ಶೋಷಿತ ಜನರ, ಮಹಿಳೆಯರ ಶಿಕ್ಷಣದ ಬಗ್ಗೆ ನೂರಾರು ವರ್ಷಗಳ ಹಿಂದೆಯೆ ಕನಸು ಕಂಡಿದ್ದ ಜ್ಯೋತಿ ಬಾ ಫುಲೆ

(ಜ್ಯೋತಿ ಬಾಪುಲೆಯವರ ಹುಟ್ಟುಹಬ್ಬದ ದಿನ ನೆನಪಿಗಾಗಿ)

ಸುಭಾಸ ಮಾದರ, ಶಿಗ್ಗಾಂವಿ

“ಬೇಜವಾಬ್ದಾರಿ ನಡವಳಿಕೆಗಳು ಉದಾತ್ತ ಗುರಿ ಹೊತ್ತ ಹೋರಾಟವನ್ನು ಕಂಗೆಡಿಸಬಾರದು, ಬೇಕೆಂದೆ ಅವಮಾನಿಸುವವರೆದರು ಆತ್ಮ ಸ್ಥೈರ್ಯ ಕಳೆದುಕೊಳ್ಳಬಾರದು”

ಜ್ಯೋತಿ ಬಾಪುಲೆ

ಜ್ಯೋತಿಬಾ ಫುಲೆ ಸಮಾಜ ಸುಧಾರಕರಾಗಿ, ಸಮಾನತೆಯ ಹರಿಕಾರರಾಗಿ, ದೀನ ದಲಿತ ಹಿಂದುಳಿದ ವರ್ಗಗಳ ಏಳಿಗೆಗಾಗಿ, ಅವಿರತವಾಗಿ ಶ್ರಮಿಸಿದವರು. ಇವರು ಜನಸಾಮಾನ್ಯರ ಡಾಂಭಿಕ ಧರ್ಮ, ಪಂಥ, ಸಂಪ್ರದಾಯ ಮುಂತಾದ ಸಂಕುಚಿತ ಭಾವನೆಗಳಿಗೆ ಮರುಳಾಗದೆ, ಯಾವುದೇ ಢಾಂಭಿಕ ಭಕ್ತಿಗೆ ಒಳಗಾಗದೆ ಮಾನವ ಧರ್ಮವನ್ನು ಅಂಗೀಕರಿಸಬೇಕೆಂದು ಪಣತೊಟ್ಟವರು. ಅಂಬೇಡ್ಕರ್‌ರವರ ಸಾಮಾಜಿಕ ಹೋರಾಟದ ಗುರು ಎಂದೇ ಗುರುತಿಸಲ್ಪಡುವ ಮಹಾತ್ಮ ಜ್ಯೋತಿಬಾ ಫುಲೆಯವರು ಶೂದ್ರ ದಮನಿತ ಸಮುದಾಯಗಳ ಜಾಗೃತಿಗೆ ಮಹತ್ವದ ಕೊಡುಗೆಯನ್ನು ನೀಡಿದ ಇವರು ಮಹರಾಷ್ಟ್ರದ ಸಾಮಾಜಿಕ ಕ್ರಾಂತಿಯಲ್ಲಿ ಪ್ರಮುಖರಾಗಿ ಗುರುತಿಸಿಕೊಂಡವರು. ಕರ್ನಾಟಕದ ಆಧುನಿಕ ಮನಸ್ಥಿತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಪೆರಿಯಾರ್, ನಾರಾಯಣ ಗುರು, ಅಂಬೇಡ್ಕರ್ ಪ್ರಭಾವಗಳ ಜೊತೆಗೆ ಮಹಾತ್ಮರಾದ ಜ್ಯೋತಿಭಾ ಫುಲೆಯವರು ಕೂಡ ಅವಿಸ್ಮರಣೀಯ ಕೊಡುಗೆಯನ್ನು ನೀಡಿದ್ದಾರೆ. ಮಹಿಳೆಯರ ಧ್ವನಿಯಾಗಿ ಮಹಿಳೆಯರು ಮತ್ತು ದಲಿತರ ಉದ್ಧಾರಕ್ಕಾಗಿ ಹಲವು ವಿವಿಧ ಆಯಾಮಗಳನ್ನು, ಹಲವು ಕಂದಚಾರಗಳನ್ನು ಹಿಮ್ಮೆಟಿಸಿ , ಮಹಿಳೆಯರಿಗೆ ಶಿಕ್ಷಣ ನೀಡಬೇಕೆಂದು ಪಣತೊಟ್ಟು, ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಈ ಮೂಲಕ ಶಿಕ್ಷಣ ಕ್ರಾಂತಿಯನ್ನು ಬರೆದವರು.

ಜ್ಯೋತಿ ಬಾ ಫುಲೆ ಹುಟ್ಟಿದ್ದು 1827 ಎಪ್ರಿಲ್ 11ರಂದು, ಕೆಳ ಮಧ್ಯಮ ವರ್ಗದ ಹೂವಿನ ವ್ಯಾಪಾರ ಮಾಡುವ ಸಮುದಾಯದ ಹುಡುಗ ಜ್ಯೋತಿ ಬಾ ಫುಲೆ, ಚಿಕ್ಕ ವಯಸ್ಸಿನಿಂದಲೆ ಈ ದೇಶದ ಸಾಮಾಜಿಕ ವ್ಯವಸ್ಥೆ, ಸಂಸ್ಕೃತಿ, ಪುರಾಣಗಳನ್ನು ಹರಿತವಾಗಿ ವಿಶ್ಲೇಷಿಸಿ ಮಾತನಾಡಬಲ್ಲಂತವರಾಗಿದ್ದರು. ಜ್ಯೋತಿಬಾ ತಾಯಿ ಚಿಮಣಾಬಾಯಿ ಹೆರಿಗೆ ಸಮಯದಲ್ಲಿ ತೀರಿಕೊಂಡರು, ನಂತರದಲ್ಲಿ ಜ್ಯೋತಿಬಾ ಆರೈಕೆ, ಲಾಲನೆ, ಪೋಷಣೆ ನಡೆದದ್ದು ಅವರ ಅತ್ತೆ ಸುಗುಣಾ ಬಾಯಿ ಬಳಿ. ಸುಗುಣಾ ಅವರು ಆಗಾಗ ಜ್ಯೋತಿ ಬಾ ಅವರಿಗೆ ಸಮಾನತೆಯ ಕುರಿತು, ಜಾತಿ ಪದ್ಧತಿಯ ಅರ್ಥಹೀನತೆಯ ಕುರಿತು ಹೇಳುತ್ತಿದ್ದರು.

ಜ್ಯೋತಿಬಾ 13ನೇ ವಯಸ್ಸಿನಲ್ಲಿ ಅವರಿಗಿಂತ ನಾಲ್ಕು ವರ್ಷ ಕಿರಿಯಳಾದ ಸಾವಿತ್ರಿ ಬಾಯಿಯೊಡನೆ ಬಾಲ್ಯ ವಿವಾಹವಾಗುತ್ತದೆ. ಸಾವಿತ್ರಿಬಾಯಿಯ ಶಿಕ್ಷಣದ ಪ್ರೀತಿ ಕಂಡು ಜ್ಯೋತಿ ಬಾ ಶಿಕ್ಷಣ ಕಲಿಸಲು ಮುಂದಾಗುತ್ತಾರೆ. ಜ್ಯೋತಿ ಬಾ ಗೆಳೆಯರಾದ ಸಖಾರಾಮ್‌ ಯಶವಂತ್, ಕೇಶವ್ ಶಿವರಾಮ ಕೂಡಾ ಸಾವಿತ್ರಿ ಬಾಯಿಗೆ ಶಿಕ್ಷಣ ನೀಡಿದವರು. ಸದಾಶಿವ ಗೋವಂದೆ, ವಾಳ್ವೇಕರ್ ಮತ್ತಿತರ ಗೆಳೆಯರೊಡನೆ ಜ್ಯೋತಿಬಾ ಅವರಿಗೆ ಶಾಲೆಗೆ ಶಿಕ್ಷಣ ಕಲಿಯದ ತನ್ನ ಪತ್ನಿಯಂತಹ ಹುಡುಗಿಯರಿಗೆ ಶಾಲೆ ಶುರು ಮಾಡುವ, ಅಕ್ಷರ ಕಲಿಯಲು ಬಾರದ ಅಸ್ಪೃಶ್ಯರಿಗೂ ಶಾಲೆ ತೆರೆಯುವ ಆಶಯ ಹುಟ್ಟಿತ್ತು. 1824ರಲ್ಲಿ ಗಂಗೂಬಾಯಿ ಎಂಬಾಕೆ ಮುಂಬೈನಲ್ಲಿ ಬಾಲಕಿಯರ ಶಾಲೆ ತೆರೆದರು, ಆದರೆ ಕೆಲವೇ ತಿಂಗಳುಗಳಲ್ಲಿ ಅದನ್ನು ಮುಚ್ಚಿಸಲಾಗಿತ್ತು. ಇದೆಲ್ಲವನ್ನು ಗಮನಿಸುತ್ತಿದ್ದ ಜ್ಯೋತಿಬಾ ತಾನೂ ಶಾಲೆ ತೆರೆದು ಅಸ್ಪೃಶ್ಯ-ತಳ ಸಮುದಾಯದ ವಿದ್ಯಾರ್ಥಿಗಳು ಹಾಗೂ ಹೆಣ್ಣುಮಕ್ಕಳಿಗೆ ಇಂಗ್ಲಿಷ್ ಕಲಿಸಲೇಬೇಕೆಂಬ ಹಂಬಕ ಧೃಢವಾಯಿತು.

ಅತ್ತೆ ಸುಗುಣಬಾಯಿ ಒತ್ತಾಸೆಯ ಮೇರೆಗೆ ಹೆಂಡತಿ ಸಾವಿತ್ರಿಬಾಯಿಯನ್ನು ಅಹ್ಮದ್ ನಗರದ ಮಿಸ್ ಫರಾರ್ ಫಾರ್ಮಲ್ ಶಾಲೆಗೆ ಶಿಕ್ಷಕ ತರಬೇತಿ ಪಡೆಯಲೆಂದು ಕಳಿಸಿದರು. ಅನಕ್ಷರಸ್ಥೆಯಾಗಿ ಜ್ಯೋತಿಬಾ ಮನೆಗೆ ಕಾಲಿಟ್ಟ ಸಾವಿತ್ರಿ ಬಾಯಿ ದೇಶದ ಇತರ ಹೆಣ್ಣು ಮಕ್ಕಳಿಗೂ ಅಕ್ಷರ ಕಲಿಸುವ ಮಹದಾಸೆ ಹೊತ್ತು ಮೊದಲ ಮಹಿಳಾ ಶಿಕ್ಷಕಿಯಾದರು. ಜ್ಯೋತಿಬಾ ಸರಣಿಯಾಗಿ ಶಾಲೆಗಳನ್ನು ತೆರೆದರು, ಶಾಲೆಗೆ ಬರುವ ಮಕ್ಕಳಿಗೆ ಅಗತ್ಯ ಬೋಧನಾ ಸಾಮಾಗ್ರಿಯಿಂದ ಹಿಡಿದು ಎಲ್ಲದರ ಮೇಲುಸ್ತುವಾರಿಯನ್ನು ವಹಿಸಿಕೊಂಡರು.

ಆದರೆ ಹೆಣ್ಣುಮಕ್ಕಳಿಗೆ ಮನೆಗೆಲಸಕ್ಕೆ, ಪುರಾಣ ಪಠಣಕ್ಕೆ ಸೀಮಿತಗೊಳಿಸಿದ್ದ ಸಮಾಜ, ಶಾಲೆ ಕಲಿಯುವುದು ಇಷ್ಟವಾಗಲಿಲ್ಲ. ಜ್ಯೋತಿಬಾ ಹಾಗೂ ಸಾವಿತ್ರಿ ಬಾಯಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡುವುದು, ಹಿಂಸೆ ಕೊಡುವುದು, ಅವಮಾನಿಸುವುದು, ಸಾವಿತ್ರಿಬಾಯಿಗೆ ಕಲ್ಲು, ಸಗಣಿ, ಮಣ್ಣಿನ ಉಂಡೆಗಳನ್ನು ಎಸೆದು ಅವರನ್ನು ಹೆದರಿಸುವ ಪ್ರಯತ್ನಗಳು ನಡೆದವು. ಸೂಕ್ಷ್ಮ ಮನಸಿನ ಸಾವಿತ್ರಿ ಬಾಯಿ ಪ್ರತಿದಿನ ಈ ನಿಂದನೆಗಳನ್ನ ಕೇಳಿ ಕೈ ಚೆಲ್ಲಿ ನಿಂತಾಗ ಜ್ಯೋತಿಬಾ ಧೈರ್ಯ ಹೇಳಿ ಇಂತಹ ಸಂದರ್ಭವನ್ನು ದಿಟ್ಟವಾಗಿ ಎದುರಿಸಲು ಸೂಚಿಸಿದರು, “ಬೇಜವಾಬ್ದಾರಿ ನಡವಳಿಕೆಗಳು ಉದಾತ್ತ ಗುರಿ ಹೊತ್ತ ಹೋರಾಟವನ್ನು ಕಂಗೆಡಿಸಬಾರದು, ಬೇಕೆಂದೆ ಅವಮಾನಿಸುವವರೆದರು ಆತ್ಮ ಸ್ಥೈರ್ಯ ಕಳೆದುಕೊಳ್ಳಬಾರದು” ಎಂದು ತೀಳಿ ಹೇಳಿದರು. ನಂತರದ ದಿನಗಳಲ್ಲಿ ನಿಂದನೆ, ಕಲ್ಲು ತೂರಾಟಗಳು ನಿಂತು ಹೋದವು.

ತಳಸಮುದಾಯದವರಿಗೆ ಮತ್ತು ಮಹಿಳೆಯರಿಗೆ ಶಿಕ್ಷಣ ಅವಶ್ಯ ಎಂಬ ಬಗ್ಗೆ ಜ್ಯೋತಿಬಾ ಖಚಿತ ನಿಲುವು ಹೊಂದಿದ್ದರೂ ಶಾಲೆ ತೆರೆಯುವುದು ಸುಲಭವಿರಲಿಲ್ಲ. ಮೌಢ್ಯ, ಜಾತಿ ತಾರತಮ್ಯ, ಭಾಷಾ ತಾರತಮ್ಯ ಈ ದೇಶದ ರೋಗಗಳಾಗಿವೆ ಎಂದು ಜ್ಯೋತಿಬಾ ಬದುಕಿದ್ದಾಗ, ಅಂದರೆ ಸುಮಾರು 130 ವರ್ಷಗಳ ಹಿಂದೆಯೆ ಇಂತವುಗಳ ವಿರುದ್ಧ ಮಾತನಾಡಿದ್ದರು. ಎಲ್ಲರೂ ಒಂದಲ್ಲ ಒಂದು ರೀತಿಯ ಬಾಧೀತರೇ ಆಗಿರುವಾಗ ಯಾರಿಗೆ ಸಹಾಯ ಮಾಡುವುದೆಂಬ ಪ್ರಶ್ನೆಯೂ ಏಳುತ್ತದೆ. ಪ್ರಶ್ನೆಗೆ ಉತ್ತರ ಹುಡುಕುವುದರಲ್ಲೇ ನಿಷ್ಕ್ರಿಯರಾಗುವುದಕ್ಕಿಂತ ಯಾರಿಗೆ ಸಹಾಯದ ಅಗತ್ಯ ಅತಿ ಹೆಚ್ಚು ಇದೆಯೋ ಅವರಿಗೆ ನಾ ಸಹಾಯ ನೀಡುತ್ತಾ ಹೋಗಬೇಕು. ಆದ್ದರಿಂದ ನಾನು ಮಹಾರ-ಮಾಂಗರಿಗೆ (ಮಹಾರಾಷ್ಟ್ರದಲ್ಲಿ ಕೆಳಜಾತಿ) ಸಹಾಯ ಮಾಡಬೇಕೆಂದು ಭಾವಿಸಿದೆ ಎಂದು ಹೇಳಿದ್ದರು.

ಒಂದು ದೇಶ ಸುಧಾಸರಿಸಬೇಕೆಂದರೆ ಅದು ಮಹಿಳೆಯರ ಉನ್ನತಿಗೆ ಗಮನ ಕೊಡಬೇಕು, ಮಹಿಳೆಯರ ಶಿಕ್ಷಣಕ್ಕೆ ಗಮನ ಕೊಡಬೇಕು. ಹೆಣ್ಣು ಮಕ್ಕಳ ಶಾಲೆ ಶುರು ಮಾಡಬೇಕು. ಆದರೆ ನನ್ನದೇ ಜಾತಿಯ ಬಂಧುಗಳು ನನ್ನ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ಯಾರೂ ಜಾಗ ಕೊಡಲಿಲ್ಲ. ಶಾಲೆಕಟ್ಟಲು ಹಣ ಕೊಡಲಿಲ್ಲ. ಆದರೆ ಲಾಹೂಜಿ ರಘುರಾಮ್ ಮಾಂಗ್ ಹಾಗೂ ರಾಣಬಾ ಮಹಾರ್ ತಮ್ಮ ಸಮುದಾಯದವರ ಮನವೊಲಿಸಿ ಮಕ್ಕಳು ಶಾಲೆಗೆ ಬರುವಂತೆ ಮಾಡಿದರು ಎಂದು ಧ್ಯಾನೋದಯ ಪತ್ರಿಕೆಯಲ್ಲಿ ಜ್ಯೋತಿಬಾ ಬರೆದಿದ್ದರು.

ಫುಲೆ ದಂಪತಿಗಳು ತಾವೇ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸರಣಿ ಶಾಲೆಗಳನ್ನು ಶುರು ಮಾಡಿದರು. ನೇಟಿವ್ ಫೀಮೇಲ್- ಸ್ಕೂಲ್- ಪುಣೆ ಎನ್ನುವುದು ಹೆಣ್ಣು ಮಕ್ಕಳ ಶಿಕ್ಷಣ ಸಂಸ್ಥೆಯಾದರೆ, ಸೂಸೈಟಿ ಫಾರ್ ಪ್ರಮೋಟಿಂಗ್ ಎಜ್ಯುಕೇಷನ್ ಆಫ್ ಮಹರ‍್ಸ್‌ ಆಂಡ್ ಮಾಂಗ್ಸ್ ಎನ್ನುವುದು ಅಸ್ಪೃಶ್ಯ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಂಸ್ಥೆಯಾಗಿತ್ತು.

ಸಾವಿತ್ರಿಬಾಯಿ ಶಿಕ್ಷಕಿಯ ತರಬೇತಿ ಮುಗಿಸಿದ ಬಳಿಕ ಫುಲೆ ದಂಪತಿ ದಲಿತ ಕೇರಿಯಲ್ಲಿ ವಾಸವಾದರು. 1849 ರಲ್ಲಿ ಪುಣೆಯ ಭಿಡೆವಾಡಿಯಲ್ಲಿ 9 ಜನ ವಿದ್ಯಾರ್ಥಿಗಳೊಂದಿಗೆ ಮೊದಲ ಶಾಲೆ ಆರಂಭಿಸಿದರು. ಅದರಲ್ಲಿ ದಲಿತ ಮುಸ್ಲಿಂ ಹೆಣ್ಣುಮಕ್ಕಳೇ ಬಹುವಾಗಿ ಇದ್ದರು. 1851ರಲ್ಲಿ ಪುಣೆಯಲ್ಲಿ ಎರಡು ಶಾಲೆಗಳು ಆರಂಭವಾಯಿತು, ಈ ಶಾಲೆಗಾಗಿ ಮುಸ್ಲಿಂ ಕುಟುಂಬವೊಂದು ತಮ್ಮದೊಡ್ಡ ಮನೆಯನ್ನೆ ಬಿಟ್ಟು ಕೊಟ್ಟಿತು, 1852 ರಲ್ಲಿ ಮತ್ತೊಂದು ಕಡೆ ಶಾಲೆ ಆರಂಭಿಸಿದರು. 1853ರಲ್ಲಿ ಜ್ಯೋತಿಬಾ ಶಾಲೆಯಲ್ಲಿ ಕಲಿತ ಒಟ್ಟು ವಿದ್ಯಾರ್ಥಿನಿಯರು 23, ಪುಣೆಯ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಹೋದ ಹೆಣ್ಣುಮಕ್ಕಳನ್ನು ನೋಡುವ ಕುತೂಹಲದಿಂದ ಕಾಲೇಜಿನ ಬಳಿ ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮವೇ ಸೇರಿತ್ತು. 1856ರಲ್ಲಿ 258 ಜನ ಅಸ್ಪೃಶ್ಯ ಮಕ್ಕಳು ಶಾಲೆ ಕಲಿಯುತ್ತಿದ್ದರು.

ಜ್ಯೋತಿಬಾ ಕುಟುಂಬ ನಿರ್ವಹಣೆಗಾಗಿ ಮಿಷನರಿ ಶಾಲೆಗಳಲ್ಲಿ ಅರೆಕಾಲಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರೆ, ಸಾವಿತ್ರಿಬಾಯಿ ಯಾವ ಸಂಬಳವೂ ಇಲ್ಲದೆ ಜ್ಯೋತಿಬಾ ಶಾಲೆಗಳಲ್ಲಿ ಉಚಿತವಾಗಿ ದುಡಿದರು. ದಕ್ಷಿಣಾ ಪ್ರೈಜ್ ಕಮಿಟಿಯಿಂದ 900 ರೂಪಾಯಿ ಅನುದಾನ ಸಿಗುತ್ತಿತ್ತು ಹಾಗೂ ದೇಣಿಗೆ ರೂಪದಲ್ಲಿ ಹಣ ಸಂಗ್ರಹಣೆ ಮಾಡುತ್ತಿದ್ದರು. 1852 ರಲ್ಲಿ ಸಾವಿತ್ರಿಬಾಯಿ ಇಟ್ಟ ಲೆಕ್ಕದ ಪ್ರಕಾರ ಸಂಗ್ರಹವಾದ ಮೊತ್ತ 1947 ರೂಪಾಯಿ.

8-9 ವರ್ಷಗಳ ನಂತರ ಬಾಲಕಿಯರ ಶಾಲೆಗಳನ್ನು ಸರ್ಕಾರದ ಶಿಕ್ಷಣ ಇಲಾಖೆಗೆ ಮಿಸ್ ಮಿಷೆಲ್ ಅವರ ಸುಪರ್ದಿಗೆ ವಹಿಸಿದರು. ಹೆಣ್ಣುಮಕ್ಕಳು, ಶೂದ್ರಾತಿಶೂದ್ರರಿಗೆ ಅಕ್ಷರ ಕಲಿಸಿ ಫುಲೆ ದಂಪತಿಗಳು ಧರ್ಮದ್ರೋಹ ಮಾಡುತ್ತಿದ್ದಾರೆ ಎಂಬ ಆಪಾದನೆ, ಬೆದರಿಕೆಗಳು ಬರಲು ಶುರು ಮಾಡಿದಮೇಲೆ ಜ್ಯೋತಿ ಬಾ ತಂದೆ ಮಗ ಸೊಸೆಯನ್ನು ಮನೆಯಿಂದ ಹೊರ ಹಾಕಿದರು.

ದಲಿತ ಸಮುದಾಯದ ಜನ ಬಾಯಾರಿದರೂ ಕೂಡಾ ಹನಿ ನೀರನ್ನು ಸಹ ತಾವೇ ಸ್ವತಃ ಕೆರೆ, ಬಾವಿ, ನದಿಗಳಿಂದ ತೆಗೆದುಕೊಳ್ಳುವಂತಿರಲಿಲ್ಲ. ಫುಲೆ ದಂಪತಿಗಳು 1868ರಲ್ಲಿ ಎಲ್ಲರ ಬಳಕೆಗೆ ಮುಕ್ತವಾದ ನೀರಿನ ತೊಟ್ಟಿ ಕಟ್ಟಿದರು, 1870ರಲ್ಲಿ ಭೀಕರ ಕ್ಷಾಮ ತಲೆದೋರಿತು. ಆ ಸಂದರ್ಭದಲ್ಲಿ ಕ್ಷಾಮ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ, ಅವಶ್ಯಕವಾದ ದವಸ ಧಾನ್ಯಗಳನ್ನು ಸಂಗ್ರಹಿಸಿದರು. ಕ್ಷಾಮದಲ್ಲಿ ಅನಾಥರಾದ ಮಕ್ಕಳಿಗೆ 52 ವಸತಿ ಶಾಲೆ ತೆರೆದರು.

ವಿಧವಾ ವಿವಾಹ ಪದ್ಧತಿ:

ವಿಧವೆಗೆ ಮರುಮದುವೆಯ ಪ್ರಶ್ನೆಯೆ ಇಲ್ಲದಂತೆ ಕಡ್ಡಾಯವಾಗಿ ತಲೆ ಬೋಳಿಸುವುದು, ಅಪವಿತ್ರರೆನಿಸಿಕೊಂಡು ಇಡೀ ಜೀವಮಾನವನ್ನು ಉಸಿರಾಡುವ ಶವದಂತೆ ಸವೆಸಬೇಕಿದ್ದ ವಿಧವೆಯರು ಪುರುಷರ ದುರಾಸೆಗೆ ಬಲಿಯಾಗುತ್ತಿದ್ದರು. ಸಮಾಜದ ಅವಮಾನಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗುತ್ತಿದ್ದರು. ವಿಧವಾ ಪದ್ಧತಿಯು ಮೇಲ್ಜಾತಿ ಹೆಣ್ಣುಮಕ್ಕಳಿಗೆ ಬಹುವಾಗಿ ಬಾಧಿಸಿದೆ. ಜ್ಯೋತಿಬಾ ಸ್ನೇಹಿತ ಸದಾಶಿವ ಗೋವಂದೆಯವರ ಮನೆಯಲ್ಲಿ ಕಾಶೀಬಾಯಿ ಎಂಬ ವಿಧವೆ ಕೆಲಸ ಮಾಡುತ್ತಿದ್ದಳು, ಅವಳು ಶಾಸ್ತ್ರೀಯೊಬ್ಬರ ಆಮಿಷಕ್ಕೆ, ಬಲಾತ್ಕಾರಕ್ಕೆ ಒಳಗಾಗಿ ಬಸುರಾದಳು, ಆತ್ಮಹತ್ಯೆ ಮಾಡಿಕೊಳ್ಳುವ ಧೈರ್ಯ ಸಾಲದೆ ಗಂಡು ಮಗುವಿಗೆ ಜನ್ಮ ನೀಡಿದಳು. ಮಗುವನ್ನು ಸಾಕುವುದು, ಜಾತಿ ಬಹಿಷ್ಕಾರ, ಸಾಮಾಜಿಕ ಅಪಮಾನಗಳಂತಹ ಆಪತ್ತುಗಳಿಗೆ ಹೆದರಿ ಮಗುವನ್ನು ಕೊಂದು ಬಾವಿಗೆ ಹಾಕಿದಳು, ಇಂತಹ ಪ್ರಕರಣಗಳು ಹೊಸದಾಗಿರಲಿಲ್ಲ.

ಎಳೆಯ ಹುಡುಗಿಯರಿಗೆ ಬಾಲ್ಯ ವಿವಾಹ ಮಾಡಿ ಗಂಡ ಸತ್ತರೆ ತಲೆ ಬೋಳಿಸಿ, ವಿರೂಪಗೊಳಿಸಿ ಕೊನೆಗೆ ಪುರುಷರ ಆಮಿಷಗಳಿಗೆ ಬಲಿಯಾದರೆ ಅಂಥವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಬ್ರಾಹ್ಮಣರ ವಿಧವಾ ಪದ್ಧತಿ ನಿಲ್ಲಿಸುವ ಸಲುವಾಗಿ ಜ್ಯೋತಿಬಾ-ಸಾವಿತ್ರಿಬಾಯಿ ಒಂದು ವಿನೂತನ ಪ್ರಯೋಗ ಮಾಡಿದರು. ಬಸುರಿಯಾದ ವಿಧವೆಯರಿಗೆ ತಮ್ಮ ಮನೆಯಲ್ಲಿಯೇ ಆಶ್ರಯ ಕೊಡತೊಡಗಿದರು, ವಿಧವೆಯರು ಮತ್ತವರ ಮಕ್ಕಳಿಗೆಂದೆ ಆಶ್ರಮ ಸ್ಥಾಪಿಸಿದರು. ʻಬಾಲ ಹತ್ಯಾ ಪ್ರತಿಬಂಧಕ್ ಗೃಹʼ ಎಂಬ ಪ್ರಸೂತಿ ಗೃಹ ತೆರೆದರು. ನಿಮಗೆ ಬೇಡವೇ ಕಾಲಾಪಾನಿ? ಹಾಗಾದರೆ ನಮ್ಮ ಆಶ್ರಮಕ್ಕೆ ಬನ್ನಿ ಎಂಬ ಕರಪತ್ರವನ್ನು ಪುಣೆಯ ಬೀದಿಗಳಲ್ಲಿ ಅಂಟಿಸಿದರು.

1864ರಲ್ಲಿ ಒಬ್ಬ ಚಿತ್ಪಾವನ ಬ್ರಾಹ್ಮಣ ವಿಧವೆಗೆ ಮರುಮದುವೆ ಮಾಡಿಸಿದರು. 1884ರ ಹೊತ್ತಿಗೆ 34 ಬ್ರಾಹ್ಮಣ ವಿಧವೆಯರು ಅವರ ಬಳಿ ಇದ್ದರು. ಹೆರಿಗೆಯಾಗಿ ಹುಟ್ಟಿದ 35 ಮಕ್ಕಳಲ್ಲಿ 5 ಮಕ್ಕಳಷ್ಟೆ ಬದುಕಿ ಉಳಿದರು. ಬಾಕಿ ಮಕ್ಕಳು ಗರ್ಭಸ್ಥ ತಾಯಿ ತಿಂದ ವಿಷಪೂರಿತ ಔಷಧ, ಆಹಾರಗಳಿಂದ ಹಾಗೂ ಆರೈಕೆ ಸಿಗದ ಕಾರಣ ಹುಟ್ಟಿದ ಕೆಲ ದಿನಗಳಲ್ಲೆ ಅಸು ನೀಗಿದ್ದವು. 1874ರಲ್ಲಿ ಫುಲೆ ಬಳಿ ಬಂದಿದ್ದ ವಿಧವೆಯೊಬ್ಬರ ಮಗನನ್ನು ತಾವೇ ದತ್ತು ಪಡೆದು ಸಾಕಲು ನಿರ್ಧರಿಸಿದರು. 1873 ರಲ್ಲಿ ಶುರುವಾದ ಸತ್ಯಶೋಧಕ ಸಮಾಜ, 1876ರಲ್ಲಿ 316 ಜನ ಸದಸ್ಯರಾಗಿದ್ದರು, ಜ್ಯೋತಿಬಾ ಫುಲೆ ಮೊದಲ ಅಧ್ಯಕ್ಷರಾಗಿಯೂ, ಕಾರ್ಯದರ್ಶಿಯೂ ಆಗಿದ್ದರು. ಸರಳ ಹಾಗೂ ಪುರೋಹಿತರಿಲ್ಲದ ವೈಚಾರಿಕ ಮದುವೆಗಳಿಗೆ ಸತ್ಯಶೋಧಕ ಸಮಾಜ, ಫುಲೆ ದಂಪತಿಗಳು ಬೆಂಬಲವಾಗಿ ನಿಂತರು, ಇದಕ್ಕೂ ಕೂಡ ಸಂಪ್ರದಾಯವಾದಿಗಳು ವಿರೋಧ ವ್ಯಕ್ತಪಡಿಸಿದರು. 1889ರಲ್ಲಿ ಫುಲೆಯವರ ದತ್ತು ಮಗ ಯಶವಂತನಿಗೆ ಅಂತರಜಾತಿಯ ಮದುವೆ ಮಾಡಿದರು.

1876 ರಿಂದ 1882 ರವರೆಗೆ ಜ್ಯೋತಿ ಬಾ ಪುಣೆ ಮುನ್ಸಿಪಾಲ್ಟಿಯ ಕಮಿಷನರ್ ಆಗಿ ಕೆಲಸ ಮಾಡಿದರು. ಖಾಡಾಕವಸಾಲಾ ಅಣೆಕಟ್ಟು ಮತ್ತು ಯರವಾಡಾ ಸೇತುವೆ ಕೆಲಸದ ಕಂಟ್ರಾಕ್ಟರ್ ಆಗಿದ್ದಾಗ ಅವರ ಬಳಿ ಬರುತ್ತಿದ್ದ 2000 ಕೂಲಿಗಳಿಗಾಗಿ ರಾತ್ರಿ ಶಾಲೆಗಳನ್ನು ನಡೆಸಿದರು.

1887ರಲ್ಲಿ ಜ್ಯೋತಿ ಬಾ ಫುಲೆಯವರಿಗೆ ಹೃದಯಾಘಾತವಾಗಿ ಬಲಬದಿಗೆ ಪಾರ್ಶವಾಯು ಹೊಡೆಯಿತು. 28 ನವೆಂಬರ್ 1890ರಲ್ಲಿ ಜ್ಯೋತಿ ಬಾ ಫುಲೆ ತೀರಿಕೊಂಡರು.

ಸಾರ್ವಜನಿಕ ಸತ್ಯಧರ್ಮದ ಮೂಲ ತತ್ವಗಳನ್ನೊಳಗೊಂಡ 33 ಸತ್ಯಾಚರಣೆಯ ನಿಯಮಗಳನ್ನು ಜ್ಯೋತಿಬಾ ಫುಲೆ ರೂಪಿಸಿದರು. ಅವುಗಳಲ್ಲಿ ಕೆಲವು ಸೂತ್ರಗಳು ಇಂತಿವೆ

  1. ಧರ್ಮಗ್ರಂಥ ಎಲ್ಲರಿಗೂ ದೊರಕುವಂತಾಗಲಿ, ಅದನ್ನು ಬಚ್ಚಿಟ್ಟು ಇತರಿಗೆ ಅದನ್ನು ತೋರಿಸದಂತೆ ನಡೆದುಕೊಳ್ಳಲಾಗದು.
  2. ಏನೂ ಪರಿಶ್ರಮ ಪಡದೆ ವ್ಯರ್ಥ ಧಾರ್ಮಿಕ ಕೋರಿಕೆಯಿಂದಾಗಿ ಮೂಢ ಜನರನ್ನು ಮೋಸಗೊಳಿಸಬಾರದು.
  3. ಯಾವ ಉದ್ಯೋಗವೂ ಮೇಲಲ್ಲ-ಕೀಳಲ್ಲ ಎಂಬುದು ನೆನಪಿರಲಿ.
  4. ಸ್ತ್ರೀ-ಪುರುಷರೆಲ್ಲರಿಗೂ ತಮ್ಮ ತಮ್ಮ ಅಧಿಕಾರಗಳನ್ನು ಚಲಾಯಿಸುವ ಸ್ವಾತಂತ್ರ ಉಂಟು.
  5. ಪಕ್ಷಪಾತ ಮಾಡದೆ ಕುಷ್ಠರೋಗಿ ವಿಕಲಾಂಗ ವ್ಯಕ್ತಿ, ಅನಾಥ ಬಾಲಕ-ಬಾಲಕಿಯರಿಗೆ ತಮ್ಮ ಯೋಗ್ಯತಾನುಸಾರ ಸಹಾಯ ಮಾಡಬೇಕು

ರೈತ ಕ್ರಾಂತಿಯ ಕುರಿತು ಜ್ಯೋತಿ ಬಾಪುಲೆ ಮೂರು ಅಗತ್ಯ ಅಂಶಗಳನ್ನು ಹೇಳುತ್ತಾರೆ

  1. ಜಮೀನುದಾರಿ ಪದ್ಧತಿ ಕೊನೆಯಾಗಬೇಕು. ಸಾಮಂತಶಾಹಿ, ಸಾಹುಕಾರಿ ಪದ್ದತಿ ನಾಶವಾಗಬೇಕು.
  2. ರೈತನ ದುಡಿಮೆಯ ಪ್ರತಿಫಲ ಅವನಲ್ಲಿಯೇ ಉಳಿಯಬೇಕು.
  3. ಹೊಸ ವೈಜ್ಞಾನಿಕ ಕೃಷಿ ಪದ್ದತಿ ಜಾರಿಗೆ ಬರಬೇಕು.

ಜ್ಯೋತಿ ಬಾ ಫುಲೆ ರವರ ಕೃತಿಗಳು

  • ಜಾತಿಭೇಧ ವಿವೇಕ ಸಾರದ ಪ್ರಸ್ತಾವನೆ -1865
  • ಛತ್ರಪತಿ ಶಿವಾಜಿ ಅವರ ಪವಾಡ – 1869
  • ಬ್ರಾಹ್ಮಣರ ಕುಯುಕ್ತಿ – 1869
  • ದಾಸ್ಯ – 1873
  • ರೈತನ ಚಾಟ – 1883
  • ಸತ್ ಸಾರ 1 ಮತ್ತು 2ನೇ ಸಂಚಿಕೆಗಳು-1885
  • ಸತ್ಯಶೋಧಕ ಸಮಾಜದ ರೀತ್ಯಾ ಮಂತ್ರಾದಿ ಸರ್ವ ಪೂಜಾವಿಧಿ-1887
  • ಸಾರ್ವಜನಿಕ ಸತ್ಯಧರ್ಮ – 1891

ಅಖಂಡ ಮುಂತಾದ ಬಿಡಿ ಲೇಖನಗಳು

  • ನಾಟಕ: ತೃತೀಯ ರತ್ನ – 1855.

ಇಂದು ದೇಶಾದ್ಯಂತ ಜ್ಯೋತಿ ಬಾ ಫುಲೆ, ಸಾವಿತ್ರಿ ಬಾಯಿ ಫುಲೆಯವರ ಆಶಯಗಳನ್ನು ಹಲವು ಚಳುವಳಿಗಳು ಬದುಕಿಸಿವೆ, ಮಹಿಳೆಯರಿಗಾಗಿ, ಶೂದ್ರಾತಿಶೂದ್ರರಿಗೆ ಶಿಕ್ಷಣಕ್ಕಾಗಿ ಹೋರಾಡಿದ ಚೇತನವನ್ನು 130 ವರ್ಷಗಳಾದರೂ ಕೂಡಾ ಮರೆಯದೆ ಅವರ ಆಶಯಗಳನ್ನ, ಕಂಡ ಕನಸುಗಳನ್ನು ನನಸಾಗಿಸಲು ಹೊರಾಡುತ್ತಿವೆ.

ದೇಶ ಇಂದು ಎಂದಿಗೂ ಕಂಡರಿಯದಂತಹ ಗಂಭೀರ ಸ್ಥಿತಿಗೆ ತಲುಪುತ್ತಿದೆ, ಜಾತಿ-ಧರ್ಮದ ಹೆಸರಿನಲ್ಲಿ ನಿತ್ಯವೂ ಹಲವಾರು ಸಂಘರ್ಷಗಳು ನಡೆಯುತ್ತಿವೆ. ದೇಶದ ಅಭಿವೃದ್ಧಿಗೆ ಪೂರಕಾವಾಗುವ ಬದಲು ಮಾರಕವಾಗುವ ಹಲವಾರು ಘಟನೆಗಳು ನಡೆಯುತ್ತಿರುವ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕ್ರಾಂತಿಯೊಂದು ನಡೆಯಬೇಕಿದೆ. ಜ್ಯೋತಿ ಬಾಪುಲೆ, ಸಾವಿತ್ರಿ ಬಾಯಿ ಫುಲೆಯಂತಹ ಮಹಾತ್ಮರು ಹಾಕಿ ಕೊಟ್ಟ ದಾರಿಯಲ್ಲಿ ಅವರ ಆಶಯಗಳನ್ನು ಈಡೇರಿಸುವ ಕೆಲಸಗಳಲ್ಲಿ ತೊಡಗಬೇಕಿದೆ.

Donate Janashakthi Media

Leave a Reply

Your email address will not be published. Required fields are marked *