- ಮನುಷ್ಯರಲ್ಲಿರುವಂತಹ ಹಲ್ಲನ್ನು ಹೊಂದಿರುವ ಮೀನು
- ವಿಶಿಷ್ಟ ಮೀನನ್ನು ಹಿಡಿದ ಮೀನುಗಾರ
- ಪುನಃ ಮೀನನ್ನು ನದಿಗೆ ಬಿಟ್ಟ ಮೀನುಗಾರ
ಮಾನವರ ಮುಖವನ್ನೇ ಹೋಲುವ ವಿಚಿತ್ರ ಮೀನೊಂದು ಕರ್ನಾಟಕದಲ್ಲಿ ಪತ್ತೆಯಾಗಿದೆ. ಕೊಪ್ಪಳದ ವಿರುಪಾಪುರ ಗಡ್ಡೆಯ ನದಿ ಪಾತ್ರದಲ್ಲಿ ಪತ್ತೆಯಾಗಿರುವ ಮೀನು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಈ ಮೀನಿನ ವಿಶೇಷತೆ ಎಲ್ಲರನ್ನೂ ಅಚ್ಚರಿಗೊಳ್ಳುವಂತೆ ಮಾಡಿದೆ. ಇದೇ ಕಾರಣದಿಂದ ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ
ಹಂಪಿ ಮತ್ತು ವಿರುಪಾಪುರ ಗಡ್ಡೆ ಮಧ್ಯೆ ಹರಿಯುವ ನದಿಯಲ್ಲಿ ಪತ್ತೆಯಾಗಿರುವ ಮೀನಿನ ಬಾಯಿಯಲ್ಲಿ ಮನುಷ್ಯನಂತೆ ಹಲ್ಲುಗಳು ಇವೆ. ಮೀನನ್ನು ನೋಡಿ ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ರಫಿ ಎನ್ನುವ ವ್ಯಕ್ತಿ ಮೀನು ಹಿಡಿಯುವಾಗ ಗಾಳಕ್ಕೆ ಈ ವಿಚಿತ್ರ ಮೀನು ಸಿಕ್ಕಿ ಬಿದ್ದಿದೆ. ನಿತ್ಯ ಹಂಪಿ ಹಾಗೂ ವಿರುಪಾಪುರ ಗಡ್ಡಿ ನದಿಯಲ್ಲಿ ಬೋಟ್ ನಡೆಸುವ ರಫಿ, ಈ ಹಿಂದೆ ಎಂದೂ ಈ ರೀತಿಯ ಮೀನನ್ನು ನೋಡಿಲ್ಲವಂತೆ. ಸ್ಥಳೀಯರು ಕೂಡ ಇದೇ ಮೊದಲ ಬಾರಿ ನಾವು ಇಂಥಹ ಮೀನನ್ನು ನೋಡಿದ್ದು ಎನ್ನುತ್ತಿದ್ದಾರೆ. ಅಪರೂಪದ ಮೀನನನ್ನು ಮತ್ತೆ ನದಿಗೆ ಬಿಟ್ಟಿರುವುದಾಗಿ ರಫಿ ತಿಳಿಸಿದ್ದಾರೆ.
ಇದನ್ನೂ ಓದಿ : ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಕ್ರೈಸ್ತ ಯುವಕನನ್ನು ಹೊರದಬ್ಬಿದ ಬಿಜೆಪಿ ಮುಖಂಡ
ಈ ಮೀನಿನ ಹೆಸರು ಶೀಪ್ ಶೆಡ್ ಫಿಶ್: ಶೀಪ್ ಶೆಡ್ ಫಿಶ್ ಎಂದು ಕರೆಯಲ್ಪಡುವ ಮೀನು ಇದು. ಸಾಮಾನ್ಯವಾಗಿ ಈ ಮೀನುಗಳು ಬಂಡೆಗಳು, ಜೆಟ್ಟಿಗಳು ಮತ್ತು ಸೇತುವೆಗಳ ಬಳಿ ಕಂಡುಬರುತ್ತವೆ. ಕಪ್ಪು ಮತ್ತು ಬಿಳಿ ಪಟ್ಟೆಗಳಿಂದಾಗಿ ಅವುಗಳನ್ನು `ಕನ್ವಿಕ್ಟ್ ಫಿಶ್’ ಎಂದೂ ಕರೆಯುತ್ತಾರೆ. ಸದ್ಯ ವೈರಲ್ ಆಗುತ್ತಿರುವ ಫೋಟೋದಲ್ಲಿ ಶೀಪ್ ಶೆಡ್ ಮೀನಿನ ಬಾಯಿಯ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಮುತ್ತಿನಂತೆ ಜೋಡಿಸಲ್ಪಟ್ಟ ಹಲ್ಲುಗಳು ಸ್ಪಷ್ಟವಾಗಿ ಕಾಣಿಸುತ್ತದೆ. ಈ ಹಲ್ಲುಗಳು ಥೇಟ್ ಮನುಷ್ಯರ ಹಲ್ಲುಗಳನ್ನೇ ಹೋಲುತ್ತವೆ.
ಈ ಭೂಮಿಯಲ್ಲಿರುವ ಒಂದೊಂದು ಜೀವರಾಶಿಯಲ್ಲಿಯೂ ಅದರದ್ದೇ ಆದ ವಿಶೇಷತೆಗಳಿರುತ್ತವೆ. ಇಂತಹ ವಿಶಿಷ್ಟ ಜೀವಿಗಳನ್ನು ನೋಡುವಾಗ ಸಹಜವಾಗಿಯೇ ಅಚ್ಚರಿಯಾಗುತ್ತದೆ, ಕುತೂಹಲ ಮೂಡುತ್ತದೆ. ಹೀಗೆ ಅಚ್ಚರಿ ಮತ್ತು ಕುತೂಹಲ ಮೂಡಿಸುವ ಈ ಜೀವರಾಶಿಗಳ ಫೋಟೋ, ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಸದ್ಯ ಅಂತಹದ್ದೇ ಫೋಟೋವೊಂದು ನೆಟ್ಟಿಗರ ಗಮನ ಸೆಳೆದಿದೆ.
ಈ ಮೀನುಗಳು ಸಾಮಾನ್ಯವಾಗಿ ಉತ್ತರ ಕೆರೊಲಿನಾದಲ್ಲಿ ಕಾಣಸಿಗುತ್ತವೆ. ಈ ಹಿಂದೆ ಫೆಬ್ರವರಿಯಲ್ಲಿ ಪಾಲ್ ಲೋರ್ ಹಾಗೂ ಆಗಸ್ಟ್ ನಲ್ಲಿ ನಾಥನ್ ಮಾರ್ಟಿನ್ ಎಂಬ ಮೀನುಗಾರರಿಬ್ಬರು ಈ ಮೀನನನ್ನು ಪತ್ತೆ ಹಚ್ಚಿದ್ದರು. ಈ ಫೋಟೋಗಳು ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.