ವೈದ್ಯ ವಿದ್ಯಾರ್ಥಿನಿ ಮೇಲೆ ಸಹಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ

ಶಿವಮೊಗ್ಗ: ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಾಮಾನ್ಯ ಶಸ್ತ್ರ ಚಿಕಿತ್ಸಾ ವಿಭಾಗದ ಸಹಪ್ರಾಧ್ಯಾಪಕ ವೈದ್ಯಕೀಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಈ ಸಂಬಂಧ ಸಹಪ್ರಾಧ್ಯಾಪಕನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಈ ಆರೋಪ ಕೇಳಿಬಂದ ಬಳಿಕ ಜಿಲ್ಲಾ ಮಟ್ಟದ ದೂರು ನಿವಾರಣಾ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಅವರು ಕಾಲೇಜಿಗೆ ತೆರಳಿ ಸಂತ್ರಸ್ಥೆಯನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದರು. ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ವರದಿ ನೀಡಲಾಗಿದ್ದು, ವರದಿ ಬಳಿಕ ಸಹಪ್ರಾಧ್ಯಾಪಕನನ್ನು ಅಮಾನತು ಮಾಡಿ ಇಲಾಖೆ ವಿಚಾರಣೆಗೆ ಆದೇಶಿಸಲಾಗಿದೆ.

ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದ ನಂತರ ನಿರಾಕ್ಷೇಪಣಾ ಪತ್ರ ಪಡೆಯಲು ಹೋಗಿದ್ದ ಸಂದರ್ಭದಲ್ಲಿ ಸಹ ಪ್ರಾಧ್ಯಾಪಕ ಅಸಭ್ಯವಾಗಿ ವರ್ತಿಸಿ ಮಾನಸಿಕ, ದೈಹಿಕ ಕಿರುಕುಳ ನೀಡಿದ ಬಗ್ಗೆ ವಿದ್ಯಾರ್ಥಿನಿ ದೂರು ನೀಡಿದ್ದರು. ಈ ಪ್ರಕರಣವನ್ನು ಮುಚ್ಚಿ ಹಾಕಲು ಕಾಲೇಜಿನ ಆಡಳಿತ ಮಂಡಳಿಯವರು ಪ್ರಯತ್ನಿಸಿದ್ದರು. ಲೈಂಗಿಕ ಕಿರುಕುಳ ನಡೆದಿಲ್ಲ. ತಪ್ಪು ಗ್ರಹಿಕೆಯಿಂದ ವಿವಾದ ಉಂಟಾಗಿದೆ. ವಿದ್ಯಾರ್ಥಿನಿ ದೂರು ವಾಪಸ್ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಪೀಪಲ್ಸ್ ಲಾಯರ್ಸ್ ಗೀಲ್ಡ್ ಸದಸ್ಯರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರಿಂದ ಇದೀಗ ಸಹಪ್ರಾಧ್ಯಾಪಕನನ್ನು ಅಮಾನತು ಮಾಡಲಾಗಿದೆ.

ಸಿಮ್ಸ್ ನಲ್ಲಿ ಲೈಂಗಿಕ ಕಿರುಕಳ ಆರೋಪಗಳು ಸಾಕಷ್ಟು ಸಲ ಕೇಳಿಬಂದಿದೆ. ಅಲ್ಲಿನ ಸಿಬ್ಬಂದಿಗಳೇ ಈ ಸಂಬಂಧ ಹಲವರ ಬಳಿ ದೂರು ಹೇಳಿಕೊಂಡಿದ್ದಾರೆ ಎಂಬ ಆರೋಪವಿದೆ. ಮಹಿಳಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ದೂರು ದುಮ್ಮಾನಗಳನ್ನು ಆಲಿಸಲು ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚನೆಯ ಅಗತ್ಯವಿದೆ ಎಂದು ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *