ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಿದ ರಾಜ್ಯ ಬಜೆಟ್: ಎಸ್‌ಎಫ್‌ಐ

ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರವು 2021-2022ರ ಸಾಲಿನ ಬಜೆಟ್‌ನಲ್ಲಿ ಕೇವಲ 29,688 ಕೋಟಿ ರೂಪಾಯಿ, ಅಂದರೆ ಶೇಕಡಾ 11ರಷ್ಟು ಹಣ ಮಾತ್ರ ನೀಡುವುದರ ಮೂಲಕ ತನ್ನ ಶಿಕ್ಷಣ ವಿರೋಧಿ, ವಿದ್ಯಾರ್ಥಿ ದ್ರೋಹಿ ನೀತಿಯನ್ನು ಮುಂದುವರೆಸಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್‌(ಎಸ್‌.ಎಫ್‌.ಐ.) ಸಂಘಟನೆ ಆರೋಪಿಸಿದೆ.

ಕಳೆದ ವರ್ಷದ ಬಜೆಟ್ ಗಾತ್ರಕ್ಕೆ ಹೋಲಿಸಿದರೆ ಈ ವರ್ಷದ ಬಜೆಟ್ ನಲ್ಲಿ 70 ಕೋಟಿ ಹಣ ಅಂದ್ರೆ 0.3% ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ಕಡಿತ ಮಾಡಲಾಗಿದೆ.  ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಸರ್ಕಾರ ಮತ್ತೆ ಮಠ ಮಾನ್ಯಗಳಿಗೆ , ಜಾತಿವಾರು ಪ್ರತಿಮೆಗಳ ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ಮೀಸಲಿಡುವುದರ ಮೂಲಕ ಬಿಜೆಪಿ ಸರ್ಕಾರಕ್ಕೆ ಶಿಕ್ಷಣ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಯಾವುದೇ ದೂರದೃಷ್ಟಿಕೋನ ಮತ್ತು ಅಭಿವೃದ್ಧಿ ಕಣ್ಣೋಟ ಇಲ್ಲ ಎಂಬುದು ಈ ಬಜೆಟ್ ನಲ್ಲಿ ಮತ್ತೊಮ್ಮೆ ಸಾಬೀತಾಗಿದೆ ಎಂದು ಎಸ್‌.ಎಫ್‌.ಐ. ರಾಜ್ಯಾಧ್ಯಕ್ಷರಾದ ಅಮರೇಶ್ ಕಡಗದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿ ರವರು  ʻʻ2020ನೇ ವರ್ಷ ಕೋವಿಡ್-19‌ ಸಾಂಕ್ರಾಮಿಕ ರೋಗದಿಂದ ಇಡೀ ವರ್ಷ ಶೈಕ್ಷಣಿಕ ಸಮಸ್ಯೆಗಳನ್ನು ಮತ್ತಷ್ಟು ತೀವ್ರವಾಗಿತ್ತು. ಈ ಸಂದರ್ಭದಲ್ಲಿ  ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಖಾಲಿ ಉಳಿದಿರುವ ಶಿಕ್ಷಕ, ಉಪನ್ಯಾಸಕರ ಹುದ್ದೆಗಳ ಭರ್ತಿಯಾಗಬೇಕು, ವಿಶ್ವವಿದ್ಯಾಲಯಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ವಿಶೇಷವಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಉಳಿಸಬೇಕು, ವಿದ್ಯಾರ್ಥಿ ವೇತನ, ಅಗತ್ಯ  ತರಗತಿ ಕೊಠಡಿ,ಉಚಿತ ಲ್ಯಾಪ್‌ ಟ್ಯಾಪ್, ಉಚಿತ ಬಸ್ ಪಾಸ್ , ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆ ಕನಿಷ್ಠ 3500/-ರೂ ಹೆಚ್ಚಿಸಬೇಕೆಂದು ರಾಜ್ಯದ ವಿದ್ಯಾರ್ಥಿ ಸಮುದಾಯವನ್ನು ಸಂಘಟಿಸಿ ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್ ನಲ್ಲಿ 30% ಮೀಸಲಿಡಬೇಕು ಎಂದು ಇಡೀ ರಾಜ್ಯಾದ್ಯಂತ ಹೋರಾಟಗಳನ್ನು ನಡೆಸಿದರು ವಿದ್ಯಾರ್ಥಿ ಸಮುದಾಯ ಎಸ್‌.ಎಫ್‌.ಐ ಸಂಘಟನೆ ಮೂಲಕ ತೀವ್ರತರವಾದ ಹೋರಾಟವನ್ನು ನಡೆಸಿದರೂ ಸಹ ಈ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ನಿರ್ಲಕ್ಷ್ಯತೆ ತೋರಿದೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರದ ಪ್ರತಿ ಬಾರಿಯೂ ಶಿಕ್ಷಣ ಕ್ಷೇತ್ರಕ್ಕೆ ಹಣ ಕಡಿತ ಮಾಡುವ ಪರಿಪಾಠವನ್ನು ಮುಂದುವರಿಸಿದ್ದು, ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ದ್ರೋಹ ಬಗೆದಿದೆ. ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಇನ್ನಷ್ಟು ಹೋರಾಟಗಳನ್ನು ತೀವ್ರಗೊಳಿಸಲು ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಎಸ್‌ಎಫ್‌ಐ ಕರ್ನಾಟಕ ರಾಜ್ಯ ಸಮಿತಿ ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *