ಶೀಘ್ರವೇ ನಂದಿನಿ ಹಾಲಿನ ದರ ರೂ.3 ಹೆಚ್ಚಳ: ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ: ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್​ ಗೆ 3 ರೂಪಾಯಿ ಹೆಚ್ಚಿಸಲು ಸಿದ್ಧತೆ ನಡೆಯುತ್ತಿದ್ದು, ಹೆಚ್ಚಳ ದರವು ರೈತರಿಗೆ ಸಂಪೂರ್ಣವಾಗಿ ಸಿಗಲಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ನಿಯಮಿತ(ಕೆಎಂಎಫ್‌) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಭಾನುವಾರ ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ವತಿದಿಂದ ಚನ್ನಮ್ಮನ ಕಿತ್ತೂರಿನ ಹೂಲಿಕಟ್ಟಿ ಕ್ರಾಸ್‌ ನಲ್ಲಿ ರೂ. 10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೂಲಿಕಟ್ಟಿ ಶಿಥಲೀಕರಣ ಕೇಂದ್ರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು, ನಂದಿನಿ ಹಾಲಿನ ದರ ಪರಿಷ್ಕರಣೆ ಹಣ ಸಂಪೂರ್ಣವಾಗಿ ರೈತರಿಗೆ ಸಂದಾಯವಾಗಲಿದೆ ಎಂದರು.

ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳು, ಕೆಎಂಎಫ್‌ ಹಾಲಿನ ದರ ಪರಿಷ್ಕರಿಸಬೇಕೆಂದು ಪ್ರಸ್ತಾವನೆಯನ್ನು ಸಲ್ಲಿಸಿವೆ. ಹೈನುಗಾರರ ಹಿತದೃಷ್ಟಿಯಿಂದ ಹಾಲಿನ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಹಾಲಿನ ದರ ಪರಿಷ್ಕರಣೆ ಸಂಬಂಧ ಈಗಾಗಲೇ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ’ ಎಂದರು.

‘ಹೂಲಿಕಟ್ಟಿ ಶೀಥಲೀಕರಣ ಕೇಂದ್ರಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮನ ಹೆಸರು ನಾಮಕರಣ ಮಾಡಲಾಗುವುದು. ಈ ಕೇಂದ್ರವು 30 ಸಾವಿರ ಲೀಟರ್‌ ಹಾಲು ಶೇಖರಣೆ ಸಾಮರ್ಥ್ಯವನ್ನು ಹೊಂದುವಂತೆ ನಿರ್ಮಿಸಲಾಗುತ್ತಿದೆ. 5 ಎಕರೆ ಜಾಗದಲ್ಲಿ 10 ಕೋಟಿ ವೆಚ್ಚದಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗುವುದು. ಮುಂದಿನ ದಿನಗಳಲ್ಲಿ ಈ ಕೇಂದ್ರದಲ್ಲಿ ಹಾಲು ಶೇಖರಣೆ ಸಾಮರ್ಥ್ಯವನ್ನು 60 ಸಾವಿರ ಲೀಟರ್‌ಗೆ ವಿಸ್ತರಿಸಲಾಗುವುದು. ಹಸು ಮತ್ತು ಎಮ್ಮೆ ಹಾಲನ್ನು ಪ್ರತ್ಯೇಕವಾಗಿ ಸ್ವೀಕರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ನೆರವೇರಿಸಿದರು. ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ನಿಚ್ಚಣಕಿ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ನಯಾನಗರ ಪುಣ್ಯಾಶ್ರಮದ ಸುಖದೇವಾನಂದ ಸ್ವಾಮೀಜಿ, ಹೂಲಿಕಟ್ಟಿ ಹೊಸಕೇರಿ ಮಠದ ಲಿಂಗಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ನಿಯಮಿತದ ಅಧ್ಯಕ್ಷ ವಿವೇಕರಾವ್‌ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *