ಶ್ಯಾರಿ ಗಂಜಿಗಾಗಿ ಸೇರ ಬೆವರ ಸುರಿಸುತ್ತಾ

– ಎಚ್.ಆರ್. ನವೀನ್ ಕುಮಾರ್, ಹಾಸನ

ಬೆಂಗಳೂರಿನ ಯಾವುದೇ ಹೋಟೆಲ್ ಗಳಿಗೆ ಹೋದರೂ ಅಲ್ಲಿ ಬಹುತೇಕ ಕ್ಲೀನಿಂಗ್ ಕೆಲಸಗಳನ್ನು ಮಾಡುತ್ತಿರುವವರು ಉತ್ತರ ಭಾರತದಿಂದ ಬಂದ ಯುವಕರು. ಅವರಿರುವ ಜಾಗದಲ್ಲಿ ಕೆಲಸವಿಲ್ಲ, ಸಿಕ್ಕ ಕೆಲಸಕ್ಕೆ ಸರಿಯಾದ ಆಧಾಯವಿಲ್ಲ, ಈ ಆದಾಯದಿಂದ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಸ್ವಲ್ಪ ಹೆಚ್ಚಿನ ಆದಾಯ ಸಿಗುವ ಪರಸ್ಥಳಕ್ಕೆ ಹೋಗಿ, ಯಾರಿಗಾಗಿ ದುಡಿಮೆ ಮಾಡುತ್ತಾರೋ ಅವರಿಂದ ದೂರವಿದ್ದು ಎಲ್ಲಾ ಸಾಂಸಾರಿಕ ಸಂತೋಷಗಳನ್ನೆಲ್ಲ ಒತ್ತೆಯಿಟ್ಟು ಬೆವರು ಬಸಿದು ದುಡಿಯುತ್ತಾರೆ. ಇದರಿಂದಾಗಿ ಬದುಕಿನ ಬಂಡಿ ಸ್ವಲ್ಪವಾದರೂ ಮುಂದೆ ಸಾಗುತ್ತದೆ.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಿಂದ ಸಂಪಗಿರಾಮನಗರಕ್ಕೆ ಹೋಗಬೇಕಿತ್ತು. ಕೈಯಲ್ಲಿ ಭಾರವಾದ ಲಗೇಜ್ ಇದ್ದಿದ್ದರಿಂದ ಓಲಾ ಆಟೋ ಬುಕ್ ಮಾಡಿದೆವು.

ಸ್ವಲ್ಪ ಸಮಯದಲ್ಲಿ ಒಂದು ಫೋನ್ ಬಂತು. “ಹಲೋ ಸರ್ ಆಪ್ ಕಹ್ಞಾಹೈ” ನಾನು ಒಂದು ಕ್ಷಣ ಗಾಬರಿಯಾದೆ. ಇದೇನಿದು ಯಾವುದೋ ರಾಂಗ್ ನಂಬರ್ ಇರಬಹುದು ಎಂದು ಫೋನ್ ಕಟ್ ಮಾಡುವುದರೊಳಗೆ, “ಸರ್ ಆಪ್ ಓಲೋ ಆಟೋ ಬುಕ್ ಕರ್ದಿಯೇ” ಎಂದಾಗ ಇದು ನಾವು ಬುಕ್ ಮಾಡಿದ ಆಟೋ ಡ್ರೈವರ್ ಫೋನ್ ಅಂತ ಗೊತ್ತಾಯ್ತು.

ಸರಿ ನಾವಿದ್ದಲ್ಲಿಗೇ ಆಟೋ ಬಂತು ನಾವು ಹತ್ತಿದೆವು.

ಆದರೆ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದ್ದ ಒಂದು ವಿಷಯಕ್ಕೆ ನಾನು ಉತ್ತರ ಹುಡಿಕಿಕೊಳ್ಳಲೇ ಬೇಕಿತ್ತು. ಆಟೋ ಸ್ವಲ್ಪ ದೂರ ಮುಂದೆ ಹೋದ ಕೋಡಲೇ ನಾನು ಆಟೋ ಡ್ರೈವರ್ ಜೊತೆ ಮಾತು ಆರಂಭಿಸಿದೆ.

ನಿಮ್ಮದು ಯಾವ ಊರು ಎಂದು ಕೇಳಿದೆ. ಆತ ನಮ್ಮದು ಪಾಟ್ನಾ ಎಂದ. ನಾನು ತಮಾಷೆ ಮಾಡುತ್ತಿರಬಹುದು ಎಂದುಕೊಂಡು ಮತ್ತೊಮ್ಮೆ ಕೇಳಿದೆ ಯಾವ ಪಾಟ್ನಾ? ಅವನು ಬಿಹಾರದ ಪಾಟ್ನಾ ಎಂದ. ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಎಲ್ಲಿಯ ಬಿಹಾರ ಎಲ್ಲಿಯ ಬೆಂಗಳೂರು. ಅಲ್ಲಿಂದ ಇಲ್ಲಿಗೆ ಬಂದು ಆಟೋ ಓಡಿಸೋದಾ? (ಪರಸ್ಥಳದಲ್ಲಿ ಪರಕೀಯರಿಗೆ ಸವಾರಿ) ದೆಹಲಿಯಲ್ಲಿ ತುಂಬಾ ಜನ ಬಿಹಾರಿಗಳು ಆಟೋ ಓಡಿಸೋದನ್ನ ನೋಡಿದ್ದೆ; ಕೇಳಿದ್ದೆ. ಆದರೆ ಈ ಬೆಂಗಳೂರಿನಲ್ಲಿ ಇದ್ಯಾವಾಗಿಂದ ಹೀಗೆ ಎಂದು ಮನಸ್ಸಿನಲ್ಲಿ ಯೋಚಿಸುತ್ತಿರುವಾಗಲೇ ಇವರ ಬಗ್ಗೆ ತಿಳಿದು ಕೊಳ್ಳಬೇಕೆನ್ನುವ ಕುತೂಹಲ ಮತ್ತಷ್ಟು ಹೆಚ್ಚಾಯಿತು.

ನೀವು ಯಾವಾಗ ಬೆಂಗಳೂರಿಗೆ ಬಂದ್ರಿ, ಪಟ್ನಾದಲ್ಲಿ ಏನ್ ಮಾಡ್ತಿದ್ರಿ, ಇಲ್ಲಿ ಯಾರ್ಯಾರ್ ಇದ್ದೀರ… ಹೀಗೆ ಸಾಲು ಸಾಲು ಪ್ರಶ್ನೆಗಳು ಒಂದರಹಿಂದೆ ಒಂದರಂತೆ ನನ್ನಿಂದ ವೇಗಪಡೆದುಕೊಳ್ಳಲು ಆರಂಭಿಸಿದವು. ಅವುಗಳಿಗೆಲ್ಲ ಈತ ಹೇಳಿದ್ದು ಹೀಗೆ.

ನನ್ನ ಹೆಸರು ಸುಶೀಲ್ ಬಿಹಾರದ ಪಟ್ನಾದವನು, 15 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದೆ. ನಾನು ಪದವಿ ಮಾಡಿದ್ದೇನೆ. ಊರಿನಲ್ಲಿ ಸ್ವಲ್ಪ ಜಮೀನಿದೆ. ಅದರಿಂದ ಯಾವ ಆದಾಯವೂ ಇಲ್ಲ. ನಾನು ಬಿಕಾಂ ಪದವೀಧರನಾದರೂ ನನಗೆ ಯಾವ ಕೆಲಸವೂ ಸಿಗಲಿಲ್ಲ, ಜೀವನ ನಿರ್ವಹಣೆಗೆ ಡ್ರೈವರ್ ಕೆಲಸ ಮಾಡುತ್ತಿದ್ದೆ, ಅಟೋದಿಂದ ಹಿಡಿದು ಲಾರಿ, ಬಸ್‌ವರೆಗೆ ಎಲ್ಲಾ ರೀತಿಯ ವಾಹನಗಳನ್ನು ಓಡಿಸುತ್ತಿದ್ದೆ. ಮದುವೆ ಆಯ್ತು, ಎರಡು ಹೆಣ್ಣು ಒಂದು ಗಂಡು, ಮೂರು ಮಕ್ಕಳಾದವು. ಡ್ರೈವಿಂಗ್‌ನಿಂದ ಬರುವ ಆದಾಯದಿಂದ ಜೀವನ ನಿರ್ವಹಣೆ ಕಷ್ಟವಾಯಿತು. ಮಕ್ಕಳನ್ನು ಓದಿಸಬೇಕು, ಭೂಮಿಯಲ್ಲಿ ಯಾವ ಆದಾಯವೂ ಇಲ್ಲದಕ್ಕಾಗಿ ದೂರದ ಪಟ್ನಾದಿಂದ ಇಲ್ಲಿಗೆ ಬಂದು ಆಟೋ ಓಡಿಸುತ್ತಿದ್ದೇನೆ ಎಂದರು.

ಇದೇ ಕೆಲಸವನ್ನ ಪಟ್ನಾದಲ್ಲೇ ಮಾಡಬಹುದಿತ್ತಲ್ಲ ಅಂದಿದ್ದಕ್ಕೆ, ಅಲ್ಲಿ ಜನರ ಬಳಿ ಹಣ ಇಲ್ಲ, ಇಲ್ಲಿ ದುಡಿಮೆ ಮಾಡಿದಷ್ಟು ಅಲ್ಲಿ ದುಡಿಮೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಇಲ್ಲಿಗೆ ಬಂದೆ.

ಆದಾಯ ಹೇಗಿದೆ, ಇಲ್ಲಿ ಯಾರ್ಯಾರ್ ಇದ್ದೀರ ಎಂದಿದ್ದಕ್ಕೆ, ನಾನು ಓಡಿಸುವ ಆಟೋ, ಮಾಲೀಕರಿಂದ ಬಾಡಿಗೆಗೆ ಪಡೆದದ್ದು. ದಿನಕ್ಕೆ 15೦೦ ರೂ. ದುಡಿಮೆಯಾಗುತ್ತೆ. ಆಟೋ ಮಾಲೀಕರಿಗೆ 4೦೦ ರೂ. ದಿನದ ಬಾಡಿಗೆ. ಪೆಟ್ರೋಲ್, ಗ್ಯಾಸ್ ನನ್ನದೇ ಖರ್ಚು. ಬಿಹಾರದಿಂದಲೇ ಬಂದಿರುವ ಮೂವರು ಒಂದು ರೂಂ ಮಾಡಿಕೊಂಡಿದ್ದೇವೆ. ಅವರಿಬ್ಬರು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ರೂಂ ಬಾಡಿಗೆ 45೦೦ ಒಬ್ಬರಿಗೆ ತಲಾ ತಿಂಗಳಿಗೆ 15೦೦ ರೂ ಬರುತ್ತದೆ. ಬೆಳಿಗ್ಗೆ ರಾತ್ರಿ ನಾವೇ ಅಡುಗೆ ಮಾಡಿಕೊಳ್ಳುತ್ತೇವೆ. ಮಧ್ಯಾಹ್ನ ಮಾತ್ರ ಹೊರಗಡೆ ಹೋಟೆಲ್ ನಲ್ಲಿ ಊಟ ಮಾಡುತ್ತೇವೆ.

ಜದುಕಿನ ಬಂಡಿಯನ್ನು ನಡೆಸಲು ಹೆಂಡತಿ ಮಕ್ಕಳನ್ನು ದೂರದಲ್ಲಿ ಬಿಟ್ಟು ನಾನು ಇಲ್ಲಿ ದುಡಿಯುತ್ತಿದ್ದೇನೆ. ಮಕ್ಕಳ ಭವಿಷ್ಯ ಚೆನ್ನಾಗಿರಬೇಕು, ಅವರು ಚೆನ್ನಾಗಿ ಓದಬೇಕು, ನಾನು ಕಷ್ಟಪಟ್ಟಹಾಗೆ ಅವರೂ ಜೀವನ ಮಾಡಲು ಕಷ್ಟ ಪಡಬಾರದು. ಅದಕ್ಕಾಗಿ ನಾನು ಇನ್ನೂ ಕಷ್ಟ ಪಡಲು ಸಿದ್ಧನಿದ್ದೇನೆ. ಕೆಲವು ಸಲ ರಾತ್ರಿ 1 ಗಂಟೆಯವರೆಗೂ ಆಟೋ ಓಡಿಸುತ್ತೇನೆ. ಆದರೂ ಈ ಜೀವನ ಎಷ್ಟೊಂದು ದುಬಾರಿ ಅಲ್ವಾ ಸರ್ ಎಂದು ತನ್ನ ಬದುಕಿನ ಬಂಡಿಯ ಜಾಡನ್ನು ತೆರೆದಿಟ್ಟರು.
ಇದು ಕೇವಲ ಬಿಹಾರದ ಸುಶೀಲನ ಬದುಕು ಮಾತ್ರವಲ್ಲ, ಉತ್ತರ ಭಾರತದಿಂದ ದೊಡ್ಡ ಸಂಖ್ಯೆಯಲ್ಲಿ ಬೆಂಗಳೂರಿಗೆ ಬಂದು ಕೆಲಸ ಮಾಡುತ್ತಿರುವವರ ಸ್ಥಿತಿ ಹೀಗೆಯೇ ಇದೆ. ಊರಲ್ಲಿ ಸಂಸಾರ ಇಲ್ಲಿ ದುಡಿಮೆ.

ಇದನ್ನೂ ಓದಿ: ಕ್ಯಾಮರಾ ಕಣ್ಣಲ್ಲಿ ಮೈಸೂರು ದಸರಾ!

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ವಿಷಯವನ್ನು ಗಮನಿಸಿದ್ದೇನೆ. ಬೆಂಗಳೂರಿನ ಯಾವುದೇ ಹೋಟೆಲ್ ಗಳಿಗೆ ಹೋದರೂ ಅಲ್ಲಿ ಬಹುತೇಕ ಕ್ಲೀನಿಂಗ್ ಕೆಲಸಗಳನ್ನು ಮಾಡುತ್ತಿರುವವರು ಉತ್ತರ ಭಾರತದಿಂದ ಬಂದ ಯುವಕರು. ಅವರಿರುವ ಜಾಗದಲ್ಲಿ ಕೆಲಸವಿಲ್ಲ, ಸಿಕ್ಕ ಕೆಲಸಕ್ಕೆ ಸರಿಯಾದ ಆಧಾಯವಿಲ್ಲ, ಈ ಆದಾಯದಿಂದ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಸ್ವಲ್ಪ ಹೆಚ್ಚಿನ ಆದಾಯ ಸಿಗುವ ಪರಸ್ಥಳಕ್ಕೆ ಹೋಗಿ, ಯಾರಿಗಾಗಿ ದುಡಿಮೆ ಮಾಡುತ್ತಾರೋ ಅವರಿಂದ ದೂರವಿದ್ದು ಎಲ್ಲಾ ಸಾಂಸಾರಿಕ ಸಂತೋಷಗಳನ್ನೆಲ್ಲ ಒತ್ತೆಯಿಟ್ಟು ಬೆವರು ಬಸಿದು ದುಡಿಯುತ್ತಾರೆ. ಇದರಿಂದಾಗಿ ಬದುಕಿನ ಬಂಡಿ ಸ್ವಲ್ಪವಾದರೂ ಮುಂದೆ ಸಾಗುತ್ತದೆ.

***

ಸುತ್ತಲೂ ಕೈಗೆಟಕುವಂತಿರುವ ಬಣ್ಣಬಣ್ಣದ, ಬಗೆಬಗೆಯ ಹಣ್ಣುಗಳು, ಅವುಗಳಿಂದಲೇ ಈತ ಬಂದವರಿಗೆಲ್ಲಾ ತಾಜಾ ಹಣ್ಣಿನ ರಸವನ್ನ (ಜ್ಯೂಸ್) ರುಚಿರುಚಿಯಾಗಿ ತಯಾರಿಸಿ ಕೊಡುತ್ತಾನೆ. ಅಲ್ಲಿ ಜ್ಯೂಸ್ ಕುಡಿದವರೆಲ್ಲಾ ಅವನ ಕೈರುಚಿಗೆ ಮರುಳಾಗಿ ಅವನಿಗೆ ಮಾತಿನ ಹೊಗಳಿಕೆಯಲ್ಲಿ ಹೊಟ್ಟೆ ತುಂಬಿಸಿ ಹೋಗುತ್ತಾರೆ. ಬಂದವರಿಗೆಲ್ಲಾ ರುಚಿರುಚಿಯಾಗಿ ತಂಪಾದ ಹಣ್ಣಿನ ರಸ ಕುಡಿಸುವ ಇವನು ಅಲ್ಲಿ ಒಂದು ದಿನವೂ ತಾನೇ ಮಾಡಿದ ಜ್ಯೂಸ್ ಕುಡಿಯಲಿಲ್ಲ. ಯಾಕೆಂದರೆ ಅವನು ಅಲ್ಲಿ ಕೇವಲ ಕೆಲಸಗಾರ ಮಾತ್ರ.

ಈ ದೃಶ್ಯ ನನ್ನ ಗಮನಕ್ಕೆ ಬಂದದ್ದು ಹಾಸನದಲ್ಲಿ. ಸ್ನೇಹಿತರೊಂದಿಗೆ ಜ್ಯೂಸ್ ಕುಡಿಯಲೆಂದು ಹೋದ ಸಂದರ್ಭದಲ್ಲಿ. ಇಲ್ಲಿ ಜ್ಯೂಸ್ ಮಾಡುವ 25 ವರ್ಷದ ಈ ಯುವಕ ದೂರದ ಬಿಹಾರದವನು. ಅಲ್ಲಿಂದ ಇಲ್ಲಿಗೆ ಬದುಕಿನ ಕಟ್ಟಿಕೊಳ್ಳಲು ಬಂದಿದ್ದಾನೆ. ಇವನ ಕೈಲಿರುವ ಕೆಲಸವೇ ಇವನ ಬಂಡವಾಳ. ಅದನ್ನು ಹೊರತುಪಡಿಸಿ ಇವನ ಬಳಿ ಬಿಡಿಗಾಸೂ ಇಲ್ಲ. ಊರಲ್ಲಿ ಕೆಲಸವಿಲ್ಲದೆ ಜೀವನ ಸಾಗಿಸಲು ಕಷ್ಟವಾಗಿ, ಹೆತ್ತ ಅಪ್ಪ ಅಮ್ಮನನ್ನ ಸಾಕಲಾಗದೆ ಕೆಲಸ ಅರಸಿ ಇಲ್ಲಿಯವರೆಗೆ ಬಂದಿದ್ದಾನೆ.

ಇವನಿಗೆ ದಿನಕ್ಕೆ 5೦೦ ರೂ. ದಿನಗೂಲಿ ಕೊಡುತ್ತಾರೆ. ಅಂದರೆ ತಿಂಗಳ 3೦ ದಿನಗಳೂ ಬಿಡುವಿಲ್ಲದೆ ದುಡಿಮೆ ಮಾಡಿದರೆ ತಿಂಗಳ ಕೊನೆಯಲ್ಲಿ 15೦೦೦ ರೂ. ಸಿಗುತ್ತದೆ. ಅದರಲ್ಲೇ ಅವನ ಊಟ, ತಿಂಡಿ, ರೂಂ ಬಾಡಿಗೆ ಮತ್ತಿತರೆ ಎಲ್ಲಾ ಖರ್ಚುಗಳನ್ನು ನೀಗಿಸಿ ಉಳಿದ ಹಣವನ್ನು ಇವನನ್ನೇ ನಂಬಿರುವ ದೂರದ ಬಿಹಾರದ ಹಳ್ಳಿಯಲ್ಲಿರುವ ಅಪ್ಪ ಅಮ್ಮನಿಗೆ ಕಳುಹಿಸಬೇಕು. ಅದಕ್ಕಾಗಿ ಅವರು ಇತ್ತಕಡೆಯೇ ದೃಷ್ಟಿ ನೆಟ್ಟಿರುತ್ತಾರೆ.

ಅಪರೂಪಕ್ಕೊಮ್ಮೆ ಸ್ನೇಹಿತರೊಂದಿಗೆ ಸೇರಿ ಹೊರಗೆ ಊಟ, ತಿಂಡಿ ಮಾಡಿದರೆ ಹಣ ಹೆಚ್ಚು ಖರ್ಚಾಗುತ್ತದೆ. ಆ ತಿಂಗಳು ಮನೆಗೆ ಕಳುಹಿಸುವ ಹಣದಲ್ಲಿ ಕೊರತೆಯಾಗುತ್ತದೆ. ಇಲ್ಲಿ ಸಾಲ ಕೇಳೋಣವೆಂದರೆ ಎಲ್ಲರೂ ಅಪರಿಚಿತರು. ಅಲ್ಲಿಂದ ಇಲ್ಲಿಗೆ ಬಂದ ನನ್ನಂತಹವನಿಗೆ ಕೆಲಸ ಕೊಟ್ಟು ಇಲ್ಲಿ ಬದುಕಲು ಬಿಟ್ಟಿರುವುದೇ ಹೆಚ್ಚು, ಇನ್ನು ಸಾಲ ಯಾರು ಕೊಡುತ್ತಾರೆ ಎಂಬುದು ಅವನ ಲೆಕ್ಕಾಚಾರ.

ಇದನ್ನೂ ಓದಿ: ಗಾಯ ಕಥಾ ಸರಣಿ – ಸಂಚಿಕೆ ; 06 – ಕ್ರೌರ್ಯ ಮೆರೆದಿದ್ದ ಧಣಿ, ಪೊಲೀಸ್‌ ಠಾಣೆಯಲ್ಲಿ ಬೆವತು ಹೋಗಿದ್ದ!

ಇಷ್ಟು ಮಾತ್ರವಲ್ಲ ಪ್ರತಿ ದಿನ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೂ ನಿಂತಲ್ಲೇ ನಿಂತುಕೊಂಡು ಕೆಲಸ ಮಾಡಿ ಮಾಡಿ ದೇಹ ಹೈರಾಣಾಗಿರುತ್ತೆ, ರಾತ್ರಿ ಮನೆಗೋಗಿ ಕಾಲು ಚಾಚಿ ಮಲಗಿದರೆ ಸಾಕು ಎನ್ನುವಷ್ಟು ಸುಸ್ತು. ಅದರಲ್ಲಿ ಬೆಳಿಗ್ಗೆ ಬೇಗ ಏಳಲೂ ಸಾಧ್ಯವಾಗುತ್ತಿಲ್ಲ. ಇದರಿಂದ ರಾತ್ರಿ ಊಟ ಮತ್ತು ಬೆಳಿಗ್ಗೆ ತಿಂಡಿ ತಯಾರು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಉದರ ಕೇಳಬೇಕಲ್ಲ. ಪ್ರತಿ ದಿನ ಹೋಟೆಲ್ ಗೆ ಹೋದರೆ ದುಬಾರಿ ಖರ್ಚು, ರೂಮಿನಲ್ಲೂ ಅಡುಗೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಇವ ಕಂಡುಕೊಂಡ ಸುಲಭದ ದಾರಿ ಯಾವುದು ಗೊತ್ತಾ, ಬೆಳಿಗ್ಗೆ ತಿಂಡಿಯ ಬದಲು ಒಂದು ಪಪ್ಸ್ ಅಥವಾ, ಒಂದು ಕ್ರೀಮ್ ಬನ್ ಜೊತೆಗೊಂದು ಟೀ. ರಾತ್ರಿಯೂ ಇದೇ ರೀತಿ ಸಾಧ್ಯವಾದರೆ ಒಂದು ಮೊಟ್ಟೆ ಪಪ್ಸ್, ಅಥವಾ ಬ್ರೆಡ್ ಇಲ್ಲದಿದ್ದರೆ ಇಲ್ಲಾ. ಮಧ್ಯಾಹ್ನ ಮಾತ್ರ ಮಾಲೀಕ ಒಂದು ಊಟ ಕೊಡಿಸುತ್ತಾನೆ. ಅದೂ ಏನು ಹೇಳಿಕೊಳ್ಳುವಂತಹ ಊಟವಲ್ಲ, ಕೆಲಸ ಮಾಡಲು ಇವನು ಬದುಕಿರಬೇಕಲ್ಲ ಅದಕ್ಕಾಗುವಷ್ಟು ಅಷ್ಟೆ.

ಹೀಗೆ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಿಂದ ದೊಡ್ಡಸಂಖ್ಯೆಯ ಜನ ದಕ್ಷಿಣ ಭಾರತದ ರಾಜ್ಯಗಳಿಗೆ ವಲಸೆ ಕಾರ್ಮಿಕರಾಗಿ ಬರುತ್ತಿದ್ದಾರೆ. ತಾವು ಹುಟ್ಟಿ ಬೆಳದ ಊರಲ್ಲೇ ಬದುಕು ನಡೆಸಲು ಪೂರಕವಾದ ಅವಕಾಶ, ಉದ್ಯೋಗ ಸಿಕ್ಕಿದ್ದರೆ ಇಷ್ಟು ಕಷ್ಟಪಟ್ಟು ಇಲ್ಲಿಯವರೆಗು ಬಂದು, ಅಪರಿಚಿತರಾಗಿ ಬದುಕು ಸಾಗಿಸಬೇಕಾಗಿರಲಿಲ್ಲ. ನಿಜ ಭಾರತದ ಬವಣೆ ಅಡಗಿರುವುದು ಇದೇ ಹರುಕು-ಮುರುಕು ಬದುಕಿನಲ್ಲಿ.

ವಿಡಿಯೋ ನೋಡಿ: ನ್ಯಾಯ ಕೇಳಿದ ಕಾರ್ಮಿಕರನ್ನು ಕೂಡಿ ಹಾಕಿದ ಬಾಲಾಜಿ ಗಾರ್ಮೆಂಟ್ಸ್ ವಿರುದ್ಧ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *