ನದಿ, ಜಲಪಾತಗಳಲ್ಲಿ ಮುಳುಗಿದ ಶವ ತೆಗೆಯುವ ಬಾಬಾ ಅಣ್ಣು ಸಿದ್ದಿ ಅವರ ಸಾಹಸ ಗಾಥೆ

ಜ್ಯೋತಿ ಶಾಂತರಾಜು

ಉತ್ತರ ಕನ್ನಡ ಜಿಲ್ಲೆಯ, ಅರಬೈಲ್ ತಾಲ್ಲೂಕ್, ಕೆಳಾಸೆ ಗ್ರಾಮದ ಸಿದ್ದಿ ಸಮುದಾಯದ ಈ ಅಣ್ಣು ಬಾಬಾ ರವರು ಸುಮಾರು 200 ಕ್ಕೂ ಹೆಚ್ಚು ಶವಗಳನ್ನು ನೀರಿನಲ್ಲಿ ಮುಳುಗಿ ತೆಗೆದಿದ್ದಾರೆ. ತುಂಬಾ ಆಳಕ್ಕಿಳಿದು, ಉಸಿರುಗಟ್ಟಿ ಕಾರ್ಯಾಚರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.  ಎಲ್ಲಿಯಾದರು ಅಕಸ್ಮಾತ್ ಆಗಿ ಕಾಲು ಜಾರಿ ಬಿದ್ದ ಶವಗಳನ್ನು ತೆಗೆಯಲು ಪೊಲೀಸ್ ನವರೇ ಬಂದು ಇವರನ್ನು ಕರೆದುಕೊಂಡು ಹೋಗುತ್ತಿದ್ದರಂತೆ.

ಯಲ್ಲಾಪುರದಿಂದ 37 ಕಿ.ಮೀ. ಇರುವ ಸಾತೋಡಿ ಫಾಲ್ಸ್, ಸಿದ್ದಾಪುರ, ಅಂಕೋಲ, ಭಟ್ಕಳ, ಶಿರಸಿಯ ಫಾಲ್ಸ್ ಗಳಲ್ಲಿಯೂ ಹಲವಾರು ಶವಗಳನ್ನು ತೆಗೆದಿದ್ದಾರೆ.

ಶಾಲೆಯ ಮುಖವನ್ನೇ ನೋಡದ ಇವರು ನೀರಿನಲ್ಲಿ ಬಿದ್ದ ಶವಗಳನ್ನು ತೆಗೆಯಲು ಸದಾ ಸಿದ್ಧರು. ಅವರೇ ಹೇಳುವಂತೆ,  ನಾನು ಏನೂ ಓದಿಲ್ಲ. ನಮ್ಮೂರಲ್ಲಿ ಆಗೆಲ್ಲ ಶಾಲೆಗಳೇ ಇರಲಿಲ್ಲ. ಹಾಗಾಗಿ ನಾನು ಶಾಲೆಯ ಮುಖವನ್ನೇ ಕಂಡವನಲ್ಲ ಎನ್ನುತ್ತಾರೆ. ನೀರಿನಲ್ಲಿ ಮುಳುಗಿದ ಶವಗಳನ್ನು ತೆಗೆದು ತೆಗೆದು ಅಭ್ಯಾಸವಾಗಿ 5 ರಿಂದ 10 ನಿಮಿಷ ನೀರಿನಲ್ಲಿ ಮುಳುಗಲು ಸಾಧ್ಯವಾಗುತ್ತಿತ್ತು. ಮನೆಗೆ ಗೊತ್ತಿಲ್ಲದೆ ಎಷ್ಟೋ ಸಲ ಶವಗಳನ್ನು ತೆಗೆಯಲು ಫಾಲ್ಸ್ ಗೆ ಹೋಗಿ ಬಿಡುತ್ತಿದ್ದೆ. ಒಮ್ಮೊಮ್ಮೆ 4, 5 ದಿನವಾದರೂ ಬರುತ್ತಿರಲಿಲ್ಲ. ನೀರಿನೊಳಗೆ ದೇಹ ಹೋದರೆ ಒಮ್ಮೊಮ್ಮೆ ಆಳಕ್ಕೆ ಹೋಗಿ ಕುಳಿತು ಬಿಡುತ್ತದೆ. ಆಗ ಎಷ್ಟು ಹುಡುಕಾಡಿದರು ಸಿಗುವುದಿಲ್ಲ. ಅಂತಹ ಸಮಯದಲ್ಲಿ ಸ್ವಲ್ಪ ಸಮಯ ತೆಗೆದು ಕೊಳ್ಳುತ್ತದೆ.

ಒಮ್ಮೆ ಸಾತೋಡಿ ಫಾಲ್ಸ್ ನಲ್ಲಿ ಒಂದೇ ಸಲ 7 ಜನರು ಸಿಕ್ಕಿ ತೀರಿಕೊಂಡಿದ್ದರು.  ಬಹುಷಃ 2005- 2006 ನೇ ಇಸವಿ ಇರಬಹುದು ಅಂತ ನೆನಪಿಸಿ ಕೊಳ್ಳುತ್ತಾರೆ. ಆಗ 7 ಹೆಣಗಳನ್ನು ಒಟ್ಟಿಗೆ ತೆಗೆದಿದ್ದೇನೆ. ನೀರಿನಲ್ಲಿ ಮುಳುಗಿ ಹೆಣ ತೆಗೆಯಲು ಬಹಳ ಧೈರ್ಯ ಬೇಕು 10 ಅಡಿ, 15 ಅಡಿಯಿಂದಲೂ ಹೆಣ ತೆಗೆದದ್ದು ಇದೆ. ನೀರಿನೊಳಗೆ ಹೋಗುವಾಗ ಸೊಂಟಕ್ಕೆ ಒಂದು ಹಗ್ಗವನ್ನು ಕಟ್ಟಿಕೊಂಡು ಆ ಹಗ್ಗ ಹಿಡಿದು ನೀರಿನೊಳಗೆ ಮುಳುಗಿ  ಹುಡುಕುತ್ತೇನೆ. ಶವದ ಕೈ ಸಿಗಲಿ, ಕಾಲು ಸಿಗಲಿ ಅದನ್ನು ಹಿಡಿದುಕೊಂಡು ಹಗ್ಗವನ್ನು ಒಮ್ಮೆ ಜಗ್ಗುತ್ತೇನೆ. ನೀರಿನೊಳಗಿಂದ ಮೇಲಕ್ಕೆ ಸಿಗ್ನಲ್ ಕೊಡಲು ಆಗುವುದಿಲ್ಲ. ಆಗ ಈ ತರಹ ಸೂಚನೆ ಪೋಲಿಸಿನವರಿಗೆ ಮೊದಲೇ ಹೇಳಿರುತ್ತಿದ್ದೆ. ಎಷ್ಟೇ ಆಳಕ್ಕಾದರೂ ಇಳಿಯುತ್ತೇನೆ. ಒಮ್ಮೆ ಗಣೇಶ್ ಫಾಲ್ಸ್ ನಲ್ಲಿ 50 ಅಡಿ ನೀರಿತ್ತು. ಕೆಳಗೆ ಹೋದರೆ ಜೀವಂತ ಇದ್ದವರೇ ಮೇಲೆ ಬರುವುದು ಕಷ್ಟ. ಅಂತಹ ಸಮಯದಲ್ಲೂ ನನಗೆ ಏನೂ ತೊಂದರೆ ಮಾಡಿಕೊಳ್ಳದೆ ಶವವನ್ನು ತೆಗೆದಿದ್ದೇನೆ.

ಹಿಂದೆ ಊರಿನ ಪಟೇಲರೆಲ್ಲ ಹೇಳುತ್ತಿದ್ದರಂತೆ ಇಂತಹವನೊಬ್ಬ ನೀರಿನಲ್ಲಿ ಮುಳುಗಿ ಹೆಣ ತೆಗೆಯುತ್ತಾನೆ ಅಂತ. ಆಗಿನಿಂದ ಪೋಲಿಸಿನವರು ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ನೀರಿನಲ್ಲಿ ಮುಳುಗಿದ ಶವಗಳನ್ನು ತೆಗೆಯಲು ಪ್ರಾರಂಭಿಸಿದ್ದು ಇಪ್ಪತ್ತರ ಪ್ರಾಯದಲ್ಲಿ. ಆಗೆಲ್ಲ ಅಗ್ನಿಶಾಮಕದಳ ಪಡೆ ಹೆಚ್ಚು ಲಭ್ಯವಿರಲಿಲ್ಲ. ಹಾಗಾಗಿ ಪೊಲೀಸ್ ನವರಿಗೆ ಎಲ್ಲಿಯಾದರೂ ಯಾವುದೇ ಫಾಲ್ಸ್ ನಿಂದ ನೀರಿನೊಳಗೆ ಬಿದ್ದಿದ್ದಾರೆ ಎಂಬ ಸುದ್ದಿ ಹೋದ ಕೂಡಲೆ ನಮ್ಮ ಮನೆಗೆ ಬಂದು ನನ್ನ ಕರೆದುಕೊಂಡು ಹೋಗುತ್ತಿದ್ದರು.

ಫಾಲ್ಸ್ ಗಳಲ್ಲಿ ಸೂಚನಾ ಫಲಕಗಳನ್ನು ಹಾಕಿರುತ್ತಿದ್ದರು. ನೀರಿಗೆ ಯಾರೂ ಇಳಿಯಬೇಡಿ ಎಂದು. ಆದರೂ ಪ್ರವಾಸಿಗರು ಮೋಜು, ಮಸ್ತಿಗೆ, ಫೋಟೋ ತೆಗೆಯಲು ಅಂತ ಇಳಿದು ಅಲ್ಲಿಂದ ಕಾಲು ಜಾರಿ ಬಿದ್ದು ಪ್ರಾಣ ಬಿಟ್ಟವರು ಅದೆಷ್ಟು ಮಂದಿಯೋ.

ಸಾತೋಡಿ ಫಾಲ್ಸ್ ನಲ್ಲಿ ತುಂಬ ಜನರು ಹೀಗೆ ಅನಾಹುತಕ್ಕೀಡಾಗುತ್ತಾರೆ. ಅದರಲ್ಲಿ ಹದಿಹರೆಯದವರೇ ಹೆಚ್ಚು ಎಂದು ಆತಂಕವನ್ನು ವ್ಯಕ್ತ ಪಡಿಸುತ್ತಾರೆ.

ಒಮ್ಮೆ ಕಾಳಿ ನದಿಯಲ್ಲಿ ತಾಯಿ ತನ್ನ ಎರಡು ಹೆಣ್ಣು ಮಕ್ಕಳನ್ನು ಹಿಡಿದುಕೊಂಡೆ ಸತ್ತು ಹೋಗಿದ್ದರು. ಅವರನ್ನು ನಾನೆ ತೆಗೆದಿದ್ದೆ.

ಚಿಕ್ಕ ವಯಸ್ಸಿನಲ್ಲಿ ಹುಡುಗರ ಜೊತೆಗೆ ಸೇರಿ ಈಜಾಡುವುದನ್ನು ಕಲಿತಿದ್ದೆ. ಈಜಾಡುತ್ತಾ ನೀರಲ್ಲಿ ಕಣ್ಣು ಬಿಡುವುದನ್ನು ಕಲಿತೆ. ಆಗ ನೀರಿನಲ್ಲಿ ಆಮೆ, ಮೀನು ಎಲ್ಲ ಕಾಣಿಸುತ್ತಿದ್ದವು. ಆಗ ಕಲಿತ ವಿದ್ಯೆ ಶವ  ತೆಗೆಯುವಲ್ಲಿ ಸಹಾಯಕ್ಕೆ ಬರುತ್ತಿತ್ತು. ನೀರಲ್ಲಿ ಕಣ್ಣು ಬಿಡುವುದನ್ನು ಕಲಿತದ್ದರಿಂದ ನೀರಲ್ಲಿ ಮುಳುಗಿ ಒಳಗಿರುವ ಹೆಣಗಳನ್ನು ಗುರುತಿಸಿ, ತೆಗೆಯುತ್ತಿದ್ದೆ.  ಟ್ರೆಕ್ಕಿಂಗ್ ಗೆ ಅಂತ ಬಂದ ಪ್ರವಾಸಿಗರು ಅಕಸ್ಮಾತ್ ಆಗಿ ಕಾಲು ಜಾರಿ ಕೆಳಗೆ ಬಿದ್ದು ಬಿಡುತ್ತಿದ್ದರು. ಆಗ ಪೊಲೀಸ್ ನವರು ಬೈಕ್ ನಲ್ಲೋ ಜೀಪ್ ನಲ್ಲೋ ಬಂದು ನನ್ನ ಕರೆದುಕೊಂಡು ಹೋಗುತ್ತಿದ್ದರು.

ಸೊಂಟಕ್ಕೆ ಹಗ್ಗ ಕಟ್ಟಿ ನೀರಿನೊಳಗೆ ಇಳಿಸುತ್ತಿದ್ದರು.  ಹಗ್ಗ ಕೆಳಗೆ, ಮೇಲೆ ತೆಗೆದು ಕೊಳ್ಳಲು ಅವರಿಗೆ ಮೊದಲೇ ಕೆಲವು ಸನ್ನೆಗಳನ್ನು ಹೇಳಿರುತ್ತಿದ್ದೆ. ಆ ಸನ್ನೆಯ ಮುಖಾಂತರ ಪೊಲೀಸ್ ನವರು ಕೆಲಸ ಮಾಡುತ್ತಿದ್ದರು. ಕಣ್ಣು ಬಿಟ್ಟುಕೊಂಡೆ ನೀರಿನಲ್ಲಿ ಹುಡುಕಬೇಕು. ನಾನು ಕಿವಿಯಲ್ಲಿ, ಬಾಯಲ್ಲಿ ಕೊಬ್ಬರಿ ಎಣ್ಣೆ ಹಾಕಿಕೊಂಡು ನೀರಿನೊಳಗೆ ಇಳಿಯುತ್ತಿದ್ದೆ. ನೀರಿನೊಳಗೆ ಆಳಕ್ಕೆ ಹೋದಂತೆ ಕಪ್ಪಗೆ ಕಾಣಿಸುತ್ತಿತ್ತು. ಆಗ ಬಾಯಿಯಿಂದ ಕೊಬ್ಬರಿ ಎಣ್ಣೆ ಬಿಟ್ಟರೆ ಎಲ್ಲ ತಿಳಿಯಾಗಿ, ಶುಭ್ರವಾಗಿ  ಕಾಣಿಸುತ್ತಿತ್ತು. ಆಗ ಶವಗಳನ್ನು ಹುಡುಕುವುದು ಸುಲಭವಾಗುತ್ತಿತ್ತು.

ಹೀಗೆ ತಮ್ಮ ಜೀವವನ್ನೇ, ಜೀವನವನ್ನೇ ಪಣಕ್ಕಿಟ್ಟು ಮಾಡುವ ಈ ಕೆಲಸಕ್ಕೆ ಯಾವ ಸಂಭಾವನೆಯಂತೂ ಇಲ್ಲ ಕೊನೇಪಕ್ಷ ಇವರನ್ನು ಗುರುತಿಸುವವರೂ ಇಲ್ಲದಾಗಿದೆ. ಮತ್ತು ಆಳದ ನೀರಿಗಿಳಿದು ಶವ ತರುವ ಈ ಕೆಲಸವೇನೂ ಸುಲಭವಾದ್ದಲ್ಲ. ಇಲ್ಲಿಯವರೆಗೆ ದೇಹದಲ್ಲಿ ಶಕ್ತಿ ಇರುವವರೆಗೆ ಹೇಗೋ ಜೀವನ ಸಾಗಿಸಿದ ಇವರಿಗೆ ಮುಪ್ಪಿನ ಜೀವನ ನಡೆಸುವುದು ಹೇಗೆ ಎಂಬ ಚಿಂತೆಯಾಗಿದೆ. ಈಗ ಬಾಬಾ ಅಣ್ಣುರವರಿಗೆ ಎಂಭತ್ತರ ಪ್ರಾಯ. ಈ ವಯಸ್ಸಿನಲ್ಲಿ ಕೆಲಸಕ್ಕೆ ಹೋಗುವುದು ತುಂಬ ಕಷ್ಟ. ಚಿಕ್ಕಂದಿನಲ್ಲಿ ತಾಯಿಯನ್ನು ಕಳೆದುಕೊಂಡ ಇವರು ಆರ್ಥಿಕವಾಗಿ ಹಿಂದುಳಿದವರು.

ನಾನು ತಾಯಿಯನ್ನು ನೋಡಲೇ ಇಲ್ಲ. ತಂದೆಯ ಹೆಸರು ಅಣ್ಣು. ನನಗೆ ತಿಳುವಳಿಕೆ ಬಂದಾಗಿನಿಂದಲೂ ಅವರಿವರ ಮನೆಯಲ್ಲಿ ಕೆಲಸ ಮಾಡಿಕೊಂಡು ಬಂದು ಬೆಳೆದು ದೊಡ್ಡವನಾದೆ. ಗದ್ದೆ ಕೊಯ್ಯುವುದು, ಉತ್ತರಿ ಹಾಕುವುದು, ತೆಂಗಿನಕಾಯಿ ಕೀಳುವುದು, ಆಗ ಎಲ್ಲ ಕೂಲಿ ಒಂದು ರೂಪಾಯಿ ಕೊಡುತ್ತಿದ್ದರು.

ಅರಣ್ಯ ಇಲಾಖೆಯಲ್ಲಿ ಗಿಡ ನೆಡುವ ಕೆಲಸಕ್ಕೆ ಹೋದರೆ ಒಂದೂವರೆ ರೂಪಾಯಿ ಕೊಡುತ್ತಿದ್ದರು. ಭಟ್ಟರ ಮನೆಯಲ್ಲಿ ಕೆಲಸ ಮಾಡಿದರೆ, ಗಂಡು ಮಕ್ಕಳಿಗೆ ಒಂದು ರೂ. ಹೆಣ್ಣು ಮಕ್ಕಳಿಗೆ ನಾಲ್ಕಾಣಿ ಸಂಬಳ ಕೊಡುತ್ತಿದ್ದರು. ಚಿಕ್ಕ ಹುಡುಗನಿಂದಲೇ ಅವರಿವರ ತೋಟಗಳಲ್ಲಿ ಗದ್ದೆ ಕೊಯ್ಯುವುದು, ಗಿಡ ನೆಡುವುದು, ಕಾಯಿ ಕೀಳುವುದು ಮಾಡುತ್ತ ಕೆಲಸ ಮಾಡಿಕೊಂಡು ಬೆಳೆದೆ.

ನೀರಿನಲ್ಲಿ ಮುಳುಗಿದ ಇನ್ನೂರಕ್ಕೂ ಹೆಚ್ಚು ಶವಗಳನ್ನು ತೆಗೆದು ಸತ್ತವರ ದುಃಖದಲ್ಲಿ ಭಾಗಿಯಾಗುವ ಇವರ ದುಃಖ ಈಗ ಕೇಳುವವರಿಲ್ಲ. ಅವರ ಹೆಂಡತಿ ಗೀತಾ ಅಣ್ಣು ಹೇಳುತ್ತಾರೆ. ನನ್ನ ಗಂಡನಿಗೆ ವಯಸ್ಸಾಗಿದೆ. ಈಗ ಅವರು ಹೊರಗೆಲ್ಲೂ ಕೆಲಸಕ್ಕೆ ಹೋಗುವುದಿಲ್ಲ. ನಾಟಿ ಮಾಡುವುದು, ಅಡಿಕೆ ಸುಲಿಯುವುದು ಹೀಗೆ ನಾನು ಕೂಲಿಗೆ ಹೋಗಿ ಮನೆಯ ಸಂಸಾರದ ನೊಗವನ್ನು ಹೊತ್ತು ಕೊಂಡು ಹೋಗುತ್ತಿದ್ದೇನೆ. ಆದರೆ ಪ್ರತಿ ದಿನವೂ ಕೆಲಸ ಇರುವುದಿಲ್ಲ. ಕೆಲಸವಿರದ ದಿನಗಳಲ್ಲಿ ಜೀವನ ನಡೆಸುವುದೇ ಕಷ್ಟ’ ಎಂದರು.

ಜೀವವನ್ನು ಅಂಗೈಯಲ್ಲಿ ಹಿಡಿದು ಉಸಿರುಗಟ್ಟಿ ಮಾಡುವ ಇವರ ಸಮಾಜಸೇವೆಗೆ ಅಗತ್ಯವಾದ ಸಹಾಯ ಪ್ರೋತ್ಸಾಹ ಕೊಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *