ಸಿದ್ದಾಪುರ: ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸರಕಾರ ಮೇಲ್ದರ್ಜೆಗೇರಿಸಲು ಆಗ್ರಹಿಸಿ ಕಾರ್ಮಿಕರು ಧರಣಿ ನಡೆಸಿದರು.
ಸಿದ್ದಾಪುರ ಪೇಟೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ವರೆಗೆ ಕಟ್ಟಡ ಹಾಗೂ ಗೇರು ಬೀಜ ಕಾರ್ಖಾನೆ ಕಾರ್ಮಿಕರು ಹಾಗೂ ಗ್ರಾಮಸ್ಥರು ಮೆರವಣಿಗೆ ನಡೆಸಿ ಆರೋಗ್ಯ ಕೇಂದ್ರದ ಎದುರುಗಡೆ ಪ್ರತಿಭಟನಾ ಧರಣಿ ನಡೆಸಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಅವರು ಧರಣಿಯನ್ನುದ್ದೇಶಿಸಿ ಮಾತನಾಡಿ ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಳೆಯುತ್ತಿರುವ ಸಿದ್ದಾಪುರ ಜನತೆಗೆ ಮೂಲಭೂತ ಸೌಕರ್ಯವಾಗಿರುವ ಆರೋಗ್ಯ ಸೇವೆಯನ್ನು ಸರಕಾರ ನಿರಂತರವಾಗಿ ಕಡೆಗಣಿಸಿದೆ. ದಿನ ನಿತ್ಯ ಸುತ್ತಲ ಹಳ್ಳಿಗಳಿಂದ ನೂರಾರು ರೋಗಿಗಳು ಕೇಂದ್ರಕ್ಕೆ ಬರುತ್ತಿದ್ದರೂ ವೈದ್ಯರು ವಾರದ ಕೆಲವೇ ದಿನಗಳು ಮಾತ್ರ ಲಭ್ಯ ಇರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಸಂಜೆ 4.30 ಗಂಟೆ ಆಗುತ್ತಿದ್ದಂತೆ ಕೇಂದ್ರ ಮುಚ್ಚುತ್ತಿರುವುದು ರಾತ್ರಿ ಹೊತ್ತು ತುರ್ತು ಚಿಕಿತ್ಸೆ ಸಿಗದಿರುವುದು ದೂರದ 30 ಕಿಮೀ ಕುಂದಾಪುರಕ್ಕೆ ಹೋಗುವ ಸ್ಥಿತಿ ಬಂದಿದೆ ಎಂದು ಹೇಳಿದರು.
ಇದನ್ನೂ ಓದಿ:ಮೂರು ತಿಂಗಳ ಸಂಬಳ ಕೇಳಿದಕ್ಕೆ ಕಾರ್ಮಿಕರ ಮೇಲೆ ಹಲ್ಲೆ: ಕ್ರಮಕ್ಕೆ ಸಿಐಟಿಯು ಒತ್ತಾಯ
ಆರೋಗ್ಯ ಕೇಂದ್ರದಲ್ಲಿ ಸುಮಾರು 4 ಎಕರೆಗೂ ಮಿಕ್ಕಿ ವಿಸ್ತಾರ ಜಾಗದಲ್ಲಿ ಲ್ಯಾಬ್,ಶವಗಾರ,ಬೆಡ್, ಶೌಚಾಲಯ ವ್ಯವಸ್ಥೆ ಕಟ್ಟಡ ಇದ್ದರೂ ಸಿಬ್ಬಂದಿ ನೇಮಕ ಮಾಡದೇ ಗ್ರಾಮಸ್ಥರಿಗೆ ಸಿಗಬೇಕಾದ ಸೌಲಭ್ಯದಿಂದ ವಂಚಿಸಿದೆ ಮಾತ್ರವಲ್ಲದೇ ಶವ ಇಡಲು ಫ್ರೀಜರ್ ವ್ಯವಸ್ಥೆ ಇಲ್ಲದ ದಾರುಣ ಪರಿಸ್ಥಿತಿ ಇದೆ ಎಂದ ಅವರು ಸರಕಾರ ಕೂಡಲೇ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆರಿಸಿ ಸಿದ್ದಾಪುರ ಮತ್ತು ಸುತ್ತಮುತ್ತಲಿನ ಜನರಿಗೆ ನ್ಯಾಯ ಒದಗಿಸಬೇಕು.ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಬೇಡಿಕೆಗಳು:
ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಬೇಕು.ಹಗಲು ರಾತ್ತಿ ಸೇವೆ ನೀಡಬೇಕು. ವಾರದ ಎಲ್ಲಾ ದಿನಗಳಲ್ಲಿ ವೈದ್ಯರು ಜನರಿಗೆ ಲಭ್ಯ ಇರಬೇಕು. ಹೆಚ್ಚುವರಿ ವೈದ್ಯರನ್ನು ನೇಮಕ ಮಾಡಬೇಕು. ಕೇಂದ್ರಕ್ಕೆ ಶವ ಇರಿಸಲು ಫ್ರೀಜರ್ ವ್ಯವಸ್ಥೆ ಮಾಡಬೇಕು. ಶವಗಾರ,ಬೆಡ್,ಲ್ಯಾಬ್ ನಿರ್ವಹಿಸಲು ಅಗತ್ಯ ಸಿಬ್ಬಂದಿಗಳನ್ನು ನೇಮಿಸಬೇಕು ಎಂದು ಮನವಿಯನ್ನು ಆರೋಗ್ಯ ಕೇಂದ್ರದ ಶಾಂತಪ್ಪ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಿಐಟಿಯು ತಾಲೂಕು ಸಂಚಾಲಕರಾದ ಚಂದ್ರಶೇಖರ ವಿ, ಕುಂದಾಪುರ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ ಮಾತನಾಡಿದರು. ಸಿಐಟಿಯು ಜಿಲ್ಲಾ ಮುಖಂಡರಾದ ಮಹಾಬಲ ವಡೇರಹೋಬಳಿ, ಕೆಲಸಗಾರರ ಸಂಘದ ಗಿರಿಜ ಆಚಾರ್,ಗಿರೀಜ ಶೆಡ್ತಿ,ಶಾರದ, ವೆಂಕಟೇಶ್ ಹೊಸಂಗಡಿ, ರತ್ನಾಕರ ಸಿದ್ದಾಪುರ, ವಿಠಲ,ಕ್ರಷ್ಣ ಪೂಜಾರಿ, ಜ್ಯೋತಿ,ಚಂದ್ರ ಕುಲಾಲ್ ಮೂಡುಬಗೆ ಮೊದಲಾದವರು ಇದ್ದರು. ಕಟ್ಟಡ ಕಾರ್ಮಿಕರ ಸಂಘದ ಸಿದ್ದಾಪುರ ಘಟಕದ ಕಾರ್ಯದರ್ಶಿ ಪಿ ಟಿ ಅಲೆಕ್ಸಾಂಡರ್ ಸ್ವಾಗತಿಸಿದರು. ಕಟ್ಟಡ ಕಾರ್ಮಿಕರ ಸಿದ್ದಾಪುರ ಅಧ್ಯಕ್ಷ ರಾಘವೇಂದ್ರ ಆಚಾರ್ಯ ವಂದಿಸಿದರು.