ಮೈಸೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಗ್ರಾಮ ಮೈಸೂರು ತಾಲೂಕಿನ ಸಿದ್ದರಾಮನಹುಂಡಿ ಗ್ರಾಮದಲ್ಲಿ ಸಿದ್ದರಾಮೇಶ್ವರ ಹಾಗೂ ಚಿಕ್ಕಮ್ಮತಾಯಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು.ತಮ್ಮೂರಿನ ಸ್ನೇಹಿತರ ಜೊತೆ ವೀರ ಕುಣಿತ ಕುಣಿದು ಕುಪ್ಪಳಿಸಿ, ಹಬ್ಬದ ಉತ್ಸಾಹ ಇಮ್ಮಡಿಗೊಳಿಸಿದ್ರು.
ದೇವಸ್ಥಾನದ ರಿಪೇರಿ ಕೆಲಸ ನಡೆಯುತ್ತಿರುವುದರಿಂದ ಕಳೆದ 7 ವರ್ಷಗಳಿಂದಲೂ ಜಾತ್ರಾ ಮಹೋತ್ಸವ ನಡೆದಿರಲಿಲ್ಲ. ಜಾತ್ರೆಯ ಪ್ರಮುಖ ಆಕರ್ಷಣೆ ಅಂದ್ರೆ ವೀರ ಮಕ್ಕಳ ಕುಣಿತ, ಸಿದ್ದರಾಮಯ್ಯ ಬಾಲ್ಯದಿಂದಲೂ ಮೈಗೂಡಿಸಿಕೊಂಡು ಬಂದಿರುವ ಈ ವೀರ ಮಕ್ಕಳ ಕುಣಿತವನ್ನ ನೆನ್ನೆ ರಾತ್ರಿ ಕುಣಿದ್ರು. ಸಿದ್ದರಾಮನಹುಂಡಿಗೆ ಬರ್ತಿದ್ದಂತೆ ಸಿದ್ದು, ನಾನು ಈ ಬಾರಿ ಕುಣಿಯಲ್ಲ ಕಣ್ರಯ್ಯ ಎಂದು ಸ್ನೇಹಿತರಿಗೆ ಹೇಳಿದ್ರು. ಆದ್ರೆ ಗ್ರಾಮಸ್ಥರು ಮಾತ್ರ ಸಾರ್ ನೀವು ಒಂದೆರಡು ಕುಣಿತ ಹಾಕ್ಲೇಬೇಕು ಅಂತ ಪಟ್ಟು ಹಿಡಿದ್ರು. ಕೊನೆಗೆ ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಸಿದ್ದರಾಮಯ್ಯ, ಪಂಚೆ ಎತ್ಕಟ್ಟಿ ಬರೋಬ್ಬರಿ ನಲವತ್ತು ನಿಮಿಷಗಳ ಕಾಲ ಕುಣಿದು ಗಮನ ಸೆಳೆದ್ರು. ತಾಳಕ್ಕೆ ತಕ್ಕಂತೆ ಸಿದ್ದು ಸ್ಟೆಪ್ ಹಾಕುವ ಜೊತೆಗೆ ವೀರ ಕುಣಿತದ ಪದಗಳನ್ನೂ ಹಾಡಿದ್ರು.
ಸಿದ್ದರಾಮಯ್ಯನ ಕುಣಿತ ನೋಡಲು ಅವರ ಕುಟುಂಬದ ದಂಡೆ ಬಂದಿತ್ತು. ಸಿದ್ದರಾಮಯ್ಯ ಪುತ್ರ ಯತೀಂದ್ರ ಹಾಗೂ ರಾಕೇಶ್ ಪತ್ನಿ ಸೇರಿದಂತೆ ಅವರ ಬಂಧು ಬಳಗ ಗ್ರಾಮಸ್ಥೆರೆಲ್ಲ ಸಿದ್ದು ಸ್ಟೆಪ್ ನೋಡಲು ಮುಗಿಬಿದ್ರು. ಈ ಜಾತ್ರೆಗೆ ಸಿದ್ದರಾಮನಹುಂಡಿ ಗ್ರಾಮ ಮಾತ್ರವಲ್ಲದೇ ಪಕ್ಕದ ಹೊಸಹಳ್ಳಿ, ಕುಪ್ಪೇಗಾಲ, ಮುದ್ದೇಗೌಡನಹುಂಡಿ, ಸಹಿತ ಹತ್ತಕ್ಕೂ ಹೆಚ್ಚು ಗ್ರಾಮಗಳಿಂದ ಭಕ್ತರು ಬರ್ತಾರೆ. ನಿನ್ನೆ ಮತ್ತು ಇಂದು ಸ್ವಗ್ರಾಮದಲ್ಲೇ ವಾಸ್ತವ್ಯ ಹೂಡಲಿರುವ ಸಿದ್ದರಾಮಯ್ಯ, ಅಣ್ಣನ ಮನೆಯಲ್ಲಿಯೇ ಇದ್ದ ಅಕ್ಕ, ಚಿಕ್ಕಮ್ಮ, ಹಾಗೂ ಬಂಧುಗಳ ಜೊತೆ ಕೆಲಹೊತ್ತು ಕಾಲ ಕಳೆದು ರಾಜಕೀಯ ಜಂಜಾಟ ಬಿಟ್ಟು ಫುಲ್ ರಿಲ್ಯಾಕ್ಸ್ ಆದ್ರು.