ಪೌರ ಕಾರ್ಮಿಕರ ಬೇಡಿಕೆ, ತ್ಯಾಜ್ಯ ವಿಲೇವಾರಿ ಮಾಡದಿದ್ದಲ್ಲಿ ಶಾಸಕರ ಮನೆಯೆದುರು ತ್ಯಾಜ್ಯ ಸುರಿದು ಪ್ರತಿಭಟನೆ: ಬಿ ಕೆ ಇಮ್ತಿಯಾಜ್

ಮಂಗಳೂರು: ಪೌರ ಕಾರ್ಮಿಕರು, ಮುನ್ಸಿಪಲ್ ಕಾರ್ಮಿಕರು ಕಳೆದ 9 ದಿನಗಳಿಂದ ತಮ್ಮ ಬೇಡಿಕೆಗಳನ್ನು ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದಾರೆ. ಹೋರಾಟ ಮುಂದುವರೆದಿದೆ. ಆದರೆ, ಈ ನಡುವೆ ಶಾಸಕ ವೇದವ್ಯಾಸ ಕಾಮತ್ ಕಾರ್ಮಿಕರ ಜೊತೆ ದರ್ಪ ತೋರಿಸಿ ಬೆದರಿಕೆ ಹಾಕಿರುವುದು ತೀರಾ ಖಂಡನೀಯ. ಕಾರ್ಮಿಕರ ಬೇಡಿಕೆ ಇತ್ಯರ್ಥಗೊಳ್ಳದಿದ್ದಲ್ಲಿ ಶಾಸಕರ ಮನೆಯೆದುರು ತ್ಯಾಜ್ಯ ಸುರಿದು ಪ್ರತಿಭಟನೆ ನಡೆಸಲಾಗುವುದು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿವೈಎಫ್‌ಐ) ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟವನ್ನು ಬೆಂಬಲಿಸಿ ವಿವಿಧ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮಾರ್ಚ್‌ 21ರಂದು ಮಂಗಳೂರು ನಗರ ಪಾಲಿಕೆ ಕಚೇರಿಯೆದುರು ಜರುಗಿದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸುತ್ತಾ ಮಾತನಾಡಿದ ಬಿ ಕೆ ಇಮ್ತಿಯಾಜ್‌, ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದರೂ, ಡಬ್ಬಲ್ ಇಂಜಿನ್ ಸರಕಾರವೆಂದು ಬೀಗುತ್ತಿರುವ ಬಿಜೆಪಿಯೂ ಯಾವುದೇ ರೀತಿಯ ಸ್ಪಂದನ ಮಾಡದೆ ತನ್ನ ಕ್ರೌರ್ಯವನ್ನು ಪ್ರದರ್ಶಿಸಿದೆ. ನಗರ ಪಟ್ಟಣ ಪ್ರದೇಶದ ಸುಂದರೀಕರಣ ಹಾಗೂ ಸ್ವಚ್ಛತೆಗಾಗಿ ತನ್ನ ಸರ್ವಸ್ವವನ್ನೂ ಮುಡಿಪಾಗಿಟ್ಟ ಪೌರ ಕಾರ್ಮಿಕರ ಉತ್ತಮ ಬದುಕಿಗಾಗಿ ಎಳ್ಳಷ್ಟೂ ಕಾಳಜಿ ವಹಿಸದ ರಾಜ್ಯದ ಬಿಜೆಪಿ ಸರಕಾರ, ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ದುರುಪಯೋಗ ಪಡಿಸುತ್ತಿದೆ. ತೀರಾ ಸಂಕಷ್ಟದಲ್ಲಿರುವ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಇದನ್ನು ಓದಿ: ಪೌರ ಕಾರ್ಮಿಕರ ಬೇಡಿಕೆ ಈಡೇರಿಸಿ-ಕಸ ವಿಲೇವಾರಿಗೆ ಕ್ರಮಕೈಗೊಳ್ಳಿ: ಸಿಪಿಐ(ಎಂ) ಒತ್ತಾಯ

ಪ್ರಾಸ್ತಾವಿಕ ಮಾತುಗಳನ್ನು ಆಡಿದ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಯಾವುದೇ ಸಾಮಾಜಿಕ ಭದ್ರತೆಯಿಲ್ಲದೆ ಅತ್ಯಂತ ದೀರ್ಘ ಅವಧಿಯಲ್ಲಿ ಗುತ್ತಿಗೆ ಆಧಾರಿತವಾಗಿ ದುಡಿಯುತ್ತಿರುವ ಪೌರ ಹಾಗೂ ಮುನ್ಸಿಪಲ್ ಕಾರ್ಮಿಕರ ಬದುಕು ತೀರಾ ಶೋಚನೀಯವಾಗಿದೆ. ರಾಜ್ಯವನ್ನಾಳಿದ ಎಲ್ಲಾ ಸರಕಾರಗಳು ಇಲ್ಲಿಯವರೆಗೂ ಕಿಂಚಿತ್ತೂ ಗಮನ ನೀಡಿಲ್ಲ. ಎಲ್ಲಾ ಕಾರ್ಮಿಕರನ್ನು ಖಾಯಂಗೊಳಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಸರ್ಕಾರ ಮುಂದಾಗಬೇಕೆಂದು ಹೇಳಿದರು.

ಪೌರ ಕಾರ್ಮಿಕರ ಹೋರಾಟವನ್ನು ಬೆಂಬಲಿಸಿ ರೈತ ಸಂಘದ ಜಿಲ್ಲಾ ನಾಯಕ ಯಾದವ ಶೆಟ್ಟಿ, ಮಾಜಿ ಮೇಯರ್ ಅಶ್ರಫ್ ಕೆ ಮಾತನಾಡಿ, ನಿಮ್ಮ ಜೊತೆ ಜಿಲ್ಲೆಯ ಸಮಸ್ತ ಜನಸಮುದಾಯವಿದೆ. ಹೋರಾಟ ಖಂಡಿತಾ ಯಶಸ್ವಿಯಾಗಲಿದೆ ಎಂದು ಸ್ಪೂರ್ತಿ ನೀಡಿದರು.

ಇದನ್ನು ಓದಿ: ಮುನಿಸಿಪಾಲ್ ಕಾರ್ಮಿಕ ಮುಷ್ಕರ ಪರಿಣಾಮ: ನೇರ ಪಾವತಿ-ಪೌರ ಕಾರ್ಮಿಕರ ಖಾಯಂಗೆ ಮುಖ್ಯಮಂತ್ರಿ ಭರವಸೆ

ಪ್ರತಿಭಟನೆಯಲ್ಲಿ ಡಿವೈಎಫ್‌ಐ ಜಿಲ್ಲಾ ನಾಯಕರಾದ ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ತಯ್ಯುಬ್ ಬೆಂಗ್ರೆ, ಸಿಐಟಿಯು ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೋಗರು, ಮಹಮ್ಮದ್ ಮುಸ್ತಫಾ, ವಿಲ್ಲಿ ವಿಲ್ಸನ್, ಮಹಮ್ಮದ್ ಆಸಿಫ್, ಹರೀಶ್ ಪೂಜಾರಿ, ಮಹಿಳಾ ಸಂಘಟನೆಯ ಮುಖಂಡರಾದ ಭಾರತಿ ಬೋಳಾರ, ಪ್ರಮೀಳಾ ದೇವಾಡಿಗ, ಅಸುಂತಾ ಡಿಸೋಜ, ಯೋಗಿತಾ ಉಳ್ಳಾಲ, ವಿದ್ಯಾರ್ಥಿ ನಾಯಕರಾದ ವಿನೀತ್ ದೇವಾಡಿಗ, ಯುವ ವಕೀಲರಾದ ನಿತಿನ್ ಕುತ್ತಾರ್, ಸುನಂದಾ ಕೊಂಚಾಡಿ, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಸಫಾಯಿ ಕರ್ಮಚಾರಿ ಸಂಘದ ಮುಖಂಡರಾದ ರಾಜೇಶ್, ಪದ್ಮನಾಭ, ಸಂತೋಷ್, ಅಶ್ವಿನ್ ಮುಂತಾದವರು ಉಪಸ್ಥಿತರಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *