ಹಾನಗಲ್: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶನಿವಾರ ಹಾನಗಲ್ ನ ಮಲಗುಂದ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಪ್ರಚಾರ ನಡೆಸಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನ್ ವಿರುದ್ಧ ಕಿಡಿ ಕಾರಿದರು.
ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, “ಸಂಗೂರು ಶುಗರ್ ಫ್ಯಾಕ್ಟರಿಗೆ ಉದಾಸಿ ಅದ್ಯಕ್ಷ, ಶಿವರಾಜ್ ಸಜ್ಜನರ್ ಉಪಾಧ್ಯಕ್ಷ. ಇಬ್ಬರೂ ಸೇರಿಕೊಂಡು ಶುಗರ್ ಫ್ಯಾಕ್ಟರಿ ನುಂಗಿ ನೀರು ಕುಡಿದರು. ಖಾಲಿ ಚೀಲಾನೂ ಬಿಡದೇ ತಿಂದಾಕಿ ಬಿಟ್ಟರು,” ಎಂದು ವಾಗ್ದಾಳಿ ನಡೆಸಿದರು.
ಶುಗರ್ ಫ್ಯಾಕ್ಟರಿ ಹಾಳಾಗೋಕೆ ಕಾರಣ ಮಿಸ್ಟರ್ ಸಜ್ಜನರ್. ಆ ಸಜ್ಜನರ್ ಈಗ ಬಿಜೆಪಿ ಅಭ್ಯರ್ಥಿ, ಅವನಿಗೆ ಓಟ್ ಹಾಕಬೇಕಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, “ಸಜ್ಜನ್‌ಗೆ ಖಾಲಿ ಚೀಲ ಕೊಟ್ಟು ಕಳಿಸಿ. ಅವನಿಗೆ ಓಟ್ ಹಾಕಬೇಡಿ. ಸಜ್ಜನರ್ ತಿಂದಿರೋದೆಲ್ಲಾ ಕಕ್ಕಿಸಬೇಕು,” ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಇದನ್ನೂ ಓದಿ : ಸ್ವಪಕ್ಷದ ಅಲ್ಪಸಂಖ್ಯಾತ ನಾಯಕರನ್ನು ಮೂಲೆಗುಂಪು ಮಾಡಿದ್ದೇ ಸಿದ್ದರಾಮಯ್ಯ – ಎಚ್.ಡಿ.ಕೆ ಆರೋಪ
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವರಾದ ಮನೋಹರ ತಹಶೀಲ್ದಾರ, ಯು.ಟಿ.ಖಾದರ್, ಸಂತೋಷ ಲಾಡ್ ಸೇರಿ ಕಾಂಗ್ರೆಸ್ ನಾಯಕರು ವೇದಿಕೆಯಲ್ಲಿದ್ದರು.