ಶಿವಮೊಗ್ಗ : ಹಿಜಾಬ್ Vs ಕೇಸರಿ ಶಾಲು ವಿವಾದ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಈ ಮಧ್ಯೆ ಶಿವಮೊಗ್ಗ ನಗರದ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗುಂಪು ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಿದ್ದಾರೆ ಎನ್ನಲಾದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳು ಕೇಸರಿ ಶಾಲು ಮತ್ತು ಹಿಜಾಬ್ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದರೆ ನೋಡ ನೋಡುತ್ತಿದ್ದಂತೆ ಧ್ವಜಸ್ಥಂಭ ಏರಿದ ವಿದ್ಯಾರ್ಥಿಯೊಬ್ಬ ಕೇಸರಿ ಧ್ವಜವನ್ನು ಹಾರಿಸಿದ್ದಾನೆ. ಅಲ್ಲಿಯೇ ಇದ್ದ ಪೊಲೀಸರು ಈ ದುರ್ಘಟನೆಯನ್ನು ತಡೆಯಲು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಶಿವಮೊಗ್ಗದಲ್ಲಿ 2 ದಿನ ನಿಷೇಧಾಜ್ಞೆ
ಶಿವಮೊಗ್ಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಎರಡು ದಿನಗಳ ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಿಕಾರಿಪುರ ಪಟ್ಟಣದಲ್ಲಿ ಉದ್ರಿಕ್ತ ಯುವಕರ ಗುಂಪಿನಿಂದ ಕಲ್ಲು ತೂರಾಟ ನಡೆದು, ಬಸ್ನ ಗಾಜುಗಳು ಪುಡಿಪುಡಿಯಾಗಿವೆ. ಶಿಕಾರಿಪುರ ಪಟ್ಟಣದ ಜೂನಿಯರ್ ಕಾಲೇಜ್ ಮುಂಭಾಗ ಘಟನೆ ನಡೆದಿದೆ. ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಾಲಾ- ಕಾಲೇಜುಗಳಿಗೆ ರಜೆ ಸಹ ಘೋಷಣೆ ಘೋಷಿಸಲಾಗಿದೆ. ಈ ಬಗ್ಗೆ ಶಿವಮೊಗ್ಗ ತಹಶೀಲ್ದಾರ್ ಎನ್.ಜೆ.ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಶಿಕ್ಷಣ ಸಚಿವರ ಪ್ರತಿಕ್ರಿಯೆ : ಶಿವಮೊಗ್ಗದಲ್ಲಿ ನಡೆದ ಘಟನೆ ಸಂಬಂಧ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ನಾಗೇಶ್, ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದರೆ, ಅದು ಖಂಡನೀಯ. ಅಲ್ಲಿನ ಅಧಿಕಾರಿಗಳಿಂದ ವರದಿ ತರಿಸಿಕೊಂಡು ತೀರ್ಮಾನ ಮಾಡ್ತೇವೆ. ಇಂಥ ಘಟನೆಗಳಿಂದ ಮಕ್ಕಳು ಖಂಡಿತ ಆತಂಕಕ್ಕೆ ಒಳಗಾಗುತ್ತಾರೆ ಎಂದರು.