ಶಿವಮೊಗ್ಗ: ದಲಿತ ಸಮುದಾಯದ ಯುವತಿಯನ್ನು ವಿವಾಹವಾದ ಜೋಗಿ ಸಮುದಾಯದ ಯುವಕನ ಕುಟುಂಬಕ್ಕೆ ಅದೇ ಸಮುದಾಯದ ಕೆಲ ಮುಖಂಡರು ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ತಾಲೂಕಿನ ಕುಮ್ಸಿ ಹೋಬಳಿಯ ಹೊರಬೈಲು ಗ್ರಾಮದಲ್ಲಿ ವರದಿಯಾಗಿದೆ. ಈ ಬಗ್ಗೆ ಪತಿ-ಪತ್ನಿ ದೂರು ದಾಖಲಿಸಿದ್ದು, ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿದೆ. ಅಲ್ಲದೆ ಕುಮ್ಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯುವಕನ ಮದುವೆಯ ಬಗ್ಗೆ ಅಸಮಾಧಾನಗೊಂಡಿದ್ದ ಸಮುದಾಯದ ಮುಖಂಡರು ತಮ್ಮ ಸಮುದಾಯದ ಜನರು ಯುವಕನ ಕುಟುಂಬದೊಂದಿಗೆ ಮಾತನಾಡದಂತೆ ತೀರ್ಮಾನ ಕೈಗೊಂಡಿದ್ದಾರೆ. ಒಂದು ವೇಳೆ ಈ ನಿರ್ಧಾರಕ್ಕೆ ಅವಿಧೇಯರಾದರೆ 1,000 ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಸಿದ್ದಾರೆ. ಅಷ್ಟೆ ಅಲ್ಲದೆ ತೀರ್ಮಾನಕ್ಕೆ ಅವಿಧೇಯರಾದರವರ ಬಗ್ಗೆ ಮಾಹಿತಿ ನೀಡುವವರಿಗೆ 500 ರೂಪಾಯಿ ಬಹುಮಾನ ನೀಡುವ ಬಗ್ಗೆ ತೀರ್ಮಾನಿಸಿದ್ದಾರೆ. ದಲಿತ
ಇದನ್ನೂ ಓದಿ: ಕಾಂಗ್ರೆಸ್‌ನಿಂದ ಮಣಿಪುರ to ಮುಂಬೈವರೆಗೆ 6 ಸಾವಿರ ಕಿ.ಮೀ. ‘ಭಾರತ್ ನ್ಯಾಯ್ ಯಾತ್ರೆ’!
ಹೊರಬೈಲು ಗ್ರಾಮದಲ್ಲಿ ಸುಮಾರು 80 ಮನೆಗಳಿದ್ದು, ಅದರಲ್ಲಿ 60 ಮನೆಗಳು ಜೋಗಿ ಸಮುದಾಯಕ್ಕೆ ಸೇರಿವೆ. ಪರಸ್ಪರ ಪ್ರೀತಿಸುತ್ತಿದ್ದ ಪ್ರೀತಿ ಮತ್ತು ದಿನೇಶ್ ಅವರು ಸೆಪ್ಟೆಂಬರ್ 10 ರಂದು ವಿವಾಹವಾಗಿದ್ದರು. ನಂತರ ಅವರು ಸೆಪ್ಟೆಂಬರ್ 27 ರಂದು ತಮ್ಮ ವಿವಾಹವನ್ನು ನೋಂದಾಯಿಸಿಕೊಂಡಿದ್ದರು. ಆದರೆ ಆದಿಕರ್ನಾಟಕ ಸಮುದಾಯದ ಹುಡುಗಿಯನ್ನು ಮದುವೆಯಾಗಿದ್ದಕ್ಕೆ ಯುವಕನ ಕುಟುಂಬವನ್ನು ಸಮುದಾಯದ ಮುಖಂಡರು ಬಹಿಷ್ಕರಿಸಿದ್ದಾರೆ. ದಲಿತ
ಈ ಬಗ್ಗೆ ಸಭೆ ನಡೆಸಿದ್ದ ಸಮುದಾಯದ ಮುಖಂಡರು, ಕುಟುಂಬವನ್ನು ಬಹಿಷ್ಕರಿಸಲು ನಿರ್ಧರಿಸಿದ್ದು, ಅವರೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿತಗೊಳಿಸಿದ್ದಾರೆ. ವ್ಯಕ್ತಿಯ ಕುಟುಂಬದೊಂದಿಗೆ ಮಾತನಾಡಿದವರಿಗೆ 1,000 ರೂಪಾಯಿ ದಂಡ ವಿಧಿಸಲು ಮತ್ತು ಅವರೊಂದಿಗೆ ಮಾತನಾಡುವವರನ್ನು ಕಂಡು ಹಿಡಿದವರಿಗೆ 500 ರೂಪಾಯಿಗಳನ್ನು ಬಹುಮಾನ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವರದಿ ಹೇಳಿವೆ.
ಗ್ರಾಮದಲ್ಲಿ ನಡೆಯಲಿರುವ ತಮ್ಮ ಆರಾಧ್ಯದೈವದ ವಾರ್ಷಿಕ ಪೂಜೆಗೆ ಕುಟುಂಬವನ್ನು ದೂರವಿಡುವ ನಿರ್ಧಾರವು ಯುವಕನ ಕುಟುಂಬಿಕರನ್ನು ಚಿಂತೆಗೀಡು ಮಾಡಿದ್ದು, ಪೊಲೀಸ್ ಸಹಾಯ ಕೇಳಿದ್ದು, ಈ ಬಗ್ಗೆ ದೂರು ನೀಡಿದ್ದಾರೆ. ಅಲ್ಲದೆ, ಕುಟುಂಬಕ್ಕೆ ಸಾಮಾಜಿಕ ನ್ಯಾಯ ಒದಗಿಸುವಂತೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರಕಾರಕ್ಕೆ ಡಿಎಸ್‌ಎಸ್ ಸದಸ್ಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ‘ಕೊರೊನಾ ಅಕ್ರಮಗಳ ದಾಖಲೆ ನೀಡಿ’ | ಯತ್ನಾಳ್‌ಗೆ ಸಚಿವ ಖರ್ಗೆ ಮನವಿ
ಈ ಬಗ್ಗೆ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಹಾಲೇಶಪ್ಪ ಮಾತನಾಡಿ, “ಜೋಗಿ ಸಮುದಾಯದ ಕೆಲವರು ನಕಲಿ ಎಸ್‌ಸಿ ಪ್ರಮಾಣ ಪತ್ರ ಪಡೆದು ಸರ್ಕಾರದ ಸವಲತ್ತು, ಸೌಲಭ್ಯ ಪಡೆಯುತ್ತಿದ್ದಾರೆ. ಅವರು ಜೋಗಿ ಸಮುದಾಯಕ್ಕೆ ಎಸ್‌ಸಿ ಸ್ಥಾನ ಪಡೆದು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಬಯಸುತ್ತಾರೆ. ಆದರೆ ಎಸ್‌ಸಿ ಸಮುದಾಯದ ಹುಡುಗಿಯನ್ನು ಸ್ವೀಕರಿಸಲು ಸಿದ್ಧರಿಲ್ಲ. ಇದು ಸ್ವೀಕಾರಾರ್ಹವಲ್ಲ” ಎಂದು ಹೇಳಿದ್ದಾಗಿ TNIE ವರದಿ ಮಾಡಿದೆ.
ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಡಿಎಸ್‌ಎಸ್ ಉಗ್ರ ಹೋರಾಟ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ಮಾತನಾಡಿ, ಕೂಡಲೇ ಪ್ರಕರಣ ದಾಖಲಿಸುವಂತೆ ಈಗಾಗಲೇ ಕುಮ್ಸಿ ಪೊಲೀಸ್ ನಿರೀಕ್ಷಕರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾಗಿ ವರದಿ ಹೇಳಿದೆ.
ವಿಡಿಯೊ ನೋಡಿ: ಘನತೆಯ ಬದುಕು, ಹೋರಾಟದ ಹಾದಿ, ಕಲೆಯ ದಾರಿ – ಕಲಾವಿದರು ಹೋರಾಟಗಾರರ ಮಾತುಕತೆ Janashakthi Media