‘ನ್ಯಾಯಾಲಯ ಇಂದು ಮಧ್ಯಪ್ರವೇಶಿಸದಿದ್ದರೆ, ನಾವು ವಿನಾಶದ ದಾರಿಯಲ್ಲಿ ಪಯಣಿಸುತ್ತಿದ್ದೇವೆ ಎಂಬುದನ್ನು ನಿರಾಕರಿಸುವುದು ಸಾಧ‍್ಯವಾಗುವುದಿಲ್ಲ. ರಾಜ್ಯ ಸರಕಾರಗಳು ಈ ರೀತಿ ವ್ಯಕ್ತಿಗಳ ಮೇಲೆ ಗುರಿಯಿಡುತ್ತಿದ್ದರೆ, ಸುಪ್ರಿಂಕೋರ್ಟ್ ಇಲ್ಲಿದೆ ಎಂಬ ಸಂದೇಶವನ್ನುಕಳಿಸಬೇಕಾಗುತ್ತದೆ’ ಎಂದು ಸುಪ್ರಿಂಕೋರ್ಟ್ ಕಳೆದವಾರವಷ್ಟೇ ಹೇಳಿತ್ತು. ಆದರೆ ಅಂತಹ ಸಂದೇಶವನ್ನು ಬಹಳಷ್ಟು ಸಂದರ್ಭಗಳಲ್ಲಿಕಳಿಸುತ್ತಿಲ್ಲ, ಅಂದರೆ ದೇಶ ಈಗಾಗಲೇ ವಿನಾಶದ ಹಾದಿಯಲ್ಲಿ ಸಾಗಿದೆಯೇ ಎಂಬುದೇ ಈಗ ಕಳವಳ ಉಂಟುಮಾಡುವ ಸಂಗತಿ.. ..
ಉತ್ತರ ಪ್ರದೇಶದ ಮಥುರಾದಲ್ಲಿ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಜೈಲಿನಲ್ಲಿರುವ ಕೇರಳ ಮೂಲದ ದಿಲ್ಲಿಯ ಪತ್ರಕರ್ತ ಸಿದ್ದಿಕಿ ಕಪ್ಪನ್ ಬಿಡುಗಡೆಯ ಬಗ್ಗೆ ಮಧ್ಯಂತರ ಆದೇಶ ನೀಡಲು ನವಂಬರ್ 16ರಂದು ನಡೆದ ವಿಚಾರಣೆಯಲ್ಲಿ ಸುಪ್ರಿಂ ಕೋರ್ಟ್ ನಿರಾಕರಿಸಿದೆ, ಉತ್ತರ ಪ್ರದೇಶ ಪೋಲೀಸ್‍ಗೆ ನೋಟೀಸ್ ಕಳಿಸಿ ಮುಖ್ಯ ನ್ಯಾಯಾಧೀಶರ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ ವಿಚಾರಣೆಯನ್ನು ಮತ್ತೆ ನವಂಬರ್ 20ಕ್ಕೆ ಮುಂದೂಡಿದೆ.
ಕೇರಳದ ಒಂದು ವೆಬ್ ಪತ್ರಿಕೆಯ ದಿಲ್ಲಿ ಪ್ರತಿನಿಧಿಯಾಗಿ ಕಳೆದ 9 ವರ್ಷಗಳಿಂದ ಕೆಲಸ ಮಾಡುತ್ತಿರುವ ಕಪ್ಪನ್ ಹಾಥ್ರಸ್‍ನಲ್ಲಿ 19ವರ್ಷದ ದಲಿತ ಹುಡುಗಿಯ ಮೇಲೆ ಅತ್ಯಾಚಾರ, ಅದರಿಂದಾಗಿ ಆಕೆಯ ಸಾವಿನ ಘಟನೆಯ ಬಗ್ಗೆ ತಮ್ಮ ಮಾಧ್ಯಮಕ್ಕೆ ವರದಿ ಮಾಡಲು ಹೊರಟಿದ್ದಾಗ , ಅಕ್ಟೋಬರ್ 5ರಂದು ಉತ್ತರ ಪ್ರದೇಶ ಪೋಲೀಸರು ಅವರು, ಮತ್ತು ಜತೆಗೆ ಪಯಣಿಸುತ್ತಿದ್ದ ಇತರ ಮೂವರನ್ನು ಬಂಧಿಸಿ ಮಥುರಾ ಜೈಲಿಗೆ ಹಾಕಿದ್ದಾರೆ, ಮರುದಿನದಿಂದಲೇ ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಅವರ ಬಿಡುಗಡೆಗಾಗಿ ಮಾಡುತ್ತಿರುವ ಪ್ರಯತ್ನ ಇನ್ನೂ ಯಶಸ್ವಿಯಾಗಿಲ್ಲ. ಅವರ ಕುಟುಂಬದವರೂ ಸೇರಿದಂತೆ ಯಾರನ್ನೂ ಅವರನ್ನು ಭೇಟಿ ಮಾಡಲು ಬಿಟ್ಟಿಲ್ಲ ಎಂದು ವರದಿಯಾಗಿದೆ.
ಕಳೆದ ವಾರ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ಣಬ್ ಗೋಸ್ವಾಮಿಗೆ ಸುಪ್ರಿಂ ಕೋರ್ಟಿನಿಂದ ಮಧ್ಯಂತರ ಜಾಮೀನು ಸಿಕ್ಕಿದ ನಂತರ, ಉತ್ತರಪ್ರದೇಶದ ಪೋಲೀಸರು ಬಂಧಿಸಿರುವ ಕಪ್ಪನ್ ಕೂಡ ಮಧ್ಯಂತರ ಬಿಡುಗಡೆ ಪಡೆಯಬಹುದು ಎಂಬ ಹಲವರ ನಿರೀಕ್ಷೆ ಹುಸಿಯಾಗಿದೆ.
ಬಿಡುಗಡೆ ಪಡೆಯಬಹುದೆಂಬ ನಿರೀಕ್ಷೆಗೆ ಕಾರಣ ಗೋಸ್ವಾಮಿಯವರ ಕೇಸಿನ ವಿಚಾರಣೆಯ ಸಂದರ್ಭದಲ್ಲಿ ಮೂವರು ನ್ಯಾಯಾಧೀಶರ ಪೀಠದ ಮುಖ್ಯಸ್ಥರಾದ ನ್ಯಾಯಮೂರ್ತಿ ಚಂದ್ರಚೂಡ್ ರವರ ಮಾತುಗಳು.
‘ಸಂವಿಧಾನಿಕ ನ್ಯಾಯಾಲಯಗಳಾದ ಹೈಕೋರ್ಟ್‍ಗಳು ವೈಯಕ್ತಿಕ ಸ್ವಾತಂತ್ರ್ಯದ ನಿರಾಕರಣೆಯ ವಿಷಯದಲ್ಲಿ ಸಾಕಷ್ಟು ಮಾಡುತ್ತಿಲ್ಲ ಎಂದು ಸುಪ್ರಿಂ ಕೋರ್ಟಿಗೆ ಬೇಸರವಾಗಿದೆ’ ಎಂದ ಅವರು ‘ ಈ ನ್ಯಾಯಾಲಯ ಇಂದು ಮಧ್ಯಪ್ರವೇಶಿಸದಿದ್ದರೆ, ನಾವು ವಿನಾಶದ ದಾರಿಯಲ್ಲಿ ಪಯಣಿಸುತ್ತಿದ್ದೇವೆ ಎಂಬುದನ್ನು ನಿರಾಕರಿಸುವುದು ಸಾಧ‍್ಯವಾಗುವುದಿಲ್ಲ. ..ರಾಜ್ಯ ಸರಕಾರಗಳು ಈ ರೀತಿ ವ್ಯಕ್ತಿಗಳ ಮೇಲೆ ಗುರಿಯಿಡುತ್ತಿದ್ದರೆ, ಸುಪ್ರಿಂ ಕೋರ್ಟ್ ಇಲ್ಲಿದೆ ? ಎಂಬ ಸಂದೇಶವನ್ನು ಕಳಿಸೋಣ’ ಎಂದಿದ್ದರು..
‘ನಾವೂ ಈ ದೇಶದ ನಾಗರಿಕರಲ್ಲವೇ?‘–
ನವಂಬರ್ 11ರಂದು ಕ್ರಿಮಿನಲ್ ಕೇಸೊಂದರಲ್ಲಿ ಮಹಾರಾಷ್ಟ್ರ ಪೋಲೀಸ್ ಬಂಧಿಸಿದ ರಿಪಬ್ಲಿಕ್ ಟಿವಿಯ ಮಾಲಕ ಮತ್ತು ಮುಖ್ಯ ಸಂಪಾದಕ ಅರ್ಣಬ್ ಗೋಸ್ವಾಮಿ ಏಳೇ ದಿನಗಳಲ್ಲಿ ಸುಪ್ರಿಂ ಕೋರ್ಟ್‍ನಿಂದ ಮಧ್ಯಂತರ ಜಾಮೀನು ಪಡೆದಾಗ ‘ನನ್ನ ಗಂಡನಿಗೆ ನ್ಯಾಯವನ್ನು ನಿರಾಕರಿಸುತ್ತಿರುವಂತೆ ನನಗನಿಸುತ್ತದೆ. ನ್ಯಾಯಾಂಗ ಮತ್ತು ಸರಕಾರದ ವಿವಿಧ ಹಂತಗಳ ಅಧಿಕಾರಿಗಳನ್ನು ಕಂಡು ವಿನಂತಿಸಿಕೊಂಡರೂ ನ್ಯಾಯ ಇನ್ನೂ ಸಿಕ್ಕಿಲ್ಲ. ನಾವೂ ಈ ದೇಶದ ನಾಗರಿಕರಲ್ಲವೇ?’ ಎಂದು ನೋವಿನಿಂದ ಕೇಳಿದ ಅವರ ಪತ್ನಿ ರೈಹಾನ ‘ನ್ಯಾಯಾಂಗ ಕೂಡ ನಮ್ಮನ್ನು ಕೈಬಿಟ್ಟಂತೆ ಕಾಣುತ್ತದೆ. ನ್ಯಾಯ ಎಲ್ಲರಿಗೂ ಅಲ್ಲ, ಕೆಲವರಿಗೆ ಮಾತ್ರ’ ಎಂದಿದ್ದರು.
ಮುಂಬೈ ಹೈಕೋರ್ಟ್ ಗೋಸ್ವಾಮಿಯವರ ಜಾಮೀನು ಅರ್ಜಿ ತಿರಸ್ಕರಿಸಿದ ನಂತರ ಸುಪ್ರಿಂ ಕೋರ್ಟ್ ಮೊರೆ ಹೊಕ್ಕ ಮರುದಿನವೇ ಅವರ ಅರ್ಜಿಯನ್ನು ಸುಪ್ರಿಂ ಕೋರ್ಟ್ ವಿಚಾರಣೆಗೆ ಎತ್ತಿಕೊಂಡದ್ದೂ ಹಲವರಿಗೆ ಆಶ್ಚರ್ಯ ಉಂಟು ಮಾಡಿತ್ತು.
ಸೂಪರ್ ನಾಗರಿಕರು!
ಸ್ವತಃ ಸುಪ್ರಿಂ ಕೋರ್ಟ್ ಬಾರ್ ಅಸೋಸಿಯೇಷನ್ ನ ಅಧ್ಯಕ್ಷ ಮತ್ತು ಖ್ಯಾತ ವಕೀಲ ದುಷ್ಯಂತ ದವೆ ಈ ಕುರಿತು ಸುಪ್ರಿಂ ಕೋರ್ಟಿನ ಸೆಕ್ರೆಟರಿ ಜನರಲ್ ರವರಿಗೆ ಪತ್ರ ಬರೆದರು ಎಂಬುದು ಗಮನಾರ್ಹ. ಕೋವಿಡ್ ಸೋಂಕಿನ ಕಳೆದ ಎಂಟು ತಿಂಗಳಲ್ಲಿ, ಸಾವಿರಾರು ನಾಗರಿಕರು ಜೈಲುಗಳಲ್ಲಿದ್ದಾರೆ, ವಾರಗಟ್ಟಲೆ, ತಿಂಗಳಾನುಗಟ್ಟಲೆ ಅವರ ಅರ್ಜಿಗಳು ವಿಚಾರಣೆಯ ಪಟ್ಟಿಗೇ ಬರುವುದೇ ಇಲ್ಲ . ಆದರೆ ಸುಪ್ರಿಂ ಕೋರ್ಟ್‍ಗೆ ಅರ್ಣಬ್ ಗೋಸ್ವಾಮಿ ಅರ್ಜಿ ಬಂದಾಗಲೆಲ್ಲ ಅದು ತಕ್ಷಣವೇ ಪಟ್ಟಿಯಲ್ಲಿ ಸೇರುವುದು ಏಕೆ ಮತ್ತು ಹೇಗೆ ಎಂಬುದು ಕಳವಳ ಉಂಟು ಮಾಡುತ್ತದೆ ಎಂದು ದವೆಯವರು ತಮ್ಮ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದರು.
ಭಾರತದ ಮುಖ್ಯ ನ್ಯಾಯಾಧೀಶರು ಮತ್ತು ಮಾಸ್ಟರ್ ಆಫ್ ರೋಸ್ಟರ್ ರಿಂದ ಈ ಬಗ್ಗೆ ವಿಶೇಷ ಆದೇಶವೇನಾದರೂ ಇದೆಯೇ, ಅಥವ ಆಡಳಿತದ ಮುಖ್ಯಸ್ಥರಾಗಿ ಸೆಕ್ರೆಟರಿ ಜನರಲ್ ಅಥವ ರಿಜಿಸ್ಟ್ರಾರ್ ಅವರಿಗೆ ವಿಶೇಷ ಆದ್ಯತೆ ನೀಡುತ್ತಿದ್ದಾರೆಯೇ ಎಂದು ದವೆಯವರು ಸೆಕ್ರೆಟರಿ ಜನರಲ್ ಅವರಿಗೆ ಬರೆದ ಪತ್ರದಲ್ಲಿ ನೇರವಾಗಿಯೆ ಕೇಳಿದ್ದರು.
‘ ಇದನ್ನು ಆಡಳಿತ ವಿಭಾಗದ ಯಾರು ನಡೆಸಿದ್ದರೂ ಅದು ಅಧಿಕಾರದ ಸಂಪೂರ್ಣ ದುರುಪಯೋಗ, ಕೆಲವು ವಕೀಲರು ಪ್ರತಿನಿಧಿಸುವ ಕಕ್ಷಿದಾರರಿಗೆ ವಿಶೇಷ ಸೌಲಭ್ಯ ದೊರೆಯುತ್ತದೆ ಎಂಬ ಭಾವನೆಯನ್ನು ಉಂಟು ಮಾಡುತ್ತದೆ. ಇದು ಸುಪ್ರಿಂ ಕೋರ್ಟಿನಂತಹ ಮಹಾನ್ ಸಂಸ್ಥೆಗೆ ಶೋಭೆ ತರುವಂತದ್ದಲ್ಲ’ ಎಂದು ತಮ್ಮ ಪತ್ರದಲ್ಲಿ ಹೇಳಿದ್ದ ದವೆಯವರು ತಮ್ಮ ಈ ಪತ್ರವನ್ನು ನ್ಯಾಯಮೂರ್ತಿ ಚಂದ್ರಚೂಡ ಅವರ ನ್ಯಾಯಪೀಠದೆದುರು ಇಡಬೇಕು ಎಂದೂ ಕೇಳಿದ್ದರು.
‘ಸಿಎಎ, ಕಲಮು 370, ಹೇಬಿಯಸ್ ಕಾರ್ಪಸ್, ಚುನಾವಣಾ ಬಾಂಡುಗಳು ಮುಂತಾದವುಗಳನ್ನು ತಿಂಗಳುಗಳೇ ಕಳೆದರೂ ವಿಚಾರಣೆಗೆ ಎತ್ತಿಕೊಳ್ಳದಿರುವಾಗ, ಅರ್ಣಬ್ ಗೋಸ್ವಾಮಿಯ ಅರ್ಜಿಗಳು ಗಂಟೆಗಳಲ್ಲೇ ವಿಚಾರಣೆಗೆ ಎತ್ತಿಕೊಳ್ಳಬೇಕಾದ ವಿಷಯಗಳ ಪಟ್ಟಿಯಲ್ಲಿ ಬರುತ್ತವೆ. ಆತನೇನು ಸೂಪರ್ ನಾಗರಿಕನೇ?‘ ಎಂದು ಪ್ರಖ್ಯಾತ ವಕೀಲ ಪ್ರಶಾಂತ ಭೂಷಣ್ ಈ ಕುರಿತು ಟಿಪ್ಪಣಿ ಮಾಡಿದ್ದರು.
ಇದು ಅನೇಕ ಮಾನವ ಹಕ್ಕುಗಳ ಹೋರಾಟಗಾರರನ್ನು ಯುಎಪಿಎ ಮುಂತಾದ ಕರಾಳ ಕಾಯ್ದೆಗಳ ಅಡಿಯಲ್ಲಿ ತಿಂಗಳಾನುಗಟ್ಟಲೆ ವಿಚಾರಣೆಯಿಲ್ಲದೆ, ಆರೋಪ ಪಟ್ಟಿಯನ್ನೂ ಹಾಕದೆ ಜೈಲಿನಲ್ಲಟ್ಟಿರುವ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವವಾದಿಗಳ ನಡುವೆ ಸಾರ್ವತ್ರಿಕವಾಗಿ ವ್ಯಕ್ತವಾಗಿರುವ ಅಭಿಪ್ರಾಯ ಕೂಡ.
ಕುಣಾಲ್ ಕಾಮ್ರ ‘ನ್ಯಾಯಾಂಗ ನಿಂದನೆ’
ಈ ಹಿನ್ನೆಲೆಯಲ್ಲಿ ಅರ್ಣಬ್ ಗೋಸ್ವಾಮಿಯವರಿಗೆ ಮಧ್ಯಂತರ ಜಾಮೀನು ಸಿಕ್ಕ ಬಗ್ಗೆ ಪ್ರಖ್ಯಾತ ಆಶು ನಗೆಗಾರ ಕುಣಾಲ್ ಕಾಮ್ರ ಅವರ ಕಟು ಟ್ವೀಟ್‍ಗಳು ಅವರನ್ನು ‘ನ್ಯಾಯಾಂಗ ನಿಂದನೆ’ಯ ಆರೋಪಕ್ಕೆ ಒಳಪಡಿಸಿವೆ. ಈ ದೇಶದ ಸುಪ್ರಿಂ ಕೋರ್ಟ್ ಈ ದೇಶದ ಅತ್ಯಂತ ಸರ್ವೋಚ್ಚ ಜೋಕ್ ಆಗಿದೆ, ಬೆನ್ನುಮೂಳೆ ಇರುವ ಎಲ್ಲ ವಕೀಲರುಗಳು ಸುಪ್ರಿಂ ಕೋರ್ಟ್ ಅಥವ ನ್ಯಾಯಾಧೀಶರ ಬಗ್ಗೆ ಹೇಳುವಾಗ ‘ಗೌರವಾನ್ವಿತ’ ಎಂದು ಸೇರಿಸುವುದನ್ನು ನಿಲ್ಲಿಸಬೇಕು , ಏಕೆಂದರೆ ಗೌರವ ಎಂಬುದು ಆ ಕಟ್ಟಡದಿಂದ ಬಹಳ ಹಿಂದೆಯೇ ಹೊರಟು ಹೋಗಿದೆ ಎಂದು ಕಾಮ್ರ ಟಿಪ್ಪಣಿ ಮಾಡಿರುವುದಾಗಿ ವರದಿಯಾಗಿದೆ.
‘ನ್ಯಾಯಾಂಗ ನಿಂದನೆಯ ಪ್ರಶ್ನೆ ಎದ್ದಾಗಲೂ ‘ನನ್ನ ಅಭಿಪ್ರಾಯ ಬದಲಾಗಿಲ್ಲ, ಏಕೆಂದರೆ ಇತರರ ವೈಯಕ್ತಿಕ ಸ್ವಾತಂತ್ರ್ಯದ ವಿಷಯಗಳಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ಮೌನವನ್ನು ಟೀಕಿಸದೆ ಇರಲು ಸಾಧ್ಯವಿಲ್ಲ’ ಎಂದಿರುವ ಅವರು ತನಗಾಗಿ ಕೊಡಬೇಕಾದ ನ್ಯಾಯಾಲಯದ ಬಹುಮೂಲ್ಯ ಸಮಯವನ್ನು ನೋಟುರದ್ಧತಿ ಅರ್ಜಿ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವುದಕ್ಕೆ ಸವಾಲು ಹಾಕಿರುವ ಅರ್ಜಿ, ಚುನಾವಣಾ ಬಾಂಡುಗಳ ಕಾನೂನುಬದ್ಧತೆ ಮುಂತಾದ ತನ್ನ ನ್ಯಾಯಾಂಗ ನಿಂದನೆ ವಿಷಯಕ್ಕಿಂತ ಹೆಚ್ಚು ಮಹತ್ವದ ವಿಷಯಗಳಿಗೆ ಕೊಡಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ನಿಜ, ನ್ಯಾಯಮೂರ್ತಿ ಚಂದ್ರಚೂಡ ಅವರು ಹೇಳಿದಂತೆ ‘ನ್ಯಾಯಾಲಯ ಇಂದು ಮಧ್ಯಪ್ರವೇಶಿಸದಿದ್ದರೆ, ನಾವು ವಿನಾಶದ ದಾರಿಯಲ್ಲಿ ಪಯಣಿಸುತ್ತಿದ್ದೇವೆ ಎಂಬುದನ್ನು ನಿರಾಕರಿಸುವುದು ಸಾಧ‍್ಯವಾಗುವುದಿಲ್ಲ. ..ರಾಜ್ಯ ಸರಕಾರಗಳು ಈ ರೀತಿ ವ್ಯಕ್ತಿ ಗಳ ಮೇಲೆ ಗುರಿಯಿಡುತ್ತಿದ್ದರೆ, ಸುಪ್ರಿಂ ಕೋರ್ಟ್ ಇಲ್ಲಿದೆ ಎಂಬ ಸಂದೇಶವನ್ನು ಕಳಿಸಬೇಕಾಗುತ್ತದೆ’ ಆದರೆ ಅಂತಹ ಸಂದೇಶವನ್ನು ಬಹಳಷ್ಟು ಸಂದರ್ಭಗಳಲ್ಲಿ ಕಳಿಸುತ್ತಿಲ್ಲ, ಆದ್ದರಿಂದ ದೇಶ ಈಗಾಗಲೇ ವಿನಾಶದ ಹಾದಿಯಲ್ಲಿ ಸಾಗಿದೆ ಎಂಬುದೇ ಈಗ ಕಳವಳ ಉಂಟು ಮಾಡುವ ಸಂಗತಿ ಎಂದು ಒಬ್ಬ ವಿಶ್ಲೇಷಕರು ಹೇಳಿದ್ದಾರೆ.