ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ರಾಜೀನಾಮೆ! ಬಾಂಗ್ಲಾದೇಶ ತೊರೆದು ಸುರಕ್ಷಿತ ಸ್ಥಳಕ್ಕೆ ಪಲಾಯನ?

ಢಾಕಾ: ಅಸಹಕಾರ ಚಳವಳಿಯ  ಎದುರು ಮಂಡಿಯೂರಿದ ಶೇಖ್ ಹಸೀನಾ ಅವರು ಬಾಂಗ್ಲಾದೇಶ ಪ್ರಧಾನಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಶೇಖ್ ಹಸೀನಾ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನಾಕಾರರು ಮತ್ತು ಅವರ ಪಕ್ಷದ ಅವಾಮಿ ಲೀಗ್‌ನ ಬೆಂಬಲಿಗರ ನಡುವಿನ ಹಿಂಸಾತ್ಮಕ ಘರ್ಷಣೆಯಿಂದಾಗಿ ರಾಜೀನಾಮೆ ನೀಡಿದ್ದಾರೆ. ಶೇಖ್ ಹಸೀನಾ ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಪ್ರಧಾನಿ

ಪ್ರತಿಭಟನಾಕಾರರು ಪ್ರಧಾನಿ ನಿವಾಸಕ್ಕೆ ನುಗ್ಗಿದ್ದಾರೆ. ಸೇನಾ ಮುಖ್ಯಸ್ಥರು ಶೀಘ್ರದಲ್ಲೇ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ. ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಅಸಹಕಾರ ಚಳವಳಿಯ ಮೊದಲ ದಿನವಾದ ಭಾನುವಾರ, ಪ್ರತಿಭಟನಕಾರರು ಹಾಗೂ ಆಡಳಿತಾರೂಢ ಅವಾಮಿ ಲೀಗ್‌ ಪಕ್ಷದ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು, ಸುಮಾರು 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಭಾರತಕ್ಕೆ ಪಲಾಯನ

ಹಿಂಸಾಚಾರ ಹಿನ್ನೆಲೆಯಲ್ಲಿ ಶೇಖ್ ಹಸೀನಾ ಹೆಲಿಕಾಪ್ಟರ್‌ನಲ್ಲಿ ರಾಜಧಾನಿ ಢಾಕಾವನ್ನು ತೊರೆದಿದ್ದು, ಭಾರತದಲ್ಲಿನ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಶೇಖ್ ಹಸೀನಾ ಅಗರ್ತಲಾಕ್ಕೆ ಬಂದಿಳಿದಿದ್ದಾರೆ ಎಂದು ತ್ರಿಪುರಾ ಪೊಲೀಸರು ಖಚಿತಪಡಿಸಿರುವುದಾಗಿ ಸಿಎನ್‌ಎನ್‌ ವಾಹಿನಿ ವರದಿ ಮಾಡಿದೆ. ಶೇಖ್​ ಹಸೀನಾ ಜೊತೆ 76 ವರ್ಷ ವಯಸ್ಸಿನ ಆಕೆಯ ಕಿರಿಯ ಸಹೋದರಿ ಶೇಖ್ ರೆಹಾನಾ ಇದ್ದಾರೆ. ಶೇಖ್​ ಹಸೀನಾ ರಾಜೀನಾಮೆಗೆ ಒತ್ತಾಯಿಸಿದ ಪ್ರತಿಭಟನಾಕಾರರು  ಪ್ರಧಾನಿಯವರ ಅಧಿಕೃತ ನಿವಾಸ ಗೊನೊ ಭಬನ್‌ಗೆ ಮುತ್ತಿಗೆ ಹಾಕಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಬಾಂಗ್ಲಾದೇಶ ಸೇನೆಯು ನಿಯಂತ್ರಣವನ್ನು ತೆಗೆದುಕೊಳ್ಳಲು ಮುಂದಾಗಿದೆ. ಶೇಖ್​ ಹಸೀನಾ ಅವರು ತ್ರಿಪುರದ ಅಗರ್ತಲಾದಿಂದ ಲಂಡನ್​ಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ. ಪ್ರಧಾನಿ

ಇದನ್ನೂ ಓದಿಬಾಂಗ್ಲಾದೇಶದಲ್ಲಿ ಹಿಂಸಾಚಾರಕ್ಕೆ 14 ಪೊಲೀಸರು ಸೇರಿ 91ಕ್ಕೇರಿದ ಸಾವಿನ ಸಂಖ್ಯೆ

ಬಾಂಗ್ಲಾದಲ್ಲಿ ಸೇನಾ ಆಡಳಿತ

ಪ್ರಧಾನಿ ರಾಜೀನಾಮೆ ಹಿನ್ನೆಲೆಯಲ್ಲಿ  ಬಾಂಗ್ಲಾದೇಶದ ಸೇನಾ ಅಧಿಕಾರವನ್ನು ವಹಿಸಿಕೊಳ್ಳಲಿದೆ. ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಝಮಾನ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಸೇನೆಯು ಮಧ್ಯಂತರ ಸರ್ಕಾರವನ್ನು ರಚಿಸಲಿದೆ ಎಂದರು. ಶಾಂತಿಯ ಹಾದಿಗೆ ಮರಳಲು ಪ್ರತಿಭಟನಾಕಾರರಿಗೆ ಮನವಿ ಮಾಡಿದರು.

ಜನ ಪ್ರಧಾನಿ ವಿರುದ್ಧ ತಿರುಗಿ ಬಿದ್ದಿದ್ದು ಏಕೆ?

ಉದ್ಯೋಗ ಕೋಟಾ ವಿರುದ್ಧ ವಿದ್ಯಾರ್ಥಿಗಳು ದಂಗೆ ಎದ್ದರು. ಏಕೆಂದರೆ  ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರ ಕುಟುಂಬಗಳಿಗೆ ಶೇ.30ರಷ್ಟು ಮೀಸಲಾತಿ ಸಿಗುತ್ತದೆ. ಆದರೆ ಮಹಿಳೆಯರಿಗೆ ಶೇ 10ರಷ್ಟು ಮೀಸಲಾತಿ ಸಿಗುತ್ತದೆ. 10 ರಷ್ಟು ಮೀಸಲಾತಿಯನ್ನು ಹಿಂದುಳಿದ ಜಿಲ್ಲೆಗಳಲ್ಲಿ ವಾಸಿಸುವ ಜನರಿಗೆ ಜಿಲ್ಲಾ ಕೋಟಾದ ಅಡಿಯಲ್ಲಿ ನೀಡಲಾಗುತ್ತದೆ. ಆದರೆ ಅಲ್ಪಸಂಖ್ಯಾತರಿಗೆ ಧರ್ಮದ ಆಧಾರದ ಮೇಲೆ 5% ಮೀಸಲಾತಿ ನೀಡಲಾಗಿದೆ. ಅಂಗವಿಕಲರಿಗೆ ಶೇಕಡ ಒಂದರಷ್ಟು ಮೀಸಲಾತಿ ನೀಡಲಾಗಿದೆ.

2018 ರಲ್ಲಿ ನಡೆದ ಪ್ರತಿಭಟನೆಯ ನಂತರ ಶೇಖ್ ಹಸೀನಾ ಸರ್ಕಾರವು ಈ ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸಿತು. ಆದರೆ, ಈ ವರ್ಷದ ಜೂನ್‌ನಲ್ಲಿ ಹೈಕೋರ್ಟ್ ಈ ನಿರ್ಧಾರ ತಪ್ಪು ಎಂದು ಹೇಳಿತ್ತು. ನ್ಯಾಯಾಲಯದ ತೀರ್ಪಿನ ನಂತರ, ಈಗ ಈ ವ್ಯವಸ್ಥೆಯು ದೇಶದಲ್ಲಿ ಮತ್ತೆ ಜಾರಿಗೆ ಬರಲಿತ್ತು. ಈ ಬಗ್ಗೆ ಬಾಂಗ್ಲಾದೇಶದಲ್ಲಿ ಪ್ರತಿಭಟನೆಗಳು ನಡೆದವು. ಕಳೆದ ತಿಂಗಳು ಆರಂಭವಾದ ಪ್ರತಿಭಟನೆಗಳು, ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸಲು ಪ್ರಧಾನಿ ಶೇಖ್ ಹಸೀನಾ ನಿರಾಕರಿಸಿದ ನಂತರ ತೀವ್ರಗೊಂಡವು.

Donate Janashakthi Media

Leave a Reply

Your email address will not be published. Required fields are marked *