ನೂಪುರ್ ಶರ್ಮಾ ಮಾತ್ರವಲ್ಲ, ಬಿಜೆಪಿ ಕೂಡಾ ಕ್ಷಮೆ ಯಾಚಿಸಬೇಕು-ಯೆಚುರಿ

ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಸುಪ್ರೀಂ ಕೋರ್ಟ್ ಕಟುವಾದ ಮಾತುಗಳನ್ನಾಡಿದೆ. “ದೇಶದಲ್ಲಿ ಏನಾಗುತ್ತಿದೆ ಎಂಬುದಕ್ಕೆ ಆಕೆಯೇ ಒಬ್ಬಂಟಿ ಜವಾಬ್ದಾರರು” ಮತ್ತು “ಆಕೆ ದೇಶದ ಕ್ಷಮೆ ಕೇಳಬೇಕು” ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆಕೆ ಪಕ್ಷದ ವಕ್ತಾರರಾಗಿದ್ದರೇನಂತೆ, ತನ್ನ ಬೆನ್ನಹಿಂದೆ ಅಧಿಕಾರದ ಬಲವಿದೆ, ದೇಶದ ಕಾನೂನನ್ನು ಗೌರವಿಸದೆ ಯಾವುದೇ ಹೇಳಿಕೆಯನ್ನು ನೀಡಬಹುದು ಎಂದು ಆಕೆ ಭಾವಿಸುತ್ತಾರೆ ಎಂದೂ ಅವರು ಹೇಳಿದ್ದಾರೆ.

 ಇದು ನೂಪುರ್ ಶರ್ಮಾ ಅವರ ಅಭಿಪ್ರಾಯಗಳ ಮೇಲೆ ಮಾತ್ರವಲ್ಲದೆ ಬಿಜೆಪಿ ಮಾಡುವ ಅಧಿಕಾರದ ದುರುಪಯೋಗ, ಅದರ ವಿಭಜನಕಾರೀ ಮಾತುಗಳು ಮತ್ತು ಅದರ ನಾಯಕರು ಮತ್ತು ಟ್ರಾಲ್‌ಗಳು ಸತತವಾಗಿ ಹರಡುತ್ತಿರುವ ದ್ವೇಷದ ಮೇಲೆಯೂ ಮಾಡಿರುವ ತೀವ್ರ ದೋಷಾರೋಪಣೆಯಾಗಿದೆ. ಅವು ನಮ್ಮ ದೇಶವನ್ನು ದೊಡ್ಡ ಅಪಾಯಕ್ಕೆ ತಳ್ಳುತ್ತಿವೆ. ಆದ್ದರಿಂದ ನೂಪುರ್ ಶರ್ಮಾ ಮಾತ್ರವಲ್ಲ, ಬಿಜೆಪಿ ಕೂಡಾ ಕ್ಷಮೆಯಾಚಿಸಬೇಕು, ಮತ್ತು ಭಾರತ ವಿರೋಧಿ, ದೇಶಪ್ರೇಮಹೀನ, ವಿಭಜಕ ಕೃತ್ಯಗಳಲ್ಲಿ ಅದು ತೊಡಗಬಾರದು ಎಂದು ಸುಪ್ರಿಂ ಕೋರ್ಟಿನ ಟಿಪ್ಪಣಿಯ ಬಗ್ಗೆ ಹೇಳುತ್ತ  ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಅಭಿಪ್ರಾಯಪಟ್ಟಿದ್ದಾರೆ.

ಸುಪ್ರೀಂ ಕೋರ್ಟ್ ಪ್ರಕಾರ, ದ್ವೇಷದ ಸುರುಳಿಯನ್ನು ಮತ್ತು ಇತ್ತೀಚಿನ ಖಂಡನೀಯ ಹಿಂಸಾಚಾರದ ಚಕ್ರವನ್ನು ಪ್ರಾರಂಭಿಸಲು ನೂಪುರ್ ಶರ್ಮಾ ಹೊಣೆಗಾರರು ಎಂದಾದರೆ, ಕಾನೂನಿನ ಪ್ರಕಾರ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಯೆಚುರಿ ಆಶಿಸಿದ್ದಾರೆ.

ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದು ಬಿಜೆಪಿಯು ಆಕೆಯನ್ನು ವಕ್ತಾರ ಸ್ಥಾನದಿಂದ ಅಮಾನತುಗೊಳಿಸಿದೆ. ಆದರೆ ಆಕೆಯ ವಿರುದ್ಧ, ಮ ತ್ತು ಆಕೆಯಂತೆ ವೈಷಮ್ಯ, ಪ್ರತ್ಯೇಕತೆ ಬಿತ್ತುವ, ಭಾರತಕ್ಕೆ ಹಾನಿ ಮಾಡುವ, ಆಳುವ ಪಕ್ಷದಿಂದಲೇ ಪ್ರೋತ್ಸಾಹಿಸಲ್ಪಟ್ಟಿರುವ ಇತರರ ವಿರುದ್ಧವೂ ಕಾನೂನು ಕ್ರಮ ಜರುಗದಿದ್ದರೆ, ತಪ್ಪು ಸಂದೇಶ ಹೋಗುತ್ತದೆ. ಆರ್‌ಎಸ್‌ಎಸ್/ಬಿಜೆಪಿಯ ದ್ವೇಷ ಕಾರ್ಖಾನೆಯಿಂದ ಮತ್ತು ವಿಷಭರಿತ ಟಿವಿ ಚರ್ಚೆಗಳಲ್ಲಿ ಅವರಂತಹ ಅನೇಕರು ನಾಯಿಕೊಡೆಗಳಂತೆ ಹರಡಿಕೊಂಡಿರುವುದನ್ನು ನಾವು ಕಾಣಬಹುದು ಎಂದು ಮುಂದುವರೆದು ಯೆಚುರಿ ಹೇಳಿದ್ದಾರೆ.

“ಈ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್ ಈಗ ಕಣ್ಮರೆಯಾಗಿರುವ ಒಂದು ಸಂಶಯಾಸ್ಪದ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಹೇಳಿತೆಂದು ಸುದ್ದಿಗಳ ಹಿಂದಿರುವ ನಿಜಸಂಗತಿಯೇನು ಎಂದು ಪರೀಕ್ಷಿಸುವ ಪತ್ರಕರ್ತ ಮೊಹಮ್ಮದ್ ಜುಬೈರ್ ಅವರನ್ನು ಅತ್ಯಂತ ಕ್ಷುದ್ರ ಕಾರಣಗಳ ಮೇಲೆ ಜೈಲಿಗೆ ಹಾಕಲಾಗಿದೆ ಎಂಬ ಅಂಶವನ್ನು ಗಮನಕ್ಕೆ ತಗೊಳ್ಳುತ್ತದೆ ಎಂದು ನಾವು ಆಶಿಸಿದ್ದೆವು” ಎಂದಿರುವ ಯೆಚುರಿ, ಬಿಜೆಪಿಯ ಅಡಿಯಲ್ಲಿರುವ ಪೋಲಿಸ್ ನೂಪುರ್ ಶರ್ಮಾ ಅವರ ದ್ವೇಷದ ಮಾತುಗಳು ಮತ್ತು ಅವಮಾನಕರ ಉದ್ಗಾರಗಳನ್ನು ಎತ್ತಿ ತೋರಿಸಿದ್ದರಿಂದಲೇ ಜುಬೈರ್‌ರನ್ನು ಬಲಿಪಶು ಮಾಡಿದೆ ಎಂಬ ಸಂಗತಿಯತ್ತ ಗಮನ ಸೆಳೆದಿದ್ದಾರೆ. ವಾಸ್ತವವಾಗಿ ಅವರು ಜೈಲಿನಲ್ಲಿರಬಾರದಾಗಿತ್ತು, ಬದಲಿಗೆ, ಆರೆಸ್ಸೆಸ್/ಬಿಜೆಪಿ ರೂಪಿಸಲು ಶತಪ್ರಯತ್ನ ನಡೆಸಿರುವ ಧ್ರುವೀಕೃತ ಮತ್ತು ವಿಭಜಿತ ಜಗತ್ತನ್ನು ಎದುರಿಸುವಲ್ಲಿ ಸಹಾಯ ಮಾಡಲು ಶ್ರದ್ಧೆಯಿಂದ ಸತ್ಯದ ಪರಿಶೀಲನೆ ನಡೆಸುವ ತನ್ನ ಕೆಲಸವನ್ನು ಮುಂದುವರೆಸಲು ಪ್ರೋತ್ಸಾಹ ಪಡೆಯಬೇಕಾಗಿತ್ತು.

“ಎಲ್ಲ ಭಾರತೀಯರು ಶಾಂತಿಗಾಗಿ ಕೆಲಸ ಮಾಡಬೇಕು, ವಿಭಜಿಸುವ ಮತ್ತು ಪ್ರಚೋದಿಸುವ ಧ್ವನಿಗಳನ್ನು ದೃಢವಾಗಿ ವಿರೋಧಿಸಬೇಕು ಎಂದು ನಾವು ಮನವಿ ಮಾಡುತ್ತೇವೆ. ನಾವು, ರಾಜಕೀಯ ಪಕ್ಷಗಳು ಮತ್ತು ನಾಗರಿಕರು ನ್ಯಾಯ ದೊರಕುವಂತೆ ಖಚಿತಪಡಿಸಲು ನಮ್ಮ ಪಾಲಿನ ಪ್ರಯತ್ನವನ್ನು ಮಾಡಬೇಕಾಗಿದೆ. ಕೋಮು ವೈಷಮ್ಯಕ್ಕೆ ಇನ್ನು ಮುಂದೆ ಒಂದು ಜೀವವೂ ಬಲಿಯಾಗಬಾರದು. ವಿಭಜನೆಗೆ ತಿದಿಯೂದುವುದರಿಂದ ಭಾರತಕ್ಕೆ ಹಾನಿಯಾದರೆ ಯಾರೂ ವಿಜೇತರಿರುವುದಿಲ್ಲ” ಎಂದು ಸೀತಾರಾಂ ಯೆಚುರಿ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *