ಮಂಗಳೂರು: ಶರಣ್ ಪಂಪ್‌ವೆಲ್ ತುಮಕೂರಿನ ನಡೆದ ಸಂಫಪರಿವಾರದ ವೇದಿಕೆಯಲ್ಲಿ ಮಾಡಿದ ಭಾಷಣ ದುಷ್ಟತನದ ಪರಮಾವಧಿ. ಅವರ ಅತಿರೇಕದ ದ್ವೇಷ ಭಾಷಣ, ಕೊಲೆಗಳ ಸಮರ್ಥನೆ, ಬೆದರಿಕೆ ಜನಾಂಗ ಹತ್ಯೆಗೆ ಪ್ರಚೋದನೆ ನೀಡುವಂತಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್‌ಐ), ಕರ್ನಾಟಕ ರಾಜ್ಯ ಸಮಿತಿ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಶರಣ್ ಪಂಪ್‌ವೆಲ್ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಹೇಳಿಕೆ ಬಿಡುಗಡೆಗೊಳಿಸಿರುವ ಮುನೀರ್ ಕಾಟಿಪಳ್ಳ, ಕೆಲ ದಿನಗಳ ಹಿಂದೆ ಸುರತ್ಕಲ್ ಜಂಕ್ಷನ್ ನಲ್ಲಿ ನಡೆದ ಅಮಾಯಕ ಮುಸ್ಲಿಂ ಯುವಕ ಫಾಝಿಲ್ ಕೊಲೆಯನ್ನು “ನಮ್ಮ ಹುಡುಗರೇ ಎಲ್ಲರ ಎದುರು ಶೌರ್ಯದಿಂದ ನುಗ್ಗಿ ಮಾಡಿದ ಕೊಲೆ” ಎಂದು ಬಹಿರಂಗವಾಗಿ ಹೇಳಿದ್ದಾರೆ. ಇನ್ನಷ್ಟು ಇಂತಹ ದಾಳಿಗಳು ನಡೆಯಲಿದೆ ಎಂದು ಬೆದರಿಕೆ ಹಾಕಿರುವ ಶರಣ್ ಪಂಪ್‌ವೆಲ್, ಗುಜರಾತ್ ಗಲಭೆಯ ಎರಡು ಸಾವಿರ ಜನರ ಕೊಲೆಯನ್ನೂ ಸಮರ್ಥಿಸಿಕೊಂಡಿರುವುದು ಅವರ ನಿಜ ಬಣ್ಣ ಬಯಲುಗೊಂಡಿದೆ ಎಂದಿದ್ದಾರೆ.
ಇದನ್ನು ಓದಿ: ನೆಟ್ಟಾರು ಕೊಲೆಗೆ ಪ್ರತಿಕಾರವಾಗಿ ನಾವು ಫಾಜಿಲ್ ಹತ್ಯೆ ಮಾಡಿದೆವು: ವಿಎಚ್‌ಪಿ ನಾಯಕ ಶರಣ್ ಪಂಪ್‌ವೆಲ್
ಇದು ತೀರಾ ಆತಂಕಕಾರಿ ಬೆಳವಣಿಗೆಯಾಗಿದೆ. ನಾಗರಿಕ ಸಮಾಜದಲ್ಲಿ ಇದು ಭೀತಿಯನ್ನು ಮೂಡಿಸಿದೆ. ಫಾಝಿಲ್ ಕೊಲೆಗೆ ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ), ಬಿಜೆಪಿ ಮುಖಂಡರ ಬೆಂಬಲ ದೊರಕಿರುವ ಅನುಮಾನ ಕೊಲೆ ನಡೆದ ಸಂದರ್ಭದಲ್ಲೇ ವ್ಯಕ್ತವಾಗಿತ್ತು. ಪೊಲೀಸರು ರಾಜಕೀಯ ಒತ್ತಡದಿಂದ ಕೊಲೆಯ ಪಿತೂರಿದಾರರನ್ನು ರಕ್ಷಿಸುತ್ತಿದ್ದಾರೆ ಎಂದು ಫಾಝಿಲ್ ಕುಟುಂಬ ಆರೋಪಿಸಿತ್ತು. ಶರಣ್ ಪಂಪ್ ವೆಲ್ ಭಾಷಣದಿಂದ ಅನುಮಾನಕ್ಕೆ ಎಡೆಯಿಲ್ಲದಂತೆ ಪುಷ್ಟೀಕರಿಸಿದೆ.
ನಿರುದ್ಯೋಗ, ಬಡತನದಿಂದ ಹತಾಶಗೊಂಡಿರುವ ಯುವಕರ ಕೈಗೆ ತಲವಾರು ನೀಡಿ ಗಲಭೆಗಿಳಿಸುವ, ಇಡೀ ಸಮಾಜವನ್ನು ಕ್ರಿಮನಲೀಕರಣಗೊಳಿಸುವ, ಚುನಾವಣೆ ಸನಿಹದಲ್ಲಿರುವ ಸಂದರ್ಭ ಮತೀಯ ಧ್ರುವೀಕರಣ ರಾಜಕೀಯ ದುರುದ್ದೇಶಗಳನ್ನು ಹೊಂದಿದೆ ಹಾಗೂ ಶರಣ್ ಪಂಪ್ ವೆಲ್ ಗೆ ಬಿಜೆಪಿ ಸರಕಾರದ ಬೆಂಬಲವೂ ದೊರಕಿರುವುದು ಎದ್ದು ಕಾಣುತ್ತಿದೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಇದನ್ನು ಓದಿ: ಪ್ರವೀಣ್ ನೆಟ್ಟಾರ್ ಕೊಲೆ ಹಿಂದಿನ ರಹಸ್ಯ ಬಹಿರಂಗವಾಗಲಿ: ಮುನೀರ್ ಕಾಟಿಪಳ್ಳ
ಅಮಾಯಕ ಫಾಝಿಲ್ ಕೊಲೆಯ ಸಂದರ್ಭ ರಾಜ್ಯ ಸರಕಾರ ಸಾಂತ್ವನ, ಪರಿಹಾರ ಒದಗಿಸದೆ ಫಾಝಿಲ್ ಕುಟುಂಬದೊಂದಿಗೆ ತಾರತಮ್ಯದಿಂದ ಕೆಟ್ಟದಾಗಿ ನಡೆದುಕೊಂಡಿತ್ತು. ಪ್ರಕರಣದ ತನಿಖೆಯೂ ದುರ್ಬಲ ನೆಲೆಯಲ್ಲಿ ನಡೆದಿತ್ತು. ಈಗ ಫಾಝಿಲ್ ಕೊಲೆಯನ್ನು ಭಜರಂಗ ದಳದ ಕಾರ್ಯಕರ್ತರ ಶೌರ್ಯದ ಸಂಕೇತ ಎಂದು ಭಾಷಣ ಬಿಗಿಯಲು ಅವಕಾಶ ಒದಗಿಸಿ ಆ ಸಂತ್ರಸ್ತ ಕುಟುಂಬವನ್ನು ಮತ್ತಷ್ಟು ನೋವುಣ್ಣುವಂತೆ ಮಾಡಲಾಗುತ್ತಿದೆ. ಮುಸ್ಲಿಂ ಸಮುದಾಯದ ವಿರುದ್ದ ಇನ್ನಷ್ಟು ದ್ವೇಷ ಹರಡುವ ಯತ್ನವೂ ಇದರ ಹಿಂದಿದೆ. ಸರಕಾರಿ ಪ್ರಾಯೋಜಿತ ಇಂತಹ ಯೋಜನಾಬದ್ದ ಜನಾಂಗ ದ್ವೇಷದ ಕೆಲಸಗಳು ಮುಸ್ಲಿಂ ಸಮುದಾಯದೊಳಗಡೆ ನಕಾರಾತ್ಮಕ ಶಕ್ತಿಗಳ ಬೆಳವಣಿಗೆಗೂ ಕುಮ್ಮಕ್ಕು ನೀಡುತ್ತದೆ. ಇದು ನಮ್ಮ ಸಮಾಜವನ್ನು ಅಪಾಯಕಾರಿ ವಿಭಜನೆಯೆಡೆಗೆ ಒಯ್ಯುತ್ತದೆ ಎಂದು ಎಚ್ಚರಿಸಿದ್ದಾರೆ.
ಕೊಲೆ, ನರಮೇಧದ ಸಮರ್ಥನೆಯ ಭಾಷಣಕ್ಕಾಗಿ ಶರಣ್ ಪಂಪ್ ವೆಲ್ ರನ್ನು ಕಠಿಣ ಕಾಯ್ದೆಯಡಿ ಬಂಧಿಸಬೇಕು, ಫಾಝಿಲ್ ಕೊಲೆಯಲ್ಲಿ ಶರಣ್ ಪಂಪ್ ವೆಲ್ ಮತ್ತಿತರ ನಾಯಕರ ಪಾತ್ರದ ಕುರಿತು ಮರು ತನಿಖೆ ಮಾಡಬೇಕು ಎಂದು ಡಿವೈಎಫ್ಐ ಆಗ್ರಹಿಸಿದೆ. ನಾಗರಿಕ ಸಮಾಜ ಒಂದಾಗಿ ಶರಣ್ ಪಂಪ್ ವೆಲ್ ಭಾಷಣವನ್ನು ಖಂಡಿಸಬೇಕು ಹಾಗೂ ಕ್ರಮಕ್ಕಾಗಿ ಒತ್ತಾಯಿಸಬೇಕು ಮುನೀರ್ ಕಾಟಿಪಳ್ಳ ವಿನಂತಿಸಿಕೊಂಡಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ