ವಿದ್ಯಾರ್ಥಿಗಳ ಶೂ-ಸಾಕ್ಸ್​ ಬಗ್ಗೆ ಕೇಳಿದಾಗ-ಸಿದ್ದರಾಮಯ್ಯ ಏನು ಸರ್ಕಾರವೇ? ಎಂದ ಶಿಕ್ಷಣ ಸಚಿವರು

ಕಲಬುರಗಿ: ಈ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಾಲಾ ಮಕ್ಕಳಿಗೆ ಶೂ-ಸಾಕ್ಸ್ ಕೊಡ್ತಿರೋ ಇಲ್ವೋ ಎಂಬ ಪ್ರಶ್ನೆಗೆ ಸಮಪರ್ಕವಾಗಿ ಉತ್ತರ ನೀಡದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಉತ್ತರ ನೀಡಿದ್ದಾರೆ.

ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಕೊಡುವುದನ್ನು ಸರ್ಕಾರ ನಿಲ್ಲಿಸಲಿದೆಯೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಆರೋಪದ ಬಗ್ಗೆ ತಮ್ಮ ನಿಲುವೇನು ಎಂದು ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಸಚಿವ ಬಿ.ಸಿ. ನಾಗೇಶ್‌ ಸಿದ್ದರಾಮಯ್ಯ ಏನು ಸರ್ಕಾರವೇ ? ಅವರು 100 ಸುಳ್ಳು ಹೇಳುವುದರಲ್ಲಿ ಇದು 101 ನೇ ಸುಳ್ಳು ಅಷ್ಟೇ. ಮಕ್ಕಳು ಶಾಲೆಗೆ ಬರುವುದು ಶಿಕ್ಷಣಕ್ಕಾಗಿ. ಅವರ ಅವಧಿಯಲ್ಲಿ ಗುಣಮಟ್ಟ ಶಿಕ್ಷಣವನ್ನು ಎಷ್ಟರ ಮಟ್ಟಿಗೆ ಕೊಟ್ಟಿದ್ದಾರೆ ಕೇಳಿ. ಕಲಿಕಾ ಚೇತರಿಕೆಗೆ 146 ಕೋಟಿ ರೂ. ಖರ್ಚು ಮಾಡಿದ್ದೆವು. ಕೊರೊನಾದಿಂದ ಆರ್ಥಿಕ ಹೊಡೆತ ಬಿದ್ದಿದೆ. ಶೂ-ಸಾಕ್ಸ್ ಕೊಡುವುದಕ್ಕೆ ಆಗುವುದಿಲ್ಲ ಎಂದು ನಾವು ಎಲ್ಲೂ ಹೇಳಿಲ್ಲ. ಶೂ ಸಾಕ್ಸ್‌ಗಿಂತ ನಾವು ಗುಣಮಟ್ಟದ ಶಿಕ್ಷಣಕ್ಕೆ ಒತ್ತುಕೊಟ್ಟಿದ್ದೇವೆ ಎಂದರು.

ಶೂ- ಸಾಕ್ಸ್ ಬಗ್ಗೆ ಮುಂದಿನ‌ ದಿನಗಳಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ. ನೀವು ಎಷ್ಟೇ ಸಲ ಪ್ರಶ್ನೆ ಕೇಳಿದರೂ ನಾ ಹೇಳೊದೊಂದೆ. ಇನ್ನೂ ಏನೂ ನಿರ್ಣಯ ತಗೊಂಡಿಲ್ಲ ಎಂದು ಪದೇ ಪದೇ ಹೇಳಿದ್ದಾರೆ.

ಶಾಲೆಗೆ ಶಿಕ್ಷಕರ ಕಡ್ಡಾಯ ಹಾಜರಾತಿ ಮೇಲೆ ನಿಗಾ ವಹಿಸಲು ಹೊಸ ಪದ್ದತಿ ಜಾರಿಗೆ ತರಲು ಸರ್ಕಾರ ಕ್ರಮವಹಿಸಲಿದೆ ಎಂದಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು, ಈ ಮುಂಚೆ ಬಯೋಮೆಟ್ರಿಕ್ ಹಾಜರಾತಿ ತರಲು ಮುಂದಾಗಲಾಗಿತ್ತು. ಆದರೆ ಈಗ ಬಯೋಮೆಟ್ರಿಕ್ ಇಂಟರನೆಟ್ ಹಾಗೂ ಇತರ ಕಾರಣಗಳ ಹಿನ್ನೆಲೆಯಲ್ಲಿ ಕಾರ್ಯಾನುಷ್ಢಾನಕ್ಕೆ ಬರಲಿಲ್ಲ. ಆದರೆ, ವಿದ್ಯುತ್ ಸರಬರಾಜು ನಿಗಮಗಳಲ್ಲಿ ಜಾರಿಗೆ ತಂದಿರುವ ಮಾದರಿಯಲ್ಲಿ ಶಿಕ್ಷಕರ ಹಾಜರಾತಿ ಅಳವಡಿಸಲು ಪರಾಮರ್ಶಿಸಲಾಗಿದೆ ಎಂದು ವಿವರಣೆ ನೀಡಿದರು. ಬಹುತೇಕ ಕಡೆಗಳಲ್ಲಿ ಶಾಲೆಗೆ ಶಿಕ್ಷಕರು ಹಾಜರಾಗುತ್ತಿದ್ದಾರೆ. ಆದರೂ, ಸಹ ಕೆಲವು ಕಡೆ ದೂರುಗಳು ಕೇಳಿಬರುತ್ತಿವೆ. ಒಟ್ಟಾರೆ ಶಿಸ್ತು ತರಲು ಈಗಿನ ಹಾಜರಾತಿ ಬದಲಾವಣೆಗೊಳಿಸಲು ಉದ್ದೇಶಿಸಲಾಗಿದೆ ಎಂದರು.

ಮಕ್ಕಳ ಸಂಖ್ಯೆಗನುಗುಣವಾಗಿ ಶಿಕ್ಷಕರ ಅನುಪಾತ ಹೆಚ್ಚಿಸಲು 15 ಸಾವಿರ ಶಿಕ್ಷಕರಲ್ಲಿ 5 ಸಾವಿರ ಶಿಕ್ಷಕರನ್ನು ಕಲ್ಯಾಣ ಕರ್ನಾಟಕ ಭಾಗದವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಕಲಬುರಗಿ, ಯಾದಗಿರಿ, ಬೀದರ್​​ ಜಿಲ್ಲೆಗಳಲ್ಲಿ ಶೇ. 85 ರಷ್ಟು ಪುಸ್ತಕಗಳು ವಿತರಣೆ ಆಗಿವೆ. ಪಠ್ಯಪುಸ್ತಕ ಮುದ್ರಣಕ್ಕೆ ಹಿಂದಿನ ಬಾರಿಗಿಂತ ಹೆಚ್ಚು ಖರ್ಚಾಗಿದೆಯೇ? ಎಂಬ ಪತ್ರಕರ್ತರ ಪ್ರಶ್ನೆಗೆ, ಎಷ್ಟು ಖರ್ಚಾಗಿದೆ ಅನ್ನೋದರ ಬಗ್ಗೆ ನನಗೆ ಗೊತ್ತಿಲ್ಲ ಎಂದರು. ಇದಕ್ಕೆ ಮರು ಪ್ರಶ್ನೆ ಮಾಡಿದ ಪತ್ರಕರ್ತರು ನಿಮ್ಮ ಇಲಾಖೆ ಬಗ್ಗೆ ನಿಮಗೆ ಗೊತ್ತಿಲ್ಲದಿದ್ರೆ ಹೇಗೆ ಸರ್? ಎಂದಿದಕ್ಕೆ ತಾಳ್ಮೆ ಕಳೆದುಕೊಂಡರು.

ಏನ್ರಿ ಎಲ್ಲಾ ಇಲಾಖೆ ಅಂದಮೇಲೆ ಎಲ್ಲಾನೂ ಗೊತ್ತಿರಬೇಕು ಅಂತಾ ಇದೆಯಾ?. ನನಗೆ ಗೊತ್ತಿಲ್ಲ ರೀ ಅಂತಾ ಹೇಳಿ ಮಾಧ್ಯಮಗೋಷ್ಟಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದರು.

Donate Janashakthi Media

One thought on “ವಿದ್ಯಾರ್ಥಿಗಳ ಶೂ-ಸಾಕ್ಸ್​ ಬಗ್ಗೆ ಕೇಳಿದಾಗ-ಸಿದ್ದರಾಮಯ್ಯ ಏನು ಸರ್ಕಾರವೇ? ಎಂದ ಶಿಕ್ಷಣ ಸಚಿವರು

  1. ಶೂ & ಸಾಕ್ಸ,ಸೈಕಲ್ ಕೊಟ್ಟಿಲ್ಲ
    ಎಂಬ ಸಿದ್ದರಾಮಯ್ಯನವರು ಹೇಳಿರೊ…
    ಮಾತು ಸುಳ್ಳಲ್ಲ ನಿಮಗೆ ಕೊಡೊಕ ಆಗಿಲ್ಲಾ
    ಸುಮ್ಮನೆ 100 ಸುಳ್ಳು 101 ಸುಳ್ಳು ಎಂದು
    ಪರ್ಸಂಟೇಜ್ ಕೊಡೋದು ಯಾಕೆ
    ಯಾರು ಯಾವ ಕೆಲಸ ಮಾಡ್ತಾರೆ ಅನ್ನೋದು
    ಜನರಿಗೆ ಗೊತ್ತಿದೆ ಜನರೀಗೆ ಸ್ಪಂದಿಸುವ ವ್ಯಕ್ತಿಬೇಕು
    ಅವರು ಆಯ್ಕೆ ಮಾಡ್ತಾರೆ ನೀವು ಕಿತ್ತಾಡಿಕೊಳ್ಳೊದು
    ಬೇಡ ಈ ಸಾರಿ ನಿರ್ದಿಷ್ಟ ಸರ್ಕಾರವನ್ನು ತರುತ್ತಾರೆ ಜನ.🙏

Leave a Reply

Your email address will not be published. Required fields are marked *