ಶಿಕಾರಿಪುರ : ನ್ಯಾ. ಸದಾಶಿವ ಆಯೋಗ ವರದಿ ವಿರೋಧಿಸಿ ಬಿಎಸ್‌ವೈ ಮನೆ ಮೇಲೆ ಕಲ್ಲು ತೂರಾಟ

ಶಿವಮೊಗ್ಗ: ಉದ್ಯೋಗ ಮತ್ತು ಶಿಕ್ಷಣದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಮಾಡಿರುವ ಶಿಫಾರಸನ್ನು ವಿರೋಧಿಸಿ, ಬಂಜಾರ ಹಾಗೂ ಬೋವಿ ಸಮುದಾಯದ ನೂರಾರು ಜನರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನಿವಾಸದ ಮೇಲೆ ಕಲ್ಲು ತೂರಿ ಕಿಡಿಕಿ ಗಾಜು ಒಡೆದು ಹಾಕಿರುವ ಘಟನೆ ಸೋಮವಾರ ಶಿಕಾರಿಪುರದಲ್ಲಿ ನಡೆದಿದೆ.

ಈ ಘಟನೆಯಿಂದಾಗಿ ಸದ್ಯ ಶಿಕಾರಿಪುರದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತಿದ್ದು, ಮುನ್ನಚ್ಚರಿಕೆಯ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಭಾರೀ ಪೊಲೀಸ್ ಭದ್ರತೆಯನ್ನು ನಿಯೋಜನೆ ಮಾಡಲಾಗಿದ್ದು, ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಶಿಕಾರಿಪುರದಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಬಂಜಾರ, ಲಂಬಾಣಿ, ಬೋವಿ, ಕೊರಮ ಕೊರಚ ಸಮುದಾಯದವರ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಆದರೂ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ ಪರಿಣಾಮ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಸೋಮವಾರ ಪಟ್ಟಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ಒಳ ಮೀಸಲಾತಿಯನ್ನು ಹೆಚ್ಚಿಸಿ, ರಾಜ್ಯ ಸರ್ಕಾರ ಮಾಡಿರುವ ಶಿಫಾರಸನ್ನು ವಿರೋಧಿಸಿ, ಬಂಜಾರ ಹಾಗೂ ಬೋವಿ ಸಮುದಾಯದ ನೂರಾರು ಜನರು ಪ್ರತಿಭಟನೆ ಹಮ್ಮಿಕೊಂಡಿದ್ದರು.

ಈ ಸಂದರ್ಭದಲ್ಲಿ ಪ್ರತಿಭಟನೆಯು ತಾರಕಕ್ಕೇರಿ, ರೊಚ್ಚಿಗೆದ್ದ ಪ್ರತಿಭಟನಾಕಾರರು ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದರು. ನಗರದ ಮಾಳರಕೇರಿ ಬಡಾವಣೆಯಲ್ಲಿನ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಬಿ.ವೈ ರಾಘವೇಂದ್ರ ಭಾವಚಿತ್ರಕ್ಕೆ ಬೆಂಕಿ ಹಾಕಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹಲ್ಲೆ ಮಾಡಿ ಆಕ್ರೋಶ ಹೊರಹಾಕಿದರು.

ಘಟನೆಯಲ್ಲಿ, ಯಡಿಯೂರಪ್ಪ ಅವರು ಇತ್ತೀಚೆಗಷ್ಟೆ ಕಟ್ಟಿದ ಹೊಸ ಮನೆಯ ಗಾಜುಗಳು ಸಂಪೂರ್ಣ ಪುಡಿಗಟ್ಟಲಾಗಿದೆ. ಹಲವಾರು ಪೊಲೀಸರು ಗಾಯಗೊಂಡಿದ್ದು, ಪ್ರತಿಭಟನಾ ನಿರತ ಮಹಿಳೆಯರಿಗೂ ಕಲ್ಲುಗಳು ಬಿದ್ದಿದ್ದರಿಂದ ಅವರೂ ಗಾಯಗೊಂಡಿದ್ದಾರೆ.

ಯಡಿಯೂರಪ್ಪನವರ ನಿವಾಸದ ಮುಂದೆ ಟೈರ್ ಗಳನ್ನು ಸುಟ್ಟು ಹಾಕಿದ್ದಾರೆ, ನಿವಾಸ ಸನಿಹದಲ್ಲಿ ನಿಲ್ಲಿಸಲಾಗಿದ್ದ ವಾಹನಗಳನ್ನು ಜಖಂಗೊಳಿಸಲಾಗಿದೆ. ನಿವಾಸದ ಮುಂದೆ ಕಟ್ಟಲಾಗಿದ್ದ ಬಿಜೆಪಿ ಪಕ್ಷದ ಬ್ಯಾನರ್ ಗಳನ್ನು ಹರಿದುಹಾಕಲಾಗಿದೆ.

ಇದನ್ನೂ ಓದಿ : ಒಳಮೀಸಲಾತಿ; ಸದಾಶಿವ ಆಯೋಗದ ಶಿಫಾರಸ್ಸಿಗೆ ಅನುಗುಣವಾಗಿಲ್ಲ

ಸದಾಶಿವ ಆಯೋಗ ಜಾರಿಗೆ ಸಂಪುಟ ಅನುಮೋದನೆಗೆ ವಿರೋಧ ವ್ಯಕ್ತಪಡಿಸಿರುವ ಬಂಜಾರ, ಬೋವಿ ಸಮುದಾಯದ ಜನರು, ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಗಣ್ಯರು ಕೊಟ್ಟಿದ್ದ ಉಡುಗೊರೆಗಳನ್ನು ಎಸೆದಿದ್ದಾರೆ. ಕಚೇರಿ ಛಾವಣಿ ಏರಿದ ಪ್ರತಿಭಟನಾಕಾರರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಂಬೇಡ್ಕರ್ ಸರ್ಕಲ್ ನಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಬಂಜಾರ ಸಮುದಾಯದ ವಾದವೇನು?
ಪ್ರತಿಭಟನೆಗೂ ಮುನ್ನ ಶಿಕಾರಿಪುರದ ಬಂಜಾರ ಸೇವಾ ಸಂಘ ನೀಡಿದ್ದ ಪ್ರಕಟಣೆಯ ಪ್ರತಿಯಲ್ಲಿ, ಸದಾಶಿವ ವರದಿಯನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸದೇ ಯಥಾವತ್ತಾಗಿ ಅನುಷ್ಠಾನಗೊಳಿಸಲು ಮುಂದಾಗಿರುವುದನ್ನು ಆಕ್ಷೇಪಿಸಲಾಗಿದೆ. ಒಳಮೀಸಲಾತಿಗೆ ಪರ- ವಿರೋಧ ಹೋರಾಟಗಳು ರಾಜ್ಯಾದ್ಯಂತ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಅದ್ಯಾವುದನ್ನೂ ಲೆಕ್ಕಿಸದೇ 101 ಜಾತಿಗಳ ಸಹೋದರರನ್ನು ಒಗ್ಗಟ್ಟಾಗಿ ಬದುಕಿಸಲು ಬಿಡದೆ, ನಮ್ಮ ನಮ್ಮಲ್ಲೇ ಬೇಧ-ಭಾವವನ್ನು ಸೃಷ್ಟಿಸಿ ದೊಡ್ಡ ಕಂದಕವನ್ನೇ ನಿರ್ಮಾಣ ಮಾಡಿದೆ ಎಂದು ಆರೋಪಿಸಲಾಗಿದೆ.

ಪರಿಶಿಷ್ಟ ಜಾತಿಯ ಇಂದಿನ ಜನಸಂಖ್ಯೆ ಎಷ್ಟಿದೆ, ಅವರ ಸಾಮಾಜಿಕ- ಶೈಕ್ಷಣಿಕ ಸ್ಥಿತಿಗತಿಗಳು ಏನಿವೆ ಎಂಬುದನ್ನು ಅಧ್ಯಯನ ಮಾಡಲು ಹೋಗದೇ, ರಾಜ್ಯ ಸರ್ಕಾರವು, ಪರಿಶಿಷ್ಟ ಜಾತಿಯನ್ನು ಎಡಗೈ, ಬಲಗೈ, ಅಸ್ಪೃಶ್ಯರು, ಅಲೆಮಾರಿಗಳು ಎಂದು ಅವೈಜ್ಞಾನಿಕವಾಗಿ ವಿಂಗಡಿಸಿದೆ. ಅಲ್ಲದೆ, ಈ ವಿಂಗಡಣೆಯ ವೇಳೆ, ಕೆಲವು ಅಸಂವಿಧಾನಿಕ ಪದಗಳನ್ನು ಬಳಸಿದೆ. ಯಾವ ಜಾತಿಯನ್ನೂ ವಸ್ತುನಿಷ್ಠವಾಗಿ ಅಧ್ಯಯನ ಮಾಡದೇ, ಬಂಜಾರ, ಭೋವಿ, ಛಲವಾದಿ, ಕೊರಚ, ಕೊರಮ ಇತ್ಯಾದಿ ಪರಿಶಿಷ್ಟ ಜಾತಿಗಳನ್ನು ವಿಂಗಡಣೆ ಮಾಡಿ ಒಳಮೀಸಲಾತಿ ಎಂಬ ಆತಂಕವನ್ನು ಸೃಷ್ಟಿಸಿದೆ ಎಂದು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : ಸದಾಶಿವ ಆಯೋಗ ವರದಿ ಜಾರಿಗಾಗಿ ಮಾದಿಗರ ಬೃಹತ್‌ ʻಚೈತನ್ಯ ರಥಯಾತ್ರೆʼ

ಪ್ರಭು ಚವ್ಹಾಣ್ ವಿರೋಧ
ಈ ನಡುವೆ ಬೊಮ್ಮಾಯಿ ಸಚಿವ ಸಂಪುಟದಲ್ಲೇ ಒಳ ಮೀಸಲಾತಿ ಜಾರಿಗೆ ವಿರೋಧ ವ್ಯಕ್ತವಾಗಲು ಆರಂಭವಾಗಿದೆ. ಒಳಮೀಸಲಾತಿ ನೀಡುವುದನ್ನು ಆಕ್ಷೇಪಿಸಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಸಚಿವ ಪ್ರಭು ಚವ್ಹಾಣ್ ಅವರು ಪತ್ರ ಬರೆದಿದ್ದು, ನ್ಯಾ. ಸದಾಶಿವ ಆಯೋಗ ವರದಿ ಮತ್ತು 2004ರ ಇ.ವಿ.ಚಿನ್ನಯ್ಯ ಪ್ರಕರಣದ ತೀರ್ಪನ್ನು ಉನ್ನತ ಪೀಠವನ್ನು ರಚಿಸಿ ಪರಾಮರ್ಶಿಸಬೇಕು ಎಂದು ಆಗ್ರಹ ಮಾಡಿದ್ದಾರೆ.

ಡಾ.ಜಿ.ಪರಮೇಶ್ವರ್ ಬೇಸರ:
ಹಲವು ವರ್ಷಗಳಿಂದಲೂ ಒಳ ಮೀಸಲಾತಿ ಬಗ್ಗೆ ಬೇಡಿಕೆ ಇತ್ತು. 4 ವರ್ಷದಿಂದ ನಿರ್ಧಾರ ಕೈಗೊಂಡಿರಲಿಲ್ಲ. ಜಾರಿಯಾಗದಿರಲಿ ಅಂತಾ ಕೊನೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಚುನಾವಣಾ ಗಿಮಿಕ್ ಅಲ್ಲದೇ ಬೇರೆ ಏನೂ ಇಲ್ಲ ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಒಳ ಮೀಸಲಾತಿ ಬೇಡಿಕೆ ನಮ್ಮ ಸರ್ಕಾರ, ಸಮ್ಮಿಶ್ರ ಸರ್ಕಾರ, ಈಗಿನ ಸರ್ಕಾರದ ಆರಂಭದಲ್ಲೂ ಇತ್ತು.ಒಳಮೀಸಲಾತಿಯ ಸದಾಶಿವ ಆಯೋಗದ ವರದಿ ಸರ್ಕಾರದಲ್ಲಿ ಇದ್ದದ್ದು ನಿಜ. ಇದನ್ನ ನಾನು ಸ್ವಾಗತಿಸಿದ್ರೂ ಇದೊಂದು ಚುನಾವಣಾ ಗಿಮಿಕ್? ಎಂದರು. ಇದನ್ನ ಕಾನೂನಾತ್ಮಕವಾಗಿ ನೋಡುವುದಾದರೆ, ಒಳಮೀಸಲಾತಿಯನ್ನ ಯಾವ ರೀತಿ ಸಮರ್ಥನೆ ಮಾಡಿಕೊಳ್ಳುತ್ತಾರೆ ಗೊತ್ತಿಲ್ಲಾ. ಅದು ಮುಂದೆ ಬರುವ ದಿನಗಳಲ್ಲಿ ತೀರ್ಮಾನ ಆಗುತ್ತೆ ಎಂದರು.

ಈ ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲಾ ಹಾಗೂ ಶಿಕಾರಿಪುರ ತಾಲೂಕ್ ಕಾಂಗ್ರೆಸ್ ಪಕ್ಷದವರ ಕುಮ್ಮಕ್ಕಿನಿಂದ ಮಾಜಿ ಮುಖ್ಯಮಂತ್ರಿ ಯಡಿಯುರಪ್ಪ ಅವರ ಮನೆಯ ಮೇಲೆ ಕಲ್ಲು ತೂರಲಾಗಿದೆ. ಯಾವುದೇ ಕಾರಣಕ್ಕೂ ಈ ಎರಡು ಸಮುದಾಯವರು ಪ್ರಚೋದನೆಗೆ ಒಳಗಾಗಬಾರದು. ಏನೇ ಸಮಸ್ಯೆಗಳಿದ್ದರೂ ಪರಸ್ಪರ ಕುಳಿತು ಬಗೆಹರಿಸಿಕೊಳ್ಳೋಣ. ಸಮಾಜ ಪ್ರಕ್ಷಬ್ದಗೊಳಿಸುವಂತಹ ಕೆಲಸವನ್ನು ಯಾರೊಬ್ಬರೂ ಮಾಡಬಾರದು. ಸಚಿವ ಸಂಪುಟದ ತೀರ್ಮಾನದಂತೆ ಈ ನಿರ್ಣಯಕ್ಕೆ ಬರಲಾಗಿದೆ. ಯಾವ ವರ್ಗದವರಿಗೂ ಅನ್ಯಾಯವಾಗದ ರೀತಿಯಲ್ಲಿ ನ್ಯಾಯಸಮ್ಮತವಾಗಿ ಒಳ ಮೀಸಲಾತಿ ನೀಡಲಾಗಿದೆ. ಯಾವುದೇ ಒತ್ತಡದಿಂದ ಈ ಕೆಲಸ ಮಾಡಿಲ್ಲ. ನನ್ನ ಸ್ವಂತ ಚಿಂತನೆಯಿಂದ, ಬದ್ಧತೆಯಿಂದ ಮಾಡಿದ್ದೇನೆ. ಚುನಾವಣಾ ಲಾಭಕ್ಕಾಗಿ ರಾಜಕಾರಣ ಮಾಡುವುದಿಲ್ಲ, ಎಂದು ಮುಖ್ಯಮಂತ್ರಿ  ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *