- ಕೇಂದ್ರದ ನಡೆ ಪಕ್ಷಪಾತ ಮತ್ತು ಪ್ರತೀಕಾರದಿಂದ ಕೂಡಿದೆ
ನವದೆಹಲಿ: ‘ಶಾಂತಿಯುತ ರಾಜಕೀಯ ಪ್ರತಿಭಟನೆಗಳಿಗೆ ಅಪರಾಧದ ಬಣ್ಣ ಬಳಿಯಲಾಗುತ್ತಿದೆ’ ಎಂದು ಸಿಪಿಐ (ಎಂ) ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಭಾನುವಾರ ಹರಿಹಾಯ್ದಿದೆ.
ಫೆಬ್ರುವರಿಯಲ್ಲಿ ನಡೆದಿದ್ದ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಸಿಪಿಐ (ಎಂ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹಾಗೂ ಇತರ ಹೋರಾಟಗಾರರ ಹೆಸರನ್ನು ಸೇರಿಸಲಾಗಿದೆ.
‘ದೆಹಲಿ ಪೊಲೀಸರ ಈ ಕ್ರಮವನ್ನು ನಾವು ಖಂಡಿಸುತ್ತೇವೆ. ಇದು ಶಾಂತಿಯುತ ಪ್ರತಿಭಟನೆಗಳನ್ನು ಅಪರಾಧೀಕರಿಸುವ ಪ್ರಯತ್ನ. ಇಂತಹ ಕೃತ್ಯಗಳಿಂದ ದೂರವಿರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ’ ಎಂದು ಸಿಪಿಐ (ಎಂ) ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ದೆಹಲಿ ಗಲಭೆ: ಆರೋಪ ಪಟ್ಟಿಯಲ್ಲಿ ಯೆಚೂರಿ, ಯೋಗೆಂದ್ರ ಯಾದವ್
‘ದೆಹಲಿ ಪೊಲೀಸರ ನಡೆಯಿಂದ ನಮಗೆಲ್ಲಾ ಆಘಾತವಾಗಿದೆ. ಪೊಲೀಸರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಮುಖ ರಾಜಕೀಯ ನಾಯಕರು, ಶಿಕ್ಷಣ ತಜ್ಞರು, ಸಾಂಸ್ಕೃತಿಕ ವಲಯದ ವ್ಯಕ್ತಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಹೆಸರುಗಳನ್ನು ಕೋಮು ಗಲಭೆಯೊಂದಿಗೆ ತಳುಕುಹಾಕಲಾಗುತ್ತಿದೆ. ಇದು ಪಕ್ಷಪಾತ ಮತ್ತು ಪ್ರತೀಕಾರದ ಕ್ರಮ’ ಎಂದು ಪಕ್ಷವು ದೂರಿದೆ.
ಇದನ್ನೂ ಓದಿ: ದೆಹಲಿ ಗಲಭೆ: ಪ್ರಮುಖ ರಾಜಕೀಯ ವಿರೋಧಿಗಳನ್ನು ಸಿಲುಕಿಸುವ ದಿಲ್ಲಿ ಪೊಲೀಸ್ ಹುನ್ನಾರ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಫೆಬ್ರುವರಿಯಲ್ಲಿ ನಡೆದಿದ್ದ ಪ್ರತಿಭಟನೆಗೆ ಯೆಚೂರಿ, ಸ್ವರಾಜ್ ಅಭಿಯಾನದ ಮುಖಂಡ ಯೋಗೇಂದ್ರ ಯಾದವ್, ಅರ್ಥಶಾಸ್ತ್ರಜ್ಞೆ ಜಯಂತಿ ಘೋಷ್ ಹಾಗೂ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಪೂರ್ವಾನಂದ ಅವರು ಕುಮ್ಮಕ್ಕು ನೀಡಿದ್ದರು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.