ಶಿವರಾಮ ಕಾರಂತ ಬಡಾವಣೆ ಹೆಸರಿನಲ್ಲಿ ಭೂಸ್ವಾಧೀನ – ಸ್ಥಳೀಯರ ಆಕ್ರೋಶ

ಬೆಂಗಳೂರು : ಡಾ.ಶಿವರಾಮ ಕಾರಂತ ಬಡಾವಣೆ ಹೆಸರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬೆಳ್ಳಂಬೆಳಗ್ಗೆ ಭೂಸ್ವಾಧೀನಕ್ಕೆ ಮುಂದಾಗಿದ್ದಾರೆ. ಬಿಡಿಎ ಕ್ರಮಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆಸಿಬಿಗಳ ಘರ್ಜನೆ : ಸ್ಥಳೀಯರ ವಿರೋಧದ ನಡುವೆಯೂ ಬೆಂಗಳೂರು ಉತ್ತರ ತಾಲೂಕಿನ ಕೆಂಪಾಪುರ, ಲಕ್ಷ್ಮೀಪುರ, ಸೋಮಶೆಟ್ಟಿಹಳ್ಳಿ, ಗಾಣಿಗರಹಳ್ಳಿಯಲ್ಲಿ ಜೆಸಿಬಿಗಳ ಮೂಲಕ ತೆರವು ಕಾರ್ಯ ನಡೆಯುತ್ತಿದೆ. ಸೋಮಲದೇವನಹಳ್ಳಿ ಠಾಣೆ ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಈ ಹಿಂದೆಯೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿತ್ತು. ಬೆಂಗಳೂರು ಉತ್ತರ ತಾಲ್ಲೂಕಿನ 17 ಗ್ರಾಮಗಳಲ್ಲಿ ಈ ಬಡಾವಣೆ ನಿರ್ಮಾಣವಾಗಲಿದ್ದು ಇದಕ್ಕಾಗಿ ಸೋಮಶೆಟ್ಟಿಹಳ್ಳಿ, ಲಕ್ಷೀಪುರ, ಗಾಣಿಗರಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವಾಸಿಸುವ ಕುಟುಂಬಗಳು ಜಾಗ ಕಳೆದುಕೊಳ್ಳಲಿವೆ. ಅವರ ಭವಿಷ್ಯ ತೂಗುಯ್ಯಾಲೆಯಲ್ಲಿದೆ.

ಐದು ನೂರಕ್ಕು ಹೆಚ್ಚು ದಾವೆಗಳು :  ಪ್ರಕರಣಕ್ಕೆ ಸಂಬಂಧಿಸಿದಂತೆ  ಹೈ ಕೋರ್ಟ್ ನಲ್ಲಿ 500 ದಾವೆಗಳಿವೆ. ಸ್ಥಳೀಯ ಜನರನ್ನ ಒಕ್ಕಲೆಬ್ಬಿಸಿ ಶ್ರೀಮಂತರಿಗೆ ಸೈಟ್ ನೀಡಲು ಹೊರಟಿದ್ದಾರೆ ಎಂಬುದು ಅಲ್ಲಿನ ಜನರ ಆಕ್ರೋಶವಾಗಿದೆ. ಒಂದು ವೇಳೆ BDA ಸ್ವಾಧೀನಕ್ಕೆ ತಗೊಂಡ್ರೆ 12ಕಿಲೋ ಮೀಟರ್ ಗಳಷ್ಟು ವ್ಯಾಪ್ತಿ ಹೆಚ್ಚಾಗುತ್ತೆ. ಅದಕ್ಕೆಲ್ಲ ಮೂಲಭೂತ ಸೌಕರ್ಯಗಳನ್ನು ಪೂರೈಸಲು ನಿಮ್ಮಿಂದಾಗುತ್ತಾ? ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಈ ಬಡಾವಣೆಗೆ ಬಿಡಿಎ 2008ರ ಡಿಸೆಂಬರ್‌ನಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 10 ವರ್ಷದ ಬಳಿಕ 3,546 ಎಕರೆ 12 ಗುಂಟೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತು ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ರೈತರಿಂದ ಬಂದ ಆಕ್ಷೇಪಣೆಗಳನ್ನು ಪರಿಗಣಿಸಿ ಸರ್ಕಾರ 257 ಎಕರೆ 20 ಗುಂಟೆ ಜಾಗಕ್ಕೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಆರಂಭದಲ್ಲೇ ಬಿಡಿಎಗೆ ಸೂಚಿಸಿತ್ತು.

ಮತ್ತೆ ನಾಲ್ಕೈದು ಹಳ್ಳಿಗಳ ರೈತರು 446 ಎಕರೆ 7ಗುಂಟೆ ಜಾಗ ಕೈಬಿಡುವಂತೆ ಭೂಮಾಲೀಕರು 2012ರಲ್ಲಿ ಒತ್ತಾಯಿಸಿದ್ರು. ಇನ್ನೂ ಇದೇ ವಿಷಯವಾಗಿ ಭೂಮಾಲೀಕರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ನ ಏಕವ್ಯಕ್ತಿ ಪೀಠವು 2014 ನವೆಂಬರ್‌ 26ರಂದು ಅರ್ಜಿದಾರರ ಪರವಾಗಿ ತೀರ್ಪು ನೀಡಿತ್ತು. ಇದನ್ನು ಬಿಡಿಎ ವಿಭಾಗೀಯ ಪೀಠದಲ್ಲಿ ಪ್ರಶ್ನೆ ಮಾಡಿತ್ತು. ವಿಭಾಗೀಯ ಪೀಠವೂ ಕೂಡ ರೈತರ ಪರವಾಗಿ ತೀರ್ಪು ನೀಡಿತ್ತು. ತೀರ್ಪಿನ ವಿಷಯವಾಗಿ ಬಿಡಿಎ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಆಗಿನ ಅರುಣ್‌ ಮಿಶ್ರಾ ಹಾಗೂ ಅಬ್ದುಲ್‌ ನಜೀರ್‌ ಅವರಿದ್ದ ಸುಪ್ರೀಂ ಕೋರ್ಟ್‌ನ ಪೀಠವು ಈ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹಾಗೂ ಬಿಡಿಎಗೆ 2018ರ ಆಗಸ್ಟ್‌ 3ರಂದು ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ಹೊಸದಾಗಿ ಬಿಡಿಎ ಅಧ್ಯಕ್ಷರಾಗಿ ಎಸ್.ಆರ್.ವಿಶ್ವನಾಥ್ ಆಯ್ಕೆಯಾದರು.

ಅಂದು ರೈತರ ಪರವಾಗಿ ನಿಂತಿದ್ರು. ಈಗ ಬಿಡಿಎ ಅಧ್ಯಕ್ಷರಾದ ಕೂಡಲೇ ರೈತರು ಹಾಗೂ ಬಡವರಿಗೆ ಅನ್ಯಾಯ ಮಾಡಲು ಮುಂದಾಗಿದ್ದಾರೆ.ಈ ಬಡಾವಣೆಯ ಪರಿಸ್ಥಿತಿಯ ಬಗ್ಗೆ ಬಿಡಿಎ 2015ರಲ್ಲಿ ಸಮೀಕ್ಷೆ ನಡೆಸಿ ತೆಪ್ಪಗಾಗಿತ್ತು. ಈಗ ವಿಶ್ವನಾಥ್ ಬಿಡಿಎ ಅಧ್ಯಕ್ಷರಾದ ಕೂಡಲೇ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *