ಮಂಗಳೂರು: ಪ್ರತಿಭಾ ಕುಳಾಯಿ ಅವರನ್ನು ಲೈಂಗಿಕ ದೌರ್ಜನ್ಯ ಭಾಷೆಯಲ್ಲಿ ತೇಜೋವಧೆ ಮಾಡಿರುವ ಶ್ಯಾಮ್ ಸುದರ್ಶನ್ ಭಟ್ ಅವರನ್ನು, ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಬಂಧಿಸಲು ಆಗ್ರಹಿಸಿ, ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಇಂದು ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.
ಅಕ್ಟೋಬರ್ 18ರಂದು ಸುರತ್ಕಲ್ ಟೋಲ್ ಗೇಟ್ ಮುಂಭಾಗ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ, ಮನಪಾ ಮಾಜಿ ಸದಸ್ಯ ಪ್ರತಿಭಾ ಕುಳಾಯಿಯವರು ಭಾಗವಹಿಸಿದ್ದರು. ಅಂದು ಪೊಲೀಸರು ಉಳಿದ ಪ್ರತಿಭಟನಾಕಾರರ ಜೊತೆಗೆ ಅವರನ್ನು ವಶಕ್ಕೆ ಪಡೆಯುವ ಸಂದರ್ಭದ ವೀಡಿಯೊ, ಫೋಟೊಗಳ ಮಾಧ್ಯಮ ತುಣುಕುಗಳನ್ನು ಫೇಸ್ ಬುಕ್‌ನಲ್ಲಿ ಹಂಚಿಕೊಂಡಿರುವ ಶ್ಯಾಮ್ ಸುದರ್ಶನ್ ಭಟ್ ಎಂಬಾತ, ಲೈಂಗಿಕ ಸಂಜ್ಞೆಗಳ ಭಾಷೆಗಳನ್ನು ಬಳಸಿ ಪ್ರತಿಭಾ ಕುಳಾಯಿಯವರನ್ನು ನಿಂದಿಸಿದ್ದಾನೆ. ಲೈಂಗಿಕ ಕಿರುಕುಳಕ್ಕೆ ಸಮಾನವಾಗಿರುವ ಈ ರೀತಿಯ ಬಹಿರಂಗ ದಾಳಿ ಮಹಿಳಾ ಸಮುದಾಯದಲ್ಲಿ ಆಘಾತವನ್ನುಂಟು ಮಾಡಿದ್ದು, ಸಮಸ್ತ ಮಹಿಳಾ ಸಮಾಜವೇ ಇದನ್ನು ಕಟುವಾಗಿ ಖಂಡಿಸುತ್ತದೆ ಎಂದೆ ಮನವಿಯಲ್ಲಿ ತಿಳಿಸಲಾಗಿದೆ.
ಟೋಲ್ ಗೇಟ್ ಹೋರಾಟದ ವಿರುದ್ಧ ಶ್ಯಾಮ್ ಸುದರ್ಶನ್ ಭಟ್‌ರವರಿಗೆ ಅಭಿಪ್ರಾಯಗಳು ಇದ್ದರೆ ಅದನ್ನು ವ್ಯಕ್ತಪಡಿಸಲು ನಮ್ಮದೇನು ತಕರಾರಿಲ್ಲ. ಅದಕ್ಕೆ ಬೇಕಾದ ಹಲವು ವಿಧಾನಗಳಿವೆ. ಆದರೆ, ಹೋರಾಟದಲ್ಲಿ ಸಕ್ರಿಯರಾಗಿರುವ ಹೆಂಗಸರನ್ನು ಗುರಿಯಾಗಿಸುವುದು, ಲೈಂಗಿಕ ದೌರ್ಜನ್ಯಕ್ಕೆ ಸಮಾನವಾದ ಪದಗಳನ್ನು ಬಳಸುವುದು ಅತ್ಯಂತ ನೀಚತನ. ಇದು ಮಹಿಳೆಯರು ಸಾಮಾಜಿಕ, ರಾಜಕೀಯ ರಂಗದಲ್ಲಿ ತೊಡಗುವುದನ್ನು ಸಹಿಸದ ಪುರುಷ ಪ್ರಧಾನ ಮೌಲ್ಯಗಳ ದ್ಯೋತಕವೂ ಹೌದು. ಹೀಗಾಗಿ, ಈ ರೀತಿಯ ಅನಾಗರಿಕ ನಡವಳಿಕೆಯನ್ನು ಮಟ್ಟ ಹಾಕಲೇಬೇಕಿದೆ. ಈ ಕುರಿತು ಪ್ರತಿಭಾ ಕುಳಾಯಿಯವರು ತಮ್ಮಲ್ಲಿ ದೂರು ನೀಡಿರುತ್ತಾರೆ. ಈ ಹಿನ್ನಲೆಯಲ್ಲಿ, ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಶ್ಯಾಮ್ ಸುದರ್ಶನ ಭಟ್‌ನನ್ನು ತಕ್ಷಣ ಬಂಧಿಸಬೇಕು ಎಂದು ಸಂಘಟನೆ ಒತ್ತಾಯಿಸಿದ್ದು, ಕ್ರಮಕೈಗೊಳ್ಳದಿದ್ದರೆ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಈ ವೇಳೆ ಸಾಮಾಜಿಕ ಹೋರಾಟಗಾರ್ತಿ ಮಂಜುಳಾ ನಾಯಕ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಭಾರತೀ ಬೋಳಾರ, ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜಾ ಪ್ರಮೀಳಾ ದೇವಾಡಿಗ, ಡಿವೈಎಫ್ಐ ಯುವತಿಯರ ಉಪ ಸಮಿತಿ ಮುಖಂಡರಾದ ಆಶಾ ಬೋಳೂರು, ದೀಕ್ಷಿತಾ ಜಲ್ಲಿಗುಡ್ಡೆ, ಸೌಮ್ಯ ಪಂಜಿಮೊಗರು ಮುಂತಾದವರು ಉಪಸ್ಥಿತರಿದ್ದರು.