ಬೆಂಗಳೂರು : 2019-20ರಲ್ಲಿ ಕರ್ನಾಟಕ ಸರಕಾರ ಶಿಕ್ಷಣ ಮತ್ತು ಆರೋಗ್ಯ ಬಾಬ್ತುಗಳ ಮೇಲೆ ಮಾಡಿದ ವೆಚ್ಚ ಒಟ್ಟು ವೆಚ್ಚಗಳ 4.28%. ಇದು ದಕ್ಷಿಣ ಭಾರತದ ನೆರೆಯ ರಾಜ್ಯಗಳಿಗಿಂತ ಬಹಳ ಕಡಿಮೆ ಮಾತ್ರವಲ್ಲ, ವಿಶೇಷ ವಿಧದ ರಾಜ್ಯಗಳನ್ನು ಬಿಟ್ಟು ಉಳಿದ ಸಮಾನ ನೆಲೆಯ ರಾಜ್ಯಗಳ ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಎಂದು ಸೆಪ್ಟಂಬರ್ 15ರಂದು ರಾಜ್ಯ ಸರಕಾರ ವಿಧಾನಸಭೆಯಲ್ಲಿ ಮಂಡಿಸಿರುವ ಮಹಾಲೆಕ್ಕ ಪರಿಶೋಧಕರ(ಸಿಎಜಿ) ವರದಿ ಹೇಳುತ್ತದೆ.
ರಾಷ್ಟ್ರೀಯ ಸರಾಸರಿ ಮತ್ತು ಕೆಲವು ರಾಜ್ಯಗಳ ವೆಚ್ಚದ ಪ್ರಮಾಣ ಹೀಗಿವೆ:
ರಾಷ್ಟ್ರೀಯ | ಸರಾಸರಿ 5.21% |
ಕೇರಳ | 6.59% |
ತೆಲಂಗಾಣ | 5.14% |
ತಮಿಳುನಾಡು | 5.13% |
ಆಂಧ್ರಪ್ರದೇಶ | 4.86% |
ಮಧ್ಯಪ್ರದೇಶ | 4.7% |
ಮಹಾರಾಷ್ಟ್ರ | 4.34% |
ಕರ್ನಾಟಕ | 4.28% |
ಸರಕಾರ ಮಾಡುವ ಒಟ್ಟು ವೆಚ್ಚದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಮಾಡುವ ವೆಚ್ಚದ ಪ್ರಮಾಣ ಹೆಚ್ಚಿದಷ್ಟೂ ಸರಕಾರೀ ವೆಚ್ಚಗಳ ಗುಣಮಟ್ಟ ಉತ್ತಮ ಎಂದು ಬಗೆಯಲಾಗುತ್ತದೆ ಎಂದು ಈ ಸಿಎಜಿ ವರದಿಯೂ ಹೇಳಿರುವುದಾಗಿ ವರದಿಯಾಗಿದೆ.
ಅಭಿವೃದ್ಧಿ ವೆಚ್ಚಗಳಲ್ಲಿಯೂ ಹಿಂದೆ
ರಾಜ್ಯ ಸರಕಾರ 2019-20ರಲ್ಲಿ 48,499 ಕೋಟಿ ರೂ.ಗಳಷ್ಟು ಮಾರುಕಟ್ಟೆಯಿಂದ ಸಾಲ ತಂದಿದೆ. ಆದರೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅದು ಮಾಡಿರುವ ಬಂಡವಾಳ ವೆಚ್ಚಗಳಲ್ಲಿ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಕೇವಲ 1% ಏರಿಕೆಯಾಗಿದೆ ಎಂದು ಕೂಡ ಸಿಎಜಿ ಟಿಪ್ಪಣಿ ಮಾಡಿದೆ. ಒಟ್ಟು ವೆಚ್ಚಗಳಲ್ಲಿ ಬಂಡವಾಳ ವೆಚ್ಚಗಳ ಪ್ರಮಾಣ 19%.
ಅಲ್ಲದೆ, ಸರಕಾರ ತನ್ನ ಬಳಿ ಇದ್ದ ನಗದನ್ನು ಬಳಸಿದ್ದರೆ ಈ ಸಾಲ ಮಾಡುವ ಅಗತ್ಯವಿರುತ್ತಿರಲಿಲ್ಲ ಎಂದೂ ಸಿಎಜಿ ಗಮನಿಸಿರುವುದಾಗಿ ವರದಿಯಾಗಿದೆ. ಈ ಅವಧಿಯಲ್ಲಿ ಸರಕಾರದ ಬಳಿಯಿದ್ದ ನಗದು ಶಿಲ್ಕು 5,139ಕೋಟಿ ರೂ.ನಿಂದ 13,634 ಕೋಟಿ ರೂ.ಗೇರಿತ್ತು ಎಂದು ಅದು ಹೇಳಿದೆ.
11%ದಷ್ಟು ಖರ್ಚಾಗದೆ ಉಳಿದಿದೆ
ಇನ್ನೊಂದು ಕಡೆಯಲ್ಲಿ, ಬಜೆಟ್‌ನ ಅನುದಾನಗಳಲ್ಲಿ ರೂ. 29,826.44 ಕೋಟಿ ಖರ್ಚಾಗದೇ ಉಳಿದಿದೆ. ಎಂದೂ ಈ ಸಿಎಜಿ ವರದಿ ಹೇಳಿದೆ.
ಒಟ್ಟು 29 ವಿವಿಧ ಅನುದಾನಗಳ ಅಡಿಯಲ್ಲಿ ಬಜೆಟಿನ ಅನುಮೋದಿತ ವೆಚ್ಚಗಳ 11% ದಷ್ಟು ಬಳಕೆಯಾಗದೇ ಉಳಿದಿತ್ತು ಎಂದು ಸಿಎಜಿ ಗಮನಿಸಿದೆ.
ಇಷ್ಟೇ ಅಲ್ಲ, ಈ ಬಳಕೆಯಾಗದೆ ಉಳಿದಿರುವ ಮೊತ್ತದಲ್ಲಿ ನಿಗದಿತ ದಿನಾಂಕದೊಳಗೆ ರೂ.14,484.63 ಕೋಟಿ, ಅಂದರೆ 49%ದಷ್ಟನ್ನು ಮಾತ್ರವೇ ಹಣಕಾಸು ಇಲಾಖೆಗೆ ಹಿಂದಿರುಗಿಸಲಾಗಿತ್ತು. ಆರ್ಥಿಕ ವರ್ಷದ ಕೊನೆಯ ಎರಡು ದಿನಗಳಲ್ಲಿ ರೂ.1,174.87 ಕೋಟಿ ಮರಳಿಸಲಾಗಿದೆ ಎಂದು ಸಿಎಜಿ ಗುರುತಿಸಿದೆ.
ಸಾಲ ವಸೂಲಿ 1%ಕ್ಕಿಂತಲೂ ಕಡಿಮೆ
ರಾಜ್ಯ ಸರಕಾರ ವಿವಿಧ ಸಂಸ್ಥೆಗಳಿಗೆ ಸಾಲವಾಗಿ ಒಟ್ಟು 4069 ಕೋಟಿ ರೂ. ನೀಡಿತ್ತು ಮತ್ತು ಇದೇ ಅವಧಿಯಲ್ಲಿ ವಸೂಲಿಯಾದ ಮೊತ್ತ ಕೇವಲ 203 ಕೋಟಿ ರೂ. ಇದು ವರ್ಷದ ಆರಂಭದಲ್ಲಿದ್ದ ಸಾಲದ ಮೊತ್ತದ 1%ಕ್ಕಿಂತಲೂ ಕಡಿಮೆ.
ಲಿಂಗ ಬಜೆಟಿನಲ್ಲಿ ವಿಶ್ಲೇಷಣೆಯ ಅಭಾವ
ಪ್ರತಿವರ್ಷ ರಾಜ್ಯ ಬಜೆಟಿನಲ್ಲಿ ಲಿಂಗ ಬಜೆಟಿಂಗ್‌ಗೆ ನೀಡಿಕೆಯನ್ನು ಹೆಚ್ಚಿಸುತ್ತಿದ್ದರೂ, ಇದರ ಒಟ್ಟಾರೆ ವಿಶ್ಲೇಷಣೆ, ವಿವಿಧ ಬಾಬ್ತುಗಳಿಗೆ ನೀಡಿಕೆ ಹಾಗೂ ಅವುಗಳ ಉಸ್ತುವಾರಿ ವ್ಯವಸ್ಥೆಯ ಬಗ್ಗೆ ಮಾಹಿತಿಗಳ ಕೊರತೆ ಇದೆ ಎಂದೂ ಸಿ.ಎ.ಜಿ. ಟಿಪ್ಪಣಿ ಮಾಡಿರುವುದಾಗಿ ವರದಿಯಾಗಿದೆ.