ಕಲಬುರಗಿ: ರಾಜ್ಯಾದ್ಯಂತ ಇಂದು (ನವೆಂಬರ್ 06) 1,370 ಕೇಂದ್ರಗಳಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಯುತ್ತಿದೆ. ರಾಜ್ಯದ 781 ಕೇಂದ್ರಗಳಲ್ಲಿ ನಡೆಯಲಿದ್ದು, 2,06,456 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಕಲಬುರಗಿ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯ ಯಡವಟ್ಟಿನಿಂದಾಗಿ ಹಲವು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳ ಹುಡುಕಾಟದಲ್ಲೇ ಇರುವುದು ಕಂಡು ಬಂದಿದೆ.
ಪರೀಕ್ಷೆ ಆರಂಭವಾಗುವುದಕ್ಕೂ ಒಂದು ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ಮತ್ತು ಅರ್ಧ ಗಂಟೆ ಮೊದಲು ಕೊಠಡಿಯೊಳಗೆ ಪ್ರವೇಶ ಪಡೆಯಬೇಕು ಎಂದು ವಿವರಿಸಲಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಮಾದ ವೆಸಗಿದ್ದು, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳು ನಿಗದಿತ ಸ್ಥಳದಲ್ಲಿ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಹಲವು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶ ಚೀಟಿಯಲ್ಲಿ ಜೀವನ್ ಪ್ರಕಾಶ್ ಪರೀಕ್ಷಾ ಕೇಂದ್ರ ಎಂದು ಉಲ್ಲೇಖಿಸಲಾಗಿದೆ.
ಆದರೆ ವಾಸ್ತವದಲ್ಲಿ ಜೀವನ್ ಪ್ರಕಾಶ್ ಶಾಲೆಯಲ್ಲಿ ಪರೀಕ್ಷಾ ಕೇಂದ್ರವೇ ಇಲ್ಲ. ಇದರಿಂದಾಗಿ ಆ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳು ಶಿಕ್ಷಣ ಇಲಾಖೆಯ ವಿರುದ್ಧ ಹಾಗೂ ಡಿಡಿಪಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಯ ಮುಗಿಯುತ್ತಿದ್ದರೂ ಪರೀಕ್ಷಾ ಕೇಂದ್ರ ಸಿಗದೇ ಇರುವುದರಿಂದ ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರ ಮತ್ತು ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಅಭ್ಯರ್ಥಿಗಳಲ್ಲಿ ಆತಂಕ ಉಂಟಾಗಿದ್ದು ಭವಿಷ್ಯದಲ್ಲಿ ಉದ್ಯೋಗ ನಷ್ಟ ಸಾಧ್ಯತೆ ಎದುರಾಗಿದೆ ಎಂದು ಹಲವರು ದೂರಿದ್ದಾರೆ.
ಕಲಬುರಗಿ ನಗರ ಪ್ರದೇಶದಲ್ಲಿ ಎಂಟಕ್ಕೂ ಹೆಚ್ಚು ಕೇಂದ್ರಗಳಲ್ಲಿ ಈ ತೊಂದರೆ ಎದುರಾಗಿದೆ ಎಂದು ವರದಿಯಾಗಿದೆ. ಈಗಾಗಲೇ ಆಕ್ರೋಶ ವ್ಯಕ್ತಪಡಿಸಿರುವ ಅಭ್ಯರ್ಥಿಗಳು ಸರ್ಕಾರ ಪರ್ಯಾಯ ವ್ಯವಸ್ಥೆ ಅಥವಾ ಮರು ಪರೀಕ್ಷೆ ನಡೆಸಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ಮಂಡ್ಯದಲ್ಲಿ ಅಭ್ಯರ್ಥಿಯಿಂದ ಪರೀಕ್ಷಾ ಕೇಂದ್ರ ಹುಡುಕಾಟ
ಕಲಬುರಗಿ ಜಿಲ್ಲೆಯಂತೆಯೇ ಮಂಡ್ಯದಲ್ಲಿಯೂ ಇಂತಹ ಘಟನೆ ಜರುಗಿದ್ದು, ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯಲು ಬಂದಿದ್ದ ಪರೀಕ್ಷಾರ್ಥಿ ಮಂಡ್ಯದಲ್ಲಿ ಟಿಇಟಿ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿ ಪರೀಕ್ಷಾ ಕೇಂದ್ರ ಹುಡುಕಾಟ ನಡೆಸಿರುವ ಪರಿಸ್ಥಿತಿ ಎದುರಾಗಿದೆ. ಪ್ರವೇಶ ಪತ್ರದಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಎಂದು ನಮೂದಾಗಿದೆ. ಆದರೆ, ನಮೂದಾಗಿರುವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರವೇ ಇಲ್ಲ. ನೋಟಿಫಿಕೆಷನ್ ನಲ್ಲಿ ಶಿಕ್ಷಣ ಇಲಾಖೆಯು ಸರಿಯಾದ ಮಾಹಿತಿ ಪ್ರಕಟಪಡಿಸಿಲ್ಲ.
ಪರೀಕ್ಷಾ ಶುಲ್ಕ ಕಟ್ಟಿ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿ ಬಿ.ಎ.ಮಧುಕುಮಾರ್, ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಇನ್ನೊಂದು ಪ್ರವೇಶ ಪತ್ರದಲ್ಲಿ ಬೇರೆ ಕೇಂದ್ರ ನಮೂದಾಗಿದೆ. ಕಷ್ಟಪಟ್ಟು ಓದಿದ ವಿದ್ಯಾರ್ಥಿಗೆ ಶಿಕ್ಷಣ ಇಲಾಖೆಯಿಂದ ಎಡವಟ್ಟು ಆಗಿದೆ.
ಪರೀಕ್ಷೆ ಎರಡು ದಿನ ಇರುವಾಗ ಪ್ರವೇಶ ಪತ್ರ ಪಡೆಯಬೇಕು ಎಂದು ಉತ್ತರಿಸಿದ ಜಿಲ್ಲಾಡಳಿತ ಹಾಗೂ ಡಿಡಿಪಿಐ ನೋಟಿಫಿಕೇಷನ್ ನಲ್ಲಿ ನಮೂದು ಮಾಡದೆ ಗೊಂದಲ ಸೃಷ್ಟಿಸಿದೆ. ನೋಟಿಫಿಕೇಷನ್ ಬಂದ ಬಳಿಕ ಪ್ರವೇಶ ಪತ್ರ ಪಡೆದಿದ್ದ ಮಧುಕುಮಾರ್ ಅವರನ್ನು ಸಮಯವಾಯಿತೆಂದು ಪರೀಕ್ಷಾ ಕೇಂದ್ರಕ್ಕೆ ವಾಪಸ್ ಕಳುಹಿಸಲಾಗಿದೆ.
ಪರೀಕ್ಷಾರ್ಥಿಗಳಿಗೆ ಸರ್ಕಾರದಿಂದ ಗೊಂದಲವಾಗಿದ್ದು, ಎಷ್ಟೋ ವಿದ್ಯಾರ್ಥಿಗಳಿಗೆ ಈತರಹದ ವಂಚನೆಯಾಗಿದೆ ಎಂದು ಆರೋಪ ಮಂಡ್ಯ ಜಿಲ್ಲೆಯಲ್ಲಿಯೂ ಕೇಳಿ ಬಂದಿದೆ. ಇದರ ಬಗ್ಗೆ ಸರ್ಕಾರ ಗಮನ ಹರಿಸಿ ಕ್ರಮ ವಹಿಸುವಂತೆ ಒತ್ತಾಯಸುತ್ತಿದ್ದಾರೆ. ಅಲ್ಲದೆ, ನ್ಯಾಯಕ್ಕಾಗಿ ಜಿಲ್ಲಾಡಳಿತ, ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.