ಶಿವಮೊಗ್ಗ: ಜಿಲ್ಲೆಯ ಟಿಪ್ಪುನಗರದಲ್ಲಿರುವ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳಿಗೆ ”ಪಾಕಿಸ್ತಾನಕ್ಕೆ ಹೋಗಿ” ಎಂದು ಹೇಳಿದ್ದಾಗಿ ಆರೋಪಿಸಲಾಗಿದೆ. ಶಿಕ್ಷಕಿಯ ವಿರುದ್ಧ ದೂರು ದಾಖಲಾಗಿದ್ದು, ಶಿಕ್ಷಣ ಇಲಾಖೆ ಶಿಕ್ಷಕಿಯನ್ನು ವರ್ಗಾವಣೆ ಮಾಡಿದೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ನೇಹಾ ಪಬ್ಲಿಕ್ ಸ್ಕೂಲ್‌ನ ಶಿಕ್ಷಕಿಯೊಬ್ಬರು ತಮ್ಮ ಮುಸ್ಲಿಂ ಸಹಪಾಠಿಯ ಕಪಾಳಕ್ಕೆ ಹೊಡೆಯುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ಅವರ ವಿರುದ್ಧ ಸೆಕ್ಷನ್ 323, 504 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಜೆಡಿಎಸ್ ಮುಖಂಡ ಎ. ನಜ್ರುಲ್ಲಾ ಅವರು ಈ ಬಗ್ಗೆ ದೂರು ದಾಖಲಿಸಿದ್ದಾರೆ. ಆರೋಪಿಯ ಶಿಕ್ಷಕಿಯನ್ನು ಮಂಜುಳಾ ದೇವಿ ಎಂದು ಗುರುತಿಸಲಾಗಿದೆ. ಶಿಕ್ಷಕಿಯು 5ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಕೋಮು ಹೇಳಿಕೆ ನೀಡಿದ್ದಾಗಿ ಆರೋಪಿಸಲಾಗಿದ್ದು, ಶಿಕ್ಷಣ ಇಲಾಖೆಯು ಅವರ ವಿರುದ್ಧ ಇಲಾಖಾ ವಿಚಾರಣೆ ಪ್ರಾರಂಭಿಸಿದೆ, ಜೊತೆಗೆ ಅವರನ್ನು ವರ್ಗಾವಣೆ ಮಾಡಿದೆ.
ಇದನ್ನೂ ಓದಿ: ‘ನೀವೇಕೆ ಪಾಕಿಸ್ಥಾನಕ್ಕೆ ಹೋಗಿಲ್ಲ?’ | ಮುಸ್ಲಿಂವಿದ್ಯಾರ್ಥಿಗಳ ವಿರುದ್ಧ ಕೋಮು ಹೇಳಿಕೆ ನೀಡಿದ ಮತ್ತೊಬ್ಬ ಶಿಕ್ಷಕಿ!
ಘಟನೆಯು ಆಗಸ್ಟ್ 31ರ ಗುರುವಾರ ನಡೆದಿದೆ ಎಂದು ಜಿಲ್ಲೆಯ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಜ್ರುಲ್ಲಾ ಅವರು ಹೇಳಿದ್ದಾರೆ. “ಶಿಕ್ಷಕಿ ಮಂಜುಳಾ ದೇವಿ ಅವರು ಪಾಠ ಮಾಡುತ್ತಿದ್ದಾಗ ಘಟನೆ ನಡೆದಿದೆ. ತರಗತಿ ನಡೆಯುತ್ತಿರುವಾಗ ಮುಸ್ಲಿಂ ಸಮುದಾಯದ ಇಬ್ಬರು ವಿದ್ಯಾರ್ಥಿಗಳು ಅಶಿಸ್ತಿನ ವರ್ತನೆ ತೋರಿದ್ದರು. ಈ ವೇಳೆ ಅವರ ಧರ್ಮವನ್ನು ಉಲ್ಲೇಖಿಸಿ ಶಿಕ್ಷಕಿಯು ಗದರಿಸಿದ್ದಾರೆ” ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಶಿಕ್ಷಕಿಯು ವಿದ್ಯಾರ್ಥಿಗಳೊಂದಿಗೆ, ‘ಇದು ನಿಮ್ಮ ದೇಶವಲ್ಲ; ಇದು ಹಿಂದೂಗಳ ದೇಶ. ನೀವು ಪಾಕಿಸ್ಥಾನಕ್ಕೆ ಹೋಗಬೇಕು. ನೀವು ಎಂದೆಂದಿಗೂ ನಮ್ಮ ಗುಲಾಮರು’ ಎಂದು ಹೇಳಿದ್ದಾಗಿ ನಜ್ರುಲ್ಲಾ ಅವರು ದೂರಿನಲ್ಲಿ ಹೇಳಿದ್ದಾರೆ.
ಘಟನೆ ಕುರಿತು ವಿದ್ಯಾರ್ಥಿಗಳು ಪೋಷಕರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಪೋಷಕರು ಸ್ಥಳೀಯ ಮುಖಂಡರಿಗೆ ತಿಳಿಸಿದ್ದಾರೆ. ನಜ್ರುಲ್ಲಾ ನೀಡಿದ ದೂರಿನ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ನಾಗರಾಜ್ ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ.
ಘಟನೆಗೆ ಪ್ರತಿಕ್ರಿಯಿಸಿದ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, “ಆರೋಪಿ ಶಿಕ್ಷಕಿ ಮಂಜುಳಾ ದೇವಿ ಅವರನ್ನು ವರ್ಗಾವಣೆ ಮಾಡಿ ಕ್ರಮ ಕೈಗೊಂಡಿದೆ. ಇಲಾಖಾ ವಿಚಾರಣೆ ನಡೆಯುತ್ತಿದೆ. ಆದರೆ, ಮಂಜುಳಾ ದೇವಿ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ” ಎಂದು ಹೇಳಿದೆ.
ವಿಡಿಯೊ ನೋಡಿ: ಮುಂದಿನ ಕೆಲವು ವರ್ಷಗಳಲ್ಲಿ ಭಾರತ 3ನೇ ಆರ್ಥಿಕ ದೇಶವಾಗುತ್ತದೆಯೇ? | Janashakthi Media