ಟೋಕಿಯೊ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ ಅವನಿ ಲೇಖರಾ ಒಂದೇ ಕ್ರೀಡಾಕೂಟದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಇದೇ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದಿದ್ದ ಅವನಿ ಲೇಖರಾ ಇದೀಗ ಮತ್ತೆ ಕಂಚಿನ ಪದಕ ಗೆಲ್ಲುವುದರೊಂದಿಗೆ ಐತಿಹಾಸಿ ಸಾಧನೆ ಮಾಡಿದ್ದಾರೆ.
ಭಾರತಕ್ಕೆ ಮತ್ತೊಂದು ಪದಕ ಲಭಿಸಿದ್ದು, ಶೂಟಿಂಗ್ ವಿಭಾಗದಲ್ಲಿ ಅವನಿ ಲೇಖರಾಗೆ ಕಂಚು ಲಭಿಸಿದೆ. ಶುಕ್ರವಾರ ನಡೆದ ಆರ್ 8 ಈವೆಂಟ್ ನ ಮಹಿಳೆಯರ 50 ಮೀ ರೈಫಲ್ 3 ಪಿ ಎಸ್‌ಎಚ್ 1 ಸ್ಪರ್ಧೆಯಲ್ಲಿ 3ನೇ ಸ್ಥಾನವನ್ನು ಅವನಿ ಲೇಖರಾ ಪಡೆದುಕೊಂಡರು.
ಇದನ್ನು ಓದಿ: ಚಿನ್ನಕ್ಕೆ ಗುರಿಯಿಟ್ಟ ಶೂಟರ್ : ಇತಿಹಾಸ ನಿರ್ಮಿಸಿದ ಅವನಿ ಲೇಖರಾ
ಅವನಿ ಲೇಖರಾ ಫೈನಲ್ ಪಂದ್ಯದಲ್ಲಿ ಒಟ್ಟು 445.9 ಅಂಕ ಪಡೆಯುವುದರೊಂದಿಗೆ ಮೂರನೇ ಸ್ಥಾನಕ್ಕೇರಿದರು. ಅಂತಿಮ ಸುತ್ತು ಆರಂಭಕ್ಕೂ ಮುನ್ನ ಅವರು 149.5 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರು. ಆದರೆ ಅಂತಿಮ ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ನೀಡಿ ಮೂರನೇ ಸ್ಥಾನಕ್ಕೇರಿ ಪದಕವನ್ನು ತಮ್ಮದಾಗಿಸಿಕೊಂಡರು.
ಇದಕ್ಕೂ ಮೊದಲು ಅವನಿ ಲೇಖರಾ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದ್ದರು. ಈ ರೀತಿಯ ಸಾಧನೆ ಮಾಡಿದ ಮೊದಲ ಭಾರತೀಯ ಪ್ಯಾರಾಒಲಿಂಪಿಕ್ಸ್ ಮಹಿಳಾ ಕ್ರೀಡಾಪಟು ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಇದನ್ನು ಓದಿ: ಪ್ಯಾರಾಲಿಂಪಿಕ್ಸ್: ಜಾವಲಿನ್ ಥ್ರೋನಲ್ಲಿ ಚಿನ್ನ ಗೆದ್ದ ಸುಮಿತ್ ಅಂತಿಲ್
19 ವರ್ಷದ ರಾಜಸ್ಥಾನ ಮೂಲದ ಅವನಿ ಲೇಖರಾ 2012ರಲ್ಲಿ ಕಾರು ಅಪಘಾತಕ್ಕೆ ಒಳಗಾಗಿ ಬೆನ್ನುಮೂಳೆ ಜರ್ಝರಿತವಾಗಿತ್ತು. ಬಳಿಕ ಪಾರ್ಶ್ವವಾಯುವಿಗೆ ಒಳಗಾಗಿದ್ದ ಅವರು 2008 ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರ ಆತ್ಮಕತೆಯನ್ನು ಓದಿ ಕ್ರೀಡೆಯತ್ತ ಆಸಕ್ತರಾಗಿದ್ದರು.
ಪದಕಗಳ ಸಂಖ್ಯೆ 12ಕ್ಕೆ ಏರಿಕೆ
ಅವನಿ ಲೇಖರಾ ಕಂಚಿನ ಪದಕ ಗಳಿಕೆಯ ಬಳಿಕ ಹಾಲಿ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 2 ಚಿನ್ನ, 6 ಬೆಳ್ಳಿ ಮತ್ತು 4 ಕಂಚಿನ ಪದಕಗಳಿವೆ.