ಶಿವಮೊಗ್ಗದ ಹಿಂಸಾಚಾರ ಘಟನೆ ಹೈಕೋರ್ಟ್‌ ಉಸ್ತುವಾರಿಯಲ್ಲಿ ತನಿಖೆಗೆ ಸೌಹಾರ್ದತೆಗಾಗಿ ಕರ್ನಾಟಕ ಆಗ್ರಹ

ಬೆಂಗಳೂರು: ಶಿವಮೊಗ್ಗ ಜಿಲ್ಲೆಯಲ್ಲಿ ಕೊಲೆಯಾದ ಬಜರಂಗದಳದ ಕಾರ್ಯಕರ್ತ ಹರ್ಷ ಶವಯಾತ್ರೆ ಮೆರವಣಿಗೆಯಲ್ಲಿ ಸಂಭವಿಸಿದ ದಾಂಧಲೆ, ಹಿಂಸಾಚಾರಗಳು ಜನರಲ್ಲಿ ಆತಂಕವವನ್ನು ಸೃಷ್ಠಿಸಿದೆ. ಕೊಲೆ, ಹಿಂಸಾಚಾರ ಮಾರ್ಗ ಅನುಸರಿಸುವುದು ಅತ್ಯಂತ ಅಪಾಯಕಾರಿಯಾದ್ದು ಎಂದು ಖಂಡಿಸಿರುವ ʻಸೌಹಾರ್ದತೆಗಾಗಿ ಕರ್ನಾಟಕʼವು ಕರ್ನಾಟಕದ ಉಚ್ಙ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಹೈಕೋರ್ಟಿನ ಹಾಲಿ ನ್ಯಾಯಾಧೀಶರ ಉಸ್ತುವಾರಿಯಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕೋರಿದೆ.

ಸೋಮವಾರ(ಫೆ.21)ದಂದು ನಡೆದ ಶವಯಾತ್ರೆ ಮೆರವಣಿಗೆಯಲ್ಲಿ ಸಂಭವಿಸಿದ ದಾಂಧಲೆ ಮತ್ತು ಹಿಂಸಾಚಾರದ ಘಟನೆಗಳು ಅವಲೋಕಿಸಿದರೆ, ಸರಕಾರದ ಜಿಲ್ಲಾಡಳಿತ ಸಂಪೂರ್ಣ ವೈಫಲ್ಯತೆ ಎದ್ದು ಕಾಣುತ್ತದೆ. ಮಾತ್ರವಲ್ಲ, ಅಂತಹ ದಾಳಿ, ಆಸ್ತಿ ನಾಶ, ಸಾರ್ವಜನಿಕರ ವಸ್ತುಗಳ ಲೂಟಿಗಳು ಹಿರಿಯ ಜಿಲ್ಲಾ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಅವರ ಸಮ್ಮುಖದಲ್ಲಿಯೇ ಸಂಭವಿಸಿವೆ. ಬಜರಂಗದಳ ಮತ್ತು ಸಂಘಪರಿವಾರದ ಅನೇಕರು ಪ್ರಚೋದನಾತ್ಮಕವಾಗಿ ವರ್ತಿಸಿದರೂ, ಅದನ್ನು ನಿಯಂತ್ರಿಸುವ ಯಾವ ಪ್ರಯತ್ನಗಳು ಮಾಡದಿರುವುದು ಸ್ಪಷ್ಟವಾಗಿದೆ.

ಹಿಜಾಬ್-ಕೇಸರಿ ಶಾಲು ವಿವಾದ ಹಿನ್ನಲೆಯಲ್ಲಿ ಉದ್ರಿಕ್ತ ಪರಿಸ್ಥಿತಿಯ ವಾತಾವರಣ ಇರುವಾಗ ಅಂತ್ಯಕ್ರಿಯೆ ಮೆರವಣಿಗೆಗೆ ಅನುಮತಿ ಇರಲಿಲ್ಲ. ಜಿಲ್ಲೆಯಲ್ಲಿಯೂ ನಿಷೇಧಾಜ್ಞೆ 144 ಇದ್ದಾಗಲೂ ಅದನ್ನು ಉಲ್ಲಂಘಿಸಿ ಬಿಜೆಪಿ ನಾಯಕರುಗಳ ಸಮ್ಮುಖದಲ್ಲಿಯೇ ಮೆರವಣಿಗೆ ನಡೆದಿದೆ. ಈ ಸಂದರ್ಭದಲ್ಲಿ ಸರ್ಕಾರದ ಬಹುತೇಕ ಆಡಳಿತ ಇದ್ದ ಸಂದರ್ಭದಲ್ಲಿಯೇ ಘಟನೆಗಳು ನಡೆದಿವೆ. ಆದರೂ ಸಹ ಪೊಲೀಸರು ಮೂಕಪ್ರೇಕ್ಷಕರಾಗಿ ನಿಷ್ಕ್ರಿಯರಾಗಿ ನಿಂತಿದ್ದಾದರೂ ಯಾಕೆ? ಎನ್ನುವ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ ಎಂದು ಸೌಹಾರ್ದತೆಗಾಗಿ ಕರ್ನಾಟಕ ತಿಳಿಸಿದೆ.

ಇಂತಹ ಹಿಂಸಾಚಾರದ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿರಲಿಲ್ಲವೇ? ಗೃಹ ಸಚಿವರ ಜಿಲ್ಲೆಯಲ್ಲೇ ಕಾನೂನು ಕುಸಿದಿರುವ ಪ್ರಕರಣಗಳು ಹೆಚ್ಚುತ್ತಿರುವುದು ಗಂಭೀರವಾದ ವಿಚಾರವಲ್ಲವೇ? ಇವೆಲ್ಲವನ್ನು ಪರಿಶೀಲಿಸಿದರೆ ಬಿಜೆಪಿ ಮತ್ತು ಸಂಘಪರಿವಾರ ಸರಕಾರದ ಆಡಳಿತವನ್ನು ದುರುಪಯೋಗ ಪಡಿಕೊಳ್ಳುತ್ತಿರುವುದು ಕಾಣುತ್ತದೆ. ಮತೀಯ ಶಕ್ತಿಗಳು ಶಸ್ತ್ರಾಸ್ತ್ರಗಳನ್ನು ಹಿಡಿದು ಹೂಂಕರಿಸಿ ಬೆದರಿಕೆಯೊಡ್ಡುತ್ತಿವೆ, ಆದರೂ ಕ್ರಮವಿಲ್ಲ. ಶಿವಮೊಗ್ಗದಲ್ಲಿನ ದಾಂಧಲೆ ಘಟನೆಯಲ್ಲಿ ಸರಕಾರದ ವಿಫಲ ಪಾತ್ರದ ಬಗ್ಗೆ ಅನುಮಾನ ಮೂಡುತ್ತದೆ ಎಂದು ಸೌಹಾರ್ದತೆಗಾಗಿ ಕರ್ನಾಟಕ ಸಮನ್ವಯಕರಾದ ಎಸ್.ವೈ.ಗುರುಶಾಂತ್, ಕೆ.ಎಸ್.ವಿಮಲಾ, ಗೋಪಾಲಕೃಷ್ಣ ಅರಳಹಳ್ಳಿ ಪ್ರಶ್ನೆ ಮಾಡಿದ್ದಾರೆ.

ಈ ಘಟನೆಗಳ ಹಿಂದೆ ಯಾರೇ ಆಗಿರಲಿ, ಎಷ್ಟೇ ದೊಡ್ಡವರಾದರೂ ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಸ್ಪಷ್ಟ ಸಂದೇಶದ ಮೂಲಕ ದಿಟ್ಟ ಕ್ರಮ ಕೈಗೊಳ್ಳಬೇಕು. ರಾಜಕೀಯ ದುರ್ಲಾಭಗಳಿಗಾಗಿ ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಕದಡುವ, ಶಾಸನಬದ್ಧ ಆಡಳಿತವನ್ನು ಧಿಕ್ಕರಿಸುವ ಕೃತ್ಯಗಳಿಗೆ ಕೆಲವು ಶಕ್ತಿಗಳು ತೊಡಗಿರುವುದನ್ನು ಶಾಂತಿಪ್ರಿಯ ಜನತೆ ವಿರೋಧಿಸಬೇಕು. ಕನ್ನಡ ನಾಡಿನ ಶಾಂತಿ, ಸೌಹಾರ್ದತೆ-ಸಾಮರಸ್ಯವನ್ನು ಕಾಪಾಡಬೇಕೆಂದು ಯಾವುದೇ ಶಕ್ತಿಗಳ ಪ್ರಚೋದನೆಗೆ ಒಳಗಾಗಬಾರದೆಂದು ಜನತೆಯಲ್ಲಿ ಸೌಹಾರ್ದ ಕರ್ನಾಟಕವು ಮನವಿ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *