- ಆರ್.ಆರ್. ನಗರಕ್ಕೆ ಅ. 8ಕ್ಕೆ ಅಭ್ಯರ್ಥಿ ಘೋಷಣೆ
ಬೆಂಗಳೂರು: ದಿವಂಗತ ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವ ಶಿರಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಇವತ್ತು ನಡೆದ ಜೆಡಿಎಸ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆ ಬಳಿಕ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರು ಶಿರಾ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿದರು. ದಿವಂಗತ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರೇ ಅಭ್ಯರ್ಥಿ. ಇದರಲ್ಲಿ ಯಾವುದೇ ಎರಡು ಮಾತಿಲ್ಲ, ಗೊಂದಲ ಇಲ್ಲ ಎಂದು ಗೌಡರು ತಿಳಿಸಿದರು. ಆರ್. ಆರ್. ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಮೂವರು ಯುವಕರ ಹೆಸರು ಚಾಲನೆಯಲ್ಲಿವೆ. ಅಕ್ಟೋಬರ್ 8ಕ್ಕೆ ಸಭೆ ಸೇರಿ ನಿರ್ಧಾರ ಮಾಡುತ್ತೇವೆ. ಸೋಲು ಗೆಲುವು ಬೇರೆ. ಆದರೆ, ಆರ್.ಆರ್. ನಗರಕ್ಕೆ ಅಭ್ಯರ್ಥಿಯನ್ನಂತೂ ಹಾಕೇಹಾಕುತ್ತೇವೆ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.
ಕಳೆದ ಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಸತ್ಯನಾರಾಯಣ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಕೆಲ ತಿಂಗಳ ಹಿಂದೆ ಅವರ ಮೃತ್ಯುವಾದ್ದರಿಂದ ಶಿರಾ ಕ್ಷೇತ್ರ ತೆರವಾಗಿತ್ತು. ಈಗ ಉಪಚುನಾವಣೆಗೆ ಶಿರಾದಿಂದ ಜೆಡಿಎಸ್ ಟಿಕೆಟ್ ಪಡೆಯಲು ಹಲವರು ಪ್ರಯತ್ನಿಸಿದ್ದರು. ಅಂತಿಮವಾಗಿ ಸತ್ಯನಾರಾಯಣ ಅವರ ಕುಟುಂಬದ ಒಬ್ಬ ಸದಸ್ಯರು ಅಥವಾ ಗೌರಿಶಂಕರ್ ಅವರ ಸಹೋದರಿನಿಗೆ ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಈಗ ಅಂತಿಮವಾಗಿ ಸತ್ಯನಾರಾಯಣ ಅವರ ಕುಟುಂಬದ ಸದಸ್ಯರಿಗೆ ಜೆಡಿಎಸ್ ಟಿಕೆಟ್ ಒಲಿದಿದೆ. ಸತ್ಯನಾರಾಯಣ ಅವರ ಸಾವಿನ ಅನುಕಂಪದ ಅಲೆಯ ಪ್ರಯೋಜನ ಪಡೆಯಲು ಜೆಡಿಎಸ್ ಈ ತಂತ್ರ ಉಪಯೋಗಿಸಿರಬಹುದು. ಆದರೆ, ಸತ್ಯನಾರಾಯಣ ಅವರ ಮಗ ಈ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿ ಗುರುತಿಸಿಕೊಂಡಿದ್ದಾರೆ. ಹಾಗಾಗಿ, ಅವರ ಕುಟುಂಬಕ್ಕೆ ಟಿಕೆಟ್ ನೀಡಿರುವುದಾಗಿ ಗೌಡರು ಇವತ್ತು ಹೇಳಿದ್ದು ಗಮನಾರ್ಹ.
ಅಮ್ಮಾಜಮ್ಮಗೆ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಆಸಕ್ತಿ ಇಲ್ಲ ಎಂದು ಕೆಲವರು ಹೇಳುತ್ತಾರೆ. ಅಂಥದ್ದೆಲ್ಲಾ ಕಲ್ಪನೆ ಯಾರಿಗೂ ಬೇಡ. ಅವರ ಸ್ಪರ್ಧೆಗೆ ಎಲ್ಲರೂ ಒಪ್ಪಿದ್ದಾರೆ. ಅವರ ಮಗ ಮತ್ತು ಪಕ್ಷದ ಕಾರ್ಯಕರ್ತರು ಒಪ್ಪಿದ್ದಾರೆ. ಅವರ ಮಗ ಬಹಳ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ ಎಂದು ದೇವೇಗೌಡರು ಹೇಳಿದರು.
ಶಿರಾ ಕ್ಷೇತ್ರದಲ್ಲಿ ನಮ್ಮ ಪಕ್ಷದವರನ್ನ ಕಾಂಗ್ರೆಸ್ ಮತ್ತು ಬಿಜೆಪಿಯವರು ಕರೆದುಕೊಂಡಿದ್ದಾರೆ. ಆ ಬಗ್ಗೆ ಈಗ ನಾನು ಮಾತನಾಡುವುದಿಲ್ಲ. ಜೆಡಿಎಸ್ ಬಗ್ಗೆ ಯಾರಿಗೂ ಅನುಕಂಪ ಬೇಡ. ಆ ಪಕ್ಷದವರು ಗೆಲ್ಲೋಕೆ ಏನು ಬೇಕೋ ಅದನ್ನ ಮಾಡುತ್ತಿದ್ಧಾರೆ. ನಾವು ನಮ್ಮ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಮಾಜಿ ಪ್ರಧಾನಿಗಳು ಸ್ಪಷ್ಟಪಡಿಸಿದರು.
ಇನ್ನು, ಜೆಡಿಎಸ್ ಪಕ್ಷದ ಬಗ್ಗೆ ಸಿದ್ದರಾಮಯ್ಯ ಮಾಡಿರುವ ಟೀಕೆಗೆ ದೇವೇಗೌಡರು ಇದೇ ವೇಳೆ ತಿರುಗೇಟು ನೀಡಿದರು. ಸಿದ್ದರಾಮಯ್ಯ ದೊಡ್ಡ ಸ್ಥಾನದಲ್ಲಿ ಇದ್ದಾರೆ. ಅವರು ಎಲ್ಲಿಂದ ಬಂದರು. ಹೇಗೆ ಬಂದರು ಎಂದು ನಾನು ಚರ್ಚೆ ಮಾಡುವುದಿಲ್ಲ. ಅವರು ದೊಡ್ಡವರು. ಅವರಿಗೆ ಶಕ್ತಿ ಇದೆ. ಜನರು ಅವರ ಮಾತನ್ನ ಹೇಗೆ ಸ್ವೀಕಾರ ಮಾಡತು್ತಾರೆ, ತಿರಸ್ಕಾರ ಮಾಡುತ್ತಾರೆ ಅದು ಜನರಿಗೆ ಬಿಟ್ಟ ವಿಚಾರ ಎಂದು ಹೆಚ್.ಡಿ. ದೇವೇಗೌಡ ತಿಳಿಸಿದರು.
ಹಾಗೆಯೇ, ವಿಧಾನಪರಿಷತ್ನ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳಲು ಪ್ರಯತ್ನ ಮಾಡುವುದಾಗಿಯೂ ಗೌಡರು ಈ ಸಂದರ್ಭದಲ್ಲಿ ಹೇಳಿದರು.