ಟಿ.ಸುರೇಂದ್ರರಾವ್
‘ಟೈಮ್ಸ್ ನೌ’ ಟಿವಿ ವಾಹಿನಿಯು ಈ ಸತ್ಯಕತೆಯನ್ನು ಮರೆಮಾಚಿ ಜಕಾರಿಯಾ ಜುಬೇದಿಯವರು ‘ಹಮಾಸ್’ನ ನಾಯಕನೆಂತಲೂ ಅವರೊಬ್ಬ ಭಯೋತ್ಪಾದಕ ಎಂದು ಬಿಂಬಿಸಿ ವೀಕ್ಷಕರನ್ನು ಮೋಸಗೊಳಿಸಲು ಯತ್ನಿಸುತ್ತಿದೆ.ವಾಸ್ತವದಲ್ಲಿ ಜುಬೇದಿಯವರಿಗೂ ‘ಹಮಾಸ್’ಗೂ ಯಾವುದೇ ರೀತಿಯ ಸಂಬಂಧವೂ ಇಲ್ಲ. ಸುಧನ್ವದೇಶಪಾಂಡೆಯವರು ಸಾಕ್ಷ್ಯಚಿತ್ರದ ಪರಿಚಯ ಮಾಡಿಕೊಡುವಾಗ ‘ಹಮಾಸ್’ ಹಾಗೂ ‘ಭಯೋತ್ಪಾದಕ’ರ ಪರವಹಿಸಿ ಮಾತನಾಡಿದ್ದಾರೆ ಎಂದು ‘ಟೈಮ್ಸ್ ನೌ’ ಅಪಪ್ರಚಾರ ಮಾಡುತ್ತಿದೆ.
ಸುಧನ್ವದೇಶಪಾಂಡೆ ಭಾರತದ ರಂಗಭೂಮಿಯಲ್ಲಿ ಚಿರಪರಿಚಿತ ಹೆಸರು. ದೆಹಲಿಯ ‘ಜನ ನಾಟ್ಯ ಮಂಚ್’ ಎಂಬ ರಂಗ ತಂಡದ ಮುಖ್ಯಸ್ಥರಾಗಿ ದಶಕಗಳಿಂದ ಅವರ ಹೆಸರು ಜನಜನಿತ. ಭಾರತದಲ್ಲಿ ಮಾತ್ರವೇ ಅಲ್ಲ ಹೊರ ದೇಶಗಳಲ್ಲಿ ಕೂಡ ಅವರು ಹೆಸರು ಮಾಡಿರುವ ರಂಗಕರ್ಮಿ.ಅಷ್ಟೇ ಅಲ್ಲ ಸುಧನ್ವ ಅವರು ದೆಹಲಿಯ ‘ಲೆಫ್ಟ್ ವರ್ಡ್’ ಪ್ರಕಾಶನ ಸಂಸ್ಥೆಯ ಮುಖ್ಯಸ್ಥರೂ ಆಗಿದ್ದಾರೆ.ರಾಜಕೀಯ, ಇತಿಹಾಸ, ಸಂಸ್ಕೃತಿ, ಸಮಾಜ ವಿಜ್ಞಾನ ವಿಷಯಗಳ ಕುರಿತು ಅತ್ಯುತ್ತಮ ಆಸಕ್ತಿದಾಯಕ ಪುಸ್ತಕಗಳನ್ನು ಆ ಸಂಸ್ಥೆಯು ಹೊರತಂದಿದೆ. ಈ ಸುಧನ್ವದೇಶಪಾಂಡೆಯವರ ವಿರುದ್ಧ ‘ಟೈಮ್ಸ್ ನೌ’ ಟಿವಿ ವಾಹಿನಿಯೊಂದು ಅನಗತ್ಯ ಅಪಪ್ರಚಾರವನ್ನು ಹರಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಸುಧನ್ವದೇಶಪಾಂಡೆಯವರು ‘ಟೈಮ್ಸ್ ನೌ’ ಟಿವಿ ವಾಹಿನಿಯ ವಿರುದ್ಧ ಒಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ನಡೆದದ್ದಾದರೂ ಏನು?ನವಂಬರ್ 6, 2023 ರಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ (ಐಐಟಿ-ಬಿ) ಯಲ್ಲಿ ‘ಅರ್ನಾಸ್ಚಿಲ್ಡರೆನ್’ (ಅರ್ನಾಅವರ ಮಕ್ಕಳು) ಎಂಬ 2004 ರ ಸಾಕ್ಷ್ಯಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.ಇಸ್ರೇಲಿನ ಯಹೂದಿ ಚಲನಚಿತ್ರ ನಿರ್ಮಾಪಕ, ನಟ ಹಾಗೂ ರಂಗ ನಿರ್ದೇಶಕ ಜ್ಯುಲಿಯಾನೋ ಮೆರ್ಖಮಿಸ್ ಈ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿದ್ದರು. ಈ ಚಿತ್ರದ ಬಗ್ಗೆ ಉಪನ್ಯಾಸ ನೀಡಲು ಸುಧನ್ವದೇಶಪಾಂಡೆಯವರನ್ನು ಐಐಟಿ-ಬಿ ಯ ಪ್ರೊಫೆಸರ್ ಶಮಿಷ್ಟ ಸಹಾ ಆಹ್ವಾನಿಸಿದ್ದರು. ಆ ಸಾಕ್ಷ್ಯಚಿತ್ರದ ಪ್ರಧಾನ ಪಾತ್ರವನ್ನು ಜಕಾರಿಯಾಜುಬೇದಿಯವರು ಮಾಡಿದ್ದರು.
ಜಕಾರಿಯಾಜುಬೇದಿಯವರು ಫತಾ ಪಕ್ಷದ ಅಲ್ಅಕ್ಸಾ ಮಾರ್ಟೈರ್ಸ್ ಬ್ರಿಗೇಡಿನ ಮಾಜಿ ಸೇನಾ ಕಮ್ಯಾಂಡರ್ ಆಗಿದ್ದರು. ಫತಾರಾಜಕೀಯ ಪಕ್ಷವನ್ನು ಯಾಸೆರ್ ಅರಾಫತ್ ಅವರು ಹುಟ್ಟು ಹಾಕಿದ್ದರು.ಸುಧನ್ವ ದೇಶಪಾಂಡೆಯವರು ಜುಬೇದಿಯವರನ್ನು ಪ್ಯಾಲೆಸ್ತೈನಿನಲ್ಲಿ 2015 ರಲ್ಲಿ ಭೇಟಿಯಾಗುವ ಹೊತ್ತಿಗೆ ಜುಬೇದಿಯವರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದರು ಮತ್ತು ಸಾಂಸ್ಕೃತಿಕ ಪ್ರತಿರೋಧವನ್ನು ಪ್ರತಿಪಾದಿಸಿದ್ದರು. ಪ್ಯಾಲೆಸ್ತೈನಿ ಸ್ವಾತಂತ್ರ್ಯ ಹೋರಾಟದಲ್ಲಿ ಸಂಸ್ಕೃತಿಯ ಮಹತ್ವವನ್ನುಅವರು ಎತ್ತಿತೋರಿಸಿದ್ದರು.ತಮ್ಮಕನಸನ್ನು ನನಸಾಗಿಸಲು ಅವರು ಪ್ಯಾಲೆಸ್ತೈನಿನ ಪಶ್ಚಿಮ ದಂಡೆಯಲ್ಲಿ “ದಿ ಫ್ರೀಡಂಥಿಯೇಟರ್” ಸ್ಥಾಪಿಸಿದ್ದರು.
ಇದನ್ನೂ ಓದಿ: ಪ್ಯಾಲೆಸ್ಟೀನಿನಲ್ಲಿ ಇಸ್ರೇಲೀ ನರಮೇಧ ಕೂಡಲೇ ನಿಲ್ಲಬೇಕು- ಎಡಪಕ್ಷಗಳ ಆಗ್ರಹ
“ಐತಿಹಾಸಿಕ ಪ್ಯಾಲೆಸ್ತೀನ್ ದೇಶವು ಒಂದು ರಾಷ್ಟ್ರವಾಗಿ ತನ್ನ ಎಲ್ಲಾ ಪ್ರಜೆಗಳಿಗೆ –ಅರಬ್ಬರು, ಯಹೂದಿಗಳು, ಕ್ರಿಶ್ಚಿಯನ್ನರು ಮತ್ತು ಇತರರೆಲ್ಲರಿಗೂ -ಸಮಾನ ಹಕ್ಕುಗಳನ್ನು ನೀಡುತ್ತದೆ” ಎಂಬ ಕನಸಿನ ಬಗ್ಗೆ ತಮ್ಮ ಬಳಿ ಜುಬೇದಿ ಹೇಳಿದ್ದನ್ನು ನೆನೆದು ಪ್ರದರ್ಶನಗೊಂಡ ಸಾಕ್ಷ್ಯಚಿತ್ರದ ಕುರಿತು ಮಾತನಾಡುವಾಗ ಸುಧನ್ವ ಅವರು ‘ಜುಬೇದಿಯವರನ್ನು ಒಬ್ಬ ಕನಸುಗಾರ’ ಎಂದು ಉಲ್ಲೇಖಿಸಿದ್ದರು. ಅವರೊಬ್ಬದಂತ ಕತೆ ಎಂದೂ ಹೇಳಿದ್ದರು ಸುಧನ್ವ.
‘ಅರ್ನಾಸ್ಚಿಲ್ಡರೆನ್’ (ಅರ್ನಾಅವರ ಮಕ್ಕಳು) ಚಿತ್ರವನ್ನು ಜ್ಯುಲಿಯಾನೋ ಅವರ ತಾಯಿ ಅರ್ನಾ ಮೆರ್ ಅವರು ಪ್ರಾರಂಭಿಸಿದ್ದ ಮಕ್ಕಳ ರಂಗಭೂಮಿಯ ಕಾರ್ಯಚಟುವಟಿಕೆಗಳನ್ನು ಚಿತ್ರಿಸುತ್ತದೆ. ಅರ್ನಾ ಮೆರ್ ಅವರು ಕೂಡ ಇಸ್ರೇಲಿನ ಯಹೂದಿ ಜನಾಂಗಕ್ಕೆ ಸೇರಿದವರು. ಜ್ಯುಲಿಯಾನೋ ಇಸ್ರೇಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಜ್ಯುಲಿಯಾನೋ ಅವರನ್ನು 2011 ರಲ್ಲಿ ದಿ ಫ್ರೀಡಂಥಿಯೇಟರಿನ ಎದುರುಗಡೆಯಲ್ಲೇ ಹತ್ಯೆ ಮಾಡಲಾಯಿತು.
ಯಾಸೆರ್ಅರಾಫತ್ ಅವರು ಆರಂಭಿಸಿದ್ದ ಫತಾ ಪಕ್ಷದ ನೇತೃತ್ವವನ್ನು ಈಗ ಮಹಮದ್ ಅಬ್ಬಾಸ್ ವಹಿಸಿಕೊಂಡಿದ್ದಾರೆ ಮತ್ತು ಅವರು ಈಗ ಪ್ಯಾಲೆಸೈನ್ ಪ್ರಾಧಿಕಾರ (ಅಥಾರಿಟಿ)ದ ಅಧ್ಯಕ್ಷರಾಗಿದ್ದಾರೆ ಅರಾಫತ್ ನೇತೃತ್ವದ ಪ್ಯಾಲೆಸೈನ್ ಸ್ವಾತಂತ್ರ್ಯ ಹೋರಾಟವನ್ನು ಚಾರಿತ್ರಿಕವಾಗಿ ಭಾರತ ಮಾನ್ಯ ಮಾಡಿದೆ. ಅರಾಫತ್ ನೇತೃತ್ವದ ಪ್ಯಾಲೆಸೈನ್ ಲಿಬರೇಷನ್ ಆರ್ಗನೈಸೇಷನ್ (ಪಿ.ಎಲ್.ಒ) ಪ್ಯಾಲೆಸ್ತೇನಿಯರ ಏಕೈಕ ನ್ಯಾಯಸಮ್ಮತ ಪ್ರತಿನಿಧಿ ಎಂದು 1974ರಲ್ಲೇ ಮಾನ್ಯ ಮಾಡಿದ ಅರಬೇತರ ದೇಶಗಳಲ್ಲಿ ಭಾರತ ಮೊಟ್ಟ ಮೊದಲ ದೇಶವಾಗಿದೆ.
ಆದರೆ ‘ಟೈಮ್ಸ್ ನೌ’ ಟಿವಿ ವಾಹಿನಿಯು ಈ ಸತ್ಯಕತೆಯನ್ನು ಮರೆಮಾಚಿ ಜಕಾರಿಯಾಜುಬೇದಿಯವರು ‘ಹಮಾಸ್’ನ ನಾಯಕನೆಂತಲೂ ಅವರೊಬ್ಬ ಭಯೋತ್ಪಾದಕ ಎಂದು ಬಿಂಬಿಸಿ ವೀಕ್ಷಕರನ್ನು ಮೋಸಗೊಳಿಸಲು ಯತ್ನಿಸುತ್ತಿದೆ.ವಾಸ್ತವದಲ್ಲಿ ಜುಬೇದಿಯವರಿಗೂ ‘ಹಮಾಸ್’ಗೂ ಯಾವುದೇ ರೀತಿಯ ಸಂಬಂಧವೂ ಇಲ್ಲ. ಸುಧನ್ವದೇಶಪಾಂಡೆಯವರು ಸಾಕ್ಷ್ಯಚಿತ್ರದ ಪರಿಚಯ ಮಾಡಿಕೊಡುವಾಗ ‘ಹಮಾಸ್’ ಹಾಗೂ ‘ಭಯೋತ್ಪಾದಕ’ರ ಪರವಹಿಸಿ ಮಾತನಾಡಿದ್ದಾರೆ ಎಂದು ‘ಟೈಮ್ಸ್ ನೌ’ ಅಪಪ್ರಚಾರ ಮಾಡುತ್ತಿದೆ. ಐಐಟಿ-ಬಿ ಇಡೀ ವಿದ್ಯಾರ್ಥಿ ಸಮುದಾಯ ಸಾಕ್ಷ್ಯಚಿತ್ರ ಮತ್ತು ಸುಧನ್ವ ಅವರ ಉಪನ್ಯಾಸದ ಬಗ್ಗೆ ಯಾವರೀತಿಯಲ್ಲೂ ಆಕ್ಷೇಪಣೆ ಮಾಡದಿರುವಾಗ, ಯಾರೋ ಒಂದಿಬ್ಬರು ವಿದ್ಯಾರ್ಥಿಗಳು ಸುಧನ್ವ ಹಾಗೂ ಪ್ರೊಫೆಸರ್ ಶಮಿಷ್ಟ ಸಹಾ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ದೂರು ಸಲ್ಲಿಸಿದ್ದಾರೆ ಎಂದು ‘ಟೈಮ್ಸ್ ನೌ’ ಗುಲ್ಲುಎಬ್ಬಿಸುತ್ತಿದೆ. ಭಯೋತ್ಪಾದಕರನ್ನು ಐಐಟಿ-ಬಿ ಯಂತಹ ಸಂಸ್ಥೆಯೊಳಗೆ ಬರಲು ಅವಕಾಶ ಮಾಡಿಕೊಟ್ಟಿದ್ದು ಕ್ರಿಮಿನಲ್ ಅಪರಾಧ ಎನ್ನುವಂತೆ ಅಪಪ್ರಚಾರ ಮಾಡುತ್ತಿದೆ. ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿದೆ.
‘ಟೈಮ್ಸ್ ನೌ’ ಟಿವಿ ವಾಹಿನಿಯ ವಿರುದ್ಧ ಸುಧನ್ವ ದೇಶಪಾಂಡೆಯವರು ಪತ್ರಿಕಾ ಹೇಳಿಕೆ ನೀಡಿ ಸತ್ಯಸಂಗತಿ ಏನು ಎಂದು ಪ್ರಚುರಪಡಿಸಿದ್ದಾರೆ.
ವಿಡಿಯೋ ನೋಡಿ: ಪ್ಯಾಲಿಸ್ತೇನ್ ಪರ ಪ್ರತಿಭಟನೆ ಮಾಡುವುದು ಅಪರಾಧವೆ? Janashakthi Media