ಬೆಳಗಾವಿ: ಸರ್ಕಾರಿ ಕಾಮಗಾರಿಯೊಂದರ ಟೆಂಡರ್ಗೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಆಪ್ತರೊಬ್ಬ ವ್ಯಕ್ತಿಯೊಬ್ಬರಿಂದ ಲಕ್ಷಗಟ್ಟಲೆ ‘ಕಮಿಷನ್’ ಪಡೆದಿರುವ ಆರೋಪದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಾಸಕರ ಆಪ್ತರೊಬ್ಬರಿಗೆ ಕಮಿಷನ್ ಹಣ ನೀಡುತ್ತಿರುವ ದೃಶ್ಯಾವಳಿಗಳು ವಿಡಿಯೋದಲ್ಲಿದೆ. ಖಾಸಗಿ ಗುತ್ತಿಗೆದಾರರೊಬ್ಬರ ಪರವಾಗಿ ಸಂಪರ್ಕಿಸಿದ ವ್ಯಕ್ತಿಗೆ ಶಾಸಕರ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ನಿಗದಿಪಡಿಸಿದ ಲಂಚದ ಹಣವನ್ನು ಸಹ ಅವರ ಸಹಚರ ಬಹಿರಂಗಪಡಿಸಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.
ಶಾಸಕರ ಸಹಚರ ಅಪರಿಚಿತ ವ್ಯಕ್ತಿಯಿಂದ ಹಣ ಸ್ವೀಕರಿಸಿ ಇನ್ನೋವಾ ಕಾರಿನೊಳಗೆ ಇಟ್ಟುಕೊಂಡಿರುವುದನ್ನು ದೃಶ್ಯಾವಳಿಗಳು ತೋರಿಸುತ್ತವೆ. ಶಾಸಕರ ಆಪ್ತ ಸಹಾಯಕನಿಗೆ 1 ಲಕ್ಷ ರೂ ಅಥವಾ 2 ಲಕ್ಷ ರೂ ನೀಡುವಂತೆ ಸಹಚರರು ಬೇಡಿಕೆ ಇಟ್ಟಿದ್ದಾರೆ. ಆ ವ್ಯಕ್ತಿ ತನ್ನ ಬಳಿ ಇನ್ನು ಹಣವಿಲ್ಲ, ನಾಳೆ ಕೆಲಸದ ಸ್ಥಳದಲ್ಲಿ ಆಪ್ತ ಸಹಾಯಕನಿಗೆ 1ಲಕ್ಷ ಕೊಡುತ್ತೇನೆ ಎಂದು ಹೇಳಿರುವುದು ಕೇಳಿ ಬಂದಿದೆ.
ಶಾಸಕ ಶ್ರೀಮಂತ್ ಪಾಟೀಲ್ ಮೇಲೆ ಕ್ರಮವನ್ನು ಜರುಗಿಸಿ ಎಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ಈ ವಿಡಿಯೋ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸರ್ಕಾರದ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸಿದ ಗುತ್ತಿಗೆದಾರರ ಬಿಲ್ಗಳನ್ನು ತೆರವುಗೊಳಿಸಲು ಕೆಲವು ಸಚಿವರು ಮತ್ತು ಶಾಸಕರು 40% ಕಮಿಷನ್ಗೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಈ ಹಿಂದೆ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಆರೋಪಿಸಿದ್ದರು.