ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರಶಸ್ತಿ ವಿಭಾಗದಲ್ಲಿ ಜ್ಯೂರಿಯಾಗಿದ್ದ ಇಸ್ರೇಲಿ ನಿರ್ದೇಶಕ ನದಾವ್ ಲಾಪಿಡ್, ಭಾರತದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. ಈ ಬಗ್ಗೆ ಹಲವು ಮಂದಿ ಪರ ವಿರೋಧ ಚರ್ಚೆಯಲ್ಲಿ ತೊಡಗಿದ್ದಾರೆ.
ಖ್ಯಾತ ನಟ ಪ್ರಕಾಶ್ ರಾಜ್ ಕೂಡ ನದಾವ್ ಲಾಪಿಡ್ ಪರ ಟ್ವೀಟ್ ಮಾಡಿದ್ದು, ಕೊನೆಗೂ ಸತ್ಯ ಅಧಿಕೃತವಾಗಿದೆ ಎಂದು ಬರೆದಿದ್ದಾರೆ. ಈ ಮೂಲಕ ಇಸ್ರೇಲಿ ನಿರ್ದೇಶಕನ ಪರವಾಗಿ ನಿಂತಿದ್ದಾರೆ.
ನವೆಂಬರ್ 28ರಂದು ಗೋವಾದಲ್ಲಿ ನಡೆದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕೊನೆ ದಿನ ಅದ್ದೂರಿ ಸಮಾರಂಭದಲ್ಲಿ ತೀರ್ಪುಗಾರರ ಮುಖ್ಯಸ್ಥರಾಗಿದ್ದ ಇಸ್ರೇಲ್‌ನ ಖ್ಯಾತ ನಿರ್ದೇಶಕ ನದಾವ್ ಲಾಪಿಡ್ ದಿ ಕಾಶ್ಮಿರ್ ಫೈಲ್ಸ್ ಸಿನಿಮಾ ವಿರುದ್ಧ ಅಸಮಾಧಾನ ಹೊರಹಾಕಿದರು. `ಕಾಶ್ಮೀರ ಫೈಲ್ಸ್’ ಸಿನಿಮಾ ವೀಕ್ಷಿಸಿ ತುಂಬಾ ವಿಚಲಿತನಾಗಿದ್ದೀವಿ. ಇದೊಂದು ಅಶ್ಲೀಲ ಪ್ರಚಾರದ ಸಿನಿಮಾ. ಇಂಥ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾ ವಿಭಾಗಕ್ಕೆ ಈ ಸಿನಿಮಾ ಸೂಕ್ತವಲ್ಲ ಎಂದು ಭಾಸವಾಯಿತೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನದಾವ್ ಲಾಪಿಡ್ ಪರ ಸಾಕಷ್ಟು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಕಾಶ್ ರಾಜ್ ಅವರಂತೆ ಬಾಲಿವುಡ್ ನಟಿ ಸ್ವರ ಭಾಸ್ಕರ್, ‘ಸತ್ಯ ಏನು ಅನ್ನುವುದು ಸ್ಪಷ್ಟವಾಗಿ ಜಗತ್ತಿಗೆ ಅರ್ಥವಾಗಿದೆ’ ಎಂದು ಬರೆದುಕೊಂಡಿದ್ದರು. ಈ ಮೂಲಕ ಇಸ್ರೇಲಿ ನಿರ್ದೇಶಕ ನದಾವ್ ಪರವಾಗಿ ನಿಂತಿದ್ದಾರೆ. ಈ ಬೆನ್ನಲ್ಲೇ ಖ್ಯಾತ ನಟ ಪ್ರಕಾಶ್ ರಾಜ್ ಕೂಡ ನಿರ್ದೇಶಕನ ಪರವಾಗಿ ನಿಂತಿದ್ದಾರೆ.
ಇಸ್ರೇಲಿ ನಿರ್ದೇಶಕರ ನಿಲುವಿನ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ, ಪ್ರಕಾಶ್ ರಾಜ್ ಮತ್ತು ಸ್ವರ ಭಾಸ್ಕರ್ ಪರವಾಗಿಯೂ ಅನೇಕರು ಧ್ವನಿ ಎತ್ತಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.