ಬೆಂಗಳೂರು: ಗುತ್ತಿಗೆದಾರರಿಂದ ಶೇಕಡಾ 40ರಷ್ಟು ಕಮಿಷನ್ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಇದೇ ವಿಚಾರದ ಬಗ್ಗೆ ಕರ್ನಾಟಕ ರಾಜ್ಯ ಕಂಟ್ರಾಕ್ಟರ್ ಅಸೋಸಿಯೇಷನ್ ಪತ್ರಿಕಾಗೋಷ್ಠಿ ನಡೆಸಿದೆ. ಅಧ್ಯಕ್ಷ ಡಿ ಕೆಂಪಣ್ಣ ಹಾಗೂ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದ್ದು, ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಬೇಕಿದ್ದರೂ ಶೇಕಡ 40ರಷ್ಟು ಕಮಿಷನ್ ಕೊಡಬೇಕಾಗುತ್ತದೆ. ಅದಕ್ಕಾಗಿ ಹಿಂದೆ ಯಡಿಯೂರಪ್ಪಗೆ ನಾವು ಪತ್ರ ಬರೆದಿದ್ದೆವು. ಯಡಿಯೂರಪ್ಪ ನಮ್ಮ ಪತ್ರಕ್ಕೆ ಸ್ಪಂದಿಸಲಿಲ್ಲ. ಹೀಗಾಗಿ ಬಿ ಎಲ್ ಸಂತೋಷ್ ಅವರಿಗೂ ತಿಳಿಸಿದೇವು ಎಂದು ಹೇಳಿದರು.
ಕಮಿಷನ್ ವಿಚಾರದ ಬಗ್ಗೆಯೇ ನಾವು ಮತ್ತೆ ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆದೆವು. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಯಿತು. ಆಮೇಲೆ ಬಂದ ಬಸವರಾಜ ಬೊಮ್ಮಾಯಿ ಸರ್ಕಾರವು ಸಹ ನಮ್ಮ ಈ ವಿಚಾರದ ಬಗ್ಗೆ ಕ್ಯಾರೇ ಎನ್ನಲಿಲ್ಲ. ರಾಜ್ಯಪಾಲರ ಬಳಿಯೂ ದೂರನ್ನು ತೆಗೆದುಕೊಂಡು ಹೋದೆವು . ಪಿಡಬ್ಲ್ಯೂಡಿ ಸಚಿವರ ಪ್ರಸ್ತಾಪಿಸಿದಾಗ ಅವರು ಅದರಲ್ಲಿ ಭ್ರಷ್ಟಾಚಾರ ಬಗ್ಗೆ ಹೇಳಬಾರದಿತ್ತು ಅಂತ ಹೇಳಿದರು. ಭ್ರಷ್ಟಾಚಾರ ಸಾಬೀತು ಮಾಡಿದಿರಾ ಅಂದ್ರೆ ಅದು ಆಗೋದಿಲ್ಲ. ನಮ್ಮ ಬಳಿ ಸಾಕ್ಷಿ ಇದೆ ಅಂತ ಡಿ ಕೆಂಪಣ್ಣ ಹೇಳಿಕೆ ನೀಡಿದ್ದಾರೆ.
ಸ್ಥಳೀಯ ಕಾಂಟ್ರಾಕ್ಟರ್ ದಾರರಿಗೆ ಯಾವುದೇ ಕೆಲಸ ಸಿಗುತ್ತಿಲ್ಲ. ಪ್ಯಾಕೇಜ್ ಸಿಸ್ಟಮ್ ತಂದಿರುವುದರಿಂದ ಸ್ಥಳೀಯ ಕಾಂಟ್ರಾಕ್ಟರ್ಗೆ ಅವಕಾಶ ಸಿಗುತ್ತಿಲ್ಲ. ಮುಖ್ಯಮಂತ್ರಿ ನಮಗೆ ಮಾತನಾಡುವುದಕ್ಕೆ ಅವಕಾಶ ಕೊಡುತ್ತಿಲ್ಲ. ಜನವರಿಯಲ್ಲಿ ನಾವು ಬೃಹತ್ ಹೋರಾಟ ಮಾಡಲು ತೀರ್ಮಾನ ಮಾಡಿದ್ದೇವೆ. ಸರ್ಕಾರ ನಮ್ಮನ್ನು ಕರೆದು ಮಾತುಕತೆ ನಡೆಸಬೇಕು. ಯಾರು ಎಲ್ಲಿ, ಹೇಗೆ ಕಮಿಷನ್ ಸಂಗ್ರಹ ಮಾಡುತ್ತಿದ್ದರು ಅಂತ ನಾವು ಹೇಳೋದಕ್ಕೆ ಸಿದ್ಧವಿದ್ದೇವೆ ಎಂದು ಡಿ ಕೆಂಪಣ್ಣ ತಿಳಿಸಿದರು.
ಬೆಂಗಳೂರು ನಗರದಲ್ಲಿ 20 ಸಾವಿರ ಕೋಟಿ ಕಾಮಗಾರಿ ಆಗಿದೆ. ಯಾವುದರಲ್ಲಿ ಎಷ್ಟು ಕ್ವಾಲಿಟಿ ಇದೆ ಎಂದು ಹೇಳಿ. ಇದರಲ್ಲಿ ಅಧಿಕಾರಿಗಳು ಕೂಡ ಪಾಲುದಾರರಾಗಿದ್ದಾರೆ. ನಮ್ಮಿಂದ ಮಾತ್ರ ವ್ಯವಸ್ಥೆ ಹಾಳಾಗಿಲ್ಲ, ಅಧಿಕಾರಿಗಳು ಇದ್ದಾರೆ. ದಾಖಲೆ ಇಲ್ಲದೆ ಮಾತನಾಡುತ್ತಿಲ್ಲ, ಸಾಬೀತು ಮಾಡುತ್ತೇವೆ. ಮುಖ್ಯಮಂತ್ರಿ ತಮ್ಮನ್ನು ಚರ್ಚೆಗೆ ಕರೆಯುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಅಸೋಸಿಯೇಷನ್ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದ್ದಾರೆ.