ಬೆಂಗಳೂರು : ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು. ಮತದಾನಕ್ಕೆ 18 ದಿನ ಮಾತ್ರ ಉಳಿದಿದ್ದು, ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ. ಇಬ್ಬರೂ ನಾಯಕರು ಒಟ್ಟಿಗೆ ಹೆಗಲ ಮೇಲೆ ಕೈ ಹಾಕಿಕೊಂಡು ಫೋಟೋಗೆ ಫೋಸ್ ನೀಡಿದ್ದಾರೆ.
ಈ ಮೂಲಕ ಟಗರು ಮತ್ತು ಕನಕಪುರ ಬಂಡೆ ವಿರೋಧಿಗಳಿಗೆ ನಾವೂ ಒಗ್ಗಟ್ಟಾಗಿದ್ದೇವೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮುನಿಸನ್ನು ಮರೆತು ಒಟ್ಟಿಗೆ ಫೋಸ್ ನೀಡಿದ್ದಾರೆ. ಅದಲ್ಲದೇ ಈ ವೇಳೆ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಬ್ಯಾಡ್ಜ್ ಅನ್ನು ಡಿಕೆ ಶಿವಕುಮಾರ್ ತೊಡಿಸಿರುವುದು ಕೂಡ ಕಂಡುಬಂದಿದೆ. ಈ ಮೂಲಕ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ, ಅಸಮಾಧಾನ ಇಲ್ಲ ಎಂಬುದನ್ನು ಸಿದ್ದು ಡಿಕೆಶಿ ಸಾರಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಹಲವು ವಿಚಾರಕ್ಕೆ ಭಿನ್ನಮತ ಇತ್ತು. ಮುಂದಿನ ಸಿಎಂ ಸ್ಥಾನ, ಟಿಕೆಟ್ ವಿಚಾರ, ಪಕ್ಷದ ಕಾರ್ಯಕ್ರಮಗಳ ಉಸ್ತುವಾರಿ ಸೇರಿ ಹಲವು ವಿಚಾರಗಳಲ್ಲಿ ಭಿನ್ನಮತ ಇತ್ತು. ಇಬ್ಬರು ಹಲವು ಬಾರಿ ಬಹಿರಂಗವಾಗಿಯೇ ಅದನ್ನು ತೋರಿಸಿಕೊಂಡಿದ್ದರು. ಆದರೆ, ಈಗ ಎಲ್ಲದಕ್ಕೂ ಉಭಯ ನಾಯಕರು ಫುಲ್ ಸ್ಟಾಪ್ ಹಾಕಿದ್ದು, ನಮ್ಮ ನಡುವೆ ಯಾವುದೇ ಭಿನ್ನಮತ ಇಲ್ಲ ಎಂಬುದನ್ನು ಫೋಟೋ ಮೂಲಕ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಬೆಲೆ ಏರಿಕೆ ವಿರುದ್ಧ ಸೈಕಲ್ ಮೂಲಕ ವಿಧಾನಸೌಧಕ್ಕೆ ಆಗಮಿಸಿದ ಸಿದ್ದರಾಮಯ್ಯ-ಡಿಕೆಶಿ
ಸಿದ್ದು-ಡಿಕೆಶಿಯನ್ನು ಒಂದು ಮಾಡಿದ್ದ ರಾಹುಲ್ :
ದಾವಣಗೆರೆಯಲ್ಲಿ ಕಳೆದ ವರ್ಷ ಸಿದ್ದರಾಮಯ್ಯನವರ 75ನೇ ವರ್ಷದ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಕೂಡ ಭಾಗವಹಿಸಿದ್ದರು. ಈ ವೇಳೆ ರಾಹುಲ್ ಗಾಂಧಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ಆಲಿಂಗನ ಮಾಡಿಸಿ, ಇಬ್ಬರೂ ನಾಯಕರು ಒಗ್ಗಟ್ಟಾಗಿ ಇದ್ದಾರೆ ಎಂಬ ಸಂದೇಶವನ್ನು ನೀಡಿದ್ದರು.
ಮುಂದಿನ ಸಿಎಂ ಸ್ಥಾನಕ್ಕಾಗಿ ಕಿತ್ತಾಟ :
ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಶೀತಲ ಸಮರ ನಡೆಯುತ್ತಲೇ ಇದೆ. ಹಲವು ಬಾರಿ ಇಬ್ಬರೂ ಬಹಿರಂಗವಾಗಿ ನಾನೇ ಮುಂದಿನ ಸಿಎಂ ಎಂದು ಹೇಳಿಕೊಂಡಿದ್ದು ಇದೆ. ಹೈಕಮಾಂಡ್ ಮಧ್ಯಪ್ರವೇಶದ ಬಳಿಕ ಉಭಯ ನಾಯಕರು ಬಹಿರಂಗವಾಗಿ ಸಿಎಂ ಸ್ಥಾನದ ಆಸೆಯನ್ನೂ ಹೇಳಿಕೊಳ್ಳದಿದ್ದರೂ ಅವರ ಬೆಂಬಲಿಗರು ಮಾತ್ರ ನಮ್ಮ ನಾಯಕರೇ ಸಿಎಂ ಆಗಬೇಕೆಂದು ಹೇಳುತ್ತಿದ್ದಾರೆ.
ಹೈಕಮಾಂಡ್ ಸೂಚನೆ ಬಳಿಕವೂ ಡಿಕೆ ಶಿವಕುಮಾರ್ ಪರೋಕ್ಷವಾಗಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ನಿಮ್ಮ ಮನೆ ಮಗ ಹೋಗುವ ಅವಕಾಶ ಬಂದಿದೆ. ಪೆನ್ನು ಸಿಗುವ ಅವಕಾಶ ಇದೆ. ಮನೆಗೆ ಲಕ್ಷ್ಮೀ ಬರುವ ಅವಕಾಶ ಇದೆ ಎಂದು ಸಿಎಂ ಸ್ಥಾನದ ಆಸೆಯನ್ನು ಹಂಚಿಕೊಂಡಿದ್ದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯನ್ನು ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರು ನಿರ್ಧರಿಸುತ್ತಾರೆ ಬಿಡಿ ಎಂದು ಹೇಳುವ ಮೂಲಕ ತಾವು ಸಿಎಂ ಸ್ಥಾನದ ಆಕಾಂಕ್ಷಿ ಎಂಬುದನ್ನು ಕೆಲ ದಿನಗಳ ಹಿಂದೆ ಹೇಳಿದ್ದರು.
ಕಾಂಗ್ರೆಸ್‌ನಲ್ಲಿ ಡಿಕೆ ಶಿವಕುಮಾರ್ ಬಣ, ಸಿದ್ದರಾಮಯ್ಯ ಬಣ ಸೃಷ್ಟಿಯಾಗಿರುವುದು ಜಗಜ್ಜಾಹೀರು. ಇತ್ತೀಚೆಗೆ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲೂ ಇಬ್ಬರು ಬಣಗಳ ನಡುವೆ ತಿಕ್ಕಾಟ ನಡೆದಿತ್ತು. ಹಲವು ಕಡೆ ಸಿದ್ದರಾಮಯ್ಯ ಬಣಕ್ಕೆ ಟಿಕೆಟ್ ತಪ್ಪಿದ್ದರೆ, ಕೆಲವೆಡೆ ಡಿಕೆ ಶಿವಕುಮಾರ್ ಬಣಕ್ಕೆ ಟಿಕೆಟ್ ಕೈತಪ್ಪಿತ್ತು.