ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆಯೆ? ದುಬೈಯಲ್ಲಿ ತಂತ್ರ ನಡೆಯುತ್ತಿದೆಯೆ?

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಪೂರೈಸುತ್ತಿದೆ. ಈ ನಡುವೆ ಚುನಾವಣೆ ವೇಳೆ ನೀಡಿರುವ ಐದು ಗ್ಯಾರೆಂಟಿಗಳನ್ನು ಸಂಪೂರ್ಣವಾಗಿ ಜಾರಿ ಮಾಡಲು ಸಾಧ್ಯವಾಗದೆ ಸರ್ಕಾರ ಪರದಾಡುತ್ತಿವೆ. ಭರವಸೆ ನೀಡಲಾದ ಐದು ಯೋಜನೆಗಳಲ್ಲಿ ಶಕ್ತಿ ಮತ್ತು ಗೃಹಜ್ಯೋತಿ ಯೋಜನೆ ಮಾತ್ರ ಯಾವುದೆ ತಕರಾರು ಇಲ್ಲದೆ ನಡೆಯುತ್ತಿದ್ದರೂ, ಜಾರಿಯಾದ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆ ಕುಂಟುತ್ತಾ ಸಾಗುತ್ತಿದೆ. ಅದರಲ್ಲೂ ಯುವಕrನ್ನು ಗುರಿಯಾಗಿಸಿ ನೀಡಲಾಗಿದ್ದ ಯುವನಿಧಿ ಭರವಸೆಯನ್ನು ಸರ್ಕಾರ ಇನ್ನೂ ಈಡೇರಿಸಿಲ್ಲ. ಈ ನಡುವೆ ರಾಜ್ಯದಲ್ಲಿ ಮುಂಗಾರು ಸರಿಯಾಗಿ ಸುರಿಯದೆ ರಾಜ್ಯದ ಹಲವು ತಾಲೂಕುಗಳು ಬರ ಪೀಡಿತವಾಗಿದೆ. ಇಷ್ಟೆಲ್ಲಾ ಸಮಸ್ಯೆ ಸಂಕಷ್ಟಗಳ ನಡುವೆ ಸರ್ಕಾರ ಪತನವಾಗಲಿದೆ ಎಂಬ ಊಹಾಪೋಹ ಹರಡುತ್ತಿದೆ.

ಲೋಕಸಭೆ ಚುನಾವಣೆಗೆ ಮುಂಚೆಯೆ ಸಿದ್ದರಾಮಯ್ಯ ಸರ್ಕಾರ ಪತನಗೊಳ್ಳಲಿದೆ ಎಂಬ ಬಗ್ಗೆ ಬಿಜೆಪಿಯ ಹಿರಿಯ ನಾಯಕರು ಖಡಾ ಖಂಡಿತವಾಗಿ ಹೇಳುತ್ತಿದ್ದಾರೆ. ಇದಕ್ಕೆ ತುಪ್ಪ ಸುರಿಯುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಳಗಾವಿಯ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಅವರು ಕೂಡಾ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದ್ದಾರೆ. ಇತ್ತೀಚೆಗೆ ಮೈಸೂರು ದಸರಾಕ್ಕೆ ತಂಡ ಕಟ್ಟಿಕೊಂಡು ಹೊರಟಿದ್ದ ಅವರನ್ನು ಕಾಂಗ್ರೆಸ್ ಹೈಕಮಾಂಡ್ ತಡೆದಿತ್ತು. ಅಷ್ಟೆ ಅಲ್ಲದೆ,  ಮಂಗಳವಾರ ರಾಜ್ಯಕ್ಕೆ ದಿಡೀರ್ ಭೇಟಿ ಕೊಟ್ಟಿದ್ದ ಕಾಂಗ್ರೆಸ್ ಹೈಕಮಾಂಡ್, ಬಹಿರಂಗ ಅಸಮಾಧಾನ ವ್ಯಕ್ತಪಡಿಸಿ ಗೊಂದಲ ಸೃಷ್ಟಿಸುವ ಶಾಸಕ, ಸಚಿವರಿಗೆ ಎಚ್ಚರಿಕೆಯನ್ನೂ ನೀಡಿತ್ತು. ಸರ್ಕಾರ ರಚನೆಯಾದಂದಿನಿಂದಲೂ ಹಲವಾರು ಶಾಸಕರು ಬಹಿರಂಗವಾಗಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಲೆ ಬರುತ್ತಿದ್ದಾರೆ. ಸರ್ಕಾರ ಪತನ

ಇದನ್ನ ಓದಿ: ಮುಸ್ಲಿಂ ದ್ವೇಷದ ರಾಜಕೀಯದಲ್ಲಿ ಮೋಸಕ್ಕೊಳಗಾಗಿರುವ ಸಮುದಾಯವೊಂದರ ಕತೆ

ಮತ್ತೊಂದು ಕಡೆ ಜೆಡಿಎಸ್ ಪಕ್ಷವೂ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿಗಿಂತ ಹೆಚ್ಚಾಗಿ ಸರ್ಕಾರವನ್ನು ಕುಮಾರಸ್ವಾಮಿ ಅವರು ಗುರಿಯಾಗಿಸಿ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಅವರ ದುಬೈ ಪ್ರವಾಸವು ಸಿದ್ದರಾಮಯ್ಯ ಸರ್ಕಾರವನ್ನು ಉರುಳಿಸಲು, ತಂತ್ರ ಹೆಣೆಯಲೆಂದೆ ಮಾಡಲಾದ ಪ್ರವಾಸ ಎಂದು ಕೂಡಾ ಹೇಳಲಾಗುತ್ತಿದೆ. ಅಲ್ಲಿ ಅವರನ್ನು ಜಾರಕಿಹೊಳಿ ಸಹೋದರರು ತೆರಳಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಕುಮಾರಸ್ವಾಮಿ ಆಪ್ತರು ಇದನ್ನು ಅಲ್ಲಗೆಳೆದಿದ್ದಾರೆ. “ಕುಮಾರಸ್ವಾಮಿ ಅವರು ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದಾರೆ. ಅಲ್ಲಿ ಯಾವುದೆ ರಾಜಕೀಯ ತಂತ್ರಗಾರಿಕೆ ನಡೆಸುತ್ತಿಲ್ಲ. ಸತೀಶ್ ಜಾರಕಿಹೊಳಿ ಅವರು ಅವರದೆ ಕಾರ್ಯವಾಗಿ ಹೋಗಿರಬಹುದು. ಅಲ್ಲಿ ಕುಮಾರಸ್ವಾಮಿ ಅವರನ್ನು ಅವರು ಭೇಟಿಯಾಗಿಲ್ಲ” ಎಂದು ಜನಶಕ್ತಿ ಮೀಡಿಯಾಗೆ ಕುಮಾರಸ್ವಾಮಿ ಆಪ್ತರು ಹೇಳಿದ್ದಾರೆ. ಸರ್ಕಾರ ಪತನ

ಮೂಲಗಳ ಪ್ರಕಾರ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ, ಕುಮಾರಸ್ವಾಮಿ ಅವರನ್ನು ಇತ್ತೀಚೆಗೆ ದುಬೈನಲ್ಲಿ ಭೇಟಿಯಾಗಿದ್ದಾರೆ. ಹಾಲಿ ಸರ್ಕಾರದ ಅಂದಾಜು 45 ಶಾಕಸರು ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರಾಗಿದ್ದು, ಅವರೊಂದಿಗೆ ಹೊರಗಡೆ ಬರಲು ತಯಾರಾಗಿದ್ದಾರೆ. ಇತ್ತೀಚೆಗೆ ಮೈಸೂರು ದಸರಾ ಪ್ರವಾಸಕ್ಕೆ ಹೊರಟಾಗ ಅವರ ಬಸ್ಸಿನಲ್ಲಿ 30ಕ್ಕಿಂತ ಹೆಚ್ಚಿನ ಶಾಸಕರು ಇದ್ದರು. ಬಿಜೆಪಿ 66, ಜೆಡಿಎಸ್‌ನ 19 ಹಾಗೂ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗ ಶಾಸಕರು 45 ಒಟ್ಟು ಸೇರಿದರೆ 124 ಶಾಸಕರಾಗುತ್ತಾರೆ. ಅವರನ್ನು ಇಟ್ಟುಕೊಂಡು ಸರ್ಕಾರ ರಚಿಸಿದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದು, ಸತೀಶ್ ಜಾರಕಿಹೊಳಿ ಉಪಮುಖ್ಯಮಂತ್ರಿಯಾಗಲಿದ್ದಾರೆ ಹಾಗೂ ಬಿಜೆಪಿಗೆ ಹೆಚ್ಚಿನ ಸಚಿವ ಸ್ಥಾನ ಅಥವಾ ಇನ್ನೊಂದು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವ ಬಗ್ಗೆ ಮಾತುಕತೆಯಾಗುತ್ತಿದೆ ಎಂದು ಜೆಡಿಎಸ್‌ ಮೂಲವೊಂದು ಜನಶಕ್ತಿ ಮೀಡಿಯಾಗೆ ತಿಳಿಸಿದೆ.

ಮಾತುಕತೆ ಹೀಗೆ ಆಗುತ್ತಿದೆ ಎಂಬುದು ನಿಜವಾದರೂ, 45 ಶಾಸಕರ ರಾಜೀನಾಮೆ ಕೊಡಿಸಿ, ಮತ್ತೆ ಸರ್ಕಾರ ಕಟ್ಟುವುದು ಸುಲಭದ ಕೆಲಸವಲ್ಲ. ಅದಾಗ್ಯೂ ಈ ರೀತಿಯ ಚರ್ಚೆಯಂತೂ ನಡೆಯುತ್ತಿದೆ ಎಂದು ಜೆಡಿಎಸ್‌ ಮೂಲ ಹೇಳಿದೆ. ಜೆಡಿಎಸ್‌ ತನ್ನ ಉಳಿವಿಗಾಗಿ ಹೋರಾಟ ನಡೆಸುತ್ತಿದೆ. ಬಿಜೆಪಿ ಜೊತೆಗಿನ ಮೈತ್ರಿಯಿಂದ ರಾಜ್ಯದಲ್ಲಿ 4-5 ಲೋಕಸಭೆ ಸೀಟುಗಳು ಸಿಗಲಿದ್ದು, ಇದರಲ್ಲಿ ಎಲ್ಲವನ್ನೂ ಗೆಲ್ಲಲಿದ್ದೇವೆ ಎಂಬ ವಿಶ್ವಾಸದಲ್ಲಿ ಪಕ್ಷವಿದೆ. ವಿಧಾನಸಭೆ ಚುನಾವಣೆಯಲ್ಲಿ ಸುಮಾರು 80 ಸೀಟುಗಳು ಮೈತ್ರಿಯಿಂದಾಗಿ ಬಿಜೆಪಿ ತಮಗೆ ಬಿಟ್ಟುಕೊಡಲಿದೆ ಎಂದು ಜನಶಕ್ತಿ ಮೀಡಿಯಾಗೆ ಮೂಲ ಹೇಳಿದೆ.

ಇದನ್ನ ಓದಿ: ಮಿಜೋರಾಂ ವಿಧಾನಸಭೆ ಚುನಾವಣೆ-2023 | ರಾಜ್ಯದ ರಾಜಕೀಯ ಸ್ಥಿತಿಗತಿ ಹೀಗಿದೆ!

ಈ ನಡುವೆ ರಾಜ್ಯ ಬಿಜೆಪಿಯ ನಾಯಕರ ಸ್ಥಿತಿ ದೆಹಲಿ ಮಟ್ಟದಲ್ಲಿ ಹೀನಾಯ ಸ್ಥಿತಿಯಲ್ಲಿದೆ. ಜೆಡಿಎಸ್‌ ಜೊತೆಗಿನ ಮೈತ್ರಿಯನ್ನು ರಾಜ್ಯ ಬಿಜೆಪಿಯನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮಾಡಿಕೊಂಡಿದೆ. ರಾಜ್ಯ ಬಿಜೆಪಿಯ 75%ಕ್ಕಿಂತಲೂ ಹೆಚ್ಚಿನ ನಾಯಕರು ಈ ಮೈತ್ರಿಯ ವಿರೋಧಿಗಳಾಗಿದ್ದಾರೆ. ಹಿರಿಯ ನಾಯಕ ಯಡಿಯೂರಪ್ಪ ಅವರನ್ನು ಹೇಗೋ ಮಾಡಿ ಒಪ್ಪಿಸಲಾಗಿದೆ. ಮೈತ್ರಿ ವಿರೋಧಿಸಿ ಚರ್ಚೆ ನಡೆಸಲು ದೆಹಲಿಗೆ ತೆರಳಿದ್ದ ಮತ್ತೊಬ್ಬ ನಾಯಕ ಸದಾನಂದ ಗೌಡ ಅವರಿಗೆ ಕೇಂದ್ರದ ಯಾವುದೆ ನಾಯಕ ಭೇಟಿಗೆ ಸಮಯ ನೀಡಲಿಲ್ಲ. ಹೋದ ದಾರಿಗೆ ಸುಂಕವಿಲ್ಲದೆ ಅವರು ವಾಪಾಸಾಗಿದ್ದಾರೆ. ರಾಜ್ಯದ ಚುನಾವಣೆಯಲ್ಲಿ ಪಕ್ಷವನ್ನು ಹೀನಾಯವಾಗಿ ಸೋಲಿಸಿದ್ದಕ್ಕಾಗಿ ಈ ವರೆಗೆ ರಾಜ್ಯದಲ್ಲಿ ವಿಪಕ್ಷ ನಾಯಕನ ಆಯ್ಕೆ ಮಾಡದೆ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಬದಲಾಯಿಸದೆ ಕೇಂದ್ರದ ಹೈಕಮಾಂಡ್ ರಾಜ್ಯದ ಘಟಕವನ್ನು ಶಿಕ್ಷಿಸುತ್ತಿದೆ ಎಂದು ಹೇಳಲಾಗುತ್ತಿದೆ. ಸರ್ಕಾರ ಪತನ

ಇತ್ತೀಚೆಗೆ ಮಾಜಿ ಸಚಿವ ಈಶ್ವರಪ್ಪ ಅವರನ್ನು ದೆಹಲಿಗೆ ಹೈಕಮಾಂಡ್ ಕರೆದಿದೆ ಎಂದು ಸುದ್ದಿಯಾಗಿದೆ. ಆದರೆ ಈ ಬೆಳವಣಿಗೆಯ ಬಗ್ಗೆ ಸಂಶಯವಿದೆ ಎಂದು ಬಿಜೆಪಿ ರಾಜಕೀಯವನ್ನು ಹತ್ತಿರದಿಂದ ಬಲ್ಲ ರಾಜಕೀಯ ವಿಶ್ಲೇಷಕರೊಬ್ಬರು ಜನಶಕ್ತಿ ಮೀಡಿಯಾಗೆ ಹೇಳಿದರು. “ರಾಜ್ಯ ಬಿಜೆಪಿಯಲ್ಲಿ ಹಿರಿಯ ನಾಯಕರದ್ದು ಮುಗಿದ ಕತೆ. ಈಶ್ವರಪ್ಪ ಅವರನ್ನು ದೆಹಲಿಗೆ ಕರೆಯಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಅದರ ಬಗ್ಗೆ ಸಂಶಯವಿದೆ. ವಾಸ್ತವದಲ್ಲಿ ಅವರು ತಮ್ಮ ಮಗನಿಗೆ ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಓಡಾಡುತ್ತಿದ್ದಾರೆ. ಹೀಗಾಗಿ ಅವರನ್ನು ಕರೆಸಿರಬಹುದು ಅಥವಾ ಇವರೇ ಹೀಗೆ ಹೇಳಿಕೊಂಡು ತಿರುಗಾಡುತ್ತಿರಬಹುದು. ಆದರೆ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸಧ್ಯಕ್ಕೆ ಹೆಸರಿರುವುದು, ಶೋಭಾ ಕರಂದ್ಲಾಜೆ, ಸಿ.ಟಿ. ರವಿ ಮತ್ತು ಸುನಿಲ್ ಕುಮಾರ್ ಅವರದ್ದು ಮಾತ್ರವಾಗಿದೆ” ಎಂದು ಅವರು ಅಭಿಪ್ರಾಯಪಡುತ್ತಾರೆ. ಸರ್ಕಾರ ಪತನ

ಅದಾಗ್ಯೂ, ಪಂಚರಾಜ್ಯಗಳ ಚುನಾವಣೆ ಮುಗಿದು ಫಲಿತಾಂಶದ ದಿನವಾದ ಡಿಸೆಂಬರ್ 3ರ ವರೆಗೆ ರಾಜ್ಯ ಬಿಜೆಪಿಯಲ್ಲಿ ಯಾವುದೆ ಬದಲಾವಣೆ ನಡೆಯುವುದಿಲ್ಲ ಎಂದು ಹೇಳಲಾಗುತ್ತಿದೆ. ಅಷ್ಟರ ಮಟ್ಟಿಗೆ ರಾಜ್ಯ ಘಟಕದ ಮೇಲೆ ಕೇಂದ್ರ ಬಿಜೆಪಿ ನಾಯಕರು ಅಸಡ್ಡೆ ಮಾಡುತ್ತಿದೆ. ಅದಾಗ್ಯೂ, ತಾನು ಸಕ್ರಿಯವಾಗಿದ್ದೇನೆ ಎಂದು ತೋರಿಸಿಕೊಳ್ಳಲು ತಂಡ ಕಟ್ಟಿಕೊಂಡು ರಾಜ್ಯ ಬಿಜೆಪಿ ಬರ ಪರಿಸ್ಥಿತಿ ಅಧ್ಯಯನಕ್ಕೆಂದು ತಯಾರಾಗುತ್ತಿದೆ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಿಜೆಪಿ ಸಣ್ಣ ಪುಟ್ಟ ಪ್ರತಿಭಟನೆ ಮಾಡುತ್ತಿದೆಯಾದರೂ ದೊಡ್ಡ ಮಟ್ಟದ ಯಾವುದೆ ಕಾರ್ಯಕ್ರಮವನ್ನು ಈ ವರೆಗೆ ಹಾಕಿಕೊಂಡಿಲ್ಲ. ಸರ್ಕಾರ ಪತನ

ಇದನ್ನ ಓದಿ: ರಾಜಕೀಯ ಪಕ್ಷಗಳಿಗೆ ಹಣ ನೀಡುವವರ ಬಗ್ಗೆ ತಿಳಿಯುವ ಹಕ್ಕು ನಾಗರಿಕರಿಗಿಲ್ಲ: ಕೇಂದ್ರದ ಬಿಜೆಪಿ ಸರ್ಕಾರ ಸರ್ಕಾರ ಪತನ

ಈ ಯಾವುದೆ ಲೆಕ್ಕಾಚಾರವಿದ್ದರೂ ಸರ್ಕಾರ ಕೆಡವಲು ಯಾವ ಮೋದಿಗೂ, ಅಮಿತ್ ಶಾಗೂ ಸಾಧ್ಯವೆ ಇಲ್ಲ ಎಂದು ರಾಜಕೀಯ ವಿಶ್ಲೇಷಕರೊಬ್ಬರು ಜನಶಕ್ತಿ ಮೀಡಿಯಾಗೆ ಹೇಳಿದರು. ಬಿಜೆಪಿ ಮತ್ತು ಜೆಡಿಎಸ್‌ ಸೇರಿದರೆ 85 ಅಷ್ಟೆ ಆಗುತ್ತದೆ. ಆದರೆ ಕಾಂಗ್ರೆಸ್ ಬಳಿ 137 ಸದಸ್ಯರ ಭಾರಿ ಬಹುಮತವಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರವನ್ನು ಕೆಡವಲು ಬಿಜೆಪಿಗೆ ಸಾಧ್ಯವೆ ಇಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ. ಒಂದು ವೇಳೆ ಈ ಸರ್ಕಾರವನ್ನು ಕೆಡವಲು ಸಾಧ್ಯವಿರುವುದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಮಾತ್ರವಾಗಿದೆ ಎಂಬುವುದು ಅವರ ಅಭಿಪ್ರಾಯವಾಗಿದೆ.

ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯಲು ಪ್ರಯತ್ನಿಸಿದ್ದು ನಿಜ ಎಂದು ಅವರು ಹೇಳುತ್ತಾರೆ. “ಅದು ರಾಜ್ಯ ಸರ್ಕಾರವನ್ನು ಕೆಡವುವ ಉದ್ದೇಶದಿಂದ ಅಲ್ಲ. ಬದಲಾಗಿ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡುತ್ತೇವೆ ಎಂಬ ಆಫರ್ ನೀಡಿ ಸೆಳೆಯುತ್ತಿದೆ. ಲೋಕಸಭೆಯಲ್ಲಿ ಸ್ಪರ್ಧಿಗಳು ಇಲ್ಲದ ಕಡೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಸೆಳೆದು ಬಿಜೆಪಿ ಟಿಕೆಟ್ ನೀಡಲು ಮುಂದಾಗುತ್ತಿದೆ. ಇದನ್ನು ಕಾಂಗ್ರೆಸ್ ಕೂಡಾ ಮಾಡುತ್ತಿದೆ. ಬಿಜೆಪಿಯ ಎಂಟಿಬಿ ನಾಗರಾಜ್ ಅವರನ್ನು ಸೆಳೆಯುತ್ತಿದ್ದು, ಬೆಂಗಳೂರು ಉತ್ತರ ಲೋಕಸಭೆ ಟಿಕೆಟ್ ನೀಡುವ ಆಫರ್ ನೀಡಿದೆ” ಎಂದು ಅವರು ಹೇಳಿದರು. ಈ ನಡುವೆ, ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕೆ. ಸುಧಾಕರ್ ಅವರು ಜೆಡಿಎಸ್ ಸೇರಲಿದ್ದು, ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂದು ಮೂಲವೊಂದು ಜನಶಕ್ತಿ ಮೀಡಿಯಾಗೆ ತಿಳಿಸಿದೆ. ಸರ್ಕಾರ ಪತನ

ಒಟ್ಟಿನಲ್ಲಿ, ಕೈಕೊಟ್ಟ ಮುಂಗಾರಿನ ಕಾರಣಕ್ಕೆ ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ನಿಭಾಯಿಸಬೇಕಿದ್ದ ಹಾಗೂ ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸಬೇಕಿದ್ದ ಸರ್ಕಾರ, ಸರ್ಕಾರದ ಕೊರಳ ಪಟ್ಟಿ ಹಿಡಿದು ಪ್ರಶ್ನೆ ಕೇಳಬೇಕಿದ್ದ ವಿರೋಧ ಪಕ್ಷಗಳು ಮುಂಬರುವ ಲೋಕಸಭೆಗೆ ತಯಾರಾಗುತ್ತಿದೆ ಹಾಗೂ ಅಧಿಕಾರ ಹಿಡಿಯುವ ಮತ್ತು ಉಳಿಸುವ ಹಪಾಹಪಿಯಲ್ಲಿದೆ. ಜನರ ಸಮಸ್ಯೆಗಳ ಬಗ್ಗೆ ಮಾತನಾಡಿ ಎಂದರೆ ಬೆಂಗಳೂರು-ಕನಕಪುರ, ಸರ್ಕಾರದ ಪತನ, ಹುಲಿಯುಗುರು ಸೇರಿದಂತೆ ಹಲವು ಅನಗತ್ಯ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಮಾಧ್ಯಮಗಳು ಕೇಂದ್ರ ಸರ್ಕಾರದ ತುತ್ತೂರಿಗಳಾಗಿವೆ. ಮತ ನೀಡಿ ಜನಪ್ರತಿನಿಧಿಗಳನ್ನು ವಿಧಾನಸಭೆಗೆ ಕಳುಹಿಸಿದ ಜನರ ಸಂಕಷ್ಟಕ್ಕೆ ಹೇಳುವವರು, ಕೇಳುವವರು ಯಾರೂ ಇಲ್ಲದಾಗಿದ್ದಾರೆ. ಸರ್ಕಾರ ಪತನ

ವಿಡಿಯೊ ನೋಡಿ: ಕರ್ನಾಟಕ ರಾಜ್ಯೋತ್ಸವ : ಜನರ ಬದುಕಿನ‌ ಪ್ರಶ್ನೆಗಳು ಯಾಕಿಲ್ಲ? – ಜಿ.ಎನ್ ನಾಗರಾಜ ಅವರ ವಿಶ್ಲೇಷಣೆ

Donate Janashakthi Media

Leave a Reply

Your email address will not be published. Required fields are marked *