ನಿಷೇಧಾಜ್ಞೆ ನಡುವೆಯೂ ಭುಗಿಲೆದ್ದ ಹಿಂಸಾಚಾರ

ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದಿಂದ ಭಾನುವಾರ ರಾತ್ರಿ ಪ್ರಕ್ಷುಬ್ಧಗೊಂಡಿದ್ದ ಶಿವಮೊಗ್ಗ ನಗರದಲ್ಲಿ, ಸೋಮವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕ್ಲಾರ್ಕ್ ಪೇಟೆ, ಆಜಾದ್ ನಗರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ ಸೇರಿದಂತೆ ಹಲವು ಹಿಂಸಾತ್ಮಕ ಘಟನೆಗಳು ವರದಿಯಾಗಿವೆ.

ಸೀಗೆಹಟ್ಟಿಯಿಂದ ಹೊರಟ ಮೆರವಣಿಗೆ ಸಿದ್ದಯ್ಯ ರಸ್ತೆಗೆ ಬರುತ್ತಿದ್ದಂತೆ ಬೇರೆ ಬೀದಿಗಳಿಂದ ಕಲ್ಲುಗಳು ತೂರಿಬಂದವು. ಪ್ರತಿಯಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರೂ ಕಲ್ಲು ತೂರಿದರು. ಟಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಗಾಂಧಿ ಬಜಾರ್ ಮಸೀದಿ ಬಳಿ ಬಂದಾಗ ಉದ್ರಿಕ್ತ ಗುಂಪು ಮಸೀದಿಗಳ ಮೇಲೆ ಕಲ್ಲು ತೂರಾಟ ನಡೆಸಿತು. ಕ್ಷಣ ಮಾತ್ರದಲ್ಲಿ ಹಲವು ಬೀದಿಗಳು ರಣರಂಗದಂತೆ ಭಾಸವಾದವು. ರಸ್ತೆ ಬದಿ ನಿಂತಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಗುತ್ತಿದ್ದು, ಕಲ್ಲು ತೂರಾಟದಿಂದ ಅಂಗಡಿ, KSRTC ಬಸ್​, ಹಲವು ಮನೆಗಳಿಗೆ ಹಾನಿ ಉಂಟಾಗಿದೆ. ಸಿಕ್ಕ ಸಿಕ್ಕ ಕಡೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ಹತೋಟಿಗೆ ತಂದರು. ಶಿವಮೊಗ್ಗಕ್ಕೆ ಐಜಿಪಿ ತ್ಯಾಗರಾಜನ್​​​​ ಆಗಮಿಸಿದ್ದು, ನಿಷೇಧಾಜ್ಞೆ ನಡುವೆಯೂ ಹಿಂಸೆ ಭುಗಿಲೆದ್ದಿದೆ.

ಇಬ್ಬರ ಬಂಧನ : ಹರ್ಷ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎಂದು ಎಡಿಜಿಪಿ ಮುರುಗನ್ ತಿಳಿಸಿದ್ದಾರೆ.ಈ ಪ್ರಕರಣದಲ್ಲಿ ಭಾಗಿಯಾಗಿರುವವರ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಳ್ಳುತ್ತಿದ್ದು, ಉಳಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗಕ್ಕೆ ತೆರಳಿ ಅಲ್ಲಿ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಅವಲೋಕಿಸಿರುವ ಮುರುಗನ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಶಿವಮೊಗ್ಗ ನಗರದಲ್ಲಿ ಶಾಂತಿ-ಸುವ್ಯವಸ್ಥೆ ಹದಗೆಡಲು ಬಿಡುವುದಿಲ್ಲ ಎಂದು ತಿಳಿಸಿದರು.

ಪೊಲೀಸರು ಹಾಗೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕೆಲವೊಂದು ಕಡೆ ಸಣ್ಣಪುಟ್ಟ ಘಟನೆಗಳಾಗಿವೆ. ಆ ಸ್ಥಳಗಳಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಹರ್ಷ ಅವರ ಪಾರ್ಥಿವ ಶರೀರದ ಮೆರವಣಿಗೆ ಸಂದರ್ಭದಲ್ಲಿ ಕಲ್ಲುತೂರಾಟ ನಡೆಸಿ ಆಸ್ತಿಪಾಸ್ತಿಗೆ ಧಕ್ಕೆ ಮಾಡಿದವರು ಯಾರೇ ಆದರೂ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

Donate Janashakthi Media

Leave a Reply

Your email address will not be published. Required fields are marked *