ಚಿನ್ನಕ್ಕೆ ಗುರಿಯಿಟ್ಟ ಶೂಟರ್‌ : ಇತಿಹಾಸ ನಿರ್ಮಿಸಿದ ಅವನಿ ಲೇಖರಾ

  • ಮಹಿಳೆಯರ 10 ಮೀ ಏರ್ ರೈಫಲ್ ಸ್ಪರ್ಧೆಯಲ್ಲಿ ಆವನಿ ಲೇಖರಾಗೆ ಚಿನ್ನದ ಪದಕ
  • ಡಿಸ್ಕಸ್ ಥ್ರೋನದಲ್ಲಿ ಯೋಗೇಶ್‌ಗೆ ಬೆಳ್ಳಿ ಪದಕ
  • ಜಾವೆಲಿನ್ ಥ್ರೋನದಲ್ಲಿ ಜಝಾರಿಯಾ ಬೆಳ್ಳಿ ಹಾಗೂ ಗುರ್ಜಾರ್ ಕಂಚಿನ ಪದಕ 
  • ಪದಕಗಳ ಸಂಖ್ಯೆ ಏಳಕ್ಕೆ ಏರಿಕೆ

ಟೋಕಿಯೋ : ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಅವನಿ ಲೆಖರಾ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಮಹಿಳೆಯರ 10 ಮೀಟರ್ ಏರ್ ರೈಫಲ್‌ ಸ್ಪರ್ಧೆಯ ಫೈನಲ್‌ನಲ್ಲಿ 249.6 ಅಂಕಗಳನ್ನು ಕಲೆಹಾಕುವ ಮೂಲಕ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಪ್ತಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಶೂಟಿಂಗ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ಜಯಿಸಿದ ಮೊದಲ ಪ್ಯಾರಾಥ್ಲೀಟ್‌ ಎನ್ನುವ ಗೌರವಕ್ಕೆ ಅವನಿ ಪಾತ್ರರಾಗಿದ್ದಾರೆ.

ಜೈಪುರ ಮೂಲದ 19 ವರ್ಷದ ಅವನಿ ಲೆಖರಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ಬಾರಿ ಭಾಗವಹಿಸಿದ ಅತಿ ಕಿರಿಯ ಪ್ಯಾರಾ ಅಥ್ಲೀಟ್‌ ಎನಿಸಿಕೊಂಡಿದ್ದರು. ಇದೀಗ ಸ್ವರ್ಣ ಪದಕ ಬೇಟೆಯಾಡುವುದರೊಂದಿಗೆ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ದಾಖಲೆಯು ಅವನಿಯವರ ಪಾಲಾಗಿದೆ.

Tokyo Paralympics 2021

ಪುರುಷರ F56 ವಿಭಾಗದ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಯೋಗೇಶ್ 44.38 ಮೀಟರ್‌ ದೂರ ಡಿಸ್ಕಸ್‌ ಥ್ರೋ ಎಸೆಯುವ ಮೂಲಕ ರಜತ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹರ್ಯಾಣದ ಬಹುದುರ್ಗಾ ಮೂಲದ 24 ವರ್ಷದ ಯೋಗೇಶ್ ಕಥುನಿಯಾ ಫೈನಲ್‌ನಲ್ಲಿ ಆರನೇ ಹಾಗೂ ಕೊನೆಯ ಯತ್ನದಲ್ಲಿ ಶ್ರೇಷ್ಠ ಪ್ರದರ್ಶನ(44.38 ಮೀ) ದೂರ ಎಸೆಯುವ ಮೂಲಕ ರಜತ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ದೇವೇಂದ್ರ ಝಝಾರಿಯಾ ಬೆಳ್ಳಿಗೆ ಮುತ್ತಿಕ್ಕಿದರೆ, ಸುಂದರ್ ಸಿಂಗ್ ಗುರ್ಜರ್ ಕಂಚಿನ ಪದಕ ಪಡೆದರು. ಆದರೆ, ಶ್ರೀಲಂಕಾದ ದಿನೇಶ್ ಮುದಿಯಾನ್​ಸೆಲಗೆ ಅವರು 67.79 ಮೀಟರ್ ದೂರ ಎಸೆದು ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಪಡೆದರು. ದೇವೇಂದ್ರ ಜಝಾರಿಯಾ ಹೆಸರಿನಲ್ಲಿ ವಿಶ್ವದಾಖಲೆ ಇತ್ತು. ಇವತ್ತಿನ ಸ್ಪರ್ಧೆಯಲ್ಲಿ ಝಝಾರಿಯಾ 64.35 ಮೀಟರ್ ದೂರ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟರು. ಸುಂದರ್ ಸಿಂಗ್ ಗುರ್ಜಾರ್ ಅವರು 64.01 ಮೀಟರ್ ದೂರ ಎಸೆದು ಕಂಚಿನ ಪದಕ ಗಳಿಸಿದರು. ಜಾವೆಲಿನ್ ಥ್ರೋನ ಮತ್ತೊಂದು ವಿಭಾಗದಲ್ಲಿ ಸಂದೀಪ್ ಚೌಧರಿ, ಸುಮೀತ್ ಅಂಟಿಲ್ ಅವರು ಸ್ಪರ್ಧೆಯಲ್ಲಿದ್ದಾರೆ. ಇವರಿಂದಲೂ ಪದಕದ ನಿರೀಕ್ಷೆ ಇದೆ.

2016 ರಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ ನಲ್ಲಿ ಭಾರತ 2 ಚಿನ್ನ, 1 ಬೆಳ್ಳಿ, 1 ಕಂಚು ಸೇರಿದಂತೆ ಒಟ್ಟು ನಾಲ್ಕು ಪದಕ ಗೆದ್ದಿತ್ತು. ಈ ಬಾರಿ ಒಂದು ಚಿನ್ನ,  ನಾಲ್ಕು ಬೆಳ್ಳಿ, ಎರಡು ಕಂಚು ಸೇರಿದಂತೆ ಒಟ್ಟು 7 ಪದಕಗಳನ್ನು ಪಡೆದಿದೆ. ಸೆಪ್ಟೆಂಬರ್ 05 ರವರೆಗೆ ಪಂದ್ಯಗಳು ನಡೆಯಲಿದ್ದು ಭಾರತ ಎರಡಂಕಿ ದಾಟುವ ಸಾಧ್ಯತೆ ಇದೆ.

Donate Janashakthi Media

Leave a Reply

Your email address will not be published. Required fields are marked *