅವರು ಆಶ್ವಾಸನೆ ನೀಡಿದ್ದಾರೆ.
ಚುನಾವಣೆ ವೇಳೆ ರಾಜ್ಯ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳಲ್ಲಿ, ಬಿಪಿಎಲ್ ಕುಟುಂಬದ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯೂ ಒಂದಾಗಿದ್ದು, ಇದನ್ನೂ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಅಕ್ಕಿಯ ಅಭಾವ ಕಾಡುತ್ತಿದೆ.
ಅಕ್ಕಿ ಪೂರೈಸಿ ಎಂದು ಭಾರತೀಯ ಆಹಾರ ನಿಗಮಕ್ಕೆ ರಾಜ್ಯ ಸರ್ಕಾರ ಮಾಡಿದ್ದ ಮನವಿ ತಿರಸ್ಕೃತವಾಗಿದೆ. ಹೀಗಾಗಿ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಗೆ ಕರ್ನಾಟಕ ಸರ್ಕಾರ ಮುಂದಾಗಿದೆ.