- ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ (83) ಹೃದಯಾಘಾತದಿಂದ ನಿಧನ
- ಮೃತರ ಅಂತ್ಯಕ್ರಿಯೆ ಶುಕ್ರವಾರ ಬೆಂಗಳೂರಿನಲ್ಲಿ ನಡೆಯಲಿದೆ
- ‘ಕೋಡಗನ ಕೋಳಿ ನುಂಗಿತ್ತಾ..’ ಹಾಡಿನ ಮೂಲಕ ಮನೆಮಾತಾದ ಶಿವಮೊಗ್ಗ ಸುಬ್ಬಣ್ಣ
ಬೆಂಗಳೂರು: ಖ್ಯಾತ ಹಿರಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ ಗುರುವಾರ ರಾತ್ರಿ ಹೃದಯಘಾತದಿಂದ ನಿಧನರಾಗಿದ್ದಾರೆ ಅವರಿಗೆ 83 ವರ್ಷ ವಯಸ್ಸಾಗಿತ್ತು.
ರಾತ್ರಿ ತೀವ್ರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ರಾತ್ರಿ 11 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಸುಗಮ ಸಂಗೀತ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾಗಿರುವ ಶಿವಮೊಗ್ಗ ಸುಬ್ಬಣ್ಣ ಅವರು 1938 ರಲ್ಲಿ ಶಿವಮೊಗ್ಗದಲ್ಲಿ ಜನಿಸಿದರು. ಅವರು ಮೂಲ ಹೆಸರು ಜಿ.ಸುಬ್ರಹ್ಮಣ್ಯಂ. ನಂತರ ಅವರು ಶಿವಮೊಗ್ಗ ಸುಬ್ಬಣ್ಣ ಎಂದೇ ಹೆಸರುವಾಸಿಯಾದರು. ಶಿವಮೊಗ್ಗ ಜಿಲ್ಲೆಯ ನಗರದವರಾದ ಇವರು ಗಣೇಶ್ ರಾವ್-ರಂಗನಾಯಕಮ್ಮ ದಂಪತಿಯ ಪುತ್ರ.
ವಿದೇಶಗಳಲ್ಲಿಯೂ ಕನ್ನಡದ ಕಂಪು ಹರಿಸಿದ್ದ ಸುಬ್ಬಣ್ಣ, ಆಕಾಶವಾಣಿ ಗಾಯಕರಾಗಿ ಆಯ್ಕೆಯಾಗಿದ್ದ ಅವರು ನಾಟಕಕಾರ ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಹಿನ್ನೆಲೆ ಗಾಯಕರಾಗಿ ಪ್ರವೇಶಿಸಿದರು. ಚಂದ್ರಶೇಖರ ಕಂಬಾರರ ‘ಕಾಡು ಕುದುರೆ’ ಚಿತ್ರದ ಹಾಡಿಗಾಗಿ ರಜತ ಕಮಲ ರಾಷ್ಟ್ರ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಅವರಾಗಿದ್ದರು.
‘ಬಾರಿಸು ಕನ್ನಡ ಡಿಂಡಿಮವ,’ಕೋಡಗನ ಕೋಳಿ ನುಂಗಿತ್ತಾ..’, ‘ಅಳಬೇಡಾ ತಂಗಿ ಅಳಬೇಡ…’ ‘ಬಿದ್ದೀಯಬ್ಬೇ ಮುದುಕಿ..’ ಹಾಡುಗಳು ಇವರ ಗಾಯನದ ಗೀತೆಗಳಲ್ಲಿ ಅತ್ಯಂತ ಜನಪ್ರಿಯವಾದಂಥವು.
1985ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1988ರಲ್ಲಿ ಕರ್ನಾಟಕ ಸಂಗೀತ ಅಕಾಡೆಮಿ ಪುರಸ್ಕಾರ, 1999ರಲ್ಲಿ ಸಂತ ಶಿಶುನಾಳ ಷರೀಫ ಪ್ರಶಸ್ತಿ ಪಡೆದಿದ್ದ ಶಿವಮೊಗ್ಗ ಸುಬ್ಬಣ್ಣರಿಗೆ ಕುವೆಂಪು ವಿಶ್ವವಿದ್ಯಾಲಯ 2008ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಬೆಂಗಳೂರು ಗಾಯನ ಸಮಾಜ 2003ರಲ್ಲಿ ವರ್ಷದ ಕಲಾವಿದ ಪ್ರಶಸ್ತಿ ನೀಡಿತ್ತು.
ನೂರಾರು ಧ್ವನಿ ಸುರುಳಿಗಳ ಮೂಲಕ ನಾಡಿನ ಮನೆ ಮನೆಗಳನ್ನು ತಲುಪಿದ್ದ ಶಿವಮೊಗ್ಗ ಸುಬ್ಬಣ್ಣ ಅಮೆರಿಕ, ಸಿಂಗಾಪುರ ಮುಂತಾದ ದೇಶಗಳಲ್ಲಿಯೂ ಕಾರ್ಯಕ್ರಮ ನೀಡುವ ಮೂಲಕ ಕನ್ನಡದ ಕಂಪು ಪಸರಿಸಿದ್ದರು.