ಬೆಂಗಳೂರು: ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಶಿಕ್ಷಣದ ಮೇಲೆ ದಾಳಿಗಳು ಹೆಚ್ಚಾಗಿವೆ. ಶಿಕ್ಷಣದ ವ್ಯಾಪಾರೀಕರಣ ತೀವ್ರಗೊಂಡು ತಳಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗಿರುವಾಗ, ಇಂತಹ ವಿಷಮಯ ಸಂಧರ್ಭದಲ್ಲಿ ಅಪ್ರಜಾಸತ್ತತ್ಮಕ ಮತ್ತು ಅವೈಜ್ಞಾನಿಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) ಜಾರಿಗೊಳಿಸಲಾಗಿದೆ.
ಇದರ ನಡುವೆಯೇ, ಕೇಂದ್ರ ಸರ್ಕಾರ ಇದೀಗ ಶಿಕ್ಷಣದ ಸಾಮಾಗ್ರಿಗಳಾದ ಪೆನ್ಸಿಲ್, ಷಾರ್ಪನರ್, ರೈಟಿಂಗ್, ಡ್ರಾಯಿಂಗ್, ಪ್ರಿಂಟಿಂಗ್, ಇಂಕ್, ಪೇಪರ್ ಮೇಲೆ ಶೇ. 18ರಷ್ಟು ಜಿಎಸ್‌ಟಿ ಹಾಗೂ ಚಾರ್ಟ್ಸ್, ಗ್ರಾಫ್ ಪೇಪರ್, ನೋಟ್ ಬುಕ್ ಮೇಲೆ ಶೇ. 12ರಷ್ಟು ಜಿಎಸ್‌ಟಿ ತೆರಿಗೆ ಹೊರೆ ಹಾಕಿರುವುದು ಶಿಕ್ಷಣ ವಿರೋಧಿ ನೀತಿಯಾಗಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ), ರಾಜ್ಯ ಸಮಿತಿ ಖಂಡಿಸಿದೆ.
ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಹಾಗೂ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ. ಕೆ ಅವರು ಇದು ಪರೋಕ್ಷವಾಗಿ-ಪ್ರತ್ಯಕ್ಷವಾಗಿ ಶಿಕ್ಷಣದ ವೆಚ್ಚ ವಿಪರೀತ ಏರಿಕೆ ಮಾಡಲಿದೆ. ತಳಸಮುದಾಯಗಳ ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿಸುವ ಕ್ರಮಗಳಾಗಿವೆ. ಈ ಕೂಡಲೇ ಶಿಕ್ಷಣದ ಸಾಮಾಗ್ರಿಗಳ ಮೇಲೆ ವಿಧಿಸಿರುವ ಲೂಟಿಕೋರ ಜಿಎಸ್‌ಟಿ ತೆರಿಗೆಯನ್ನು ವಾಪಸ್ಸು ಪಡೆಯಬೇಕು ಮತ್ತು ಶಿಕ್ಷಣದ ಸಮಗ್ರ ಅಭಿವೃದ್ದಿಗೆ ಒಟ್ಟು ರಾಷ್ಟ್ರೀಯ ಉತ್ಪನ್ನ ಜಿಡಿಪಿಯ ಶೇ. 6 ಅಥವಾ ಕೇಂದ್ರ ಬಜೆಟ್ಟಿನಲ್ಲಿ ಶೇ. 10ರಷ್ಟು ಹಣವನ್ನು ಮೀಸಲಿಡಬೇಕೆಂದು ಆಗ್ರಹಿಸಿದ್ದಾರೆ.