ಬೆಂಗಳೂರು: ಪ್ರಸಿದ್ಧ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾಗೆ ತೆರಿಗೆ ವಿನಾಯತಿ ಘೋಷಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಅವರ ಕಥೆಯೊಂದನ್ನು ಆಯ್ದು ನಿರ್ದೇಶಕ ಶಶಾಂಕ್ ಸೋಗಲ್ ಅವರು ‘ಡೇರ್ ಡೆವಿಲ್ ಮುಸ್ತಫಾ’ ಚಿತ್ರವನ್ನು ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾವು ನೋಡುಗರ ವಲಯದಲ್ಲಿ ಮೆಚ್ಚುಗೆ ಗಳಿಸಿದೆ.
ಇದನ್ನೂ ಓದಿ:‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವಂತೆ ಚಿತ್ರತಂಡದಿಂದ ಸಿಎಂಗೆ ಮನವಿ
ಚಿತ್ರದ ತಂಡವು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದು ತೆರಿಗೆ ವಿನಾಯತಿಗೆ ಮನವಿ ಮಾಡಿತ್ತು. ಕೋಮುಸಾಮರಸ್ಯ ಮತ್ತು ಭಾವೈಕ್ಯತೆಯ ಸಂದೇಶ ಸಾರುವ ಸಿನಿಮಾವನ್ನು ಇನ್ನಷ್ಟು ಜನರು ಮತ್ತು ಶಾಲಾ ಮಕ್ಕಳು ನೋಡಲು ಸಹಕಾರಿಯಾಗುವಂತೆ ಮಾಡಲು ತೆರಿಗೆ ವಿನಾಯತಿ ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಸಹಮತ ಸೂಚಿಸಿದ್ದಾರೆ.