ಹಾಸನ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಮುಂಭಾಗ ಜುಲೈ 13ರಂದು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಹೊಳೆನರಸಿಪುರ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ಎಚ್.ಡಿ.ರೇವಣ್ಣ ಪ್ರತಿಭಟನಾ ಸ್ಥಳಕ್ಕೆ ಅನಪೇಕ್ಷಿತವಾಗಿ ಬೇಟಿ ನೀಡಿದ್ದಲ್ಲದೆ ಪ್ರತಿಭಟನಾ ನಿರತ ಮಹಿಳೆಯರು ಎನ್ನುವುದನ್ನೂ ಪರಿಗಣಿಸದೆ ಅನುಚಿತವಾಗಿ ವರ್ತಿಸಿ, ಹೋರಾಟಗಾರರನ್ನು ಏಕವಚನದಲ್ಲಿ ನಿಂದಿಸಿ, ಬೆದರಿಕೆ ಹಾಕಿರುವು ಘಟನೆಯನ್ನು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಖಂಡಿಸಿದೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಧರ್ಮೇಶ್, ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯುತ್ತಿದ್ದ ಹೋರಾಟ ನಿರತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮುಖಂಡರೊಂದಿಗೆ ಶಾಸಕ ಎಚ್.ಡಿ. ರೇವಣ್ಣ ದುರ್ವರ್ತನೆಯು ತಮ್ಮ ಹಕ್ಕುಗಳಿಗಾಗಿ ನಡೆಯುವ ಹೋರಾಟಗಳನ್ನು ದಮನ ಮಾಡುವುದನ್ನು ಸಿಐಟಿಯು ಅತ್ಯಂತ ತೀವ್ರವಾಗಿ ಖಂಡಿಸುತ್ತದೆ. ಈ ಘಟನೆಯು ಶಾಸಕ ಎಚ್.ಡಿ. ರೇವಣ್ಣ ಅವರ ಅನಾಗರಿಕ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದರು.
ಹೊಳೆನರಸಿಪುರ ತಾಲ್ಲೂಕಿನ ಸಿಡಿಪಿಓ ಪ್ರಸನ್ನ ಕುಮಾರ್ ಅವರು ಅಂಗನವಾಡಿಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಇಲಾಖೆಯ ನಿಯಮಾನುಸಾರ ಕಳೆದ ಎರಡು ವರ್ಷಗಳಿಂದಲೂ ಅರ್ಜಿ ಸಲ್ಲಿಸಿ ಕಾಯುತ್ತಿರುವ ಅರ್ಹ ಅಂಗನವಾಡಿ ನೌಕರರಿಗೆ ಅದ್ಯತೆ ನೀಡುತ್ತಿಲ್ಲ. ಇದರೊಂದಿಗೆ, ವರ್ಗಾವಣೆ ಮತ್ತು ಮುಂಬಡ್ತಿ ನೀಡುವ ಬದಲು ಇಲಾಖೆಯ ನೇಮಕಾತಿ ನಿಯಮಾವಳಿಗಳನ್ನು ಉಲ್ಲಂಘಿಸಿ ಹೊಸದಾಗಿ ನೇಮಕಾತಿಗೆ ಪ್ರಕಟಣೆ ಹೊರಡಿಸಲು ಮುಂದಾಗಿದ್ದಾರೆ. ಮುಂದುವರೆದು, ಲಿಖಿತ ಆದೇಶ ನೀಡದೆ ಮನಬಂದಂತೆ ಅಂಗನವಾಡಿ ನೌಕರರನ್ನು ವರ್ಗಾವಣೆ ಮಾಡುತ್ತಿರುವುದನ್ನು ವಿರೋಧಿಸಿ ಹಾಗೂ ಇತರೆ ಸ್ಥಳೀಯ ಸಮಸ್ಯೆಗಳು ಮತ್ತು ಬೇಡಿಕೆಗಳಿಗಾಗಿ ಜುಲೈ 13 ರಂದು ಇಲಾಖೆಯ ಕಚೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ನೌಕರರ ಪ್ರತಿಭಟನೆ ನಡೆಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ಪ್ರತಿಭಟನೆಯ ಸ್ಥಳಕ್ಕೆ ಅನಪೇಕ್ಷಿತವಾಗಿ, ಏಕಾಏಕಿ ಧಾವಿಸಿ ಬಂದ ಶಾಸಕ ಎಚ್.ಡಿ.ರೇವಣ್ಣ ಯಾವುದೇ ಪೂರ್ವಾಪರ ವಿಚಾರಿಸದೆ ಪ್ರತಿಭಟನಾನಿರತ ಮಹಿಳೆಯರ ಮುಂದೆ ತನ್ನ ಪಾಳೇಗಾರಿಕೆತನವನ್ನು ತೋರಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರನ್ನು ಏಕವಚನದಲ್ಲಿ ನಿಂಧಿಸಿ, ಕೆಲಸದಿಂದ ತೆಗೆದು ಹಾಕಿಸುವ ಮತ್ತು ಪೊಲೀಸು ಕೇಸು ಹಾಕಿಸುವ ಬೆದರಿಕೆ ಹಾಕಿದ್ದಾರೆ. ಅಂಗನವಾಡಿ ನೌಕರರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಕಳ್ಳತನ ಮಾಡುತ್ತಾರೆ ಎನ್ನುವ ಅರ್ಥದಲ್ಲಿ ಸಾರ್ವಜನಿಕವಾಗಿ ಆರೋಪಿಸಿ ದೂಷಣೆ ಮಾಡಿದ್ದೂ ಅಲ್ಲದೆ, ನನ್ನ ಕ್ಷೇತ್ರಕ್ಕೆ ಬಂದು ಹೋರಾಟ ಮಾಡಲು ನೀನ್ಯಾರು ಎಂದು ಹೋರಾಟಗಾರರಿಗೆ ಬೆದರಿಕೆ ಹಾಕಿದ್ದಾರೆ. ಇದನ್ನು ಖಂಡಿಸುತ್ತೇವೆ ಎಂದು ಧರ್ಮೇಶ್ ಹೇಳಿದರು.
ಇದನ್ನೂ ಓದಿ : ಅಂಗನವಾಡಿ ಕಾರ್ಯಕರ್ತೆರ ಮೇಲೆ ರೇಗಾಡಿದ ಶಾಸಕ ಎಚ್.ಡಿ.ರೇವಣ್ಣ, ಬಲಿ ಹಾಕುವ ಬೆದರಿಕೆ
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಎಂ.ಬಿ. ಪುಷ್ಪ, ಮಾತನಾಡಿ, ಎಚ್.ಡಿ. ರೇವಣ್ಣ ಅವರ ಈ ರೀತಿಯ ದುರ್ವರ್ತನೆ ಹಾಗೂ ಅನುಚಿತ ಮಾತುಗಳು ಖಂಡಿತವಾಗಿಯೂ ಒಬ್ಬ ಜನ ಪ್ರತಿನಿಧಿಗೆ ತಕ್ಕುದಾದುದಲ್ಲ. ಒಬ್ಬ ಶಾಸಕನಾಗಿ ಮತ್ತು ಒಬ್ಬ ಸಚಿವನಾಗಿ ಸರ್ಕಾರ ನಡೆಸಿದ ಅನುಭವ ಹೊಂದಿರುವ ಹಾಗೂ ರಾಜ್ಯದ ಒಬ್ಬ ಹಿರಿಯ ರಾಜಕಾರಣಿಯಾಗಿ ಅವರ ಘನತೆಯನ್ನು ಅವರೇ ಹಾಳು ಮಾಡಿಕೊಂಡಿದ್ದಾರೆ. ಒಬ್ಬ ಶಾಸಕನಾಗಿ ತನ್ನ ಕ್ಷೇತ್ರದ ಜನರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿರುವಾಗ ಅವರ ಪರವಾಗಿ ನಿಲ್ಲಬೇಕಾಗಿದ್ದ ಶಾಸಕ ಎಚ್.ಡಿ. ರೇವಣ್ಣ ಅವರು ಜನರ ವಿರುದ್ಧವಾಗಿ ನಿಂತು ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಎಸಗಿರುವ ಒಬ್ಬ ಅಧಿಕಾರಿಯ ಪರವಾಗಿ ನಿಂತಿದ್ದಾರೆ. ಅಷ್ಟಕ್ಕೂ ಅವರಿಗೆ ಸಂಬಂಧಿಸದ ವಿಚಾರದಲ್ಲಿ ಮಧ್ಯೆಪ್ರವೇಶಿಸಿ ಹುಂಬತನದಿಂದ ವರ್ತಿಸಿರುವುದು ನೋಡಿದರೆ ಅವರು ತಲುಪಿರುವ ಅಧೋಗತಿಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಅಂಗನವಾಡಿ ನೌಕರರಿಗೆ ಸರ್ಕಾರ ಕಳೆದ 6 ತಿಂಗಳಿಂದ ಸರಿಯಾಗಿ ಗೌರವಧನ ನೀಡುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ ಅಂಗನವಾಡಿ ನೌಕರರಿಗೆ ಯಾವುದೇ ಸೌಲಭ್ಯಗಳನ್ನು ಸರ್ಕಾರ ನೀಡಲಿಲ್ಲ. ನಿವೃತ್ತರಾದ ಅಂಗನವಾಡಿ ನೌಕರರಿಗೆ ಸರ್ಕಾರ ಭರವಸೆ ನೀಡಿದಂತೆ ಇದುವರೆಗೂ ಇಡುಗಂಟು ನೀಡಿಲ್ಲ. ಕನಿಷ್ಟ ವೇತನ, ಗ್ರಾಚ್ಯುಟಿ, ನಿವೃತ್ತಿ ವೇತನ, ಭವಿಷ್ಯನಿಧಿ, ವಿಮೆ ಯಾವುದೇ ಸೌಲಭ್ಯಗಳಿಲ್ಲ. ಅರ್ಹ ಹಾಗೂ ಅಗತ್ಯವಿರುವ ಅಂಗನವಾಡಿ ನೌಕರರಿಗೆ ಸೂಕ್ತ ಸಮಯದಲ್ಲಿ ಮುಂಬಡ್ತಿ ಮತ್ತು ವರ್ಗಾವಣೆ ಸಿಗುತ್ತಿಲ್ಲ. ಇಲಾಖೆಯಲ್ಲಿನ ಭ್ರಷ್ಟಾಚಾರ ಮತ್ತು ಅಧಿಕಾರಿಗಳ ಬೇಜವಾಬ್ಧಾರಿತನದಿಂದಾಗಿ ಅಂಗನವಾಡಿಗಳಿಗೆ ಸಮಯಕ್ಕೆ ಸರಿಯಾಗಿ ಅಗತ್ಯವಿರುವಷ್ಟು ಗುಣಮಟ್ಟದ ಆಹಾರ ಸಾಮಾಗ್ರಿಗಳು ಸರಬರಾಜಾಗುತ್ತಿಲ್ಲ ಹಾಗೂ ಅವಧಿ ಮೀರಿದ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡಲಾಗುತ್ತಿದೆ. ಜೊತೆಗೆ ಅಂಗನವಾಡಿಯ ಮಹಿಳಾ ನೌಕರರು ಪಟ್ಟಭದ್ರರ ಮತ್ತು ಅಧಿಕಾರಿಗಳ ದಬ್ಬಾಳಿಕೆ ಮತ್ತು ದೌರ್ಜನ್ಯಗಳನ್ನು ಎದುರಿಸಿಕೊಂಡು ಅತೀ ಕಡಿಮೆ ಗೌರವಧನಕ್ಕೆ ಕೆಲಸ ಮಾಡುತ್ತಿದ್ದಾರೆ. ಇಂತಹ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಎಚ್.ಡಿ. ರೇವಣ್ಣ ಅವರು ನೌಕರರ ಕಷ್ಟಗಳನ್ನು ಅರ್ಥಮಾಡಿಕೊಳ್ಳದೆ ಬಡ ಮಹಿಳಾ ಕಾರ್ಮಿಕರ ಮೇಲೆ ದಬ್ಬಾಳಿಕೆ ಮತ್ತು ದರ್ಪವನ್ನು ತೋರಿಸುವುದು ಅತ್ಯಂತ ಖಂಡನೀಯ ಎಂದರು.
ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್‌ಕುಮಾರ್ ಮಾತನಾಡಿ, ಎಚ್.ಡಿ. ರೇವಣ್ಣ ಅವರು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಪ್ರತಿಭಟನೆ ನಡೆಸುವುದು ತಪ್ಪು ಅಂತಹವರ ವಿರುದ್ದ ಪೋಲೀಸು ಕೇಸು ದಾಖಲಿಸಬೇಕು ಎಂದು ಹೇಳಿದ್ದಾರೆ. ಅವರು ಒಬ್ಬ ಶಾಸಕರಾಗಿ ಇಷ್ಟೊಂದು ಬೇಜವಾಬ್ಧಾರಿಯಾಗಿ ಮಾತನಾಡಬಾರದು. ನಮ್ಮ ದೇಶದ ಸಂವಿಧಾನ ಜನರಿಗೆ ನೀಡುರುವ ‘ಪ್ರತಿಭಟಿಸುವ ಹಕ್ಕನ್ನು’ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ತನ್ನ ಕ್ಷೇತ್ರದಲ್ಲಿ ಜನರು ನ್ಯಾಯ ಕೇಳಿ ಪ್ರತಿಭಟನೆ ಧರಣಿ ನಡೆಸುವುದು ತಪ್ಪು ಎಂದು ವಿರೋಧಿಸುವ ಎಚ್. ಡಿ. ರೇವಣ್ಣ ಅವರಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಸಮರ್ಪಕವಾಗಿ ಹಣ ಬಿಡುಗಡೆ ಆಗದಿದ್ದಾಗಲೆಲ್ಲಾ ‘ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡುತ್ತೇನೆ’ ಎಂದು ಏಕೆ ಹೇಳಿಕೆ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಅವರಿಗೆ ಸಂಬಂಧಿಸಿದ ಹಾಗೂ ಅವರಿಗೆ ಬೇಕಾದ ಬೇಡಿಕೆಗಳಿಗೆ ಅವರು ಮಾತ್ರ ಪ್ರತಿಭಟನೆ ಧರಣಿ ಮಾಡಬಹುದು ಸಾಮಾನ್ಯ ಜನರು ಮಾಡಬಾರದು ಎಂದರೆ ಯಾವ ನ್ಯಾಯ? ನನ್ನ ಕ್ಷೇತ್ರಕ್ಕೆ ಬಂದು ಪ್ರತಿಭಟನೆ ನಡೆಸಲು ನೀನ್ಯಾರು? ಎಂದು ಕೇಳುವುದಕ್ಕೆ ಹೊಳೆನರಸಿಪುರ ವಿಧಾನಸಭಾ ಕ್ಷೇತ್ರ ಎನಾದರೂ ಅವರ ಆಸ್ತಿಯೇ? ಎಂದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ ಮಾತನಾಡಿ, ಈ ಹಿಂದೆ ಹೊಳೆನರಸಿಪುರ ತಾಲ್ಲೂಕಿನ ಸಿಗರನಹಳ್ಳಿಯಲ್ಲಿ ದಲಿತರ ಸ್ವಾಭಿಮಾನದ ಪ್ರತೀಕವಾಗಿ ನಡೆದ ಹೋರಾಟವನ್ನು ವಯಕ್ತಿಕವಾಗಿ ಮತ್ತು ಜಾತಿವಾದಿಯಾಗಿ ನೋಡಿದ್ದ ಎಚ್.ಡಿ. ರೇವಣ್ಣ ಅವರು ಸಿಐಟಿಯು, ಕಮ್ಯೂನಿಸ್ಟರು, ಕೆಂಬಾವುಟ ಮತ್ತು ದಲಿತ, ಜನಪರ ಮತ್ತು ಪ್ರಜಾಸತ್ತಾತ್ಮಕ ಚಳುವಳಿಗಳ ವಿರೋಧಿ ಮನಸ್ಥಿತಿ ಹೊಂದಿದ್ದಾರೆ. ಈಗಲೂ ಸಿಐಟಿಯು ಅಂಗನವಾಡಿಗಳ ಮಹಿಳಾ ನೌಕರರ ಪರವಾಗಿ ಹೋರಾಡುವುದನ್ನು ಅವರಿಗೆ ಸಹಿಲಾಗುತ್ತಿಲ್ಲ ಎನಿಸುತ್ತದೆ. ಜಾತ್ಯಾತೀತ ಜನತಾದಳದ ಹಿರಿಯ ನಾಯಕರೂ ಮತ್ತು ಶಾಸಕರೂ ಆದ ಎಚ್.ಡಿ. ರೇವಣ್ಣ ಅವರು ಜನಪರ, ದಲಿತ, ಕಾರ್ಮಿಕ, ರೈತ ಮತ್ತು ಪ್ರಜಾಸತ್ತಾತ್ಮಕ ಚಳುವಳಿಗಳ ಮಹತ್ವವನ್ನು ಅರ್ಥಮಾಡಿಕೊಳ್ಳದೇ ಹೋದರೆ ಹಾಗೂ ಅಂಗನವಾಡಿ ನೌಕರರಿಗೆ ವಿನಾಕಾರಣ ತೊಂದರೆಗಳನ್ನು ಕೊಟ್ಟರೆ ಮುಂದೆ ರಾಜಕೀಯವಾಗಿ ಭಾರೀ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷೆ ಇಂದಿರಮ್ಮ ಮಾತನಾಡಿ, ಅಂಗನವಾಡಿಗಳ ಮಹಿಳಾ ನೌಕರರು ಮತ್ತು ಹೋರಾಟಗಾರರ ವಿರುದ್ಧ ಅನುಚಿತವಾಗಿ ವರ್ತಿಸಿರುವ ಕುರಿತು ಶಾಸಕ ಎಚ್.ಡಿ. ರೇವಣ್ಣ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಹಾಗೂ ಒಬ್ಬ ಜವಾಬ್ದಾರಿಯುತ ಶಾಸಕರಾಗಿ ಅನ್ಯಾಕ್ಕೊಳಗಾಗಿರುವ ಅವರದೇ ಕ್ಷೇತ್ರದ ಮತದರಾರೂ ಆಗಿರುವ ಅಂಗನವಾಡಿ ನೌಕರರ ಪರವಾಗಿ ನಿಂತು ಅವರಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.
ಶಾಸಕ ಎಚ್.ಡಿ. ರೇವಣ್ಣ ಅವರ ದುರ್ವರ್ತನೆಯ ವಿರುದ್ಧ ಜುಲೈ 18ರ ಸೋಮವಾರ ಬೆಳಗ್ಗೆ 11.30 ಕ್ಕೆ ಹಾಸನದ ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆ ಎದುರು ‘ಖಂಡನಾ ಸಭೆ’ ನಡೆಯಲಿದೆ. ಈ ಖಂಡನಾ ಸಭೆಗೆ ಜಿಲ್ಲೆಯ ಎಲ್ಲಾ ಜನಪರ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳು ಭಾಗವಹಿಸಬೇಕೆಂದು ಕರೆ ನೀಡಿದರು.
ಹೊಳೆನರಸಿಪುರ ತಾಲ್ಲೂಕು ಡಿಎಚ್‌ಎಸ್ ಸಂಚಾಲಕ ರಾಜು ಸಿಗರನಹಳ್ಳಿ ಹಾಗೂ ಹೊಳೆನರಸಿಪುರ ತಾಲ್ಲೂಕು ಸಿಐಟಿಯು ಮುಖಂಡ ಮಲ್ಲಿಕಾರ್ಜುನ ಮಾತನಾಡಿದರು.