ಬೆಂಗಳೂರು: ಶಾಲೆಗಳ ಆರಂಭ ಕುರಿತು ಶಿಕ್ಷಣ ಇಲಾಖೆ ವತಿಯಿಂದ ನಿನ್ನೆ ನಡೆಯಬೇಕಿದ್ದ ಸಭೆ ಇಂದಿಗೆ ಮುಂದೂಡಿಕೆಯಾಗಿತ್ತು. ಅದರಂತೆ ಇಂದು ಬೆಳಗ್ಗೆ 11.30 ಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸಭೆ ನಡೆಯಲಿದೆ.
ಇಂದಿನಿಂದ ಮೂರು ದಿನಗಳ ಕಾಲ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಯೂ ಸರಣಿ ಸಭೆ ನಡೆಯಲಿದೆ. ಇಲಾಖಾ ಅಧಿಕಾರಿಗಳ ಜೊತೆ ಚರ್ಚಿಸಿ ಶಾಲೆ ಆರಂಭಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಮಾಡಲಾಗುತ್ತದೆ. ಸಭೆ ಬಳಿಕ ಶಾಲೆ ಆರಂಭದ ದಿನ ಪ್ರಕಟವಾಗುವ ಸಾಧ್ಯತೆ ಇದೆ. ನವೆಂಬರ್ 6ರಂದು ಸರ್ಕಾರ ಶಾಲೆ ಆರಂಭಿಸುವ ದಿನಾಂಕವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈಗಾಗಲೇ ಕಮೀಷನರ್ ಅನ್ಬುಕುಮಾರ್ ನೇತೃತ್ವದಲ್ಲಿ ಡಿಡಿಪಿಐ, ಬಿಇಓಗಳ ಜೊತೆ ವಿಡಿಯೋ ಕಾನ್ಪರೆನಸ್ ಮೂಲಕ ಸಭೆ ನಡೆಸಲಾಗಿದೆ. ಹೀಗಾಗಿ ಈಗ ಎಲ್ಲರ ಚಿತ್ತ ಶಿಕ್ಷಣ ಇಲಾಖೆಯತ್ತ ನೆಟ್ಟಿದೆ. ರಾಜ್ಯದಲ್ಲಿ ಶಾಲೆ ಆರಂಭಕ್ಕೆ ಇಂದೇ ಮುಹೂರ್ತ ಫಿಕ್ಸ್ ಆಗುತ್ತಾ? ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಇನ್ನು, ಶಾಲೆ ಆರಂಭ ಮಾಡುವ ಚಿಂತನೆ ಹಿನ್ನೆಲೆ, ಮುನ್ನೆಚ್ಚರಿಕೆಯ ಕ್ರಮವಾಗಿ ರಾಜ್ಯದಲ್ಲಿ ಕೋವಿಡ್ ಯಾವ ಪ್ರಮಾಣದಲ್ಲಿ ಇದೆ ಎನ್ನುವ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಶಿಕ್ಷಣ ಸಚಿವರು ಚರ್ಚೆ ನಡೆಸಲಿದ್ದಾರೆ. ಜಿಲ್ಲಾವಾರು ಕೋವಿಡ್ ಪ್ರಕರಣಗಳ ಸಂಖ್ಯೆ ನೋಡಿಕೊಂಡು ಶಾಲೆ ಆರಂಭ ಮಾಡಲು ಚಿಂತಿಸಲಾಗುತ್ತಿದೆ. ಪ್ರತಿ ಶಾಲೆಯಲ್ಲೂ ಆರೋಗ್ಯ ಸಮಿತಿ ರಚನೆ ಮಾಡಬೇಕು. ಒಂದೊಂದು ತರಗತಿಗೆ ದಿನಬಿಟ್ಟು ದಿನ ತರಗತಿ ನಡೆಸಲು ಚಿಂತನೆ ನಡೆಸಲಾಗಿದೆ. ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್, ಜಿಲ್ಲಾ ಉಪನಿರ್ದೇಶಕರು ಹಾಗೂ ಬಿಇಒಗಳು ಭಾಗವಹಿಸಲಿದ್ದಾರೆ.
ಇನ್ನು, ನ. 17 ರಿಂದ ಪದವಿ, ಎಂಜಿನಿಯರಿಂಗ್, ಡಿಪ್ಲೋಮಾ ಕಾಲೇಜುಗಳ ಪ್ರಾರಂಭ ಹಿನ್ನೆಲೆ, ಶಾಲೆಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ತಯಾರಿ ನಡೆಸುತ್ತಿದೆ. ಹೀಗಾಗಿ ಶಾಲೆಗಳನ್ನ ಪ್ರಾರಂಭಿಸುವ ವಿಚಾರವನ್ನು ಚರ್ಚಿಸಲು ಅಧಿಕಾರಿಗಳ ಸಭೆ ನಡೆಸಲಾಗುತ್ತದೆ. ಆಯಾ ರಾಜ್ಯಗಳಲ್ಲಿನ ಶಿಕ್ಷಣ ಇಲಾಖೆ ಶಾಲೆ ತೆರೆಯಲು ಅನುಸರಿಸುವ ಮಾನದಂಡ ಏನು ಎಂಬುದರ ಕುರಿತು ಚರ್ಚೆ ಮಾಡಲಾಗುತ್ತದೆ.
ಶಾಲೆ ಆರಂಭಿಸುವುದಕ್ಕೂ ಮುನ್ನ ಶಾಲೆಯ ಶುಚಿತ್ವ ಹಾಗೂ ಕುಡಿಯುವ ನೀರು, ಶೌಚಾಲಯ ಕಡ್ಡಾಯವಾಗಿರಬೇಕು. ರಾಜ್ಯದಲ್ಲಿ ಶಾಲೆ ಆರಂಭಕ್ಕೂ ಮುನ್ನ ಈಗಾಗಲೇ ಬೇರೆ ರಾಜ್ಯಗಳಲ್ಲಿ ಶಾಲೆ ಶುರುವಾಗಿರುವ ವರದಿ ತರಿಸಿಕೊಳ್ಳಬೇಕು. ಆಯಾ ರಾಜ್ಯಗಳಲ್ಲಿನ ಶಾಲೆಗಳು ಪ್ರಾರಂಭವಾದ ನಂತರ ಮಕ್ಕಳ ಆರೋಗ್ಯ ಹೇಗಿದೆ ಎನ್ನುವ ಮಾಹಿತಿ ಬೇಕು.
ಶಾಲೆ ಪ್ರಾರಂಭಿಸಿದ್ರೆ ಒಂದು ತರಗತಿಯಲ್ಲಿ ಎಷ್ಟು ಮಕ್ಕಳಿರಬೇಕು? ಸಮ-ಬೆಸ ಸಂಖ್ಯೆ ಆಧಾರದಲ್ಲಿ ಶಾಲೆ ನಡೆಸಬಹುದಾ? ಎನ್ನುವ ಕುರಿತು ಸಾಧಕ ಭಾದಕಗಳ ಚರ್ಚೆ ನಡೆಸಬೇಕು. ಮೊದಲಿಗೆ 8,9,10 ಹಾಗೂ 11 ,12 ನೇ ತರಗತಿಗಳ ತೆರಯುವ ಬಗ್ಗೆ ಚರ್ಚೆಆನಂತರ ಪ್ರಾಥಮಿಕ ಶಾಲೆಗಳ ತೆರೆಯುವ ಕುರಿತು ಚರ್ಚೆ ಮಾಡಲಾಗುತ್ತದೆ.