ಮಣಿಪುರದಲ್ಲಿ ಮೇ 3 ರಂದು ಜನಾಂಗೀಯ ಹಿಂಸಾಚಾರ ಪ್ರಾರಂಭವಾದ ಮರುದಿನವೇ ಮೇ 4 ರಂದು ನಡೆದ ಅತ್ಯಾಚಾರದ ಆಘಾತಕಾರಿ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಈಗ ಕಾಣಿಸಿಕೊಂಡಿವೆ, ಇವು ಒಂದೆಡೆಯಲ್ಲಿ ಅಮಾನುಷ ಕ್ರೌರ್ಯವನ್ನು ಮತ್ತು ಇನ್ನೊಂದೆಡೆಯಲ್ಲಿ ಮಣಿಪುರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವ ಅಪರಾಧಿಗಳ ಭಂಡತನವನ್ನೂ, ನಾಚಿಕೆಗೇಡಿತನವನ್ನೂ ಪ್ರದರ್ಶಿಸಿದೆ ಎಂದು ಮಹಿಳಾ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಘಟನೆಯಲ್ಲಿ ಪುರುಷರ ಗುಂಪು ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗಿತ್ತು. ಇದರ ವೀಡಿಯೊಗಳನ್ನು ರೆಕಾರ್ಡ್ ಮಾಡಿರುವುದು ಮಾತ್ರವಲ್ಲದೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಸ್ಟ್ ಮಾಡಿ ಈ ಮಹಿಳೆಯರ ಗುರುತನ್ನು ಬಹಿರಂಗಪಡಿಸಿರುವುದು ತುಂಬಾ ಆಘಾತಕಾರಿ, ಇದು ಸಂತ್ರಸ್ತರ ಘನತೆ ಮತ್ತು ಹಕ್ಕುಗಳನ್ನು ಉಲ್ಲಂಘಿಸಿರುವ ಕೃತ್ಯ ಎಂದು ಅವು ಖಂಡಿಸಿವೆ.
ಈ ಘಟನೆ ನಡೆದು ಎರಡೂವರೆ ತಿಂಗಳಾಗಿವೆ. ಆದರೆ ಕೇವಲ ಶೂನ್ಯ ಎಫ್‌ಐಆರ್‌ಗಿಂತ ಹೆಚ್ಚಿನ ಕ್ರಮವನ್ನು ತೆಗೆದುಕೊಳ್ಳದಿರುವುದು ಪೊಲೀಸರಿಗೆ ಸಂತ್ರಸ್ತರ ಬಗ್ಗೆ ನಿರಾಸಕ್ತಿ ಮತ್ತು ಅಪರಾಧಿಗಳೊಂದಿಗೆ ಅವರ ಶಾಮೀಲನ್ನು ಹೇರಳವಾಗಿ ಸ್ಪಷ್ಟಗೊಳಿಸುತ್ತದೆ. ಇದರೊಂದಿಗೆ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಗಳ ಭಾರೀ ಮೌನ ಅತ್ಯಂತ ಖಂಡನೀಯ. ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರಕ್ಕೆ ಮಹಿಳೆಯರು ನೇರ ಬಲಿಪಶುಗಳಾಗಿದ್ದಾರೆ ಎಂದು ಈ ಸಂಘಟನೆಗಳು ಆಪಾದಿಸಿವೆ.
ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಈ ಘಟನೆ ದೇಶಾದ್ಯಂತ ಆಘಾತದ ಅಲೆಗಳನ್ನು ಎಬ್ಬಿಸಿದೆ. ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ. ಆದರೆ ಈ ವಿಚಾರದಲ್ಲಿ ಮೌನ ವಹಿಸಿರುವ ಪ್ರಧಾನಿ ವಿದೇಶ ಪ್ರವಾಸದಲ್ಲಿ ಮಗ್ನರಾಗಿದ್ದಾರೆ ಎಂದು ಖೇದ ವ್ಯಕ್ತಪಡಿಸಿರುವ ಈ ಸಂಘಟನೆಗಳು ಮಹಿಳೆಯರ ಮೇಲಿನ ಕ್ರೂರ ಹಲ್ಲೆಯನ್ನು ಪ್ರತಿಭಟಿಸಿ ನವದೆಹಲಿಯಲ್ಲಿ ಮಣಿಪುರ ಭವನದ ಎದುರು ಪ್ರತಿಭಟನೆ ನಡೆಸಿದವು. “ಮಣಿಪುರ್‍ಮೇಂ ತಬಾಹಿ ಕಿ ಝಿಮ್ಮೆದಾರ ಮೋದಿ ಸರ್ಕಾರ್ ಹೋ ಬರ್ಬಾದ್”( ಮಣಿಪುರದಲ್ಲಿ ವಿನಾಶದ ಹೊಣೆಗಾರ ಮೋದಿ ಸರ್ಕಾರ ನಾಶವಾಗಲಿ),”ಬಿರೇನ್ ಸಿಂಹ ಇಸ್ತಿಫ ದೋ”(“ಬಿರೇನ್ ಸಿಂಗ್ ರಾಜೀನಾಮೆ ಕೊಡು), “ಮಣಿಪುರ್ ಮೇಂ ನಂಗ ನಾಚ ಬಂದ್ ಕರೋ”( ಮಣಿಪುರದಲ್ಲಿ ನಗ್ನ ನರ್ತನ ನಿಲ್ಲಿಸು), “ಮಹಿಲಾ ಪರ ಹಿಂಸಾ ನಹೀಂ ಸಹೇಂಗೆ”( ಮಹಿಳೆಯರ ಮೇಲೆ ಹಿಂಸೆಯನ್ನು ಸಹಿಸುವುದಿಲ್ಲ) ಮುಂತಾದ ಘೋಷಣೆಗಳಲ್ಲಿ ಮಹಿಳೆಯರ ಆಕ್ರೋಶ, ನೋವು ಸ್ಪಷ್ಟವಾಗಿತ್ತು ಎಂದಿರುವ ಈ ಸಂಘಟನೆಗಳು
- ಅಪರಾಧಿಗಳನ್ನು ತಕ್ಷಣವೇ ಬಂಧಿಸಬೇಕು, ಮತ್ತು ಈ ಪ್ರಕರಣವನ್ನು ಫಾಸ್ಟ್ ಟ್ರಾಕ್ ಮಾಡಬೇಕು
- ಕರ್ತವ್ಯಲೋಪ ಎಸಗಿರುವ ಪೋಲಿಸರ ವಿರುದ್ಧ ಕ್ರಮ ಕೈಗೊಳ್ಳಬೇಕು
- ಬೀರೇನ್ ಸಿಂಗ್ ರಾಜೀನಾಮೆ ಕೊಡಬೇಕು
- ಮಣಿಪುರದಲ್ಲಿ ಶಾಂತಿ ಮರುಸ್ಥಾಪಿಸಲು ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮರಿಯಮ್ ಧವಳೆ (AIDWA), ದೀಪ್ತಿ ಭಾರತಿ (NFIW), ಪೂನಮ್ ಕೌಶಿಕ್ (ಪ್ರಗತಿಶೀಲ್ ಮಹಿಳಾ ಸಂಗಟನ್)), ರಿತು ಕೌಶಿಕ್ (AIMSS), ನೊಬಿತಾ (CSW), ಲಾಂಬಿ (NEFIS), ಕುಸುಮ್ ಸೆಹಗಲ್ ಮತ್ತು (ಜಿಮ್ಮೇದಾರಿ SWO) ಮಾತನಾಡಿದರು, ಅವರೆಲ್ಲರೂ ಮಣಿಪುರದಲ್ಲಿ ಸುಮಾರು 3 ತಿಂಗಳ ಕಾಲ ನಿರಂತರವಾಗಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರಕ್ಕೆ ಮಣಿಪುರದ ಬಿರೇನ್ ಸಿಂಗ್ ಸರ್ಕಾರ ಮತ್ತು ಕೇಂದ್ರದ ಮೋದಿ-ಶಾ ಅವರ ಬಿಜೆಪಿ ಸರ್ಕಾರ ಎರಡನ್ನೂ ದೂಷಿಸಿದರು.
“77ದಿನ ಬಾಯಿ ತೆರೆಯದ ಪ್ರಧಾನಿಗಳ ಈ ಸಿಟ್ಟು!”- ಬೃಂದಾಕಾರಟ್ ಟೀಕೆ
“ಈ ಘಟನೆ ಅತ್ಯಂತ ನಾಚಿಕೆಗೇಡಿ, ನನ್ನ ಮನಸ್ಸು ನೋವು ಮತ್ತು ಸಿಟ್ಟಿನಿಂದ ತುಂಬಿದೆ” ಎಂದು ಪ್ರಧಾನಿಗಳು ಪ್ರತಿಕ್ರಿಯಿಸಿದ್ದಾರೆ, ಇದು ದೇಶದ 140 ಕೋಟಿ ಜನತೆಗೆ ಮಾಡಿರುವ ಅವಮಾನ, ಅವರು ತಲೆತಗ್ಗಿಸುವಂತೆ ಮಾಡಿರುವ ಕೃತ್ಯ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.
140ಕೋಟಿ ಬಗ್ಗೆ ಏಕೆ ಹೇಳುತ್ತೀರಿ, ನಾಚಿಕೆಪಡಬೇಕಾಗಿರುವುದು ಕೇಂದ್ರ ಸರಕಾರ, ಡಬಲ್ ಇಂಜಿನ್ ಸರಕಾರ, ಸ್ವತಃ ಪ್ರಧಾನ ಮಂತ್ರಿಗಳು ಎಂದು ಪ್ರಧಾನಿಗಳ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತ ಸಿಪಿಐ(ಎಂ) ಹಿರಿಯ ಮುಖಂಡರಾದ ಬೃಂದಾ ಕಾರಟ್ ಹೇಳೀದ್ದಾರೆ. ಮೇ 4ರಿಂದ ಇದುವರೆಗೂ ಅಲ್ಲಿಯ ಡಬಲ್‍ಇಂಜಿನ್ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಇಂತಹ ಅಪರಾಧಪೂರ್ಣ ಬೇಜವಾಬ್ದಾರಿ ಮುಖ್ಯಮಂತ್ರಿಯನ್ನು ಇದುವರೆಗೂ ರಕ್ಷಿಸುತ್ತ ಬಂದಿದ್ದೀರಿ, 77 ದಿನಗಳ ಕಾಲ ಬಾಯಿ ತೆರೆಯದವರು, ಮಣಿಪುರದ ಬಗ್ಗೆ ಒಂದು ಮಾತೂ ಆಡದವರು, ಈಗ ಸದನವನ್ನು ಎದುರಿಸಬೇಕಾಗಿ ಬಂದಿರುವುದರಿಂದ ಮನದಲ್ಲಿ ಸಿಟ್ಟು ತುಂಬಿದೆಯೇ? ಇಡೀ ದೇಶ ಈ ನಾಚಿಕೆಗೇಡಿ ಘಟನೆಗೆ ಕೇಂದ್ರ ಸರಕಾರವನ್ನು, ಗೃಹಮಂತ್ರಿಗಳನ್ನು, ಮಣೀಪುರ ಸರಕಾರವನ್ನು ಅಪರಾಧಿ ಎಂದು ಬಗೆಯುತ್ತದೆ ಎಂದು ಎಎನ್‍ಐ ಸುದ್ದಿ ಸಂಸ್ಥೆಗೆ ಅವರು ಹೇಳಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಈ ಘಟನೆಯ ಬಗ್ಗೆ ಜೂನ್ 12ರಂದೇ ದೂರು ಬಂದಿತ್ತು. ಆದರೆ ಅದಕ್ಕೆ ಅದು ಯಾವ ಸ್ಪಂದನೆಯನ್ನೂ ತೋರಿಲ್ಲ. ಇದಲ್ಲದೆ ಇನ್ನೂ ಹಲವು ಕುಕೃತ್ಯಗಳನ್ನು ಅದರ ಗಮನಕ್ಕೆ ತರಲಾಗಿತ್ತು ಎಂದು ವೆಬ್‍ಪತ್ರಿಕೆ ‘ನ್ಯೂಸ್ ಲಾಂಡ್ರಿ’ ಹೇಳಿದೆ. ಮಹಿಳೆಯರನ್ನು ಅಸ್ತ್ರಗಳಾಗಿ ಬಳಸುವ ಕಾರ್ಯತಂತ್ರ ಇವುಗಳಲ್ಲಿ ಕಾಣುತ್ತದೆ. ಪತ್ರಿಕೆಯ ಫೋನ್ ಕರೆಗಳಿಗೂ ಆಯೋಗದ ಅಧ‍್ಯಕ್ಷೆ ರೇಖಾ ಶರ್ಮ ಸ್ಪಂದಿಸಿಲ್ಲ ಎಂದೂ ಅದು ತಿಳಿಸಿದೆ.