ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಮಂತ್ರಿ ಸ್ಥಾನದಿಂದ ಇಮ್ರಾನ್ ಖಾನ್ ಕೆಳಗಿಳಿದ ಬಳಿಕ ಇದೀಗ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರ ಮತ್ತು ವಿರೋಧ ಪಕ್ಷದ ಪಿಎಂಎಲ್-ಎನ್ ನಾಯಕ ಶೆಹಬಾಜ್ ಷರೀಫ್ ಅವರು ಪಾಕಿಸ್ತಾನದ ಪ್ರಧಾನಿಯಾಗಿದ್ದಾರೆ.
ಶನಿವಾರ ಅವಿಶ್ವಾಸ ನಿರ್ಣಯದ ಬಳಿಕ ಪದಚ್ಯುತಗೊಂಡ ಇಮ್ರಾನ್ ಖಾನ್ ಅವರ ನಂತರ ಪಾಕಿಸ್ತಾನದ 23ನೇ ಪ್ರಧಾನಿಯಾಗಿ 70 ವರ್ಷದ ಶೆಹಬಾಜ್ ಷರೀಫ್ ಆಯ್ಕೆಯಾಗಿದ್ದು, ಇಂದು ರಾತ್ರಿ 8 ಗಂಟೆಗೆ ಶೆಹಬಾಜ್ ಷರೀಫ್ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ ಬಹುಮತಕ್ಕೆ 172 ಸದಸ್ಯರ ಬೆಂಬಲ ಬೇಕಿದ್ದು, ಶೆಹಬಾಜ್ ಷರೀಫ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದನ್ನು ಓದಿ: ಬಹುಮತ ಕಳೆದುಕೊಂಡ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
342 ಸದಸ್ಯ ಬಲದ ಸಂಸತ್‌ನಲ್ಲಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಪರವಾಗಿ 174 ಮತಗಳು ಚಲಾವಣೆಗೊಂಡವು. ಇದರೊಂದಿಗೆ ಇಮ್ರಾನ್ ಪ್ರಧಾನಿ ಸ್ಥಾನದಿಂದ ಹೊರ ನಡೆಯಬೇಕಾಯಿತು.
ನೂತನ ಪ್ರಧಾನಿ ಆಯ್ಕೆ ಬಹಿಷ್ಕರಿಸಿದ್ದ ಇಮ್ರಾನ್ ಖಾನ್ ನೇತೃತ್ವದ ಪಿಟಿಐ (ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್) ಪಕ್ಷದ ಸಂಸದರು ರಾಜೀನಾಮೆ ನೀಡಿ ಸದನದಿಂದ ಹೊರ ನಡೆದರು.
ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಸರ್ಕಾರವನ್ನು ಪದಚ್ಯುತಿಗೊಳಿಸುವುದರಲ್ಲಿ ಯಶಸ್ವಿ ಆಗಿದ್ದ ಪಾಕಿಸ್ತಾನದ ವಿರೋಧ ಪಕ್ಷವು ಇಂದು ನೂತನ ಪ್ರಧಾನ ಮಂತ್ರಿಯಾಗಿ ಶೆಹಬಾಜ್ ಷರೀಫ್ ಜವಾಬ್ದಾರಿ ವಹಿಸಿದೆ. ಇಂದು ರಾತ್ರಿ ಪ್ರಮಾಣವಚನ ಸ್ವೀಕರಿಸಲು ಎಲ್ಲಾ ಸಿದ್ಧತೆಗಳು ನಡೆದಿವೆ. ಇಮ್ರಾನ್ ಖಾನ್ ಪದಚ್ಯುತಿ ನಂತರ ಜಂಟಿ ವಿರೋಧ ಪಕ್ಷದ ನಾಯಕ ಶಹಬಾಜ್ ಷರೀಫ್ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸಲು ರಾಷ್ಟ್ರೀಯ ಅಸೆಂಬ್ಲಿ ಸೆಕ್ರೆಟರಿಯೇಟ್‌ನಲ್ಲಿ ನಾಮಪತ್ರ ಸಲ್ಲಿಸಿದ್ದರು.
ಇದನ್ನು ಓದಿ: ಪಾಕಿಸ್ತಾನ ಸಂಸತ್ ವಿಸರ್ಜನೆ : ಮೂರು ತಿಂಗಳಲ್ಲಿ ಚುನಾವಣೆ
ಶಹಬಾಜ್ ಷರೀಫ್ ಪಂಜಾಬ್ ಪ್ರಾಂತ್ಯಕ್ಕೆ 3 ಬಾರಿ ಮುಖ್ಯಮಂತ್ರಿಯಾಗಿದ್ದರು ಹೊಸ ಪ್ರಧಾನಿ ಆಯ್ಕೆಗೆ ಮುನ್ನ ಇಮ್ರಾನ್ ಖಾನ್ ಅವರು ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ ತನ್ನ ಪ್ರಧಾನಿ ಅಭ್ಯರ್ಥಿಯಾಗಿ ಶಾ ಮಹಮೂದ್ ಖುರೇಷಿ ಅವರನ್ನು ಕಣಕ್ಕಿಳಿಸಿತ್ತು.
ಇಮ್ರಾನ್ ಖಾನ್ ಪದಚ್ಯುತಿಗೂ ಮುನ್ನ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ಷಡ್ಯಂತ್ರದ ಹಿಂದೆ ಅಮೆರಿಕಾ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿದ್ದರು.
ಪಾಕಿಸ್ತಾನ ಮುಸ್ಲಿಂ ಲೀಗ್ ಅಧ್ಯಕ್ಷ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರರಾಗಿರುವ ಶಹಬಾಜ್ ಷರೀಫ್ ಇಂದು ರಾತ್ರಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.